ಒಂದು ವರ್ಷದಲ್ಲಿ ದೇಶದಲ್ಲಿ 1,960 ಕೈದಿಗಳು ಮೃತ್ಯು
1,737 ಸಹಜ, 166 ಅಸಹಜ ಸಾವು; ಉಳಿದ 57 ಕೈದಿಗಳ ಸಾವುಗಳಿಗೆ ನಿಖರ ಕಾರಣಗಳಿಲ್ಲ
ಬೆಂಗಳೂರು : ಹತ್ತು ವರ್ಷಗಳಿಂದ ದೇಶದಲ್ಲಿರುವ ಕೈದಿಗಳ ಮರಣ ಸಂಖ್ಯೆಯು ಹೆಚ್ಚಳವಾಗುತ್ತಿದ್ದು, 2024ರ ಒಂದೇ ವರ್ಷದಲ್ಲಿ ದೇಶದ ವಿವಿಧ ಕಾರಾಗೃಹಗಳಲ್ಲಿರುವ 1,960 ಮಂದಿ ಕೈದಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. 2014ರಲ್ಲಿ ಮೃತಪಟ್ಟ ಕೈದಿಗಳ ಸಂಖ್ಯೆಗೆ ಹೋಲಿಸಿಕೊಂಡರೆ 2024ರಲ್ಲಿ ಶೇ.15ರಷ್ಟು ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ 2024ರ ಜೈಲುಗಳ ಅಂಕಿ-ಅಂಶಗಳ ವರದಿಯು ಬಹಿರಂಗಪಡಿಸಿದೆ.
1,737 ಸಹಜ ಸಾವುಗಳಾಗಿದ್ದರೆ, 166 ಅಸಹಜ ಸಾವುಗಳಾಗಿವೆ. ರಾಜಾಸ್ಥಾನದ ಜೈಲುಗಳಲ್ಲಿ ಸಂಭವಿಸಿದ 57 ಕೈದಿಗಳ ಸಾವುಗಳಿಗೆ ಇದುವರೆಗೂ ನಿಖರ ಕಾರಣಗಳು ಪತ್ತೆಯಾಗಿಲ್ಲ. 1,737 ಸಹಜ ಸಾವುಗಳ ಪೈಕಿ 472 ಹೃದ್ರೋಗಿಗಳು, 195 ಶ್ವಾಸಕೋಶ ಸಂಬಂಧಿ ರೋಗಿಗಳು, 97 ಯಕೃತ್ತು(ಲಿವರ್) ಸಂಬಂಧಿ ರೋಗಿಗಳು, 73 ಮೂತ್ರಕೋಶ ಸಂಬಂಧಿ ರೋಗಿಗಳು, 44 ಎಚ್‌ಐವಿ ರೋಗಿಗಳು, 117 ಕ್ಯಾನ್ಸರ್ ರೋಗಿಗಳು, 88 ಕ್ಷಯರೋಗಿಗಳು, 18 ಪಾರ್ಶ್ವವಾಯು ಪೀಡಿತರು ಸೇರಿ ಉಳಿದ 633 ಕೈದಿಗಳು ವಿವಿಧ ರೋಗಗಳಿಂದ ಹಾಗೂ ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. 2024ರಲ್ಲಿ ಆಂಧ್ರಪ್ರದೇಶದಲ್ಲಿ 25, ಅಸ್ಸಾಮಿನಲ್ಲಿ 47, ಬಿಹಾರ 123, ಛತ್ತೀಸ್‌ಗಡ 66, ಗೋವಾ 2, ಗುಜರಾತ್ 69, ಹರ್ಯಾಣ 116, ಹಿಮಾಚಲ ಪ್ರದೇಶ 8, ಜಾರ್ಖಂಡ್ 68, ಕರ್ನಾಟಕ 58, ಕೇರಳ 49, ಮಧ್ಯಪ್ರದೇಶ 116, ಮಹಾರಾಷ್ಟ್ರ 144, ಮಣಿಪುರ 3, ಮೇಘಾಲಯ 6 ಮಂದಿ ಕೈದಿಗಳು ಜೈಲಿನಲ್ಲಿ ಮೃತಪಟ್ಟಿದ್ದಾರೆ ಎಂದು ಜೈಲುಗಳ ಅಂಕಿ-ಅಂಶಗಳ ವರದಿಯು ತಿಳಿಸಿದೆ.
ಹತ್ತು ವರ್ಷದಲ್ಲಿ 20,151 ಮಂದಿ ಕೈದಿಗಳ ಮೃತ್ಯು
2014ರಲ್ಲಿ 1,702, 2015ರಲ್ಲಿ 1,584, 2016ರಲ್ಲಿ 1,655, 2017ರಲ್ಲಿ 1,671, 2018ರಲ್ಲಿ 1,845, 2019ರಲ್ಲಿ 1,764, 2020ರಲ್ಲಿ 1,887, 2021ರಲ್ಲಿ 2,116, 2022ರಲ್ಲಿ 1,995, 2023ರಲ್ಲಿ 1,972, 2024ರಲ್ಲಿ 1,960 ಮಂದಿ ಕೈದಿಗಳು ಜೈಲುಗಳಲ್ಲೇ ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ 58 ಕೈದಿಗಳ ಮೃತ್ಯು
2024ರಲ್ಲಿ ಕರ್ನಾಟಕದಲ್ಲಿ ಒಟ್ಟು 58 ಮಂದಿ ಕೈದಿಗಳು ಮೃತಪಟ್ಟಿದ್ದು, ಐದು ಮಂದಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಯೋಸಹಜ ಅನಾರೋಗ್ಯದಿಂದ 3, ಹೃದಯ ಸಂಬಂಧಿ ಕಾಯಿಲೆಗಳಿಂದ 21, ಶ್ವಾಸಕೋಶ ಕಾಯಿಲೆಗಳಿಂದ 4, ಕಿಡ್ನಿ ರೋಗದಿಂದ 5, ಕ್ಯಾನ್ಸರ್‌ನಿಂದ 3, ಮೆದುಳು ಸಂಬಂಧಿ ಕಾಯಿಲೆಯಿಂದ 6, ಕ್ಷಯರೋಗ, ಪಾರ್ಶ್ವವಾಯು ಹಾಗೂ ಎಚ್‌ಐವಿಯಿಂದ ತಲಾ ಒಬ್ಬ ಕೈದಿ ಮೃತಪಟ್ಟಿದ್ದಾನೆ. ಇತರೆ ಕಾರಣಗಳಿಂದ 8 ಮಂದಿ ಕೈದಿಗಳು ಮೃತಪಟ್ಟಿದ್ದಾರೆ.
ನಾಗಾಲ್ಯಾಂಡ್ 3, ಒಡಿಶಾ 53, ಪಂಜಾಬ್ 228, ರಾಜಸ್ಥಾನ 90, ಸಿಕ್ಕಿಂ 1, ತಮಿಳುನಾಡು 87, ತೆಲಂಗಾಣ 16, ತ್ರಿಪುರ 5, ಉತ್ತರ ಪ್ರದೇಶ 330, ಉತ್ತರಾಖಂಡ 18 ಮತ್ತು ಪಶ್ಚಿಮ ಬಂಗಾಳದಲ್ಲಿ 145, ಕೇಂದ್ರಾಡಳಿತ ಪ್ರದೇಶಗಳಾದ ದಿಲ್ಲಿಯಲ್ಲಿ 65, ಜಮ್ಮು ಮತ್ತು ಕಾಶ್ಮೀರದಲ್ಲಿ 11, ಪುದುಚೇರಿಯಲ್ಲಿ ಇಬ್ಬರು ಹಾಗೂ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಒಬ್ಬ ಕೈದಿ ಜೈಲಿನಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
113 ಮಂದಿ ಕೈದಿಗಳ ಆತ್ಮಹತ್ಯೆ
ಒಂದೇ ವರ್ಷದಲ್ಲಿ 113 ಮಂದಿ ಕೈದಿಗಳು ದೇಶದ ವಿವಿಧ ರಾಜ್ಯಗಳ ಜೈಲುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ 16, ಹರ್ಯಾಣದಲ್ಲಿ 15, ಪಂಜಾಬ್‌ನಲ್ಲಿ 12, ಗುಜರಾತ್‌ನಲ್ಲಿ 11 ಮಂದಿ ಸೇರಿ 2024ರಲ್ಲಿ ಒಟ್ಟು 113 ಮಂದಿ ಕೈದಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.