ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಬಾಣಂತಿಯರ ವಾರ್ಡ್‌ನಲ್ಲಿ ರಾತ್ರಿ ವೇಳೆ ವಿದ್ಯುತ್ ಕಡಿತವಾದ ಸಂದರ್ಭದಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ನೀಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾರ್ಡ್‌ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಬೆಳಕಿಗಾಗಿ ಸಮರ್ಪಕ ಪರ್ಯಾಯ ವ್ಯವಸ್ಥೆ ಇಲ್ಲ. ಜರೇಟರ್ ಅಥವಾ ತುರ್ತು ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ವಾರ್ಡ್‌ನಲ್ಲಿರುವವರು ಮೊಬೈಲ್‌ಗಳ ಟಾರ್ಚ್ ಬೆಳಕಿನ ಮೂಲಕವೇ ಅಗತ್ಯ ಕಾರ್ಯಗಳನ್ನು ನಿರ್ವಹಿಸುವಂತಾಗಿದೆ.

ಬಾಣಂತಿಯರು ಹಾಗೂ ನವಜಾತ ಶಿಶುಗಳಿರುವ ವಾರ್ಡ್‌ನಲ್ಲಿ ಮೂಲಸೌಕರ್ಯ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆ ಮೂಡಿವೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿಸುವ ಸರಕಾರಿ ಆಸ್ಪತ್ರೆಯಲ್ಲೇ ಈ ಸಮಸ್ಯೆ ಸೃಷ್ಟಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕಿಟಕಿ ತೆರೆದರೆ ಸೊಳ್ಳೆ ಕಾಟ; ಮುಚ್ಚಿದರೆ ಗಾಳಿಯಿಲ್ಲ!

ಬಾಣಂತಿಯರ ವಾರ್ಡ್‌ನ ಕಿಟಕಿಗಳ ಸ್ಥಿತಿಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಗಾಳಿ ತೆಗೆದುಕೊಳ್ಳಲು ಕಿಟಕಿ ತೆರೆದರೆ ಸೊಳ್ಳೆಗಳು ನುಗ್ಗುತ್ತವೆ. ಸೊಳ್ಳೆಗಳ ಕಾಟದಿಂದಾಗಿ ಕಿಟಕಿಗಳನ್ನು ಮುಚ್ಚಿಟ್ಟುಕೊಂಡರೆ ಸಮರ್ಪಕ ಗಾಳಿ ಸಿಗುವುದಿಲ್ಲ.

ವಾರ್ಡ್‌ನಲ್ಲಿ ಬಾಣಂತಿಯರು ಹಾಗೂ ನವಜಾತ ಶಿಶುಗಳು ಸೊಳ್ಳೆ ಕಾಟಕ್ಕೆ ನಿಟ್ಟುಸಿರು ಬಿಡುತ್ತಿದ್ದಾರೆ. ಸೊಳ್ಳೆಗಳ ಕಾಟದಿಂದ ಮುಕ್ತವಾಗಿ ಗಾಳಿ ತೆಗೆದುಕೊಳ್ಳಲು ಪರದಾಡುವಂತಾಗಿದೆ ಆಸ್ಪತ್ರೆಯ ನಿರ್ವಹಣೆಯ ಕಾರ್ಯವೈಖರಿಯತ್ತ ರೋಗಿಗಳು ಬೆರಳು ತೋರಿಸಿದ್ದಾರೆ.

ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿ ಅಳವಡಿಸುವ ಮೂಲಕ ಗಾಳಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಕನಿಷ್ಠ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸದಿರುವುದು ಅಧಿಕಾರಿಗಳ ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.

ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವಾರ್ಡ್‌ನವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಪರ್ಯಾಯ ವಿದ್ಯುತ್ ವ್ಯವಸ್ಥೆ, ಸೊಳ್ಳೆ ನಿರೋಧಕ ಜಾಲರಿ ಹಾಗೂ ಸಮರ್ಪಕ ಗಾಳಿ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು.

ಬಾಣಂತಿಯರು ಮತ್ತು ನವಜಾತ ಶಿಶುಗಳ ಆರೋಗ್ಯದ ದೃಷ್ಟಿಯಿಂದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಮೂಲಸೌಕರ್ಯ ಕೊರತೆಯನ್ನು ತಕ್ಷಣ ನಿವಾರಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಯಿಬಾಬ, ಸಿರಗುಪ್ಪ

contributor