ಕುಕನೂರು, ಅ.9: ತಾಲೂಕಿನ ಚನ್ನಪ್ಪನಹಳ್ಳಿ ಗ್ರಾಮದ ಸೀಮೆಯಲ್ಲಿರುವ ಕಬ್ಬಿನ ಗದ್ದೆಯಲ್ಲಿ ಗುರುವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಸುಮಾರು ನಾಲ್ಕು ಎಕರೆ ಪ್ರದೇಶದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ. ಸುಮಾರು 250 ಟನ್ ಕಬ್ಬು ನಾಶವಾಗಿದ್ದು, ರೈತನಿಗೆ ಸುಮಾರು 6.50 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಗ್ರಾಮದ ಗಿರೀಶ್ ತಂದೆ ಮಾಧವರಾವ್ ದೇಸಾಯಿ ಅವರಿಗೆ ಸೇರಿದ ಸರ್ವೆ ನಂ. 70ರ ಒಟ್ಟು 8 ಎಕರೆ 17 ಗುಂಟೆ ಜಮೀನಿನಲ್ಲಿ ಅಶೋಕ ಬಡಿಗೇರ ಅವರು ಕಬ್ಬು ಬೆಳೆದಿದ್ದರು. ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಬೋರ್‌ವೆಲ್ ಮೋಟಾರ್‌ಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯ ನಿರೋಧಕ ಪದರ ಹಾನಿಗೊಂಡು, ತಂತಿಗಳು ಪರಸ್ಪರ ಸ್ಪರ್ಶಿಸಿದ ಪರಿಣಾಮ ಕಿಡಿ ಉಂಟಾಗಿದೆ. ಇರಿಂದ ಬೆಂಕಿ ಕಾಣಿಸಿಕೊಂಡು ಒಣಗಿದ ಕಬ್ಬಿನ ಗರಿಗಳಿಗೆ ತಗುಲಿ ಗದ್ದೆಯಾದ್ಯಂತ ವ್ಯಾಪಿಸಿದೆ ಎಂದು ತಿಳಿದುಬಂದಿದೆ.

ಕಟಾವಿಗೆ ಬಂದಿದ್ದ ಸುಮಾರು ನಾಲ್ಕು ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಘಟನೆ ಗಮನಿಸಿದ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಕನೂರು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅಪಾರ ಪ್ರಮಾಣದ ಕಬ್ಬು ಸುಟ್ಟು ನಾಶವಾಗಿತ್ತು.

ಮಳೆ ಕೊರತೆಯ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತನಿಗೆ ಕಟಾವಿನ ಹಂತದಲ್ಲಿ ಸಂಭವಿಸಿದ ಅವಘಡ ಆರ್ಥಿಕ ಸಂಕಷ್ಟ ತಂದಿದೆ. ಕಬ್ಬು ಬೆಳೆಯಲು ಲಕ್ಷಾಂತರ ರೂ. ಖರ್ಚು ಮಾಡಿದ್ದ ರೈತನಿಗೆ 6.50 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕೃಷಿ ಜಮೀನುಗಳಲ್ಲಿನ ವಿದ್ಯುತ್ ತಂತಿಗಳ ಸುರಕ್ಷತೆ ಪರಿಶೀಲಿಸಿ, ಇಂತಹ ಅವಘಡಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಬೆಳೆ ಕಳೆದುಕೊಂಡ ರೈತನಿಗೆ ವಿಳಂಬವಿಲ್ಲದೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಘಟನೆ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಕಟಾವಿಗೆ ಬಂದಿದ್ದ ನಾಲ್ಕು ಎಕರೆ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ. ಬೆಳೆಗಾಗಿ 8ರಿಂದ 9 ಲಕ್ಷ ರೂ. ಖರ್ಚು ಮಾಡಿದ್ದೆ. ಈಗ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಬರದ ಸಂಕಷ್ಟದ ನಡುವೆ ಇಂತಹ ನಷ್ಟದಿಂದ ಕೃಷಿ ಮುಂದುವರಿಸುವುದು ಕಷ್ಟವಾಗಿದೆ. ಸರಕಾರ ತಕ್ಷಣ ಸೂಕ್ತ ಪರಿಹಾರ ನೀಡಿ ಕಾಪಾಡಬೇಕು.

-ಅಶೋಕ ಬಡಿಗೇರ,

ಕಬ್ಬು ಬೆಳೆದ ರೈತ, ಚನ್ನಪ್ಪನಹಳ್ಳಿ

ಕಬ್ಬು ಸುಟ್ಟ ಮಾಹಿತಿ ಬಂದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಮಾಡಲಾಗಿದೆ. ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಪರಿಹಾರ ನೀಡುವ ಕುರಿತು ಅವರು ಕ್ರಮ ವಹಿಸಲಿದ್ದಾರೆ.

-ರಂಗನಾಥ ಬಂಡಿ,

ಕಂದಾಯ ನಿರೀಕ್ಷಕರು, ಕುಕನೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಭೀಮಾಶಂಕರ ಪಾಣೇಗಾಂವ

contributor