×
Ad

ಮೀಸಲಾತಿ ಕಾಯ್ದೆಗಳನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ಸಾಧ್ಯವಾದೀತೇ?

Update: 2026-02-01 09:57 IST

ಮೀಸಲಾತಿ ಸಮಸ್ಯೆಗೆ ಕೇಂದ್ರ ಸರಕಾರವೇ ಮುಂದೆ ಬಂದು ಸಾಂವಿಧಾನಿಕ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಆದರೆ ಭಾಜಪ ಸರಕಾರವೇ ಇರುವ ಕೆಲವು ರಾಜ್ಯಗಳು ಮೀಸಲಾತಿ ಕೋಟಾವನ್ನು ಶೇ.50ಕ್ಕಿಂತ ಹೆಚ್ಚಿಸಿ ಕಾಯ್ದೆಯನ್ನು ರೂಪಿಸಿ ಕೇಂದ್ರ ಸರಕಾರದತ್ತ ಮುಖ ಮಾಡಿದ್ದರೂ, ಕೇಂದ್ರ ಸರಕಾರವು ಸೊಪ್ಪು ಹಾಕಲಿಲ್ಲ. ವಿಷಯ ಹೀಗಿರುವಲ್ಲಿ ವಿರೋಧ ಪಕ್ಷಗಳ ಕೈಯಲ್ಲಿ ಸರಕಾರ ಇದ್ದ ರಾಜ್ಯಗಳ ಗತಿ ಏನು? ಕಾನೂನಿನ ತೊಡಕೇ ಇದಕ್ಕೆಲ್ಲ ಕಾರಣ.

ಸರಕಾರ ಯಾವ ಪಕ್ಷದ್ದೇ ಇರಲಿ, ಯಾವುದಾದರೂ ವಿಷಯದಲ್ಲಿ ಸಂದಿಗ್ಧತೆಗೆ ಸಿಕ್ಕಿಕೊಂಡಾಗ ಸಲಹೆ -ಸೂಚನೆ ನೀಡಲು ಆಳುವ ಪಕ್ಷದ ಹುರಿಯಾಳುಗಳು ತಾಮುಂದು ನಾಮುಂದು ಎಂದು ಮುಗಿಬೀಳುವುದು ಸಾಮಾನ್ಯ. ಅದಕ್ಕೊಂದು ನಿಚ್ಚಳ ಉದಾಹರಣೆ ಎಂದರೆ- ಇತ್ತೀಚೆಗೆ ರಾಜ್ಯ ಉಚ್ಚ ನ್ಯಾಯಾಲಯ ಶೇಕಡಾವಾರು ಮೀಸಲಾತಿ ವಿಷಯದಲ್ಲಿ ನೀಡಿರುವ ಮಧ್ಯಂತರ ಆದೇಶ. ಮಧ್ಯಂತರ ಆದೇಶದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಮೀಸಲಾತಿ ಕೋಟಾ ಶೇ.50ರ ಮಿತಿ ಮೀರದಂತೆ ಸರಕಾರಿ ಹುದ್ದೆಗಳ ನೇಮಕಾತಿಗಳನ್ನು ಮಾಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬುದು. ಸರಕಾರ ಈಗಾಗಲೇ ಮೀಸಲಾತಿ ಕೋಟಾದ ಮಿತಿಯನ್ನು ಶೇ.56ಕ್ಕೆ ಹೆಚ್ಚಿಸಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿಯೇ ಇದೆ. ಹೀಗೆ ಹೆಚ್ಚಿಸಿರುವ ಮೀಸಲಾತಿ ಕೋಟಾವನ್ನು ಮತ್ತೆ ಕೆಳಗಿಳಿಸುವುದು ಸರಕಾರಕ್ಕೆ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಆಂತರಿಕ ವಲಯದಲ್ಲಿ ಆಗಾಗ ಮಿಂಚಿ ಮರೆಯಾಗುತ್ತಿರುವ ಮಾಜಿ ವಿಧಾನ ಪರಿಷತ್ ಸದಸ್ಯರೊಬ್ಬರು ಮೀಸಲಾತಿ ಕೋಟಾವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಶೇ.56ಕ್ಕೆ ಹೆಚ್ಚಿಸಿರುವುದನ್ನು ಸಂವಿಧಾನದ ಶೆಡ್ಯೂಲ್ (ಅನುಸೂಚಿ) 9ಕ್ಕೆ ಸೇರಿಸಲೂ ಉಗ್ರವಾಗಿ ಆಗ್ರಹಿಸಿದ್ದಾರೆ.

ಅನುಸೂಚಿ 9 ಅನ್ನು ಸಂವಿಧಾನದಲ್ಲಿ ಅಳವಡಿಸಿಕೊಂಡಂದಿನಿಂದ ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸೋಣ: ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಂತೂ ಸರಕಾರದ ಮುಂದಿತ್ತು. ಕ್ರೂರ ಜಮೀನ್ದಾರಿ ಪದ್ಧತಿಯನ್ನು ನಿರ್ಮೂಲನೆ ಮಾಡಿ ಭೂಸುಧಾರಣಾ ಕಾನೂನುಗಳನ್ನು ಜಾರಿಗೆ ತಂದು ಸಮತೋಲಿತ ಸಮಾಜವನ್ನು ಕಟ್ಟಬೇಕೆಂಬ ಕನಸನ್ನು ನನಸಾಗಿಸಲು ಸರಕಾರ ಮುಂದಾದಾಗ ಅನೇಕ ಸಮಸ್ಯೆಗಳು ಎದುರುಗೊಂಡವು. ಈ ದಿಸೆಯಲ್ಲಿ ಜಾರಿಗೆ ತಂದ ಭೂಶಾಸನಗಳು ನ್ಯಾಯಾಲಯಗಳಲ್ಲಿ ಪ್ರಶ್ನಿಸಲ್ಪಟ್ಟು ಸರಕಾರಗಳಿಗೆ ಹಿನ್ನಡೆ ಉಂಟಾಯಿತು. ಬಿಹಾರ ರಾಜ್ಯದಲ್ಲಿ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯನ್ನು ಪಾಟ್ನಾ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ(ಕಾಮೇಶ್ವರ ಸಿಂಗ್ v/s ಬಿಹಾರ, ಎಐಆರ್ 1951 ಪಾಟ್ನಾ 246), ನ್ಯಾಯಾಲಯ ವಿಧಿ 14ರ ಉಲ್ಲಂಘನೆ ಎಂದು ಕಾಯ್ದೆಯನ್ನೇ ರದ್ದುಗೊಳಿಸಿತು. ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು. ಮೇಲ್ಮನವಿ ವಿಚಾರಣೆಗೆ ಬಾಕಿ ಇದ್ದ ಸಂದರ್ಭದಲ್ಲಿಯೇ ಕೇಂದ್ರ ಸರಕಾರ ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿಗೆ ಮುಂದಾಯಿತು.

ಸಂವಿಧಾನ ತಿದ್ದುಪಡಿ

ಸಂವಿಧಾನ ತಿದ್ದುಪಡಿಯ ಮೂಲಕ ಎಸ್ಟೇಟು ಮುಂತಾದವುಗಳ ಅರ್ಜನಗೆ ನಿರ್ಬಂಧಿಸುವ ಕಾನೂನುಗಳನ್ನು ಉಳಿಸುವುದಕ್ಕಾಗಿ 31ಎ ಮತ್ತು 31ಬಿ ಎಂಬ ಎರಡು ಹೊಸ ವಿಧಿಗಳನ್ನು ಅಳವಡಿಸಲಾಯಿತು. ವಿಧಿ 31ಬಿ ಪ್ರಕಾರ 9ನೇ ಅನುಸೂಚಿ ಸಂವಿಧಾನದ ಅನುಸೂಚಿಗಳಲ್ಲಿ ಒಂದಾಗಿ ಸೇರ್ಪಡೆಯಾಗಿದೆ. 9ನೇ ಅನುಸೂಚಿಯಲ್ಲಿ ಸೇರಿಸಲಾಗಿರುವ ಭೂಸುಧಾರಣೆ ಕಾನೂನುಗಳನ್ನು ಸಂರಕ್ಷಣೆ ಮಾಡಲು ಮತ್ತು ನಿರ್ದಿಷ್ಟ ಪಡಿಸಿದ ಯಾವುದೇ ಕಾಯ್ದೆ ಹಾಗೂ ನಿಬಂಧನೆಗಳನ್ನು ನ್ಯಾಯಾಲಯದ ವಿಚಾರಣಾ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಾಗುವಂತೆ 1951ರಲ್ಲಿ ಹೊಸದಾಗಿ ಎರಡು ವಿಧಿಗಳನ್ನು ಸೇರ್ಪಡೆ ಮಾಡಲಾಗಿದೆ. ಇದು ಸಂವಿಧಾನಕ್ಕೆ ತಂದ ಮೊದಲನೇ ತಿದ್ದುಪಡಿಯೂ ಹೌದು.

ಆನಂತರದಲ್ಲಿ 8 ತಿದ್ದುಪಡಿಗಳನ್ನು ತರುವುದರ ಮೂಲಕ 9ನೇ ಅನುಸೂಚಿಗೆ ಕೆಲವು ಭೂಸುಧಾರಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ಸೇರಿಸಲಾಗಿದೆ. ಇದಕ್ಕೆ ಅಪವಾದವೆಂಬಂತೆ ಸಂವಿಧಾನದ 40ನೇ ತಿದ್ದುಪಡಿಗೆ ಸಂಬಂಧಿಸಿದಂತೆ ಮೋಟರ್ ವಾಹನ ಕಾಯ್ದೆಯ ಕೆಲಭಾಗ ಮತ್ತು 76ನೇ ತಿದ್ದುಪಡಿಯಲ್ಲಿ ತಮಿಳುನಾಡು ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಿರುವುದು. 9ನೇ ಅನುಸೂಚಿಗೆ ಸೇರಿಸಿದ್ದರೂ ಸಹ, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಅನೂಹ್ಯ ಕಾರಣಗಳಿಂದ ವಿಚಾರಣೆಗೆ ತಮಿಳುನಾಡು ಮೀಸಲಾತಿ ಕಾಯ್ದೆ ಇಂದಿಗೂ ಬಾಕಿ ಇದೆ. ಹಾಗೆಯೇ ಬೇರೆ ರಾಜ್ಯದ ಯಾವುದೇ ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಿದ ಪಕ್ಷದಲ್ಲಿ ಅದು ಪ್ರಶ್ನಾತೀತವೇನೂ ಅಲ್ಲ ಎಂಬುದನ್ನು ಗಮನಿಸಬೇಕು. ಅದಕ್ಕಿರುವ ಕಾರಣ ಮುಂದೆ ಹೇಳಲಾಗುವುದು.

ಈ ಲೇಖನದ ಉದ್ದೇಶಕ್ಕೆ ಸಂಬಂಧಪಟ್ಟಂತೆ 76ನೇ ತಿದ್ದುಪಡಿಗೆ ಮಾತ್ರ ವಿಶೇಷತೆ ಇದೆ. ಆ ತಿದ್ದುಪಡಿಗೆ ಕಾರಣವಾದ ಕಾಯ್ದೆಯೊಂದನ್ನು ತಮಿಳುನಾಡು ಸರಕಾರ 1993ರಲ್ಲಿ ಎಲ್ಲಾ ವರ್ಗಗಳಿಗೂ ಅನ್ವಯಿಸುವಂತೆ ಮೀಸಲಾತಿ ಕೋಟಾವನ್ನು ಶೇ.69ರಷ್ಟಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ತಂದಿರುವುದೇ ಆಗಿದೆ. ಈ ಕಾಯ್ದೆಯನ್ನು ರೂಪಿಸಬೇಕಾದ ಹಿಂದಿನ ಅನಿವಾರ್ಯತೆ ಎಂದರೆ-

ಎಂ.ಜಿ. ರಾಮಚಂದ್ರನ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ (1980), ಹಿಂದುಳಿದ ವರ್ಗಗಳ ಮೀಸಲಾತಿ ಕೋಟಾವನ್ನು ಶೇ.31ರಿಂದ ಶೇ. 50ರಷ್ಟಕ್ಕೆ ಹೆಚ್ಚಿಸಲಾಯಿತು. ಈ ಹೆಚ್ಚಿಸುವಿಕೆಯಿಂದಾಗಿ ಪರಿಶಿಷ್ಟ ವರ್ಗಗಳೂ ಸೇರಿ ಒಟ್ಟು ಕೋಟಾ ಶೇ. 68ರಷ್ಟಾಯಿತು. ಹಾಗೂ ಅದು ಜಾರಿಗೂ ಬಂದಿತು. 1990ರಲ್ಲಿ ಎಂ. ಕರುಣಾನಿಧಿ ಅವರು ಪರಿಶಿಷ್ಟ ಪಂಗಡಗಳ ಮೀಸಲಾತಿ ಕೋಟಾವನ್ನು ಶೇ.1ರಷ್ಟಕ್ಕೆ ನಿಗದಿ ಪಡಿಸಿದ ಪ್ರಯುಕ್ತ ಅದು ಶೇ. 69ರಷ್ಟಕ್ಕೇರಿತು. ಸರಕಾರದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ಸಂಭವನೀಯ ಪ್ರತಿಕೂಲ ಆದೇಶವನ್ನು ನಿರೀಕ್ಷಿಸಿ, ತಮಿಳುನಾಡು ಮುಂದಾಗುವ ಹಾನಿಯನ್ನು ತಪ್ಪಿಸಲು ಸೂಕ್ತ ಕಾಯ್ದೆ ರಚಿಸುವ ಕ್ರಮಕ್ಕೆ ಮೊರೆ ಹೋಯಿತು.

ಆ ಕಾರಣದಿಂದ ತಂದ ಕಾಯ್ದೆಯೇ-ತಮಿಳುನಾಡು ಹಿಂದುಳಿದ ವರ್ಗಗಳ, ಅನುಸೂಚಿತ ಜಾತಿಗಳ, ಅನುಸೂಚಿತ ಬುಡಕಟ್ಟುಗಳ (ರಾಜ್ಯಾಧೀನ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮತ್ತು ಸೇವೆಗಳಲ್ಲಿ ನೇಮಕಗಳ ಅಥವಾ ಹುದ್ದೆಗಳ ಮೀಸಲಾತಿ) ಕಾಯ್ದೆ, 1993. ಆನಂತರ ವಿಧಿ 31 ಬಿ ಪ್ರಕಾರ 76ನೇ ತಿದ್ದುಪಡಿ ತರುವುದರ ಮೂಲಕ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಲಾಯಿತು. ಕಾಯ್ದೆಯು ಯಾವುದಾದರೂ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡಿದೆ ಎಂಬ ಕಾರಣದಿಂದ ನ್ಯಾಯಾಲಯದಿಂದ ಅದು ಅಸಿಂಧುಗೊಳ್ಳುವುದನ್ನು ತಪ್ಪಿಸುವುದೇ 9ನೇ ಅನುಸೂಚಿಗೆ ಸೇರಿಸಲಿರುವ ಉದ್ದೇಶ.

ಸೇರಲು ಹಿಂದಿರುವ ರಾಜಕಾರಣ

ಈ ವಿಶೇಷ ಶಾಸನವನ್ನು ಸಂರಕ್ಷಿಸಲು, ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಹಾಗೂ ಅಂದಿನ ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಕಾರಣರು. ಪಿ.ವಿ. ನರಸಿಂಹ ರಾವ್ ಸರಕಾರ ತಮಿಳುನಾಡಿನ ಎಐಡಿಎಂಕೆ ಪಕ್ಷದ ವತಿಯಿಂದ ಗೆದ್ದಿದ್ದ ಲೋಕಸಭಾ ಸದಸ್ಯರ ಬೆಂಬಲವಿತ್ತು. ಆ ಬೆಂಬಲದ ಮೇಲೆಯೇ ನರಸಿಂಹರಾವ್ ಸರಕಾರ ಉಳಿದಿತ್ತು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಆ ಬೆಂಬಲವನ್ನೇ ಮುಖ್ಯಮಂತ್ರಿ ಜಯಲಲಿತಾ ತನ್ನ ಚಾಣಾಕ್ಷತನದಿಂದ ತನ್ನ ರಾಜ್ಯದ ಹಿತಕ್ಕೆ ಬಳಸಿಕೊಂಡು, ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಯಲ್ಲಿ ಸೇರಿಸಲು ಸಫಲರಾದರು. ಮೀಸಲಾತಿಗಾಗಿ ದೃಢ ಸಂಕಲ್ಪ ತೊಟ್ಟು ಪ್ರಬಲ ಹೋರಾಟ ಹಮ್ಮಿಕೊಂಡಲ್ಲಿ ಜನತಂತ್ರ ವ್ಯವಸ್ಥೆಯ ಸರಕಾರದಲ್ಲಿ ಯಾವ ಪಕ್ಷದ ಕೈಯಲ್ಲೇ ಆಡಳಿತವಿದ್ದರೂ ಜನ ಸಮುದಾಯದ ಇಚ್ಛೆಯನ್ನು ಕಡೆಗಣಿಸಲಸಾಧ್ಯ ಎಂಬ ಸತ್ಯ ಇದರ ಹಿಂದಿದೆ. ತಮಿಳುನಾಡು ಮೀಸಲಾತಿ ಕೋಟಾ ಶೇ.50ರಷ್ಟನ್ನು ಮೀರಿ ಹೋಗುವುದರ ಮೂಲಕ ಸಾಮಾಜಿಕ ನ್ಯಾಯ ವಿತರಣೆಯಲ್ಲಿ ಇತಿಹಾಸ ನಿರ್ಮಿಸಿದೆ ಮಾತ್ರವಲ್ಲ, ಅದು ಇಂದಿಗೂ ಮುಂದುವರಿದಿದೆ ಎಂಬುದೇ ವಾಸ್ತವ.

ಇಷ್ಟಾದರೂ, ಯಾವುದೇ ಮೀಸಲಾತಿ ಕಾಯ್ದೆಯು 9ನೇ ಅನುಸೂಚಿಯಲ್ಲಿ ಸೇರಲ್ಪಟ್ಟಿದೆ ಎಂದ ಮಾತ್ರಕ್ಕೆ ಅದು ನ್ಯಾಯಾಲಯದ ವಿಚಾರಣಾ ವ್ಯಾಪ್ತಿಯಿಂದ ಮುಕ್ತಗೊಂಡಿದೆ ಎಂದು ಹೇಳಲಾಗುವುದಿಲ್ಲ(I.R.Coelho vs T.N- 2007(1) SCJ 694). ಯಾಕೆಂದರೆ ಅಂತಹ ಕಾಯ್ದೆ ಮೂಲಭೂತ ಹಕ್ಕಿಗೆ ಹಾನಿ ಉಂಟುಮಾಡಿದೆ ಅಥವಾ ಸಂವಿಧಾನದ ಮೂಲ ರಚನೆಗೆ ವಿರುದ್ಧವಿದೆ ಎಂದಾಗ ನ್ಯಾಯಾಲಯ ವಿಚಾರಣೆ ಮೂಲಕ ಅದನ್ನು ಅಸಿಂಧು ಎಂದು ಘೋಷಿಸಬಹುದು.

ಮೀಸಲಾತಿ ಮೂಲಭೂತ ಹಕ್ಕೇ?

ಸಂವಿಧಾನದ 16(4)ನೇ ವಿಧಿಯು ಮೀಸಲಾತಿಗೆ ಮೂಲಭೂತ ಹಕ್ಕನ್ನು ಖಾತರಿ ಪಡಿಸುತ್ತದೆಯೇ ಅಥವಾ ಶಕ್ತಗೊಳಿಸುವ (enabling) ನಿಬಂಧನೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸರ್ವೋಚ್ಚ ನ್ಯಾಯಾಲಯ ಸಿ.ಎ. ರಾಜೇಂದ್ರನ್ v/s ಭಾರತ ಒಕ್ಕೂಟ AIR 1968 Sc 507) ಪ್ರಕರಣದಲ್ಲಿ, 16(4)ನೇ ವಿಧಿಯು ಹಿಂದುಳಿದ ವರ್ಗಗಳಿಗೆ ಮೂಲಭೂತ ಹಕ್ಕನ್ನು ನೀಡುವುದಿಲ್ಲ ಎಂದು ಆಜ್ಞಾಪಿಸಿದೆ. ಅದು ಕೇವಲ ಶಕ್ತಗೊಳಿಸುವ ನಿಬಂಧನೆಯಾಗಿದೆ.

ಒಂದು ವೇಳೆ ವಿಧಿ 16 (4) ಮೂಲಭೂತ ಹಕ್ಕಿಗೆ ಒಳಪಟ್ಟಿದ್ದಲ್ಲಿ, ಕೇಂದ್ರ ಸರಕಾರ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಕಲ್ಪಿಸುವುದನ್ನು 1993ವರೆಗೂ ಎಳೆದೊಯ್ಯ ಬೇಕಾಗಿರಲಿಲ್ಲ. ಹಿಂದುಳಿದ ವರ್ಗಗಳಿಗೆ ಕೇಂದ್ರ ಸರಕಾರದಲ್ಲಿ ಮೀಸಲಾತಿ ದಕ್ಕಲು 43 ವರ್ಷ ಕಾಯಬೇಕಾಯಿತು. ಕರ್ನಾಟಕದಲ್ಲಿಯೂ 27 ವರ್ಷ ಕಾಯುವ ಸಂದರ್ಭ ಬಂತು. ಈ ವಿಧಿ ಮೂಲಭೂತ ಹಕ್ಕಿಗೆ ಒಳಪಟ್ಟಿದ್ದಲ್ಲಿ, ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿ, ಆಜ್ಞಾಪತ್ರ(mandamus) ತರಲು ಸಾಧ್ಯವಿತ್ತು ಎಂಬುದನ್ನೂ ನಾವು ಮನಗಾಣಬೇಕು.

ಇಂಥ ಸಂದಿಗ್ಧ ಸ್ಥಿತಿಯಲ್ಲಿಯೂ, ಜಾರ್ಖಂಡ್, ಛತ್ತೀಸ್‌ಗಡ, ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ, ತೆಲಂಗಾಣ, ಕರ್ನಾಟಕ ಮುಂತಾದ ರಾಜ್ಯಗಳು ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲು ಕಾಯ್ದೆ ಹೊರಡಿಸಿವೆ. ಅವುಗಳಲ್ಲಿ ಕೆಲವು ನ್ಯಾಯಾಲಯದಿಂದ ರದ್ದು ಮಾಡಲ್ಪಟ್ಟಿವೆ ಕೂಡಾ. ಇದೊಂದು ಕ್ಲಿಷ್ಟಕರ ಪ್ರಶ್ನೆಯಾಗಿ ಉಳಿದು ರಾಜ್ಯಗಳನ್ನು ಕಾಡುತ್ತಿದೆ. ಆದ್ದರಿಂದ ಕೇಂದ್ರ ಸರಕಾರವೇ ಮುಂದೆ ಬಂದು ಸಾಂವಿಧಾನಿಕ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ. ಭಾಜಪ ಸರಕಾರವೇ ಇರುವ ಕೆಲವು ರಾಜ್ಯಗಳು ಮೀಸಲಾತಿ ಕೋಟಾವನ್ನು ಶೇ.50ಕ್ಕಿಂತ ಹೆಚ್ಚಿಸಿ, ಕಾಯ್ದೆಯನ್ನು ರೂಪಿಸಿ ಕೇಂದ್ರ ಸರಕಾರದತ್ತ ಮುಖ ಮಾಡಿದ್ದರೂ, ಕೇಂದ್ರ ಸರಕಾರವು ಸೊಪ್ಪು ಹಾಕಲಿಲ್ಲ. ವಿಷಯ ಹೀಗಿರುವಲ್ಲಿ ವಿರೋಧ ಪಕ್ಷಗಳ ಕೈಯಲ್ಲಿ ಸರಕಾರ ಇದ್ದ ರಾಜ್ಯಗಳ ಗತಿ ಏನು? ಕಾನೂನಿನ ತೊಡಕೇ ಇದಕ್ಕೆಲ್ಲ ಕಾರಣ.

ರಾಜ್ಯಗಳು ಅಪೇಕ್ಷೆ ಪಟ್ಟ ರೀತಿಯಲ್ಲಿ, ಮೀಸಲಾತಿಗಾಗಿ ಅವುಗಳು ಹೊರಡಿಸುವ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಬೇಕೆಂದರೂ, ಅಂಥ ಕಾಯ್ದೆ ಸಂಸತ್ತಿನ ಎರಡು ಸದನಗಳಲ್ಲಿ ಅಂಗೀಕರಿಸಿ, ರಾಷ್ಟ್ರಪತಿಗಳ ಮುದ್ರೆ ಬಿದ್ದು ಸಂವಿಧಾನ ತಿದ್ದುಪಡಿಯಾಗಲೇಬೇಕು. ಇದು ಕಡು ಕಷ್ಟ. ಒಂದು ವೇಳೆ ಈ ಪ್ರಕ್ರಿಯೆ ಪೂರ್ಣ ಗೊಂಡರೂ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆಗೆ ಒಳಗಾಗುವುದನ್ನು ತಪ್ಪಿಸಲಾಗುವುದಿಲ್ಲ.

ಇಂತಹ ಜಟಿಲ ಪರಿಸ್ಥಿತಿಯಲ್ಲಿ, ಮೀಸಲಾತಿ ಕಾಯ್ದೆಯನ್ನು ಅನುಸೂಚಿ 9ಕ್ಕೆ ಸೇರಿಸಲು ಸುಲಭ ಸಾಧ್ಯವೇ ಎಂಬುದನ್ನೂ ಅರಿಯಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎನ್. ಲಿಂಗಪ್ಪ

contributor

Similar News