ಕೂಡ್ಲಿಗಿಯ ಮಣ್ಣಿನಲ್ಲಿ ಬಾಪೂಜಿಯ ಚಿತಾಭಸ್ಮ
ಗಾಂಧೀಜಿ ಸ್ಮಾರಕದ ಹಿಂದೆ ‘ಬಿಂದು ಮೇಷ್ಟ್ರು’ ಎಂಬ ಕ್ರಾಂತಿಕಾರಿಯ ಕಥೆ
ಕೂಡ್ಲಿಗಿ : ಅ.2ರ ಗಾಂಧಿ ಜಯಂತಿ ಬಂತೆಂದರೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಗೆ ವಿಶೇಷ ಕಳೆ. ದೇಶದ ಹಿಂದುಳಿದ ಪ್ರದೇಶಗಳಲ್ಲೊಂದಾಗಿದ್ದ ಕೂಡ್ಲಿಗಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಪವಿತ್ರ ಚಿತಾಭಸ್ಮವನ್ನು ಪ್ರತಿಷ್ಠಾಪಿಸಿರುವುದು ಇಲ್ಲಿನ ಇತಿಹಾಸದ ಅಪರೂಪದ ಅಧ್ಯಾಯ. ಈ ಅಪೂರ್ವ ಸ್ಮಾರಕದ ಹಿಂದೆ ನಿಂತಿದ್ದವರು ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಕ ಹಾಗೂ ಸಮಾಜ ಸುಧಾರಕ ‘ಬಿಂದು ಮೇಷ್ಟ್ರು’ ಎಂದೇ ಖ್ಯಾತರಾಗಿದ್ದ ಬಿಂದು ಮಾಧವ.
ಒಮ್ಮೆ ಸರಳ ಶಿಲಾ ಮಂಟಪವಾಗಿದ್ದ ಈ ಸ್ಮಾರಕ ಇಂದು ಅಮೃತಶಿಲೆಯ ಭವ್ಯ ಭವನವಾಗಿ ರೂಪುಗೊಂಡಿದೆ. ಗಾಂಧೀಜಿ ಅವರ ಚಿತಾಭಸ್ಮವನ್ನು ತನ್ನ ಒಡಲಲ್ಲಿ ಹೊತ್ತಿರುವ ಈ ಸ್ಥಳ, ಕೂಡ್ಲಿಗಿಯ ಇತಿಹಾಸದ ಜತೆಗೆ ಗಾಂಧಿ ತತ್ವಗಳ ಸ್ಮರಣೆಯ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.
‘ಬಿಂದು ಮೇಷ್ಟ್ರು’ ಎಂಬ ಕ್ರಾಂತಿಕಾರಿ ಶಿಕ್ಷಕ :
1915ರಲ್ಲಿ ಗದಗ್ ಜಿಲ್ಲೆಯ ಡಂಬಳದಲ್ಲಿ ಜನಿಸಿದ ಬಿಂದು ಮಾಧವ ರಾವ್ ಅವರ ಬಾಲ್ಯ ಕಷ್ಟಗಳಿಂದ ಕೂಡಿತ್ತು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಅವರನ್ನು ಸೋದರಮಾವಂದಿರು ಬಳ್ಳಾರಿಗೆ ಕರೆತಂದು ಬೆಳೆಸಿದರು.
ಬಳ್ಳಾರಿಯ ಜನತಾ ಬಜಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ಬಳಿಕ ಮದ್ರಾಸ್‌ನ ವೈಎಂಸಿಎಯಲ್ಲಿ ದೈಹಿಕ ಶಿಕ್ಷಣ ತರಬೇತಿ ಪಡೆದರು. ಜಾತಿ ತಾರತಮ್ಯ ವಿರೋಧಿ ನಿಲುವಿನೊಂದಿಗೆ ತಮ್ಮ ಹೆಸರಿನಲ್ಲಿದ್ದ ‘ರಾವ್’ ಎಂಬ ಜಾತಿಸೂಚಕ ಪದವನ್ನು ಕೈಬಿಟ್ಟು ‘ಬಿಂದು ಮಾಧವ’ ಎಂಬ ಹೆಸರಿನಿಂದ ಗುರುತಿಸಿಕೊಂಡರು. ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಅವರನ್ನು ಪ್ರೀತಿಯಿಂದ ‘ಬಿಂದು ಮೇಷ್ಟ್ರು’ ಎಂದು ಕರೆಯುತ್ತಿದ್ದರು.
1942ರ ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ವೆಲ್ಲೂರು ಜೈಲಿನಲ್ಲಿ 2 ವರ್ಷ, 8 ತಿಂಗಳು, 11 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಕೂಡ್ಲಿಗಿಗೆ ಬಂದ ಅವರು, ದೈಹಿಕ ಶಿಕ್ಷಕರಾಗಿ ಮಾತ್ರ ಉಳಿಯದೆ ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆಯ ಕೆಲಸದಲ್ಲಿ ತೊಡಗಿಸಿಕೊಂಡರು.
ಸಮುದಾಯ ಆಧಾರಿತ ಉಚಿತ ವಿದ್ಯಾರ್ಥಿನಿಲಯ :
ಕೂಡ್ಲಿಗಿ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಬಿಂದು ಮೇಷ್ಟ್ರು ಉಚಿತ ವಿದ್ಯಾರ್ಥಿನಿಲಯ ಆರಂಭಿಸಿದರು. ಹಣದ ನೆರವಿಗಿಂತ ಸಮುದಾಯದ ಸಹಕಾರದ ಮೇಲೆಯೇ ಈ ವಸತಿ ವ್ಯವಸ್ಥೆ ಬೆಳೆದಿತ್ತು.
ಅಗಸರು ವಿದ್ಯಾರ್ಥಿಗಳ ಬಟ್ಟೆಗಳನ್ನು ಉಚಿತವಾಗಿ ಒಗೆದು ಕೊಡುತ್ತಿದ್ದರು. ರೈತರು ಧಾನ್ಯ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದರು. ಹೀಗೆ ಸಮಾಜದ ವಿವಿಧ ವರ್ಗಗಳು ತಮ್ಮ ಕೈಲಾದ ನೆರವು ನೀಡುವ ಮೂಲಕ ವಿದ್ಯಾರ್ಥಿನಿಲಯವನ್ನು ನಡೆಸುತ್ತಿದ್ದರು.
ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೂ ಈಜು ಹಾಗೂ ಖೋ-ಖೋ ತರಬೇತಿ ನೀಡಿದ ಬಿಂದು ಮೇಷ್ಟ್ರು, ಕೂಡ್ಲಿಗಿಯನ್ನು ಖೋ-ಖೋ ಕ್ರೀಡೆಯಲ್ಲೂ ಗುರುತಿಸಿಕೊಳ್ಳುವಂತೆ ಮಾಡಿದರು.
ಚಿತಾಭಸ್ಮ ಕೂಡ್ಲಿಗಿಗೆ ಬಂದ ಕಥೆ :
1948ರ ಜನವರಿ 30ರಂದು ಗಾಂಧೀಜಿ ಹುತಾತ್ಮರಾದ ಬಳಿಕ, ಅವರ ಚಿತಾಭಸ್ಮವನ್ನು ವಿವಿಧ ನದಿಗಳಲ್ಲಿ ವಿಸರ್ಜಿಸುವ ಬದಲು ಹಿಂದುಳಿದ ಪ್ರದೇಶವಾದ ಕೂಡ್ಲಿಗಿಯಲ್ಲಿ ಪ್ರತಿಷ್ಠಾಪಿಸಿದರೆ ಗಾಂಧಿ ಮೌಲ್ಯಗಳ ಸ್ಮರಣೆ ಶಾಶ್ವತವಾಗಿರುತ್ತದೆ ಎಂಬ ಆಲೋಚನೆ ಬಿಂದು ಮೇಷ್ಟ್ರು ಅವರಲ್ಲಿ ಮೂಡಿತು ಎನ್ನಲಾಗಿದೆ.
ಈ ಪ್ರಯತ್ನಕ್ಕೆ ಸಂವಿಧಾನ ಸಭೆಯ ಸದಸ್ಯರಾಗಿದ್ದ ಟೇಕೂರು ಸುಬ್ರಮಣ್ಯಂ, ಮದ್ರಾಸ್ ಪ್ರಾಂತ್ಯ ಕಾಂಗ್ರೆಸ್‌ನ ಕೋಶಾಧಿಕಾರಿ ಓಮಂದೂರು ರಾಮಸ್ವಾಮಿ ರೆಡ್ಡಿಯಾರ್ ಹಾಗೂ ದಕ್ಷಿಣ ಭಾರತೀಯ ರೈಲ್ವೆಯ ಮುಖ್ಯ ಎಂಜಿನಿಯರ್ ದಿಗ್ಗಾವಿ ರಂಗನಾಥ ಆಚಾರ್ ಸೇರಿದಂತೆ ಹಲವರ ನೆರವು ದೊರೆಯಿತು.
ದಿಲ್ಲಿಯಿಂದ ಬಳ್ಳಾರಿಗೆ ತರಲಾದ ಚಿತಾಭಸ್ಮವನ್ನು 1948ರ ಫೆಬ್ರವರಿ 11ರಂದು ಬಳ್ಳಾರಿಯ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಬಳಿಕ ಬೃಹತ್ ಮೆರವಣಿಗೆಯ ಮೂಲಕ ಅದನ್ನು ಕೂಡ್ಲಿಗಿಗೆ ತರಲಾಯಿತು.
ಕೂಡ್ಲಿಗಿಯ ವಿದ್ಯಾರ್ಥಿಗಳೇ ಶ್ರಮದಾನ ಮಾಡಿ ನಿರ್ಮಿಸಿದ ಶಿಲಾ ಮಂಟಪದಲ್ಲಿ 1950ರ ಜನವರಿ 30ರಂದು ಸ್ವಾಮಿ ರಮಾನಂದ ತೀರ್ಥರು ಚಿತಾಭಸ್ಮವನ್ನು ಪ್ರತಿಷ್ಠಾಪಿಸಿದರು.
ನಂತರ ದುಷ್ಕರ್ಮಿಗಳು ಚಿತಾಭಸ್ಮವನ್ನು ಕಳವು ಮಾಡಲು ಯತ್ನಿಸಿದ ಹಿನ್ನೆಲೆಯಲ್ಲಿ ‘ಗುಡ್ಡದ ವೆಂಕೋಬರಾವ್’ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಮಿತಿ ರಚಿಸಲಾಯಿತು. ಚಿತಾಭಸ್ಮವಿದ್ದ ಗಂಧದ ಕರಂಡಕವನ್ನು ವೆಂಕೋಬರಾವ್ ಅವರು ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ನಿತ್ಯ ಪೂಜಿಸುತ್ತಿದ್ದರು ಎನ್ನಲಾಗಿದೆ.
ಸರಳ ಮಂಟಪದಿಂದ ಭವ್ಯ ಸ್ಮಾರಕದವರೆಗೆ :
1957ರಲ್ಲಿ ಆರ್.ಆರ್. ದಿವೇಕರ್ ಅವರು ಅಮೃತಶಿಲೆಯ ಕಟ್ಟೆಯ ಮೇಲೆ ಚಿತಾಭಸ್ಮವನ್ನು ಪುನಃ ಪ್ರತಿಷ್ಠಾಪಿಸಿದರು. ಸ್ಮಾರಕದ ಅಭಿವೃದ್ಧಿಗೆ ಮೈಸೂರು ರಾಜ್ಯದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು 6,000 ರೂ. ಹಾಗೂ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು 50,000 ರೂ. ಅನುದಾನ ನೀಡಿದ್ದು, ಬಳಿಕ ಭವ್ಯ ಮಂಟಪ ನಿರ್ಮಾಣಗೊಂಡಿತು.
ಕಾಲಕ್ರಮೇಣ ಈ ಸ್ಮಾರಕಕ್ಕೆ ಹಲವು ಗಣ್ಯರು ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಇಲ್ಲಿ ಭೇಟಿ ನೀಡಿದ್ದಾರೆ.
ಚಿತಾಭಸ್ಮದ ಜತೆ ಉಳಿದಿರುವ ಬಿಂದು ಮೇಷ್ಟ್ರ ನೆನಪು :
ಕೂಡ್ಲಿಗಿಯ ಈ ಸ್ಮಾರಕ ಕೇವಲ ಗಾಂಧೀಜಿ ಅವರ ಚಿತಾಭಸ್ಮವನ್ನು ಸಂರಕ್ಷಿಸಿರುವ ಸ್ಥಳವಲ್ಲ. ಅದರ ಹಿಂದೆ ಬಿಂದು ಮೇಷ್ಟ್ರು ಕಂಡಿದ್ದ ಸಾಮಾಜಿಕ ಪರಿವರ್ತನೆಯ ಕನಸೂ ಇದೆ.
ಗಾಂಧೀಜಿ ಅವರ ಅಹಿಂಸೆ, ಸರಳತೆ ಹಾಗೂ ತ್ಯಾಗದ ತತ್ವಗಳ ಜತೆಗೆ ಬಿಂದು ಮೇಷ್ಟ್ರು ಅವರ ಶಿಕ್ಷಣ, ಶ್ರಮ ಮತ್ತು ಸಾಮಾಜಿಕ ಸಮಾನತೆಯ ಪ್ರಯತ್ನಗಳು ಕೂಡ್ಲಿಗಿಯ ನೆನಪಿನಲ್ಲಿ ಬೆರೆತಿವೆ.
ಸಣ್ಣ ಪಟ್ಟಣವೊಂದರ ಮಣ್ಣಿನಲ್ಲಿ ರಾಷ್ಟ್ರೀಯ ಇತಿಹಾಸದ ಇಂತಹ ಮಹತ್ವದ ನೆನಪು ಉಳಿದುಕೊಂಡಿರುವುದು ವಿಶೇಷ. ತೆರೆಮರೆಯಲ್ಲಿ ನಿಂತು ಸಮಾಜದ ರೂಪಾಂತರಕ್ಕೆ ಶ್ರಮಿಸಿದ ಬಿಂದು ಮೇಷ್ಟ್ರಂತಹ ವ್ಯಕ್ತಿಗಳ ಕೊಡುಗೆಯನ್ನು ಸ್ಮರಿಸುವುದರ ಮೂಲಕವೇ ಇಂತಹ ಸ್ಮಾರಕಗಳ ನಿಜವಾದ ಅರ್ಥವನ್ನು ಮುಂದಿನ ಪೀಳಿಗೆಗೆ ತಲುಪಿಸಬಹುದು.
ಕೂಡ್ಲಿಗಿಯ ಹೆಮ್ಮೆಯ ಸಂಕೇತವಾಗಿರುವ ಈ ಪವಿತ್ರ ಹುತಾತ್ಮ ಸ್ಮಾರಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಶೇಷ ಮಾನ್ಯತೆ ತಂದುಕೊಡುವುದು ನನ್ನ ಪ್ರಮುಖ ಕನಸು. ಮುಂದಿನ ದಿನಗಳಲ್ಲಿ ಇದೊಂದು ಐತಿಹಾಸಿಕ ಹಾಗೂ ಶೈಕ್ಷಣಿಕ ಪ್ರೇರಣಾ ಕೇಂದ್ರವಾಗಿ ರೂಪುಗೊಳ್ಳುವಂತೆ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು.
-ಡಾ. ಶ್ರೀನಿವಾಸ್ ಎನ್.ಟಿ, ಶಾಸಕರು, ಕೂಡ್ಲಿಗಿ
ಗಾಂಧೀಜಿ ಅವರ ಪವಿತ್ರ ಚಿತಾಭಸ್ಮವನ್ನು ಹೊಂದಿರುವ ಈ ಹುತಾತ್ಮ ಸ್ಮಾರಕ ನಮ್ಮ ಕೂಡ್ಲಿಗಿಯ ಅತಿದೊಡ್ಡ ಹಿರಿಮೆ. ಇದು ಕೇವಲ ಸ್ಮಾರಕವಲ್ಲ; ಇಲ್ಲಿನ ಪ್ರತಿಯೊಂದು ಪೀಳಿಗೆಗೂ ಅಹಿಂಸೆ ಮತ್ತು ತ್ಯಾಗದ ಮೌಲ್ಯಗಳನ್ನು ಸಾರುವ ಜೀವಂತ ಸ್ಫೂರ್ತಿಯ ಸೆಲೆ.
-ಡಿ. ನಾಗರಾಜ್, ನಿವೃತ್ತ ದೈಹಿಕ ಶಿಕ್ಷಕರು, ಕೂಡ್ಲಿಗಿ