ಗಾಂಧಿ ಆಳದಲ್ಲಿ ನೈತಿಕ ಪ್ರಣಾಲಿಗೆ ಬದ್ಧರಾಗಿಯೇ ಕೆಲಸ ಮಾಡಿದ್ದರು ಎಂದು ನಾನು ನಂಬಿದವನು. ಭಾರತದ ಮನಸ್ಸಿನೊಳಗೆ ಸಮಾನತೆ ಅಥವಾ ಅಹಿಂಸೆ ಇದೆಯೆಂಬ ಭ್ರಮೆ ಗಾಂಧಿಗೂ ಇರಲಿಲ್ಲ. ಹಾಗೆಯೇ ಆರ್ಥಿಕ-ಸಾಮಾಜಿಕ ಸಂರಚನೆಗಳ ಜೋಡು ಹೆಣಿಗೆಯಲ್ಲಿ ಸೋಷಿಯಲ್ ಕ್ಯಾಪಿಟಲ್ ಇದ್ದ ಮೇಲ್ಜಾತಿಗಳೇ (ಅಥವಾ ವರ್ಣ ಶ್ರೇಣಿಯ ಮೇಲಿನ ಮೂರು ವರ್ಣಗಳು) ಎಲ್ಲವನ್ನೂ ಕಬ್ಜಾ ಮಾಡುತ್ತಿರುವ ಚಾರಿತ್ರಿಕ ಸತ್ಯ ಗಾಂಧಿಗೆ ಅರಿವಿರಲಿಲ್ಲ ಅಂದರೆ ಅವರ ಕಾಣ್ಕೆಯಲ್ಲೇನೋ ಮೂಲಭೂತ ದೋಷವಿತ್ತೆಂದು ತಿಳಿಯಬೇಕಾಗುತ್ತದೆ.

ಈ ದಿನಮಾನದಲ್ಲಿ ಗಾಂಧಿಯನ್ನು ಹೇಗೆ ನೋಡಬೇಕು ಎಂಬುದೇ ಒಂದು ನೈತಿಕ ಜಿಜ್ಞಾಸೆಯಾಗಿದೆ, ನನಗಂತೂ.. ಗಾಂಧಿಯ ಅಹಿಂಸೆ-ಹೋರಾಟದ ಮಟ್ಟಿಗೆ ಅರ್ಥಪೂರ್ಣ ಅಸ್ತ್ರವಾಗಿ ಉಳಿದಿದೆ, ನಿಜ. ಆದರೆ ಅದೂ ಪೂರ್ತಿ ಗಾಂಧಿಯದೆಂದೇ ಅಲ್ಲ, ಬಾಬಾ ಸಾಹೇಬರು 1929ರಲ್ಲೇ ಈ ಶಾಂತಿಯುತ ಸತ್ಯಾಗ್ರಹ ಮಾಡಿದ್ದರು.

ಗಾಂಧಿಯ ಹೃದಯ ಪರಿವರ್ತನೆ ಬಗ್ಗೆ ಮಾತಾಡುತ್ತೇವೆ. ಗಾಂಧಿಯ Constituencyಯಾಗಿದ್ದ ಮೇಲ್ಜಾತಿಯ ಮೇಲೆ ಅದು ನಾಯಿ ಮೈಮೇಲೆ ಬಿದ್ದ ಮಳೆ ನೀರಿನಷ್ಟೇ ಪ್ರಭಾವ ಬೀರಿದ್ದು ಕಣ್ಣಿಗೆ ಇರಿಯುತ್ತಿದೆ (ಒಮ್ಮೆ ಮೈ ಕೊಡವಿದರೆ ಮತ್ತೆ ತುಪ್ಪಳ ಒಣಗಿರುತ್ತೆ)

ಒಂದಿಷ್ಟು ಗಾಂಧಿ ಕಾಡುವುದು ಅವರ ಕೋಮು ಸೌಹಾರ್ದದದ ಸಂಗತಿಯಲ್ಲಿ. ಅದು ಇಂದಿಗೂ ಶತಮಾನದ ಸೆಲೆಯಾಗಿ ಉಳಿದಿದೆ. ಉಳಿದಂತೆ ಅವರ ಗ್ರಾಮ ಸ್ವರಾಜ್ಯ, ಗುಡಿ ಕೈಗಾರಿಕೆಗಳಲ್ಲಾ ನೇರ ಸರಕಾರ ಮತ್ತು ಸಮಾಜದ ನೀತಿ ಒಲವಿನ ದೆಸೆಯಿಂದಾಗಿ ಕಸದ ಬುಟ್ಟಿ ಸೇರಿದೆ. ಹೆಚ್ಚೆಂದರೆ ಖಾದಿ ಬಟ್ಟೆಯ ಮೇಲ್ಮಧ್ಯಮ ವರ್ಗದ ವೈಯಾರದಲ್ಲಿ ಉಳಿದಿದೆ.

ಮತ್ತಿನ್ನೇನು ಉಳಿದಿದೆ? ಒಂದರ್ಥದಲ್ಲಿ ಇದು ಗಾಂಧಿಯನ್ನೇ ಮೂಲವಾಗಿಟ್ಟುಕೊಂಡೂ ಗಾಂಧಿಯಾಚೆಯ ನದಿಗಳನ್ನು ಗಮನಿಸಬೇಕು.

ಸುಮ್ಮನೆ ಕಳೆದ ಏಳುದಶಕದ ಸ್ಥಿತ್ಯಂತರಗಳನ್ನು ಗಮನಿಸಬಯಸುವೆ. ಗಾಂಧಿ ಸಾಯುವ ಮೊದಲೇ ಗಾಂಧಿಗೆ ಹುಸಿ ಗೌರವ ತೋರುತ್ತಾ ಕಾಂಗ್ರೆಸ್‌ನ ಮೇಲ್ಜಾತಿ ಆಢ್ಯರೆಲ್ಲಾ ಸಮಾಜದ ಮೇಲಿನ ತಮ್ಮ ನಿಯಂತ್ರಣವನ್ನು ಬಿಗಿಗೊಳಿಸಿದ್ದರು ಅನ್ನಿಸುತ್ತದೆ. ಗೋಪಾಲಗೌಡರು ಬಲುದೊಡ್ಡ ಜಮೀನ್ದಾರ ಗಾಂಧಿವಾದಿ ಬದರಿ ನಾರಾಯಣ ಅವರೆದುರು ಸೋತಿದ್ದೇ ಇದರ ಉದಾಹರಣೆ.

ದೇಶ ವಿಭಜನೆಯನ್ನು ಗಾಂಧಿಗೆ ತಡೆಯಲಾಗಲಿಲ್ಲ, ಯಾಕೆಂದರೆ ಜಿನ್ನಾ ಅಷ್ಟೇ ಅಲ್ಲ, ಸಾವರ್ಕರ್ ಆದಿಯಾಗಿ ಎಲ್ಲರೂ ಇದನ್ನು ಬಯಸಿದ್ದರು. ಪ್ರಾಯಶಃ ಬಾಬಾ ಸಾಹೇಬರು ಮಾತ್ರ ಅದರ ಅನಿವಾರ್ಯತೆಯೊಂದಿಗೆ ಸುದೀರ್ಘ ತರ್ಕಬದ್ಧ ಅನುಸಂಧಾನ ನಡೆಸಿದವರಿರಬೇಕು. ಗಾಂಧಿ ನಿರ್ಗಮನದ ತರುವಾಯ ನಮ್ಮ ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲೇ ಗಾಂಧಿ ಜೊತೆಗಿದ್ದ ಬಹುತೇಕ ಮೇಲ್ಜಾತಿ ನಾಯಕರು ಅಂಬೇಡ್ಕರ್ ಆಶಿಸಿದ್ದ ಸಂವಿಧಾನದ ಪಠ್ಯಕ್ಕೆ ರಸ್ತೆ ಡುಬ್ಬ ನಿರ್ಮಿಸುತ್ತಾ ಬಂದಿದ್ದು ಈ ಚರ್ಚೆಗಳಲ್ಲಿ ದಾಖಲಾಗಿದೆ. ಆದ್ದರಿಂದಲೇ ಸರಕಾರ ಕೈಗೊಳ್ಳಬೇಕೆಂದು ಬಾಬಾ ಸಾಹೇಬರು ಆಶಿಸಿದ್ದ ಬಹುತೇಕ ನೀತಿ ನಡಾವಳಿಗಳೆಲ್ಲಾ ರಾಜಿ ಸಂಧಾನದೋಪಾದಿಯಲ್ಲಿ ಹಲ್ಲೇ ಇಲ್ಲದ ನಿರ್ದೇಶಕ ತತ್ವಗಳಲ್ಲಿ ಅಡಕವಾಯಿತು. ನೆಹರೂ ಬೆಂಬಲವಿಲ್ಲದಿದ್ದಲ್ಲಿ ಅಂಬೇಡ್ಕರ್ ಆ ರಚನಾ ಸಮಿತಿಯಿಂದಲೇ ಹೊರಬರಬೇಕಿತ್ತೇನೋ.

ಗಾಂಧಿಯ ಕೋಮು ಸೌಹಾರ್ದದ ಆಶಯ ಮಾತ್ರ ಒಂದಷ್ಟು ಸಮಯ ಭಾರತದ ಆಳುವ ಪಕ್ಷಗಳ ಅನಿವಾರ್ಯ ಆಂಗಿಕವಾಗಿತ್ತು.

ಅಂದರೆ ಗಾಂಧಿಯ ಮಾಂತ್ರಿಕ ನಡಾವಳಿಗಳೆಲ್ಲಾ, ಮಾತುಗಳೆಲ್ಲಾ ಅವರ ‘ಪ್ರಭಾವ ಕಕ್ಷೆ’ಯೊಳಗೆ ಬಂದ ‘ನೇತಾರರೊಳಗೆ’ ಇಳಿದಿರಲೇ ಇಲ್ಲ ಅನ್ನಿಸುತ್ತೆ.

1930ರಲ್ಲಿ ಕಾನ್ಪುರದಲ್ಲಿ ಘೋರ ಕೋಮು ಹಿಂಸೆ ನಡೆದಿತ್ತು. ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಕಂಡು ಕೇಳರಿಯದ ಹಿಂಸಾಚಾರ ನಡೆದಿತ್ತು. ಈ ಬಗ್ಗೆ ನೆಹರೂ ಕಾಂಗ್ರೆಸ್ ವತಿಯಿಂದ ತನಿಖೆ ನಡೆಸಲು ಸುಂದರ್‌ಲಾಲ್ ಎಂಬವರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ನೇಮಿಸುತ್ತಾರೆ. ಬಹುತೇಕ ಕಾಂಗ್ರೆಸಿಗರೇ ಈ ಹಿಂಸಾಚಾರದ ರೂವಾರಿಗಳು ಎಂದು ಸುಂದರ್‌ಲಾಲ್‌ಈ ವರದಿಯಲ್ಲಿ ಬೆಟ್ಟು ಮಾಡಿ ತೋರಿಸುತ್ತಾರೆ. ಆ ವರದಿ ಬಹುಮುಖ್ಯ ಚಾರಿತ್ರಿಕ ದಾಖಲೆ.

ವಿಚಿತ್ರ ಎಂದರೆ ಹೈದರಾಬಾದ್ ಸ್ವಾಧೀನದ ಕಾಯಾಚರಣೆಯ ಸಂದರ್ಭದಲ್ಲಿ ನಡೆದ ವ್ಯಾಪಕ ಪ್ರತಿಕ್ರಿಯಾತ್ಮಕ ಹಿಂಸಾಚಾರದ ಬಗ್ಗೆ ಸತ್ಯಶೋಧನಾ ವರದಿ ನೀಡಲು ಮತ್ತೆ ಕಾಂಗ್ರೆಸ್ ಇದೇ ಸುಂದರ್‌ಲಾಲ್ ಅವರನ್ನು ನೇಮಿಸುತ್ತದೆ. ಸುಂದರ್‌ಲಾಲ್ ಅವರು ಬಲು ಸೂಕ್ಷ್ಮ ವಿವರಗಳನ್ನು ಸಂಗ್ರಹಿಸಿ ಸಂತ್ರಸ್ತರ ಜೊತೆ ಮಾತಾಡಿ ನೀಡಿದ ವರದಿಯಲ್ಲೂ ಹಿಂದೂ ಮಹಾಸಭಾದಷ್ಟೇ ಕಾಂಗ್ರೆಸ್ ಕಾರ್ಯಕರ್ತರೂ ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಇಲ್ಲಾ ಜನರನ್ನು ಛೂ ಬಿಟ್ಟಿದ್ದರು ಎಂದು ವಿಷಾದಪೂರ್ಣವಾಗಿ ಹೇಳುತ್ತಾರೆ. (ಈ ವರದಿಯ ಅಡಕಗಳು ಅಂದರೆ ಸಂತ್ರಸ್ತರ ಜೊತೆ ಮಾತಾಡಿದ ಸಂವಾದದ ದಾಖಲೆಯೂ ನಾಪತ್ತೆಯಾಗಿದೆ)

ಕಾಂಗ್ರೆಸ್ ಬಹುತೇಕ ಬಹುಸಂಖ್ಯಾತ ಹಿಂದೂಗಳ ಸುಪ್ತ ಯಜಮಾನಿಕೆಯ ಆಶಯದ ನಾಯಕತ್ವ ವಹಿಸಿದ್ದ ಕಾರಣ ಸಾವರ್ಕರ್‌ಗೋ ಆರೆಸ್ಸೆಸ್‌ಗೋ ಮಣೆ ಹಾಕಬೇಕಾದ ಅಗತ್ಯ ಇರಲಿಲ್ಲ ಅನ್ನಿಸುತ್ತದೆ.

ಕಾಂಗ್ರೆಸ್ ತನ್ನ್ನ ಹಲ್ಲು, ಉಗುರು, ಬೆನ್ನು ಮೂಳೆ ಕಳೆದುಕೊಂಡು ಮೆತ್ತಗಾದಾಗ ಹಿಂದೂ ಬಹುಸಂಖ್ಯಾತ ಜಾತಿ ಮನಸ್ಸು ಭಾಜಪ/ಆರೆಸ್ಸೆಸ್ ಕಡೆ ತಿರುಗಿದ್ದು ಗಮನಿಸಬೇಕು.

ಈ ಪ್ರತಿಕ್ರಾಂತಿ ಎಲ್ಲರಿಗೂ ಗೊತ್ತಿದೆ. ಗಾಂಧಿಯ ಪ್ರಭಾವ ಇಷ್ಟು ತಾತ್ಕಾಲಿಕವಾದ ದುರಂತ ನಮ್ಮನ್ನು ಬಾಧಿಸಬೇಕು. ಗಾಂಧಿ ಆಳದಲ್ಲಿ ನೈತಿಕ ಪ್ರಣಾಲಿಗೆ ಬದ್ಧರಾಗಿಯೇ ಕೆಲಸ ಮಾಡಿದ್ದರು ಎಂದು ನಾನು ನಂಬಿದವನು. ಭಾರತದ ಮನಸ್ಸಿನೊಳಗೆ ಸಮಾನತೆ ಅಥವಾ ಅಹಿಂಸೆ ಇದೆಯೆಂಬ ಭ್ರಮೆ ಗಾಂಧಿಗೂ ಇರಲಿಲ್ಲ. ಹಾಗೆಯೇ ಆರ್ಥಿಕ-ಸಾಮಾಜಿಕ ಸಂರಚನೆಗಳ ಜೋಡು ಹೆಣಿಗೆಯಲ್ಲಿ ಸೋಷಿಯಲ್ ಕ್ಯಾಪಿಟಲ್ ಇದ್ದ ಮೇಲ್ಜಾತಿಗಳೇ (ಅಥವಾ ವರ್ಣ ಶ್ರೇಣಿಯ ಮೇಲಿನ ಮೂರು ವರ್ಣಗಳು) ಎಲ್ಲವನ್ನೂ ಕಬ್ಜಾ ಮಾಡುತ್ತಿರುವ ಚಾರಿತ್ರಿಕ ಸತ್ಯ ಗಾಂಧಿಗೆ ಅರಿವಿರಲಿಲ್ಲ ಅಂದರೆ ಅವರ ಕಾಣ್ಕೆಯಲ್ಲೇನೋ ಮೂಲಭೂತ ದೋಷವಿತ್ತೆಂದು ತಿಳಿಯಬೇಕಾಗುತ್ತದೆ.

ಈ ಸಮಸ್ತ ಹಿಂದೂ ಸಮಾಜವನ್ನು ಹೊತ್ತಿದ್ದ ದಲಿತರ ನೆಲೆಯಿಂದ ಬಾಬಾ ಸಾಹೇಬರು ತಮ್ಮ ಅಪೂರ್ವ ಪಾಂಡಿತ್ಯ ಮತ್ತು ಅನುಭವಾತ್ಮಕ ವಿಶ್ಲೇಷಣೆಯ ಮೂಲಕ ಈ ದಮನ, ಶೋಷಣೆ, ಅಂಚಿಗೆ ಸರಿಸುವಿಕೆ ಬಗ್ಗೆ ತೀಕ್ಷ್ಣವಾಗಿ ಬರೆದಾಗಲೂ ಯಾವೊಬ್ಬ ಕಾಂಗ್ರೆಸಿಗನೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ!

ವೈರುಧ್ಯವೆಂದರೆ ನಾವು ಗೌರವಿಸುವ ಅಪೂರ್ವ ಸಮಾಜವಾದಿ ಲೋಹಿಯಾ ಅವರೂ 1953ರ ಪತ್ರವೊಂದರಲ್ಲಿ ಅಂಬೇಡ್ಕರ್‌ಅವರ ಖಾಸಾ ಪರಿಚಯ ತಮಗಿಲ್ಲ ಎನ್ನುತ್ತಾರೆ.

ಅಂಬೇಡ್ಕರ್ ಯಾವುದೋ ದೇಶದ ಮೂಲೆಯ ಆಕ್ಟಿವಿಸ್ಟ್ ಆಗಿರಲಿಲ್ಲ. 1920ರ ದಶಕದಿಂದಲೇ ದೇಶದ ಸಾಮಾಜಿಕ, ಆರ್ಥಿಕ ವಿಷಮತೆಯ ಬಗ್ಗೆ ತೀವ್ರ ತಾತ್ವಿಕ ವಾಗ್ವಾದಗಳನ್ನು ಮುಂದಿಟ್ಟವರು. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಸಂವಿಧಾನದ ಶಿಲ್ಪ ರೂಪಿಸಿದವರು. ಬಳಿಕ ಭಾರತದ ಮೊದಲ ಕಾನೂನು ಸಚಿವರಾಗಿದ್ದವರು.

ಇಂಥಾ ಅಂಬೇಡ್ಕರ್ ಅವರ ಖಾಸಾ ಪರಿಚಯ ಇಲ್ಲವೆಂದು ಲೋಹಿಯಾ ಹೇಳುವುದು ಆ ಕಾಲದ ಕಾಂಗ್ರೆಸ್ ಮೂಲದ ಸತ್ವಶಾಲೀ ಸೈದ್ಧಾಂತಿಕ ಮಂದಿಗೂ ಇದ್ದ ಅವಜ್ಞೆಯ ಸೂಚಕ.

ಇದರಾಚೆಗೆ ಗಾಂಧಿ ಕಲ್ಪಿಸಿದ್ದ ಗ್ರಾಮ ಸ್ವರಾಜ್ ಎಷ್ಟು ಅಪಾಯಕಾರಿ ಎಂಬುದನ್ನೂ ಅಂಬೇಡ್ಕರ್ ಅನಾವರಣಗೊಳಿಸಿದ್ದಾರೆ. ಹೃದಯ ಪರಿವರ್ತನೆ ಮೂಲಕ ಗ್ರಾಮವನ್ನು ಆರ್ಥಿಕ, ಸಾಮಾಜಿಕ ಸಮತೆಯ ನೆಲೆಯಾಗಿಸಬಹುದು ಎಂಬುದೇ ಒಂದು ಸೆಂಟಿಮೆಂಟಲ್ ಆತ್ಮವಂಚಕ ಮಾತು ಎಂಬುದು ತದನಂತರದ ದಶಕಗಳಲ್ಲಿ ಸ್ಪಷ್ಟವಾಗಿದೆ.

ಈ ದೇಶದ ಆಳ ಕ್ಯಾನ್ಸರ್ ಆದ ಜಾತಿಯನ್ನು ಗಾಂಧಿ ನಿರ್ಲಕ್ಷಿಸಿ ಸಮಾನತೆಯ ಸ್ವರಾಜ್ಯದ ಪ್ರಮೇಯ ಕಟ್ಟಲು ಯತ್ನಿಸಿದ್ದು ಒಂದೋ ಅಪ್ರಮಾಣಿಕ; ಇಲ್ಲಾ ಅದನ್ನು ನಿಜಗೊಳಿಸುವ ಸಾಧನಗಳೇ ಇಲ್ಲದಿದ್ದ ಭಾವನಾತ್ಮಕ ರೆಟಾರಿಕ್‌ಅನ್ನಿಸುತ್ತದೆ.

ಈ ಕಾಲದಲ್ಲಿ ಕೋಮು ಧ್ರುವೀಕರಣ ಅಷ್ಟೇ ಅಲ್ಲ, ಸಂಪನ್ಮೂಲಗಳ ಹಂಚಿಕೆಯಲ್ಲಾಗುತ್ತಿರುವ ನಿರಂತರ ಅನ್ಯಾಯ; ಸಾಮಾಜಿಕ ಸಮಾನತೆಯನ್ನು ನೀಡಲು ನಿರಾಕರಿಸುತ್ತಿರುವ ಜಾತಿ ಆಢ್ಯತೆಯ ಯಜಮಾನಿಕೆಗಳ ಎದುರು ನಾವು ಮುಖಾಮುಖಿಯಾಗಬೇಕಿದೆ.

ಈ ಅನುಸಂಧಾನದಲ್ಲಿ ಸೋತ ಬಹುಮುಖ್ಯ ರೆಫರೆನ್ಸ್ ಆಗಿ ಗಾಂಧಿಯನ್ನು ನೆನಪಿಸಿಕೊಳ್ಳುತ್ತಾ ನಾವು ವರ್ತಮಾನದ ಕೇಡಿನ ವಿರುದ್ಧ ಹೋರಾಡಬೇಕಿದೆ.

(ಲೇಖಕರು ಹಿರಿಯ ಚಿಂತಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಪಿ. ಸುರೇಶ

contributor