ಬೆಂಗಳೂರು, ಅ.9: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಡಿ ನೋಟಿಸ್ ಪಡೆದ ಮತದಾರರ ವಿಚಾರಣೆ ಪೂರ್ಣಗೊಳಿಸಲು ಅ.12 ಕೊನೆಯ ದಿನವಾಗಿದೆ. ಆದರೆ, ರಾಜ್ಯದಲ್ಲಿ ಇನ್ನೂ 2,85,646 ವಿಚಾರಣೆಗಳು ಬಾಕಿ ಉಳಿದಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಕೇವಲ 18 ದಿನಗಳು ಮಾತ್ರ ಬಾಕಿ ಉಳಿದಿವೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ 43,82,315 ನೋಟಿಸ್‌ಗಳನ್ನು ಸೃಷ್ಟಿಸಲಾಗಿದೆ. ಒಟ್ಟು ನೋಟಿಸ್‌ಗಳಲ್ಲಿ ಶೇ.99.80ರಷ್ಟು ಅಂದರೆ, 43,73,745 ನೋಟಿಸ್‌ಗಳನ್ನು ವಿತರಿಸಲಾಗಿದ್ದು, 8,570 ನೋಟಿಸ್‌ಗಳ ವಿತರಣೆ ಇನ್ನೂ ಬಾಕಿಯಿದೆ. ವಿತರಿಸಲಾದ ನೋಟಿಸ್‌ಗಳಿಗೆ ಸಂಬಂಧಿಸಿದಂತೆ 40,88,099 ವಿಚಾರಣೆಗಳು ಪೂರ್ಣಗೊಂಡಿವೆ. ಅಂದರೆ, ಶೇ.93.47ರಷ್ಟು ವಿಚಾರಣೆಗಳು ಮುಗಿದಿದ್ದು, ಶೇ.6.53ರಷ್ಟು ಪ್ರಕರಣಗಳು ಬಾಕಿ ಇವೆ.

ಬೆಂಗಳೂರು ಭಾಗದಲ್ಲಿ ಹೆಚ್ಚಿನ ಬಾಕಿ ಪ್ರಕರಣಗಳು: ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿದಾಗ ಬಾಕಿ ವಿಚಾರಣೆಗಳ ಪ್ರಮಾಣದಲ್ಲಿ ಬೆಂಗಳೂರು ವ್ಯಾಪ್ತಿಯ ಹಲವು ಜಿಲ್ಲೆಗಳು ಗಮನ ಸೆಳೆಯುತ್ತವೆ. ಬಿಬಿಎಂಪಿ ದಕ್ಷಿಣದಲ್ಲಿ 65,335, ಬೆಂ.ನಗರ ಜಿಲ್ಲೆಯಲ್ಲಿ 54,943 ಮತ್ತು ಬಿಬಿಎಂಪಿ ಕೇಂದ್ರದಲ್ಲಿ 31,299 ವಿಚಾರಣೆಗಳು ಬಾಕಿ ಉಳಿದಿವೆ. ಬಿಬಿಎಂಪಿ ಉತ್ತರದಲ್ಲಿ 30,294 ಪ್ರಕರಣಗಳು ಬಾಕಿಯಿವೆ. ಈ ನಾಲ್ಕು ವಿಭಾಗಗಳಲ್ಲೇ ಒಟ್ಟು 1,81,871 ವಿಚಾರಣೆಗಳು ಬಾಕಿ ಉಳಿದಿದ್ದು, ರಾಜ್ಯದ ಒಟ್ಟು ಬಾಕಿ ಪ್ರಕರಣಗಳಲ್ಲಿ ಗಣನೀಯ ಪಾಲು ಹೊಂದಿವೆ.

ತುಮಕೂರಿನಲ್ಲಿ 30,294, ಕಲಬುರಗಿಯಲ್ಲಿ 20,179, ಬೆಂಗಳೂರು ಗ್ರಾಮಾಂತರದಲ್ಲಿ 7,814 ದಕ್ಷಿಣ ಕನ್ನಡದಲ್ಲಿ 8,163, ಬೆಳಗಾವಿಯಲ್ಲಿ 6,595 ಹಾಗೂ ಗದಗದಲ್ಲಿ 1,112, ವಿಚಾರಣೆಗಳು ಬಾಕಿಯಿವೆ.

ಅ.22ರವರೆಗೆ ಹಕ್ಕು-ಆಕ್ಷೇಪಣೆಗಳ ವಿಲೇವಾರಿಗೆ ಅವಕಾಶ: ವಿಚಾರಣೆ ಪೂರ್ಣಗೊಳಿಸಲು ಅ.12 ಕೊನೆಯ ದಿನವಾಗಿದ್ದರೂ, ನೋಟಿಸ್ ಹಂತ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿಗೆ ಅ.22ರ ವರೆಗೆ ಕಾಲಾವಕಾಶವಿದೆ. ಅಂತಿಮ ಮತದಾರರ ಪಟ್ಟಿಯನ್ನು ಅ.27ರಂದು ಪ್ರಕಟಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಹೀಗಾಗಿ, ಅ.12ರೊಳಗೆ ವಿಚಾರಣೆ ಪೂರ್ಣಗೊಳಿಸುವುದರ ಜೊತೆಗೆ, ಆಕ್ಷೇಪಣೆಗಳು ಮತ್ತು ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಮತದಾರರ ಹೆಸರಿನ ಕುರಿತು ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳುವುದು ಚುನಾವಣಾಧಿಕಾರಿಗಳ ಮುಂದಿರುವ ಜವಾಬ್ದಾರಿಯಾಗಿದೆ.

ಎಸ್‌ಐಆರ್ ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದಾದರೂ, ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ನೋಟಿಸ್ ಪಡೆದ ಪ್ರತಿಯೊಬ್ಬರ ಪ್ರಕರಣವನ್ನು ಸಮರ್ಪಕವಾಗಿ ಪರಿಶೀಲಿಸುವುದು, ಸಲ್ಲಿಸಿದ ದಾಖಲೆಗಳಿಗೆ ಸೂಕ್ತ ಪರಿಗಣನೆ ನೀಡುವುದು ಮತ್ತು ನಿರ್ಧಾರದಲ್ಲಿ ಪಾರದರ್ಶಕತೆ ಕಾಪಾಡುವುದು ಅಗತ್ಯವಾಗಿದೆ.

ನೋಟಿಸ್ ಅರ್ಜಿ ತಿರಸ್ಕಾರ: ಬೆಂಗಳೂರಿನ ಮತದಾರ ಗಜೇಂದ್ರ ಎಂಬವರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದುಕೊಂಡಿದ್ದರು. ಅಧಿಕಾರಿಗಳ ಸೂಚಿಸಿದ ದಿನದಂತೆ ಅವರು ಚುನಾವಣಾ ಆಯೋಗದ ಎಇಆರ್‌ಒ ಮುಂದೆ ದಾಖಲೆಗಳೊಂದಿಗೆ ಹಾಜರಾಗಿದ್ದರು. ಕೆಲವೇ ನಿಮಿಷಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿ ಮತದಾರನನ್ನು ಯಶಸ್ವಿಯಾಗಿದೆ ಎಂದು ವಾಪಸ್‌ಕಳುಹಿಸಿದ್ದರು. ಆದರೆ, ಅದೇ ದಿನದ ರಾತ್ರಿ ಇಸಿಐನಿಂದ ನಿಮ್ಮ ಅರ್ಜಿಯನ್ನು ಇಆರ್‌ಒಗೆ ಕಳುಹಿಸಲಾಗಿದೆ ಎಂದು ಎಸ್‌ಎಂಎಸ್ ಮೂಲಕ ಸಂದೇಶ ಪಡೆದುಕೊಂಡ ಕೆಲವೇ ನಿಮಿಷಗಳಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಮತ್ತೊಂದು ಸಂದೇಶವನ್ನು ಪಡೆದುಕೊಳ್ಳಲಾಗಿದೆ ಎಂದು ಮತದಾರ ಗಜೇಂದ್ರ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 1.10 ಲಕ್ಷಕ್ಕೂ ಅಧಿಕ ಫಾರಂ-7 ಅರ್ಜಿಗಳ ಸ್ವೀಕೃತಿ

2026ರ ಜೂ.16ರಿಂದ ಅ.8ರವರೆಗೆ ಎಸ್‌ಐಆರ್ ಪ್ರಕ್ರಿಯೆಯಡಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪಣೆ ಸಲ್ಲಿಸುವ ಫಾರಂ-7ರ ಒಟ್ಟು 1,10,654 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ ಶಿವಮೊಗ್ಗದಲ್ಲಿ 6,987, ದಕ್ಷಿಣ ಕನ್ನಡದಲ್ಲಿ 6,762, ಬೀದರ್‌ನಲ್ಲಿ 6,101 ಮತ್ತು ತುಮಕೂರಿನಲ್ಲಿ 5,975 ಅರ್ಜಿಗಳು ಸಲ್ಲಿಕೆಯಾಗಿವೆ. ಫಾರಂ-7ರಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಎಷ್ಟು ಅರ್ಜಿಗಳು ಅನುಮೋದನೆಗೊಂಡಿವೆ, ಎಷ್ಟು ತಿರಸ್ಕೃತವಾಗಿವೆ ಹಾಗೂ ಎಷ್ಟು ಬಾಕಿ ಇವೆ ಎಂಬ ವಿವರಗಳನ್ನು ಪ್ರತ್ಯೇಕವಾಗಿ ಬಹಿರಂಗಪಡಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ತಾರ್ಕಿಕವಿಲ್ಲದ ನೋಟಿಸ್ ಹಂತ

ನೋಟಿಸ್ ಪಡೆದ ಒಂದು ವಾರದೊಳಗೆ ಮತದಾರರು ಚುನಾವಣಾಧಿಕಾರಿ ಮುಂದೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕೆಂದು ಮುಖ್ಯ ಚುನಾವಣಾಧಿಕಾರಿ ಹೇಳಿದ್ದರು. ಆದರೆ, ರಾಜ್ಯದ ಹಲವೆಡೆ 8,570 ಅರ್ಹ ಮತದಾರರಿಗೆ ಇನ್ನೂ ನೋಟಿಸ್ ತಲುಪಿಲ್ಲ. ನೋಟಿಸ್ ಪಡೆದ ಮತದಾರರ ವಿಚಾರಣೆ ಪೂರ್ಣಗೊಳಿಸಲು ಅ.12 ಕೊನೆಯ ದಿನವಾಗಿದ್ದಾಗ, ಇನ್ನು ಉಳಿದ ಅಷ್ಟೂ ಮತದಾರರಿಗೆ ನೋಟಿಸ್ ವಿತರಿಸುವುದು ಯಾವಾಗ? ವಿತರಣೆ ಮಾಡಿದ್ದರೂ, ಇಆರ್‌ಒ/ಎಇಆರ್‌ಒ ಮುಂದೆ ಹಾಜರಾಗಳು ಮತದಾರರಿಗೆ ಒಂದು ವಾರ ಸಮಯ ನೀಡಬೇಕಲ್ಲವೇ? ಹಾಗಾಗಿಯೇ ಎಸ್‌ಐಆರ್ ಎಂಬುದು ತಾರ್ಕಿಕ ವಿಲ್ಲದ ಪ್ರಕ್ರಿಯೆಯಾಗಿದೆ.

-ಸುನೀಲ್ ಸಿರಸಂಗಿ, ಹಿರಿಯ ಪತ್ರಕರ್ತ

ನೋಟಿಸ್ ಹಂತದಲ್ಲಿ ಇದುವರೆಗೆ ಎಷ್ಟು ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿವೆ, ಅವುಗಳಲ್ಲಿ ಎಷ್ಟು ಮತದಾರರ ಹೆಸರು ಮುಂದುವರಿಸಲು ಅನುಮೋದನೆ ನೀಡಲಾಗಿದೆ ಹಾಗೂ ಎಷ್ಟು ಪ್ರಕರಣಗಳನ್ನು ತಿರಸ್ಕರಿಸಲಾಗಿದೆ ಎಂಬ ಸಂಪೂರ್ಣ ಅಂಕಿಅಂಶಗಳನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಹಿರಂಗಪಡಿಸಬೇಕು. ತಿರಸ್ಕೃತ ಪ್ರಕರಣಗಳ ಸಂಖ್ಯೆ, ಅವುಗಳಿಗೆ ನೀಡಲಾದ ಕಾರಣಗಳು ಮತ್ತು ಇನ್ನೂ ನಿರ್ಧಾರವಾಗದೆ ಬಾಕಿ ಉಳಿದಿರುವ ಪ್ರಕರಣಗಳ ವಿವರಗಳನ್ನೂ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು.

-ಸರೋವರ್ ಬೆಂಕಿಕೆರೆ, ವಕ್ತಾರ, ನಾಗರಿಕ ಮತಕಾವಲು ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮನೋಜ್ ಆಜಾದ್

contributor