ಹುಮನಾಬಾದ್: ಪಟ್ಟಣದ ವಾಂಜರಿ ಬಡಾವಣೆಯ ಕಲ್ಲೂರ್ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ಹಂದಿಗಳ ಹಾವಳಿಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ನಗರಸಭೆಯಿಂದ ಕಸದ ತೊಟ್ಟಿ ಅಳವಡಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಅನಿವಾರ್ಯವಾಗಿ ರಸ್ತೆಯ ಬದಿಯಲ್ಲೇ ಕಸ ಹಾಕುತ್ತಿದ್ದಾರೆ ಎನ್ನಲಾಗಿದೆ. ಪರಿಣಾಮ ಕಸದ ರಾಶಿ ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಅಸ್ವಚ್ಛ ವಾತಾವರಣ ನಿರ್ಮಾಣವಾಗಿದೆ.

ಕಸ ತಿನ್ನಲು ಹಂದಿಗಳು ಗುಂಪು ಗುಂಪಾಗಿ ರಸ್ತೆಗೆ ಬರುತ್ತಿದ್ದು, ಇದರಿಂದ ವಾಹನ ಸವಾರರಿಗೆ ಸಂಚಾರದಲ್ಲಿ ತೊಂದರೆಯಾಗುತ್ತಿದೆ. ಹಂದಿಗಳಿಂದಾಗಿ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಸದ ರಾಶಿಯ ಸಮೀಪವೇ ಮಸೀದಿ, ಹನುಮಾನ್ ದೇವಸ್ಥಾನ ಹಾಗೂ ಶಾಲಾ-ಕಾಲೇಜುಗಳಿವೆ. ಹೀಗಾಗಿ ಧಾರ್ಮಿಕ ಸ್ಥಳಗಳಿಗೆ ಬರುವವರು ಹಾಗೂ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಹಂದಿಗಳ ಹಾವಳಿ ಮತ್ತು ಕಸದ ಸಮಸ್ಯೆಯಿಂದ ಸಾರ್ವಜನಿಕರು ಬೇಸತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮುಳ್ಳಿನ ಗಿಡಗಳಿಂದಲೂ ಅಪಾಯ :

ಇದೇ ರಸ್ತೆಯ ಡಿವೈಡರ್‌ನಲ್ಲಿನ ಗಿಡ-ಮರಗಳನ್ನು ಬೆಳೆಸಲು ಮೀಸಲಿಟ್ಟಿರುವ ಜಾಗದಲ್ಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಕೆಲವು ಗಿಡಗಳು ರಸ್ತೆಯತ್ತ ಚಾಚಿಕೊಂಡಿದ್ದು, ವಾಹನ ಸವಾರರಿಗೆ ತಾಗುವ ಸ್ಥಿತಿ ನಿರ್ಮಾಣವಾಗಿದೆ. ಮುಳ್ಳಿನ ಗಿಡಗಳನ್ನು ತಪ್ಪಿಸಲು ಹೋಗುವಾಗ ಅಪಘಾತ ಸಂಭವಿಸುವ ಆತಂಕವೂ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ರಸ್ತೆಯ ಮೇಲಿರುವ ಕಸವನ್ನು ಕೂಡಲೇ ತೆರವುಗೊಳಿಸಿ, ಮುಳ್ಳಿನ ಗಿಡಗಳನ್ನು ತೆರವುಗೊಳಿಸುವುದರ ಜತೆಗೆ ಹಂದಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಾಂಜರಿ ಬಡಾವಣೆಯ ರಸ್ತೆಯಲ್ಲಿ ಕಸ ಬಿದ್ದಿರುವುದರಿಂದ ಸಂಜೆಯಾಗುತ್ತಿದ್ದಂತೆ ಹಂದಿಗಳ ಗುಂಪು ಬರುತ್ತದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ನಗರಸಭೆ ಕೂಡಲೇ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು.

-ಮಲ್ಲಿಕಾರ್ಜುನ್ ನಿಂಬುರೆ, ಸ್ಥಳೀಯ

ಕಸದ ತೊಟ್ಟಿ ಇಡಬಾರದು ಎಂಬ ಸೂಚನೆ ಇದೆ. ರಸ್ತೆಯಲ್ಲಿ ಕಸ ಹಾಕುತ್ತಿದ್ದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಪಟ್ಟಣದ ಸ್ವಚ್ಛತೆಗೆ ನಗರಸಭೆ ಬದ್ಧವಾಗಿದ್ದು, ಮನೆ-ಮನೆಗೆ ಕಸ ಸಂಗ್ರಹಿಸುವ ವಾಹನಗಳು ಬರುತ್ತಿವೆ. ಸಾರ್ವಜನಿಕರು ಕಸವನ್ನು ರಸ್ತೆಯಲ್ಲಿ ಎಸೆಯದೆ, ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು.

-ವನಿತಾಬಾಯಿ, ಪುರಸಭೆ ಮುಖ್ಯಾಧಿಕಾರಿ

ಈ ರಸ್ತೆಯಲ್ಲಿ ಎರಡು ವರ್ಷದ ಮಗುವೊಂದು ಅಪಘಾತಕ್ಕೀಡಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ಮುಳ್ಳಿನ ಗಿಡಗಳು ಬೆಳೆದು ವಾಹನ ಸವಾರರ ತಲೆಗೆ ತಾಗುವ ಪರಿಸ್ಥಿತಿ ಇದೆ. ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

-ಶೇಕ್ ವಾಜಿದ್ ನವಾಬ್, ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸೈಯದ್ ಮೋಸಿನ್ ಅಲಿ

contributor