ವಚನಗಳ ಸಂರಕ್ಷಕ ಮಡಿವಾಳ ಮಾಚಿ ‘ತಂದೆ’!
ಫೆಬ್ರವರಿ 1 ಮಡಿವಾಳ ಮಾಚಿದೇವರ ಜಯಂತಿ
‘‘ಕೂಳ ಹಂಗಲ್ಲ, ಕುಲದ ಹಂಗಲ್ಲ, ಕಾಯಕವ ಮಾಡುವಲ್ಲಿ ಯಾರದೂ ಹಂಗಿಲ್ಲ!’’ ಎನ್ನುವ ಕಾಯಕನಿಷ್ಠೆ ಹೊಂದಿದ್ದ ಮಾಚಯ್ಯ ರಾಜ್ಯಾಧಿಕಾರದ ಮುಂದೆ ಯಾವತ್ತೂ ತಲೆಬಾಗಿದವರಲ್ಲ. ಬೂಟಾಟಿಕೆಯ ಭಕ್ತಿ ಮತ್ತು ಪುರೋಹಿತಶಾಹಿ ಕಂದಾಚಾರಗಳ ಕಟು ಟೀಕಾಕಾರರಾಗಿದ್ದ ಮಾಚಯ್ಯ ತನ್ನ ಹಲವು ವಚನಗಳಲ್ಲಿ ಅವುಗಳನ್ನು ಖಂಡಿಸಿದ್ದಾರೆ. ಸಮಾಜದಲ್ಲಿ ಬೇರೂರಿದ್ದ ಸ್ಪರ್ಶ ಮೈಲಿಗೆಯನ್ನು ಅವರು ಅತ್ಯಂತ ತೀಕ್ಷ್ಣವಾಗಿ ಟೀಕಿಸಿದರು. ಬಟ್ಟೆ ತೊಳೆಯುವ ತಾನು ಎಲ್ಲರಿಗಿಂತ ಮಡಿ (ಪರಿಶುದ್ಧ) ಎಂದು ವಾದಿಸಿದರು.
ಒಂದು ಹೆಜ್ಜೆ ಹಿಂದೆ ಹೋಗಿ ಊಹಿಸಿಕೊಳ್ಳಿ, ಅಕಸ್ಮಾತ್ ಫ.ಗು. ಹಳಕಟ್ಟಿಯವರು ಅಷ್ಟು ಶ್ರಮಹಾಕಿ ವಚನಗಳನ್ನು ಸಂಗ್ರಹಿಸಿ, ಸಂಪಾದಿಸದೆ ಹೋಗಿದ್ದಿದ್ದರೆ ನಮಗೆ ವಚನಕ್ರಾಂತಿಯ ಬಗ್ಗೆ, ಅದರ ಆಶಯದ ಬಗ್ಗೆ ಇಷ್ಟು ಸ್ಪಷ್ಟತೆ ಬರುತ್ತಿತ್ತೆ? ಈಗ ಇನ್ನೂ ಒಂದೆರಡು ಹೆಜ್ಜೆ ಹಿಂದೆ ಹೋಗಿ ಕಲ್ಪಿಸಿಕೊಳ್ಳಿ, ಒಂದೊಮ್ಮೆ ಬಿಜ್ಜಳನ ಮಗ ಸೋವಿದೇವನ ರೊಚ್ಚಿಗೆ ಸಿಕ್ಕು ಹನ್ನೆರಡನೇ ಶತಮಾನದಲ್ಲೇ ವಚನಗಳು ಭಸ್ಮವಾಗಿ ಹೋಗಿದ್ದಿದ್ದರೆ ಹಳಕಟ್ಟಿಯವರಾದರೂ ಏನು ಮಾಡುತ್ತಿದ್ದರು? ನಾವಾದರೂ ಹಿಂದಣ ಹೆಜ್ಜೆಗಳನ್ನು ಹೇಗೆ ಅರಿಯುತ್ತಿದ್ದೆವು?
ಆ ವಚನಗಳ ರಕ್ಷಣೆಯ ಹೊಣೆ ಹೊತ್ತಿದ್ದು ಮಾಚಯ್ಯ. ಯಾವುದೇ ಶರಣರ ಹೆಸರನ್ನು ಅವರ ಕಾಯಕದಿಂದ ಪ್ರತ್ಯೇಕಿಸಿ ಸ್ಮರಿಸುವುದೆಂದರೆ, ಅವರ ಇಡೀ ಆಶಯವನ್ನೇ ಅವಮಾನಿಸಿದಂತೆ. ಮಡಿವಾಳ ಮಾಚಯ್ಯ!
ನಮ್ಮ ಸಮಾಜದ ಮೇಲೆ ಬ್ರಾಹ್ಮಣಿಕೆಯ ಶ್ರೇಷ್ಠತೆಯನ್ನು ಹೇರಿದ ಮನುಶಾಸ್ತ್ರವು ಶೂದ್ರರಾದವರು ಒಳ್ಳೆಯ ಹೆಸರು ಕೂಡಾ ಇಟ್ಟುಕೊಳ್ಳಬಾರದೆಂದು ಕಟ್ಟಪ್ಪಣೆ ವಿಧಿಸಿತ್ತು. ಮನುಸ್ಮತಿಯ 2ನೇ ಅಧ್ಯಾಯದ 31ನೇ ಶ್ಲೋಕವು ಬ್ರಾಹ್ಮಣನ ಹೆಸರು ಮಂಗಳಕರವಾಗಿ, ಕ್ಷತ್ರಿಯನ ಹೆಸರು ಶಕ್ತಿ ಸೂಚಕವಾಗಿ, ವೈಶ್ಯನ ಹೆಸರು ಸಂಪತ್ತು ಸೂಚಕವಾಗಿ ಮತ್ತು ಶೂದ್ರನ ಹೆಸರು ‘ಜುಗುಪ್ಸಿತ’ ಅಂದರೆ, ಅಸಹ್ಯ ಹುಟ್ಟಿಸುವಂತೆ ಇರಬೇಕು ಎಂದು ಹೇಳುತ್ತದೆ. (ಮಂಗಲ್ಯಂ ಬ್ರಾಹ್ಮಣಸ್ಯ ಸ್ಯಾತ್ ಕ್ಷತ್ರಿಯಸ್ಯ ಬಲಾನ್ವಿತಮ್ | ವೈಶ್ಯಸ್ಯ ಧನಸಂಯುಕ್ತಂ ಶೂದ್ರಸ್ಯ ತು ಜುಗುಪ್ಸಿತಮ್ ॥). ಹಾಗಾಗಿ ಶೂದ್ರರು ಮತ್ತು ಅಂತ್ಯಜರಲ್ಲಿ ಕರಿಯ, ಮಾರ, ಕೆಂಚ, ಬೊಮ್ಮ, ಸಿದ್ದ, ಚೋಮ ಇಂತಹ ಹೆಸರುಗಳು ಸಾಮಾನ್ಯವಾಗಿದ್ದವು. ಅಂತವರಲ್ಲಿ ಈ ಮಡಿವಾಳರ ‘ಮಾಚ’ನೂ ಒಬ್ಬ. ಆದರೆ ವಚನ ಚಳವಳಿಯ ಸಮಾನತೆಯ ಕ್ರಾಂತಿಯಿಂದಾಗಿ ಮಾಚನಿಂದ ಮಾಚ ‘ಅಯ್ಯ’ನಾಗಿ, ತನ್ನ ತಿಳುವಳಿಕೆಯ ವಿಸ್ತಾರದಿಂದ ಮಾಚಿ ‘ದೇವ’ನಾಗಿ, ಬಸವಣ್ಣನವರ ಗೌರವಕ್ಕೆ ಪಾತ್ರನಾಗುವ ಮೂಲಕ ಮಾಚಿ ‘ತಂದೆ’ಯಾಗಿ ರೂಪಾಂತರಗೊಂಡ ಮಾಚಯ್ಯನ ಹಾದಿಯು, ಇಡೀ ವಚನಕ್ರಾಂತಿಯ ವಿಸ್ತಾರವನ್ನು ನಮ್ಮ ಮುಂದೆ ತೆರೆದಿಡುತ್ತದೆ.
ಎಂಟು ಶತಮಾನಗಳ ದೂರದಲ್ಲಿ ನಿಂತು, ನಾವೀಗ ಕಲ್ಯಾಣದ ಕ್ರಾಂತಿಯನ್ನು ಹಿಂದಿರುಗಿ ಹಿಗ್ಗಿ ನೋಡಲು ಯತ್ನಿಸಿದಾಗ ಶರಣರೆಂದರೆ ಶಾಂತ, ಸೌಮ್ಯ ಸ್ವಭಾವದ, ಭಕ್ತಿದ್ರವ್ಯದ ಸಂತರಂತೆ ಗೋಚರಿಸುತ್ತಾರೆ. ಅದು ನಿಜವೂ ಹೌದು. ಆದರೆ ಅವತ್ತಿನ ಕಾಲಘಟ್ಟದ ಶರಣರೆಲ್ಲರಲ್ಲೂ ನಾವು ಬಸವಣ್ಣನವರ ಸೌಮ್ಯತೆಯನ್ನು ಕಾಣಲಾಗದು. ಅಲ್ಲಿ ಎಲ್ಲಾ ಮನಸ್ಥಿತಿಯ ಶರಣರಿದ್ದರು. ‘‘ಸಮಾಧಾನವಿಲ್ಲದ ಭಕ್ತಿ ಅದು ಭಕ್ತಿಯಲ್ಲ, ತಾಳ್ಮೆಯಿಲ್ಲದ ಜ್ಞಾನ ಅದು ಜ್ಞಾನವಲ್ಲ’’ ಎಂದ ಅತ್ಯಂತ ಸೌಮ್ಯಭಾವದ ಹಡಪದ ಅಪ್ಪಣ್ಣನವರೂ ಆ ಗಣದಲ್ಲಿದ್ದರು; ತಮ್ಮ ಮಕ್ಕಳಿಗೆ ಅಂತರ್ಜಾತಿ ವಿವಾಹ ಮಾಡಿಸಿದ ಮಧುವರಸ, ಹರಳಯ್ಯರಿಗೆ ‘ಎಳೆಯೂಟೆ’ ಶಿಕ್ಷೆ (ಆನೆಯ ಕಾಲಿಗೆ ಕಟ್ಟಿಸಿ ಎಳೆಯುವ ಶಿಕ್ಷೆ) ವಿಧಿಸಿದ ಬಿಜ್ಜಳ ರಾಜನ ಹತ್ಯೆ ಮಾಡಿದ ಉಗ್ರಸ್ವರೂಪಿ ಜಗದೇವ, ಮೊಲ್ಲೆಬೊಮ್ಮಯ್ಯನಂತವರೂ ಅಲ್ಲಿದ್ದರು. ಮಡಿವಾಳದ ಮಾಚಯ್ಯ ಅಂತವರಲ್ಲಿ ನಿಷ್ಠುರ ಜೀವಿ. ಶ್ರಮ ಜೀವಿ. ಹಠ ಜೀವಿ. ಶೌರ್ಯ ಜೀವಿ.
ಕಾಯಕ ಮತ್ತು ಶಿವಭಕ್ತಿಯ ಹೊರತಾಗಿ ಬೇರೆ ಯಾರ ಮುಲಾಜಿಗೂ ಈಡಾಗದೆ, ನಿಷ್ಠುರ ಪರೀಕ್ಷಕ ದೃಷ್ಟಿಕೋನ ಹೊಂದಿದ್ದ ಮಾಚಯ್ಯರ ಬಗ್ಗೆ ಬಸವಣ್ಣನವರಿಗೆ ಅಪಾರ ಗೌರವ. ಹಾಗಾಗಿ ಬಸವಣ್ಣನವರು ಮಾಚಯ್ಯರನ್ನು ‘ಎನ್ನ ಮಾಚಿ ತಂದೆ’ ಎಂದು ಸಂಬೋಧಿಸುತ್ತಿದ್ದರು. ತಮ್ಮ ಒಂದು ವಚನದಲ್ಲಿ ‘ಮಡಿವಾಳ ಮಾಚಯ್ಯರ ಪಾದವ ಹಿಡಿದು, ಭವಬಂಧನವ ಹರಿದುಕೊಂಡೆನಯ್ಯಾ! ಕೂಡಲಸಂಗಮದೇವಾ’ ಎಂದು ಬಸವಣ್ಣನವರು ಮಾಚಯ್ಯರನ್ನು ಧನ್ಯತೆಯಿಂದ ಸ್ಮರಿಸುತ್ತಾರೆ. ಮತ್ತೊಂದು ವಚನದಲ್ಲಿ ‘‘ನಮ್ಮ ಮಡಿವಾಳ ಮಾಚಯ್ಯನು ಮೈಲಿಗೆಯ ಕಳೆದು ಲಿಂಗಕ್ಕೆ ಮಡಿಮಾಡಿಕೊಟ್ಟನು ನೋಡಾ, ಕೂಡಲಸಂಗಮದೇವಾ’’ ಎಂದು ಉಲ್ಲೇಖಿಸುವ ಮೂಲಕ ತನ್ನ ಅಂತರಂಗದ ಕನ್ನಡಿ ಸ್ವಚ್ಛವಾಗಲು ಮಾಚಯ್ಯನೇ ಕಾರಣ ಎಂದು ಹೇಳಿದ್ದಾರೆ.
‘‘ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು’’ ಎಂಬ ವಚನದಲ್ಲಿ ಮಾಚಯ್ಯರೂ ಬಸವಣ್ಣರ ಬಗ್ಗೆ ಅಷ್ಟೇ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ‘‘ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು’’ ಎಂಬ ಮತ್ತೊಂದು ವಚನದಲ್ಲಿ ‘‘ನಾನು ಪ್ರಯತ್ನಿಸಿದರೆ ನಿನ್ನಂತೆಯೇ (ನೀನೇ) ಆಗಬಲ್ಲೆ, ಆದರೆ ಬಸವಣ್ಣನಂತೆ ಅದಮ್ಯ ಭಕ್ತಿಯ ಹೊಂದುವುದು ನನ್ನಿಂದಲ್ಲ, ಯಾರಿಂದಲೂ ಸಾಧ್ಯವಿಲ್ಲ’’ ಎಂದು ಮಾಚಯ್ಯ ಹೇಳುತ್ತಾರೆ. ಮಾಚಯ್ಯ ತನ್ನ ಇಡೀ ವಚನ ಗಣವನ್ನು ಇಷ್ಟೇ ಅಭಿಮಾನದಿಂದ ಆದರಿಸುತ್ತಿದ್ದರು. ಅದೇ ವಚನದ ಪೂರ್ವದಲ್ಲಿ ‘‘ಬಯಸಿದರೆ ಎರಡು ಕೋಟಿ ವೀರ ಸೈನಿಕರ ಶಕ್ತಿ ಹೊಂದಬಲ್ಲೆ, ಆದರೆ, ಸಮಾಜದ ಜಾತೀಯತೆಯ ಸಂಕೋಲೆಯನ್ನು ಮುರಿದು, ಪ್ರಾಣದ ಹಂಗು ತೊರೆದು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಹರಳಯ್ಯ ಮತ್ತು ಮಧುವರಸರಾಗುವುದು ಅಸಾಧ್ಯ’’ ಎನ್ನುತ್ತಾರೆ. ‘‘ಬಯಸಿದರೆ ನದಿಯ ತಟದ ಮರಳು ಕಣಗಳ ಸಂಖ್ಯೆಯಷ್ಟು ರುದ್ರರಾಗಬಲ್ಲೆ, ಆದರೆ ನ್ಯಾಯದ ವಿರುದ್ಧ ಸಿಡಿದೆದ್ದು, ಅಧರ್ಮವನ್ನು ಮಟ್ಟಹಾಕಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಜಗದೇವ ಮತ್ತು ಮೊಲ್ಲೆಬೊಮ್ಮಣ್ಣರಂತಹ ಅಪ್ಪಟ ಸಾಹಸಿಗಳಾಗುವುದು ಸಾಧ್ಯವಿಲ್ಲ.’’ಎನ್ನುತ್ತಾರೆ.
ಶರಣರಲ್ಲಿದ್ದ ಇಂತಹ ಪರಸ್ಪರ ಅಭಿಮಾನ, ಅಕ್ಕರೆ ಮತ್ತು ಗೌರವಗಳೇ ಶರಣ ಚಳವಳಿಯ ಬಹುದೊಡ್ಡ ಬಲ. ಯಾವುದೇ ಚಳವಳಿ ಒಂದು ಸುದೀರ್ಘ ಮುನ್ನೋಟದೊಂದಿಗೆ ದೂರದ ಗುರಿಯತ್ತ ಮುನ್ನಡೆಯಬೇಕೆಂದರೆ ಇಂತಹ ಪರಸ್ಪರ ವಿಶ್ವಾಸ, ನಂಬುಗೆ ತುಂಬಾ ಮುಖ್ಯ. ಈಗಿನ ಚಳವಳಿಗಳು ಈ ಪಾಠದಿಂದ ಕಲಿಯುವುದು ಬಹಳಷ್ಟಿದೆ.
ಇದು ಅಭಿಮಾನಕ್ಕಷ್ಟೇ ಸೀಮಿತವಲ್ಲ. ಪರಸ್ಪರ ವಿಮರ್ಶೆಯ ಕಾಲ ಬಂದಾಗ ಅವರು ಅದಕ್ಕೂ ಸಿದ್ಧವಿದ್ದರು. ಒಮ್ಮೆ ಮಹಾಮಂತ್ರಿ ಬಸವಣ್ಣನವರು ಬಂದು ತನ್ನನ್ನು ಕಾಣುವಂತೆ ಮಾಚಯ್ಯನಿಗೆ ಸುದ್ದಿ ಕಳಿಸುತ್ತಾರೆ. ಆಗ ಕಾಯಕ ನಿರತನಾಗಿದ್ದ ಮಾಚಯ್ಯ ಬಟ್ಟೆ ಒಗೆಯುವುದನ್ನು ಬಿಟ್ಟು ಹೋಗಲು ನಿರಾಕರಿಸುತ್ತಾರೆ. ತಪ್ಪಿನ ಅರಿವಾಗಿ ಸ್ವತಃ ಬಸವಣ್ಣನೇ ಬಂದಾಗ, ತನ್ನ ಕಾಯಕ ಮುಗಿಯುವವರೆಗೆ ಕಾಯಿಸುತ್ತಾರೆ. ಬಹುಶಃ ಈ ಘಟನೆಯ ನಂತರವೇ ‘‘ನನ್ನ ಮಾಚಯ್ಯ ಮೈಲಿಗೆಯ ಕಳೆದು ಲಿಂಗಕ್ಕೆ ಮಡಿಮಾಡಿಕೊಟ್ಟನು’’ ಎಂದು ಬಸವಣ್ಣ ತಾನು ಕಳೆದುಕೊಂಡ ಅಹಮ್ಮಿನ ಬಗ್ಗೆ ಉಲ್ಲೇಖಿಸಿರಬಹುದು. ಎಲ್ಲಾ ಶರಣರಂತೆ ಮಾಚಯ್ಯನಿಗೆ ತನ್ನ ಕಾಯಕದ ಬಗ್ಗೆ ಅಪಾರ ಶ್ರದ್ಧೆ. ಮಡಿ ಮಾಡುವ ಬಟ್ಟೆಗಳನ್ನು ಎತ್ತಿ ಕಲ್ಲಿಗೆ ಬಡಿಯುವಾಗ ಯಾರಾದರೂ ತೊಂದರೆ ಪಡಿಸಿದರೆ ವಿಪರೀತ ಸಿಟ್ಟಿಗೇಳುತ್ತಿದ್ದರಿಂದ ‘ವೀರ ಮಡಿವಾಳ’ ಎಂದು ಆತನನ್ನು ಕರೆಯುತ್ತಿದ್ದರು.
ಮಾಚಯ್ಯ ತನ್ನ ಬಟ್ಟೆ ಒಗೆಯುವ ಕಾಯಕವನ್ನು ಶರಣರ ಸೇವೆ ಪ್ರಸಾದ ಎಂದು ಮಾಡಿಕೊಂಡು ಬಂದವರು. ‘‘ಅಂತರಂಗದ ಅರಿವಿನ ಮೈಲಿಗೆಯ ಕಳೆದು, ಅರಿವಿನ ಕುರುಹ ಹರಿಸಬಲ್ಲಡೆ ಅವನೇ ಮಾಚಯ್ಯ - ಕಲಿದೇವರದೇವ’’ ಎನ್ನುವ ಮೂಲಕ ತನ್ನ ಬಟ್ಟೆ ಶುದ್ಧ ಮಾಡುವ ಕಾಯಕವನ್ನು ಅಧ್ಯಾತ್ಮದ ಜೊತೆ ಬೆರೆಸಿ, ಕಾಯಕದ ಘನತೆಯನ್ನೂ ಹೆಚ್ಚಿಸುತ್ತಾರೆ. ಆತನ ಕಾಯಕ ನಿಷ್ಠೆಯ ಬಗ್ಗೆ ಕೇಳಿತಿಳಿದ ಬಿಜ್ಜಳ ಒಮ್ಮೆ, ಇನ್ಮುಂದೆ ರಾಜಮನೆತನದವರ ಬಟ್ಟೆ ಮಡಿ ಮಾಡಿಕೊಡುವಂತೆ ಹೇಳಿಕಳಿಸುತ್ತಾನೆ. ಅದಕ್ಕೆ ಮಾಚಯ್ಯ ಸುತಾರಾಂ ಒಪ್ಪುವುದಿಲ್ಲ. ‘‘ಶಿವಭಕ್ತಿಯಿಲ್ಲದ, ಅಹಂಕಾರ ತುಂಬಿದ ‘ಭವಿ’ಗಳ (ಅಭಕ್ತರ) ಬಟ್ಟೆಯನ್ನು ಈ ಮಾಚಯ್ಯ ಮುಟ್ಟಲಾರ ಎಂದು ಹೇಳಿಕಳಿಸುತ್ತಾರೆ. ಸಿಟ್ಟಿಗೇಳುವ ಬಿಜ್ಜಳ ಬಲಪ್ರಯೋಗಕ್ಕೆ ಮುಂದಾಗುತ್ತಾನೆ. ಆದರೂ ಮಾಚಯ್ಯ ಜಗ್ಗುವುದಿಲ್ಲ. ಬಡವನ ಕಾಯಕದ ಮೇಲೆ ಅಧಿಕಾರದ ಮದ ತೋರಿಸಬಾರದು ಎಂಬುದು ಮಾಚಯ್ಯರ ನಿಲುವಾಗಿತ್ತು. ಪ್ರತ್ಯುತ್ತರ ನೀಡಿ ಕಳಿಸುತ್ತಾರೆ. ಜ್ಞಾನಿಯಾಗಿರುವ ಮಾಚಯ್ಯ ಪರಾಕ್ರಮಿಯೂ ಆಗಬಲ್ಲ ಎಂಬ ಸತ್ಯ ಅವತ್ತು ಅನಾವರಣಗೊಳ್ಳುತ್ತದೆ.
‘‘ಕೂಳ ಹಂಗಲ್ಲ, ಕುಲದ ಹಂಗಲ್ಲ, ಕಾಯಕವ ಮಾಡುವಲ್ಲಿ ಯಾರದೂ ಹಂಗಿಲ್ಲ!’’ ಎನ್ನುವ ಕಾಯಕನಿಷ್ಠೆ ಹೊಂದಿದ್ದ ಮಾಚಯ್ಯ ರಾಜ್ಯಾಧಿಕಾರದ ಮುಂದೆ ಯಾವತ್ತೂ ತಲೆಬಾಗಿದವರಲ್ಲ. ಬೂಟಾಟಿಕೆಯ ಭಕ್ತಿ ಮತ್ತು ಪುರೋಹಿತಶಾಹಿ ಕಂದಾಚಾರಗಳ ಕಟು ಟೀಕಾಕಾರರಾಗಿದ್ದ ಮಾಚಯ್ಯ ತನ್ನ ಹಲವು ವಚನಗಳಲ್ಲಿ ಅವುಗಳನ್ನು ಖಂಡಿಸಿದ್ದಾರೆ. ಸಮಾಜದಲ್ಲಿ ಬೇರೂರಿದ್ದ ಸ್ಪರ್ಶ ಮೈಲಿಗೆಯನ್ನು ಅವರು ಅತ್ಯಂತ ತೀಕ್ಷ್ಣವಾಗಿ ಟೀಕಿಸಿದರು. ಬಟ್ಟೆ ತೊಳೆಯುವ ತಾನು ಎಲ್ಲರಿಗಿಂತ ಮಡಿ (ಪರಿಶುದ್ಧ) ಎಂದು ವಾದಿಸಿದರು. ‘‘ಮಡಿ ಮಡಿ ಎಂದು ಮರುಳಾಗಬೇಡಿ, ಮಡಿಯೆಂಬುದಿದು ಕಷ್ಟ ನೋಡಾ! ತನ್ನ ತಾನರಿದು, ತನ್ನ ತಾನು ತೊಳೆಯಬಲ್ಲಡೆ ಅದೇ ಮಡಿ ನೋಡಾ ಕಲಿದೇವರದೇವಾ’’ ಎನ್ನುವ ಮಾಚಯ್ಯ ‘‘ಮುಟ್ಟುವ ಮೈಲಿಗೆಗೆ ಬೊಬ್ಬಿಡುವಿರಲ್ಲಾ, ನಿಮ್ಮ ಮೈಯೊಳಗಿನ ಮೈಲಿಗೆಯನೇಕೆ ತೊಳೆಯಿರಿ? ಕಾಮದ ಮೈಲಿಗೆ, ಕ್ರೋಧದ ಮೈಲಿಗೆ, ಲೋಭದ ಮೈಲಿಗೆ ನಿತ್ಯ ನಿಮ್ಮ ಅಂಟಿಕೊಂಡಿರಲೇಕೆ ಮಡಿವಾಳನಾಗರಿ? ಕಲಿದೇವರದೇವಾ, ಅಂತರಂಗದ ಕೊಳೆತೊಳೆದವನೇ ನಿಜ ಮಡಿವಾಳ’’ ಎಂದು ಮೇಲ್ಜಾತಿಗಳ ಮೌಢ್ಯಕ್ಕೆ ಸವಾಲು ಎಸೆಯುತ್ತಾರೆ.
ಹೀಗೆ ಬಸವಣ್ಣನವರ ನೇತೃತ್ವದ ಮಹಾಮನೆಯ ವಚನಕ್ರಾಂತಿಯನ್ನು ತನ್ನ ಬದುಕು, ಕಾಯಕ, ಬರಹದಲ್ಲಿ ಅಳವಡಿಸಿಕೊಂಡು ಬದುಕಿದ ಮಾಚಯ್ಯ ಕೊನೆಗೆ ತನ್ನ ಪ್ರಾಣವನ್ನೇ ಮುಡಿಪಿಟ್ಟು ಆ ವಚನಗಳನ್ನು ಕಾಯುವ ಹೊಣೆಹೊತ್ತುಕೊಳ್ಳಬೇಕಾಗಿ ಬಂತು.
ಜಾತಿ ಅಸಮಾನತೆಯನ್ನು, ಕರ್ಮ ಸಿದ್ಧಾಂತವನ್ನು, ಭಕ್ತಿದಾಸ್ಯವನ್ನು ಧಿಕ್ಕರಿಸಿ ಶ್ರಮಜೀವಿಗಳ ಸಮಸಮಾಜ ನಿರ್ಮಿಸಲು ಮುಂದಾಗಿದ್ದ ಶರಣರ ಮೇಲೆ ಬಿಜ್ಜಳನ ಆಸ್ಥಾನದ ಪುರೋಹಿತಶಾಹಿಗಳ ಮಸಲತ್ತು ನಿರಂತರವಾಗಿ ನಡೆಯುತ್ತಿತ್ತು. ಬಿಜ್ಜಳನೋ ಮಹಾ ಗೊಂದಲಮಯಿ. ಆದರೆ ಯಾವಾಗ ಬ್ರಾಹ್ಮಣರ ಮಧುವರಸ ಮತ್ತು ದಲಿತರ ಹರಳಯ್ಯನವರು ತಮ್ಮ ಮಕ್ಕಳಿಗೆ ಅಂತರ್ಜಾತಿ ವಿವಾಹ ಮಾಡುವ ಕ್ರಾಂತಿಕಾರಿ ಸಾಹಸಕ್ಕೆ ಮುಂದಾದರೋ ಪುರೋಹಿತಶಾಹಿಗಳು ಕೆರಳಿ, ಬಿಜ್ಜಳನ ತಲೆ ಕೆಡಿಸಿದರು. ಜಾತಿ ಸಂಕರದ ಈ ತಪ್ಪಿಗೆ ಶರಣರಿಗೆ ಎಳೆಯೂಟೆ ಶಿಕ್ಷೆ ನೀಡಲಾಯಿತು. ‘ಮರಣವೇ ಮಹಾನವಮಿ’ ಎಂದ ಬಹುಪಾಲು ಶರಣರು ಇದನ್ನು ತಮ್ಮ ಶಾಂತಚಿತ್ತದಲ್ಲಿ ಎದುರಿಸಿದರೂ ಜಗದೇವ, ಮೊಲ್ಲೆಬೊಮ್ಮಯ್ಯನಂತಹ ಉಗ್ರಗಾಮಿ ಬಣ ಬಿಜ್ಜಳನ ಹತ್ಯೆ ಮಾಡಿತು. ಇದು ಪುರೋಹಿತಶಾಹಿಗಳಿಗೆ ಶರಣರನ್ನು ಸೆದೆಬಡಿಯಲು ಅವಕಾಶ ಸೃಷ್ಟಿಸಿತು. ಬಿಜ್ಜಳನ ಮಗ ಸೋವಿದೇವನಿಗೆ ಪಟ್ಟಕಟ್ಟಿ, ಅವನ ಮೂಲಕ ಶರಣರ ಹತ್ಯೆಗೆ ಸೇನೆಯನ್ನು ಛೂಬಿಡಲಾಯಿತು.
ಪುರೋಹಿತಶಾಹಿಗಳ ಆತಂಕವಿದ್ದದ್ದು ಕೇವಲ ಶರಣರ ಬಗ್ಗೆಯಲ್ಲ, ಅವರು ಸೃಷ್ಟಿಸಿದ ವಚನಸಾಹಿತ್ಯದ ಬಗ್ಗೆ. ಮುಂದೆ ಎಂದಾದರೂ, ಆ ಸಾಹಿತ್ಯದಿಂದ ಪ್ರೇರಿತವಾಗಿ ಮತ್ತೊಂದು ಪೀಳಿಗೆ ಈ ಚಳವಳಿಗೆ ಮುಂದಾಗಬಹುದು ಎಂಬ ದುರಾಲೋಚನೆಯಿಂದ ವಚನಗಳನ್ನು ನಾಶ ಮಾಡುವಂತೆ ಸೋವಿದೇವನಿಗೆ ಸಲಹೆ ನೀಡಿದರು. ನಶ್ವರ ಜೀವ ಮತ್ತು ದೇಹದ ಬಗ್ಗೆ ಮಮಕಾರ ಹೊಂದಿರದ ಶರಣರು ತಮ್ಮ ಸಾವಿಗೆ ಅಂಜಲಿಲ್ಲ. ಆದರೆ ಅಪಾರ ಜ್ಞಾನ, ಜೀವನಾನುಭವ, ವಿಚಾರಗಳ ನಿಷ್ಕರ್ಷೆಯಿಂದ ಹುಟ್ಟಿದ್ದ ಸಾಹಿತ್ಯವನ್ನು ಕಳೆದುಕೊಳ್ಳುವುದು ಶರಣರಿಗೆ ಇಷ್ಟವಿರಲಿಲ್ಲ. ಆಗ, ವಚನಗಳನ್ನು ರಕ್ಷಿಸುವ ಹೊಣೆಯನ್ನು ‘ವೀರ ಮಡಿವಾಳ’ ಮಾಚಿದೇವನಿಗೆ ಒಪ್ಪಿಸಲಾಗುತ್ತದೆ. ಉಳವಿಯ (ಈಗಿನ ಉತ್ತರ ಕನ್ನಡದ) ದಟ್ಟಕಾಡುಗಳ ನಿಗೂಢ ಗುಹೆಗಳಲ್ಲಿ ಅವುಗಳನ್ನು ಅಡಗಿಸಿ ರಕ್ಷಿಸುವಂತೆ ಮಾಚಯ್ಯನಿಗೆ ಕೇಳಿಕೊಳ್ಳಲಾಗುತ್ತದೆ.
ಶರಣ ಗಣದಲ್ಲೆ ಒಂದಿಷ್ಟು ಬಲಶಾಲಿ, ಯುವ ಶರಣರ ಸೇನೆಯನ್ನು ಕಟ್ಟುವ ಮಾಚಯ್ಯ ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನ ನೇತೃತ್ವದಲ್ಲಿ ತಾಳೆಗರಿಯ ವಚನಗಳ ಕಟ್ಟುಗಳನ್ನು ಎತ್ತು ಮತ್ತು ಕೆಲವು ಶರಣರ ತಲೆಮೇಲೆ ಹೇರಿಕೊಂಡು ಕಲ್ಯಾಣವನ್ನು ತೊರೆದು ಉಳವಿಯತ್ತ ಪ್ರಯಾಣ ಆರಂಭಿಸುತ್ತಾರೆ. ‘‘ಮುಂದೆ ಶರಣರು, ಹಿಂದೆ ಸೈನ್ಯ’’ ಎಂಬ ವ್ಯೆಹ ರಚಿಸಿಕೊಂಡು, ವಚನಗಳನ್ನೊತ್ತ ಶರಣರನ್ನು ಮುಂದೆ ಬಿಟ್ಟು, ಅವರ ಮೇಲೆ ದಾಳಿಯಾಗದಂತೆ ಹಿಂದಿನಿಂದ ರಕ್ಷಣೆ ಒದಗಿಸುತ್ತಾ ಮುಂಬರಿಯುತ್ತಾರೆೆ. ಆದರೆ ಕಕ್ಕೇರಿ ತಲುಪುವ ವೇಳೆಗೆ ಸೋವಿದೇವನ ಸೈನ್ಯ ವಚನಗಳ ಮೇಲೆ ದಾಳಿ ಮಾಡುತ್ತದೆ. ಆಗ, ಯಾವುದೇ ಕಾರಣಕ್ಕೂ ತಮ್ಮ ಪ್ರಯಾಣ ನಿಲ್ಲಿಸದೆ ಉಳವಿಯ ಕಾಡು ಸೇರುವಂತೆ ಚನ್ನಬಸವಣ್ಣನಿಗೆ ಆಜ್ಞೆ ನೀಡಿ ಕಳಿಸಿಕೊಡುವ ಮಾಚಯ್ಯ ತನ್ನ ಸೇನೆಯನ್ನು ಕಕ್ಕೇರಿಯಲ್ಲೇ ಉಳಿಸಿಕೊಂಡು, ಸೋವಿದೇವನ ಸೈನ್ಯವನ್ನು ಅಡ್ಡಗಟ್ಟುತ್ತಾರೆ. ಗಂಭೀರ ಕದನವಾಗುತ್ತದೆ. ಮಾಚಯ್ಯ ಆ ಕಾಳಗದಲ್ಲಿ ಹುತಾತ್ಮನಾಗುವುದಕ್ಕೂ ಮುನ್ನ ವೈರಿ ಸೇನೆಯ ಬಲವನ್ನು ಬಹುಪಾಲು ತಗ್ಗಿಸುತ್ತಾರೆ. ಅಲ್ಪ ಸೇನಾಬಲದಲ್ಲಿ ಮುಂಬರಿಯಲು ಇಷ್ಟವಿಲ್ಲದ ಸೋವಿದೇವನ ಸೇನೆ ವಾಪಸ್ ಕಲ್ಯಾಣಕ್ಕೆ ಮರಳುತ್ತದೆ. ವೀರ ಮಾಚಯ್ಯ ‘ವೀರ ಮರಣ’ವನ್ನುಪ್ಪುತ್ತಾರೆ. ವಚನಗಳು ಉಳವಿಯ ಗುಹೆಗಳಲ್ಲಿ ಪ್ರಾಣರಕ್ಷಣೆ ಪಡೆಯುತ್ತವೆ.
ಮಾಚಯ್ಯನ ವಚನಗಳ ಅಂಕಿತನಾಮ ‘ಕಲಿದೇವರದೇವಾ’. ‘ಕಲಿ’ ಎಂದರೆ ವೀರ, ಸೈನಿಕ (ರಣಕಲಿ) ಎಂಬ ಅರ್ಥವಿದೆ. ವೀರರ ದೇವ ಎಂಬರ್ಥ. ಕಲಿ ಎಂಬುದಕ್ಕೆ ಇನ್ನೂ ಒಂದರ್ಥವಿದೆ, ‘ಕಲಿಕೆ’ (್ಝಛಿಚ್ಟ್ಞಜ್ಞಿಜ), ಅರ್ಥಾತ್ ಜ್ಞಾನ (ಓ್ಞಟಡ್ಝಿಛಿಜಛಿ). ಈ ಆಯಾಮದಿಂದ ‘ಕಲಿ’ ‘ದೇವರ’ ‘ದೇವ’ ಎಂಬುದನ್ನು ಬಿಡಿಸಿ ನೋಡಲು ಮುಂದಾದರೆ ಕಲಿಯುವಿಕೆಯೇ (ಜ್ಞಾನವೇ) ಎಲ್ಲಾ ದೇವರುಗಳಿಗೂ ದೇವರು ಎಂಬ ಅರ್ಥವನ್ನು ನಾವು ಗ್ರಹಿಸಬಹುದು. ಕಾಯಕನಿಷ್ಠೆಯ ಮಾಚಯ್ಯ ಜ್ಞಾನದ ಅಗತ್ಯವನ್ನೂ ಈ ಸಮಾಜಕ್ಕೆ ನೀಡಿಹೋಗಿದ್ದಾರೆ.
ಇದು ಮುಗಿದುಹೋದ ಚರಿತ್ರೆ. ಮಾಚಯ್ಯನ ನೆಪದಲ್ಲಿ ಆತನ ಕಾಯಕ ಸಮುದಾಯದ (ಮಡಿವಾಳ, ದೋಬಿ, ಅಗಸ, ರಜಾಕ) ಇಂದಿನ ಸ್ಥಿತಿಗತಿಗಳನ್ನು ನೋಡಿದಾಗ ಅಷ್ಟೇನು ಆಶಾದಾಯಕ ಬೆಳವಣಿಗೆಗಳು ಗೋಚರಿಸುವುದಿಲ್ಲ. ದೇಶದ ಜನಸಂಖ್ಯೆಯಲ್ಲಿ ಶೇ.2 ರಿಂದ 3ರಷ್ಟಿರುವ ಈ ಪುಟ್ಟ ಸಮುದಾಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಾತಿನಿಧ್ಯದ ಕೊರತೆ ಅನುಭವಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕುಟುಂಬಗಳು ಭೂಹೀನವಾಗಿವೆ.
ಎನ್‌ಎಸ್‌ಎಸ್‌ಒ ಸಮೀಕ್ಷೆಗಳ ಪ್ರಕಾರ ಈ ಸಮುದಾಯದ ಶೇ.60ರಷ್ಟು ಜನ ಅಸಂಘಟಿತ ವಲಯದ ಕಾರ್ಮಿಕರಾಗಿ ಪರದಾಡುತ್ತಿದ್ದಾರೆ. ಇತ್ತೀಚೆಗೆ ಶೈಕ್ಷಣಿಕ ಮಟ್ಟ ಸುಧಾರಿಸುತ್ತಿದೆಯಾದರೂ ಸರಕಾರಿ ಉದ್ಯೋಗ ಮತ್ತು ಉನ್ನತ ಶಿಕ್ಷಣಗಳಲ್ಲಿ ಅರ್ಹ ಪಾಲು ಪಡೆಯುವಲ್ಲಿ ವಿಫಲವಾಗಿದೆ.
ದೇಶದ 17 ರಾಜ್ಯಗಳಲ್ಲಿ (ಕೆಲವು ರಾಜ್ಯಗಳ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ) ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಪಕ್ಕದ ತಮಿಳುನಾಡು ಮತ್ತು ಕೇರಳದ ಕೆಲ ಜಿಲ್ಲೆಗಳಲ್ಲೂ ಈ ಸಮುದಾಯಕ್ಕೆ ಎಸ್‌ಸಿ ಸ್ಥಾನ ನೀಡಲಾಗಿದ್ದು, ಕರ್ನಾಟಕದಲ್ಲೂ ಇದಕ್ಕಾಗಿ ದಶಕಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ. ಬೇರೆಲ್ಲ ಶೋಷಿತ ಸಮುದಾಯಗಳ ಬಳಿ ರಾಜಕೀಯ ಪಕ್ಷಗಳನ್ನು ಮಣಿಸುವಂತಹ ಜನಸಂಖ್ಯಾ ಬಲವಾದರೂ ಇದೆ. ಆದರೆ ಅಂತಹ ಸಂಖ್ಯಾಬಲವೂ ಇಲ್ಲದ ಈ ಬಗೆಯ ಸಮುದಾಯಗಳ ಕೂಗುಗಳನ್ನು ಕೇಳುವವರಾರು? ಫಲಾನುಭವಿ ಸಮುದಾಯಗಳನ್ನೇ ಮತ್ತಷ್ಟು ಮೀಸಲು ಗುಂಪುಗಳಿಗೆ ಎತ್ತರಿಸಿಕೊಳ್ಳಲು ಆಯಾ ಸಮುದಾಯದ ನಾಯಕರುಗಳು ಹಾತೊರೆಯುತ್ತಿರುವಾಗ ನಾಯಕತ್ವವೇ ಇಲ್ಲದ ಇಂತಹ ಅನಾಥ ಸಮುದಾಯಗಳ ಗೋಳು ಕೇಳುವವರಾರು?
2025ರ ಜುಲೈ 30ರಂದು ಸಂಸತ್ತಿನಲ್ಲಿ ಕಾಂಗ್ರೆಸ್‌ನ ಸಂಸದ ಸುರೇಶ್ ಕುಮಾರ್ ಶೇಟ್ಕರ್ ಅವರು ಮಾತನಾಡಿ, ‘‘ರಾಜ್ಯದ 17 ಜಿಲ್ಲೆಗಳಲ್ಲಿ ಎಸ್ಸಿ ಸ್ಥಾನ ಹೊಂದಿರುವ ದೋಬಿ ಜಾತಿಯನ್ನು 11 ರಾಜ್ಯಗಳಲ್ಲಿ ಒಬಿಸಿಗೆ ಸೇರಿಸಲಾಗಿದೆ. ಇದರಿಂದ ಈ ಅರ್ಹ ಜಾತಿಗೆ ಅನ್ಯಾಯವಾಗುತ್ತಿದೆ. ಇಡೀ ದೇಶದಲ್ಲಿ ಏಕರೂಪ ನೀತಿ ರೂಪಿಸಿ, ಈ ಸಮುದಾಯವನ್ನು ದೇಶಾದ್ಯಂತ ಎಸ್ಸಿಗೆ ಸೇರಿಸಲು ಕೇಂದ್ರ ಸರಕಾರ ಗಮನ ಹರಿಸಬೇಕು’’ ಎಂದು ಒತ್ತಾಯಿಸಿದರು. ಆದರೆ, ಅಳದೆ ಹೋದರೆ ತಾಯಿ ಕೂಡಾ ಮಗುವಿಗೆ ಹಾಲುಣಿಸದ ಕಾಲ ಇದು. ಅಳಲು ಶಕ್ತಿಯೂ ಇಲ್ಲದ ಇಂತಹ ಮಕ್ಕಳ ಕಾಳಜಿ ಯಾರಿಗೆ ತಾನೇ ಬೇಕು?
ವಚನಗಳನ್ನು ಸಂರಕ್ಷಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಮಾಚಯ್ಯರ ಸಮಾಧಿಯನ್ನು (ಕಕ್ಕೇರಿಯಲ್ಲಿ) ಆವರಿಸಿರುವ ನಿರ್ಲಕ್ಷ್ಯ ಮತ್ತು ಅನಾಥಪ್ರಜ್ಞೆಗಳೇ ಈ ಸಮುದಾಯವನ್ನೂ ಆವರಿಸಿರುವುದು ಕೇವಲ ರೂಪಕವಲ್ಲ.