‘ಕೆಳ ಜಾತಿಯವನು’ ಎನ್ನುವ ಭಾಷೆಯ ಹಿಂದೆ ಅಡಗಿರುವ ಸಂಕಟ
ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯ ಝಾಖ್ರಾ ಗ್ರಾಮದಲ್ಲಿ 2026ರ ಇತೀಚೆಗೆ (ಮೇ 2ರಂದು) ನಡೆದಿರುವ ಘಟನೆಯೊಂದು ಭಾರತೀಯ ಸಮಾಜದ ಮನಸ್ಸನ್ನು ಕಾಡಬೇಕಾದ ಸಂಗತಿ. ದಲಿತ ಬಾಲಕ ಶಿವಂ ಕಮಲ್ ಸಾರ್ವಜನಿಕ ಕೈಪಂಪಿನಿಂದ ನೀರು ಕುಡಿದ ಕಾರಣಕ್ಕೆ ಅವನ ಮೇಲೂ, ಆತನ ತಂದೆ ರಿಂಕು ಕಮಲ್ ಮೇಲೂ ನಡೆದಿತ್ತೆಂದು ಆರೋಪಿಸಲಾಗಿರುವ ಜಾತಿ ಆಧಾರಿತ ನಿಂದನೆ, ಹಲ್ಲೆ ಮತ್ತು ಅವಮಾನ ಕೇವಲ ಒಂದು ಗ್ರಾಮದ ಘಟನೆ ಅಲ್ಲ. ಅದು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಾಂವಿಧಾನಿಕ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯ ಮೇಲೆ ಎಸೆಯಲ್ಪಟ್ಟ ಪ್ರಶ್ನೆಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದ ಈ ಪ್ರಕರಣದ ಕುರಿತು ಸಮಾಜವಾದಿ ಪಕ್ಷದ ಮಾನವ ಹಕ್ಕುಗಳ ಘಟಕವು ರಚಿಸಿದ್ದ ಸತ್ಯಶೋಧನಾ ತಂಡವು ನೀಡಿರುವ ವರದಿಯ ಪ್ರಕಾರ, ದಲಿತ ಸಮುದಾಯದ ರಿಂಕು ಕಮಲ್ ಮತ್ತು ಅವರ ಪುತ್ರ ಶಿವಂ ಕಮಲ್ ಜಾತಿ ನಿಂದನೆ, ದೈಹಿಕ ಹಲ್ಲೆ ಮತ್ತು ಮಾನವೀಯ ಗೌರವಕ್ಕೆ ಧಕ್ಕೆ ಉಂಟುಮಾಡುವ ವರ್ತನೆಗೆ ಒಳಗಾಗಿದ್ದಾರೆ ಎಂಬ ಆರೋಪಗಳಿವೆ.
ವರದಿಗಳ ಪ್ರಕಾರ, ನೀರು ಕುಡಿಯಲು ಬಳಸಿದ ಬಕೆಟ್ ‘ಮೇಲ್ಜಾತಿಯವರದ್ದು’ ಎಂಬ ಕಾರಣಕ್ಕಾಗಿ ಬಾಲಕನಿಗೆ ಜಾತಿಸೂಚಕ ನಿಂದನೆ ಮಾಡಿ, ನಂತರ ತಂದೆ-ಮಗನನ್ನು ಹಲ್ಲೆಗೊಳಪಡಿಸಲಾಗಿದೆ. ಇನ್ನೂ ಗಂಭೀರವಾದ ಆರೋಪವೆಂದರೆ, ಆರಂಭದಲ್ಲಿ ಪೊಲೀಸ್ ವ್ಯವಸ್ಥೆಯೇ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿತು ಎನ್ನುವುದು. ಈ ಆರೋಪಗಳು ಸತ್ಯವಾಗಿದ್ದರೆ, ಇದು ಕೇವಲ ವ್ಯಕ್ತಿಗಳ ಅಪರಾಧವಲ್ಲ; ನ್ಯಾಯದ ರಕ್ಷಣೆಗೆ ನಿರ್ಮಿಸಲಾದ ಸಂಸ್ಥೆಗಳ ವೈಫಲ್ಯವೂ ಹೌದು.
ಡಾ.ಬಿ.ಆರ್.ಅಂಬೇಡ್ಕರ್ ಅವರು 1949ರಲ್ಲಿ ಎಚ್ಚರಿಸಿದಂತೆ, ರಾಜಕೀಯ ಸಮಾನತೆ ದೊರೆತರೂ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಮುಂದುವರಿದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಝಾಖ್ರಾ ಘಟನೆಯಂತಹ ಪ್ರಕರಣಗಳು ಆ ಎಚ್ಚರಿಕೆಯು ಇಂದಿಗೂ ಪ್ರಸ್ತುತವಾಗಿರುವುದನ್ನು ನೆನಪಿಸುತ್ತವೆ.
ಅಂಬೇಡ್ಕರ್ ಅವರು 1927ರಲ್ಲಿ ಮಹಾಡ್ ಸತ್ಯಾಗ್ರಹವನ್ನು ಆರಂಭಿಸಿದ್ದು ಕೂಡ ಸಾರ್ವಜನಿಕ ನೀರಿನ ಮೂಲಗಳ ಮೇಲಿನ ದಲಿತರ ಹಕ್ಕಿಗಾಗಿ. ‘‘ಮಾನವ ಸಮಾನತೆಯ ಹೋರಾಟವು ಅನೇಕ ಬಾರಿ ನೀರಿನ ಹಕ್ಕಿನಿಂದಲೇ ಆರಂಭವಾಗುತ್ತದೆ’’ ಎಂಬ ಅಂಬೇಡ್ಕರ್ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ಝಾಖ್ರಾ ಘಟನೆಯ ಆರೋಪಗಳನ್ನು ಗಮನಿಸಿದರೆ, ಒಂದು ಸರಕಾರಿ ಹ್ಯಾಂಡ್ಪಂಪ್ನಿಂದ ನೀರು ಕುಡಿಯಲು ಯತ್ನಿಸಿದ ಬಾಲಕನ ಮೇಲೆ ಹಲ್ಲೆ ನಡೆದಿತ್ತೆಂಬ ಸಂಗತಿ ಕೇವಲ ವ್ಯಕ್ತಿಗತ ದ್ವೇಷದ ವಿಷಯವಲ್ಲ; ಅದು ಸಾರ್ವಜನಿಕ ಸಂಪನ್ಮೂಲಗಳ ಮೇಲಿನ ಸಾಮಾಜಿಕ ನಿಯಂತ್ರಣದ ಪ್ರಶ್ನೆಯನ್ನು ಮತ್ತೆ ಮುಂದಿಡುತ್ತದೆ. ಫ್ರೆಂಚ್ ಸಮಾಜಶಾಸ್ತ್ರಜ್ಞ ಪಿಯರ್ ಬೋರ್ಡಿಯು ಹೇಳುವ ‘ಸಾಂಕೇತಿಕ ಹಿಂಸೆ’ ಎಂಬ ಪರಿಕಲ್ಪನೆ ಇಲ್ಲಿ ಪ್ರಸ್ತುತವಾಗುತ್ತದೆ. ಹಿಂಸೆ ಎಂದರೆ ಕೇವಲ ದೈಹಿಕ ಹಲ್ಲೆಯಲ್ಲ; ಸಮಾಜದಲ್ಲಿ ಯಾರಿಗೆ ಯಾವ ಸ್ಥಾನ, ಯಾವ ಹಕ್ಕು, ಯಾವ ಮಿತಿ ಎಂಬುದನ್ನು ಬಲಾತ್ಕಾರವಾಗಿ ಒಪ್ಪಿಸುವ ವ್ಯವಸ್ಥೆಯೂ ಹಿಂಸೆಯೇ. ಸತ್ಯಶೋಧನಾ ವರದಿಯಲ್ಲಿನ ಆರೋಪಗಳು ನಿಜವಾಗಿದ್ದರೆ, ದಲಿತ ಬಾಲಕನನ್ನು ಸಾರ್ವಜನಿಕವಾಗಿ ಅವಮಾನಿಸುವ ಪ್ರಯತ್ನವು ಕೇವಲ ವ್ಯಕ್ತಿಯ ವಿರುದ್ಧದ ದಾಳಿ ಅಲ್ಲ; ಅದು ಒಂದು ಸಮುದಾಯಕ್ಕೆ ‘ನಿಮ್ಮ ಸ್ಥಾನ ಇದೇ’ ಎಂಬ ಸಂದೇಶ ರವಾನಿಸುವ ಸಾಮಾಜಿಕ ಕ್ರಮವಾಗಿರುತ್ತದೆ.
ಭಾರತೀಯ ಸಮಾಜದಲ್ಲಿ ನೀರು ಎಂದಿಗೂ ಕೇವಲ ಪ್ರಕೃತಿ ಸಂಪನ್ಮೂಲವಾಗಿರಲಿಲ್ಲ; ಅದು ಅಧಿಕಾರ, ಶುದ್ಧತೆ ಮತ್ತು ಸಾಮಾಜಿಕ ಸ್ಥಾನಮಾನದ ಸಂಕೇತವಾಗಿಯೂ ಕಾರ್ಯನಿರ್ವಹಿಸಿದೆ. ಸಮಾಜಶಾಸ್ತ್ರಜ್ಞ ಎಂ.ಎನ್. ಶ್ರೀನಿವಾಸ್ ಅವರು ಭಾರತೀಯ ಗ್ರಾಮೀಣ ಸಮಾಜವನ್ನು ವಿಶ್ಲೇಷಿಸುವಾಗ ‘‘ಜಾತಿಯು ಕೇವಲ ಸಾಮಾಜಿಕ ಗುರುತು ಮಾತ್ರವಲ್ಲ, ಅದು ಅಧಿಕಾರದ ವ್ಯವಸ್ಥೆಯೂ ಹೌದು’’ ಎಂದು ಹೇಳಿದ್ದರು. ಗ್ರಾಮೀಣ ಭಾರತದ ಅನೇಕ ಭಾಗಗಳಲ್ಲಿ ನೀರು, ಭೂಮಿ, ದೇವಾಲಯ, ಸಾರ್ವಜನಿಕ ಸ್ಥಳಗಳು ಹಾಗೂ ಸಾಮಾಜಿಕ ಗೌರವದ ಮೇಲಿನ ನಿಯಂತ್ರಣ ಇನ್ನೂ ಜಾತಿ ಸಂಬಂಧಗಳಿಂದಲೇ ನಿರ್ಧರಿಸಲ್ಪಡುತ್ತದೆ. ಆದ್ದರಿಂದ ನೀರು ಕುಡಿಯುವ ಹಕ್ಕಿನ ಪ್ರಶ್ನೆಯೇ ಕೆಲವೊಮ್ಮೆ ಅಧಿಕಾರದ ಪ್ರಶ್ನೆಯಾಗಿ ಮಾರ್ಪಡುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆ (ಎನ್ಸಿಆರ್ಬಿ) ಬ್ಯೂರೋ ಅಂಕಿಅಂಶಗಳು ಈ ವಾಸ್ತವವನ್ನು ದೃಢಪಡಿಸುತ್ತವೆ. 2022ರಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳ ಸಂಖ್ಯೆ 57,582ಕ್ಕೆ ತಲುಪಿದ್ದು, ಹಿಂದಿನ ವರ್ಷಕ್ಕಿಂತ ಸುಮಾರು ಶೇ. 13 ಹೆಚ್ಚಳ ಕಂಡಿತ್ತು. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಸೇರಿದಂತೆ ಹಲವು ರಾಜ್ಯಗಳು ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿವೆ. 2023ರ ಅಂಕಿಅಂಶಗಳಲ್ಲಿಯೂ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳು 57,789 ಪ್ರಕರಣಗಳೊಂದಿಗೆ ಹೆಚ್ಚಿನ ಮಟ್ಟದಲ್ಲೇ ಮುಂದುವರಿದಿವೆ. ಹಲ್ಲೆ, ಬೆದರಿಕೆ, ಅವಮಾನ ಮತ್ತು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಈ ಅಂಕಿಅಂಶಗಳಲ್ಲಿ ಪ್ರಮುಖವಾಗಿವೆ.
ಆದರೆ ಇಲ್ಲಿ ಒಂದು ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ. ಅಪರಾಧಗಳ ಸಂಖ್ಯೆಯ ಹೆಚ್ಚಳವು ಸಮಾಜ ಹೆಚ್ಚು ಹಿಂಸಾತ್ಮಕವಾಗುತ್ತಿದೆ ಎಂಬುದರ ಸೂಚನೆಯೇ? ಅಥವಾ ದಲಿತರು ಹೆಚ್ಚು ಧೈರ್ಯದಿಂದ ದೂರು ದಾಖಲಿಸುತ್ತಿರುವುದರ ಪರಿಣಾಮವೇ? ತಜ್ಞರ ಅಭಿಪ್ರಾಯದಲ್ಲಿ ಎರಡೂ ಅಂಶಗಳು ಒಂದೇ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಾಗೃತಿ ಮತ್ತು ಕಾನೂನು ಅರಿವು ಹೆಚ್ಚುತ್ತಿರುವುದರಿಂದ ಪ್ರಕರಣಗಳು ದಾಖಲಾಗುತ್ತಿವೆ; ಆದರೆ ಸಾಮಾಜಿಕ ಪೂರ್ವಾಗ್ರಹಗಳು ಮತ್ತು ಅಧಿಕಾರದ ಅಸಮಾನ ಹಂಚಿಕೆ ಇನ್ನೂ ಅಸ್ತಿತ್ವದಲ್ಲಿರುವುದರಿಂದ ಹಿಂಸೆಯೂ ಮುಂದುವರಿಯುತ್ತಿದೆ.
ಈ ಘಟನೆಯ ಇನ್ನೊಂದು ಆಯಾಮ ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆಯಾಗಿದೆ. ಅಂಬೇಡ್ಕರ್ರವರ ಪ್ರಕಾರ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಕೇವಲ ಘೋಷಣೆಯಲ್ಲ; ಅದು ಆಡಳಿತದ ಪ್ರತಿಯೊಂದು ಹಂತದಲ್ಲೂ ಅನುಭವಕ್ಕೆ ಬರಬೇಕು. ಒಂದು ದಲಿತ ಕುಟುಂಬವು ದೂರು ದಾಖಲಿಸಲು ಸಾಮಾಜಿಕ ಮಾಧ್ಯಮದ ಒತ್ತಡ ಅಥವಾ ನ್ಯಾಯಾಲಯದ ಆದೇಶದ ಅವಲಂಬನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಅದು ಸಾಂವಿಧಾನಿಕ ಆಡಳಿತದ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ.
ಸಮಾಜಶಾಸ್ತ್ರಜ್ಞ ಆಂದ್ರೆ ಬೆಟೆಯಿಲ್ ಹೇಳುವಂತೆ, ಆಧುನಿಕ ಭಾರತದಲ್ಲಿ ಜಾತಿ ಸಂಪೂರ್ಣವಾಗಿ ಕಣ್ಮರೆಯಾಗಿಲ್ಲ; ಅದು ಹೊಸ ರೂಪಗಳಲ್ಲಿ ತನ್ನ ಪ್ರಭಾವವನ್ನು ಮುಂದುವರಿಸಿದೆ. ಶಿಕ್ಷಣ, ನಗರೀಕರಣ ಮತ್ತು ಆರ್ಥಿಕ ಬೆಳವಣಿಗೆ ಜಾತಿಯ ಹಿಡಿತವನ್ನು ದುರ್ಬಲಗೊಳಿಸಿದರೂ, ಗ್ರಾಮೀಣ ಪ್ರದೇಶಗಳಲ್ಲಿ ಗೌರವ, ಅಧಿಕಾರ ಮತ್ತು ಸಂಪನ್ಮೂಲಗಳ ಮೇಲಿನ ನಿಯಂತ್ರಣದ ವಿಚಾರದಲ್ಲಿ ಜಾತಿ ಇನ್ನೂ ನಿರ್ಣಾಯಕ ಅಂಶವಾಗಿದೆ.
ಆಧುನಿಕ ರಾಜ್ಯದ ಮೂಲಭೂತ ಕರ್ತವ್ಯವೆಂದರೆ ಕಾನೂನುಬದ್ಧ ಅಧಿಕಾರದ ಮೂಲಕ ನಾಗರಿಕರಿಗೆ ಸಮಾನ ನ್ಯಾಯ ಒದಗಿಸುವುದು. ಆದರೆ ನಾಗರಿಕರು ನ್ಯಾಯ ಪಡೆಯಲು ಸಾಮಾಜಿಕ ಮಾಧ್ಯಮಗಳ ಒತ್ತಡ ಅಥವಾ ಸಾರ್ವಜನಿಕ ಆಕ್ರೋಶದ ಅವಲಂಬನೆಯಾಗಬೇಕಾದರೆ, ಅದು ಸಂಸ್ಥೆಗಳ ಮೇಲೆ ಜನರ ನಂಬಿಕೆಗೆ ಧಕ್ಕೆಯುಂಟುಮಾಡುತ್ತದೆ. ಭಾರತದ ಸಂವಿಧಾನದ ವಿಧಿ 14 ಸಮಾನತೆಯನ್ನು, ವಿಧಿ 15 ಭೇದಭಾವ ನಿಷೇಧವನ್ನು ಮತ್ತು ವಿಧಿ 17 ಅಸ್ಪಶ್ಯತೆಯ ನಿರ್ಮೂಲನಕ್ಕೆ ಭರವಸೆ ನೀಡುತ್ತವೆ. ಇದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಅತ್ಯಾಚಾರ ತಡೆ) ಕಾಯ್ದೆ ಕೂಡ ಅಸ್ತಿತ್ವದಲ್ಲಿದೆ. ಆದರೆ ಕಾನೂನುಗಳ ಅಸ್ತಿತ್ವ ಮಾತ್ರ ಸಾಕಾಗುವುದಿಲ್ಲ. ಸಮಾಜದ ಮನಸ್ಥಿತಿಯಲ್ಲಿ ಪರಿವರ್ತನೆ ಆಗದಿದ್ದರೆ, ಸಂವಿಧಾನದ ಮೌಲ್ಯಗಳು ಕಾಗದದ ಮೇಲಿನ ಆದರ್ಶಗಳಾಗಿಯೇ ಉಳಿಯುವ ಅಪಾಯವಿದೆ. ಒಬ್ಬ ಬಾಲಕನಿಗೆ ಸಾರ್ವಜನಿಕ ಮೂಲದಿಂದ ನೀರು ಕುಡಿಯುವ ಹಕ್ಕು ಸುರಕ್ಷಿತವಾಗಿಲ್ಲವೆಂಬ ಭಾವನೆ ಸಮಾಜದಲ್ಲಿ ಉಳಿದಿದ್ದರೆ, ನಾವು ಆರ್ಥಿಕ ಅಭಿವೃದ್ಧಿ, ಡಿಜಿಟಲ್ ಕ್ರಾಂತಿ ಮತ್ತು ಜಾಗತಿಕ ನಾಯಕತ್ವದ ಬಗ್ಗೆ ಮಾತನಾಡುವ ಮೊದಲು ಸಾಮಾಜಿಕ ಸಮಾನತೆಯ ಪ್ರಶ್ನೆಯನ್ನು ಗಂಭೀರವಾಗಿ ಎದುರಿಸಬೇಕಾಗುತ್ತದೆ.
ಝಾಖ್ರಾ ಗ್ರಾಮದ ಘಟನೆ ಅಂತಿಮವಾಗಿ ಒಂದು ದೊಡ್ಡ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ: ಸ್ವಾತಂತ್ರ್ಯದ ಎಂಟು ದಶಕಗಳ ನಂತರವೂ ಒಬ್ಬ ನಾಗರಿಕನು ಸಾರ್ವಜನಿಕ ನೀರಿನ ಮೂಲದಿಂದ ನೀರು ಕುಡಿಯುವ ಹಕ್ಕಿಗಾಗಿ ಅವಮಾನ ಮತ್ತು ಹಲ್ಲೆಯನ್ನು ಎದುರಿಸಬೇಕಾದರೆ, ನಾವು ಸಾಮಾಜಿಕ ಸಮಾನತೆಯ ಗುರಿಯತ್ತ ಎಷ್ಟು ದೂರ ಸಾಗಿದ್ದೇವೆ?