ವಿಜಯಪುರ : ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರು ನೋಡುತ್ತಿದ್ದ ಆಕಾಂಕ್ಷಿಗಳಿಗೆ ಕೊನೆಗೂ ಸಿಹಿ ಸುದ್ದಿ ದೊರೆತಿದ್ದು, ಸರಕಾರ ಮೀಸಲಾತಿ ಅಧಿಸೂಚನೆ ಹೊರಡಿಸಿದೆ. ಜನವರಿಯಲ್ಲಿ ಚುನಾವಣೆ ನಡೆಸುವ ಕುರಿತು ಸರಕಾರ ಇಂಗಿತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ.

ಗ್ರಾಮೀಣ ಭಾಗದಲ್ಲಿ ಸಮಾಜ ಸೇವೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಜಿ.ಪಂ., ತಾ.ಪಂ. ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳು, ಚುನಾವಣೆ ಪ್ರಕ್ರಿಯೆ ಆರಂಭವಾಗದೆ ನಿರಾಸೆಗೊಂಡಿದ್ದರು. ಇದೀಗ ಮೀಸಲಾತಿ ಪ್ರಕಟವಾಗಿರುವುದರಿಂದ ಚುನಾವಣಾ ತಯಾರಿಗೆ ಹೊಸ ಬಲ ಬಂದಂತಾಗಿದೆ.

ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳು ಸೋಲು-ಗೆಲುವಿನ ಲೆಕ್ಕಾಚಾರ ಆರಂಭಿಸಿದ್ದಾರೆ. ಪಕ್ಷದ ಟಿಕೆಟ್‌ಗಾಗಿ ಆರಂಭಿಕ ಪ್ರಯತ್ನಗಳೂ ಶುರುವಾಗಿವೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದ ಹಲವರು ಪರೋಕ್ಷವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಜಾತ್ರೆ ಸಂದರ್ಭದಲ್ಲಿ ನಾಟಕಗಳಿಗೆ ಪ್ರಾಯೋಜಕತ್ವ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದವರು, ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ತಮ್ಮ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಾಧ್ಯತೆ ಇದೆ.

ಯಾವ ರೀತಿ ಮೀಸಲಾತಿ? :

ವಿಜಯಪುರ ಜಿಲ್ಲೆಯ 13 ತಾಲೂಕುಗಳ 157 ತಾಪಂ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಕೊಲ್ಹಾರ 9, ನಿಡಗುಂದಿ 9, ಆಲಮೇಲ 9, ದೇವರಹಿಪ್ಪರಗಿ 9, ತಾಳಿಕೋಟಿ 9, ಚಡಚಣ 11, ತಿಕೋಟಾ 12, ಸಿಂದಗಿ 13, ಬಬಲೇಶ್ವರ 12, ಬಸವನ ಬಾಗೇವಾಡಿ 13, ಮುದ್ದೇಬಿಹಾಳ 14, ವಿಜಯಪುರ 15 ಹಾಗೂ ಇಂಡಿ 22 ಸ್ಥಾನಗಳನ್ನು ಹೊಂದಿವೆ.

ಶೇಕಡಾ 50ಕ್ಕೂ ಅಧಿಕ ಮಹಿಳಾ ಪ್ರಾತಿನಿಧ್ಯ ಸಿಕ್ಕಿದ್ದು, ಒಟ್ಟು 157 ತಾಪಂ ಸ್ಥಾನಗಳ ಪೈಕಿ 83 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಪರಿಶಿಷ್ಟ ಜಾತಿಗೆ 35 ಸ್ಥಾನಗಳಿದ್ದು, 19 ಸ್ಥಾನಗಳು ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಪಂಗಡಕ್ಕೆ 13 ಸ್ಥಾನಗಳಿದ್ದು, ಎಲ್ಲ 13 ಸ್ಥಾನಗಳೂ ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ-ಎಗೆ 22 ಸ್ಥಾನಗಳಿದ್ದು, 15 ಮಹಿಳೆಯರಿಗೆ ಮೀಸಲು. ಹಿಂದುಳಿದ ವರ್ಗ-ಬಿಗೆ 4 ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲು. ಸಾಮಾನ್ಯ ವರ್ಗದ 83 ಸ್ಥಾನಗಳ ಪೈಕಿ 33 ಸ್ಥಾನಗಳು ಮಹಿಳೆಯರಿಗೆ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು 22 ತಾಪಂ ಸ್ಥಾನಗಳನ್ನು ಹೊಂದಿರುವ ಇಂಡಿ ತಾಲೂಕು ಗಮನ ಸೆಳೆದಿದೆ.

ಜಿಪಂ ಸ್ಥಾನಗಳಿಗೂ ಮೀಸಲಾತಿ :

ತಾ.ಪಂ. ಜತೆಗೆ ವಿಜಯಪುರ ಜಿಪಂನ 45 ಸ್ಥಾನಗಳಿಗೂ ಮೀಸಲಾತಿ ಪ್ರಕಟಿಸಲಾಗಿದೆ. ಒಟ್ಟು 45 ಸ್ಥಾನಗಳ ಪೈಕಿ 23 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಅನುಸೂಚಿತ ಜಾತಿಗೆ 10 ಸ್ಥಾನಗಳಿದ್ದು, 5 ಸ್ಥಾನಗಳು ಮಹಿಳೆಯರಿಗೆ ಮೀಸಲು. ಅನುಸೂಚಿತ ಪಂಗಡಕ್ಕೆ ಒಂದು ಸ್ಥಾನವಿದ್ದು, ಅದು ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ವರ್ಗ ಎಗೆ 9 ಸ್ಥಾನಗಳಿದ್ದು, 5 ಸ್ಥಾನಗಳು ಮಹಿಳೆಯರಿಗೆ ಮೀಸಲು. ಹಿಂದುಳಿದ ವರ್ಗ ಬಿಗೆ 2 ಸ್ಥಾನಗಳಿದ್ದು, ಒಂದು ಸ್ಥಾನ ಮಹಿಳೆಗೆ ಮೀಸಲಾಗಿದೆ. ಸಾಮಾನ್ಯ ವರ್ಗದ 23 ಸ್ಥಾನಗಳ ಪೈಕಿ 11 ಸ್ಥಾನಗಳು ಮಹಿಳೆಯರಿಗೆ ಕಾಯ್ದಿರಿಸಲಾಗಿದೆ.

ಐದೂವರೆ ವರ್ಷಗಳಿಂದ ಜನಪ್ರತಿನಿಧಿಗಳಿಲ್ಲ ಗ್ರಾಮೀಣ ಭಾಗದ ಅಭಿವೃದ್ಧಿಗೆ ಬೆನ್ನೆಲುಬಾಗಬೇಕಿದ್ದ ಸ್ಥಳೀಯ ಸಂಸ್ಥೆಗಳು ಜನಪ್ರತಿನಿಧಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಜಿಪಂ ಹಾಗೂ ತಾಪಂ ಚುನಾವಣೆ ನಡೆಯದೆ ಐದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಮೇ 2021ರಲ್ಲೇ ಹಿಂದಿನ ಪಂಚಾಯತ್ ಸದಸ್ಯರ 5 ವರ್ಷದ ಅಧಿಕಾರಾವಧಿ ಮುಗಿದಿದ್ದರೂ, ಇದುವರೆಗೂ ಹೊಸದಾಗಿ ಚುನಾವಣೆ ನಡೆದಿಲ್ಲ. ಇದೀಗ ಮೀಸಲಾತಿ ಪ್ರಕಟವಾಗಿರುವುದರಿಂದ ಚುನಾವಣೆ ನಡೆಯುವ ನಿರೀಕ್ಷೆ ಮತ್ತಷ್ಟು ಗಟ್ಟಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor