ಸಂಡೂರು/ಬಳ್ಳಾರಿ: ಇತಿಹಾಸವೆಂದರೆ ಕೇವಲ ರಾಜರು, ಯುದ್ಧಗಳು, ಅರಮನೆಗಳು ಹಾಗೂ ಸಾಮ್ರಾಜ್ಯಗಳ ಕಥೆಯಲ್ಲ. ಕೆಲವೊಮ್ಮೆ ಹೊಲದ ಬದುವಿನಲ್ಲಿ ಅನಾಥವಾಗಿ ನಿಂತಿರುವ ಕಲ್ಲು, ಅದರ ಮೇಲಿನ ಕೆಲವೇ ಸಾಲುಗಳ ಅಕ್ಷರಗಳು ಶತಮಾನಗಳ ಹಿಂದಿನ ಸಮಾಜದ ಬದುಕು, ನಂಬಿಕೆ, ಕೃಷಿ ಪದ್ಧತಿ ಹಾಗೂ ಸಾಮಾಜಿಕ ವ್ಯವಸ್ಥೆಯ ಕುರಿತು ಮಹತ್ವದ ಸುಳಿವು ನೀಡುತ್ತವೆ. ಅಂತಹ ಅಪರೂಪದ ಇತಿಹಾಸದ ಕಿಟಕಿಯೊಂದು ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ತೆರೆದುಕೊಂಡಿದೆ.

ದೊಡ್ಡ ಅಂತಾಪುರ ಗ್ರಾಮದ ತಾಯಪ್ಪ ಎಂಬುವವರ ಹೊಲದ ಮೇರೆಯಲ್ಲಿ ಪೂರ್ವಾಭಿಮುಖವಾಗಿ ನಿಂತಿದ್ದ ಸುಮಾರು 3 ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲದ ಕಲ್ಲಿನಲ್ಲಿ ಕೆತ್ತಲಾಗಿರುವ ನಾಲ್ಕು ಸಾಲಿನ ಶಾಸನ ಇದೀಗ ಇತಿಹಾಸಾಸಕ್ತರು ಹಾಗೂ ಸಂಶೋಧಕರ ಗಮನ ಸೆಳೆದಿದೆ. ಅದರ ಮೇಲಿನ ಅಕ್ಷರಗಳು ಅಂದಿನ ಗ್ರಾಮೀಣ ಬದುಕಿನ ವಿಶಿಷ್ಟ ಚಿತ್ರಣವೊಂದನ್ನು ತೆರೆದಿಡುತ್ತವೆ.

ಪಾಳೆಯಗಾರರ ಕಾಲದ ಶಾಸನ?

ಶಾಸನದ ಲಿಪಿ ಕನ್ನಡದಲ್ಲಿದ್ದು, ಲಿಪಿಶೈಲಿಯನ್ನು ಗಮನಿಸಿದಾಗ ವಿಜಯನಗರೋತ್ತರ ಕಾಲದ ಪಾಳೆಯಗಾರರ ಅವಧಿಗೆ ಸೇರಿದಿರಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ದಾನಶಾಸನಗಳಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳನ್ನು ಲಿಪಿಯ ಮೇಲ್ಭಾಗದಲ್ಲಿ ಕೆತ್ತಿರುವುದು ಕಂಡುಬರುತ್ತದೆ. ಆದರೆ ದೊಡ್ಡ ಅಂತಾಪುರದಲ್ಲಿ ಪತ್ತೆಯಾಗಿರುವ ಶಾಸನದಲ್ಲಿ ಸೂರ್ಯ-ಚಂದ್ರರ ಕೆತ್ತನೆ ಲಿಪಿಯ ಕೆಳಭಾಗದಲ್ಲಿದೆ. ಎಡಭಾಗದಲ್ಲಿ ಸೂರ್ಯ ಹಾಗೂ ಬಲಭಾಗದಲ್ಲಿ ಚಂದ್ರನ ಚಿತ್ರಗಳನ್ನು ಕೆತ್ತಲಾಗಿದೆ. ಈ ವೈಶಿಷ್ಟ್ಯವು ಶಾಸನಕ್ಕೆ ವಿಶೇಷ ಮಹತ್ವ ನೀಡುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ತಿಳಿಸಿದ್ದಾರೆ.

ನಾಲ್ಕೇ ಸಾಲು; ಶಾಪ ಮಾತ್ರ ಗಂಭೀರ!

ಶಾಸನದ ಮೊದಲ ಸಾಲಿನಲ್ಲಿ ‘ಕಡಬ’ ಎಂಬ ವ್ಯಕ್ತಿ ಹಾಗೂ ಆತನ ಗದ್ದೆಯ ಉಲ್ಲೇಖವಿದ್ದು, ಎರಡನೇ ಸಾಲಿನಲ್ಲಿ ‘ಸೆದೆಯನ್ನು ಕದ್ದವನು’ ಎಂಬ ಅರ್ಥ ಬರುವ ಪದಗಳಿವೆ.

ನಂತರದ ಸಾಲುಗಳಲ್ಲಿ ಕಠಿಣ ಶಾಪದ ಪದಪ್ರಯೋಗವಿದ್ದು, ಒಟ್ಟಾರೆ ಶಾಸನದ ಅರ್ಥವು ‘‘ಕಡಬನ ಗದ್ದೆಯ ಸೆದೆಯನ್ನು ಕದ್ದವನು ಕತ್ತೆಯ ತುಣ್ಣಿಯ ತಿಂದನು’’ ಎಂಬ ರೀತಿಯ ಶಾಪಾಶಯವನ್ನು ಸೂಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇಂದಿನ ಕಾಲಘಟ್ಟದಲ್ಲಿ ಈ ಭಾಷೆ ಅಚ್ಚರಿ ಮೂಡಿಸಿದರೂ, ಅದನ್ನು ಕೇವಲ ಅಶ್ಲೀಲ ಪದಪ್ರಯೋಗವೆಂದು ಪರಿಗಣಿಸುವ ಬದಲು ಅಂದಿನ ಸಾಮಾಜಿಕ ಬದುಕು, ಜನರ ನಂಬಿಕೆ, ಆಸ್ತಿಯ ರಕ್ಷಣೆ ಹಾಗೂ ಕಳ್ಳತನವನ್ನು ತಡೆಯಲು ಬಳಸುತ್ತಿದ್ದ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಲ್ಲಿ ಎಚ್ಚರಿಕೆಯ ರೂಪದಲ್ಲಿ ಅಧ್ಯಯನ ಮಾಡಬೇಕಾಗಿದೆ.

ಶಾಸನದ ಕೆಳಭಾಗದಲ್ಲಿರುವ ಶಿಲ್ಪವೂ ಸಂಶೋಧಕರ ಗಮನ ಸೆಳೆದಿದೆ. ಲಿಪಿಯ ಕೆಳಗೆ ವಿಶೇಷ ಭಂಗಿಯಲ್ಲಿ ನಿಂತಿರುವ ಪುರುಷನ ಚಿತ್ರವನ್ನು ಕೆತ್ತಲಾಗಿದ್ದು, ಅದರಲ್ಲಿ ಪುರುಷ ಜನನಾಂಗವನ್ನು ಉದ್ದವಾಗಿ ತೋರಿಸಿರುವ ಶಿಲ್ಪವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನು ಕೇವಲ ಅಶ್ಲೀಲ ಚಿತ್ರಣವೆಂದು ತಳ್ಳಿಹಾಕದೆ, ಅಂದಿನ ಜನಪದ ನಂಬಿಕೆಗಳು, ಶಾಪದ ಸಂಕೇತಗಳು, ಸಾಮಾಜಿಕ ಮನೋಭಾವಗಳು ಹಾಗೂ ಶಿಲ್ಪಕಲೆಯ ಅಭಿವ್ಯಕ್ತಿಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಚ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸಂರಕ್ಷಣೆ ಅಗತ್ಯ: ಹೊಲದ ಬದು, ನಿರ್ಜನ ಪ್ರದೇಶ ಅಥವಾ ಸಾರ್ವಜನಿಕರ ಗಮನಕ್ಕೆ ಬಾರದ ಸ್ಥಳಗಳಲ್ಲಿ ಇರುವ ಶಾಸನಗಳು ಕಳ್ಳತನ, ಒಡೆದುಹಾಕುವಿಕೆ, ಹವಾಮಾನ ವೈಪರೀತ್ಯ, ಕೃಷಿ ಚಟುವಟಿಕೆ ಹಾಗೂ ನಿರ್ಲಕ್ಷ್ಯದಿಂದ ಹಾನಿಗೊಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಅಪರೂಪದ ಶಾಸನಗಳನ್ನು ಸಂಬಂಧಪಟ್ಟ ಇಲಾಖೆಯವರು ಗುರುತಿಸಿ ವೈಜ್ಞಾನಿಕವಾಗಿ ಸಂರಕ್ಷಿಸಬೇಕು ಎಂದು ದೃಶ್ಯಕಲಾ ವಿಭಾಗದ ಡಾ. ಕೃಷ್ಣೆಗೌಡ ಒತ್ತಾಯಿಸಿದ್ದಾರೆ.

ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಇಸ್ಮಾಯಿಲ್ ಸಿದ್ದಿಕಿ, ಅಶೋಕ ನಾಯಕ ದಿದ್ದಿಗಿ, ಪತ್ರಕರ್ತ ಶಿವರಾಮ ರಾಗಿ ಹಾಗೂ ಬಂಡ್ರಿ ಪಾಪಯ್ಯ ಅವರು ಕ್ಷೇತ್ರಕಾರ್ಯದ ಮೂಲಕ ಈ ಶಾಸನವನ್ನು ಬೆಳಕಿಗೆ ತಂದಿದ್ದಾರೆ. ಗ್ರಾಮದ ತಾಯಪ್ಪ ಅವರ ಸಹಕಾರವೂ ಮಹತ್ವದ್ದಾಗಿದೆ.

ದೊಡ್ಡ ಅಂತಾಪುರದಲ್ಲಿ ಪತ್ತೆಯಾಗಿರುವ ಶಾಸನದ ಲಿಪಿಶೈಲಿ ಹಾಗೂ ಅದರಲ್ಲಿನ ಸೂರ್ಯ-ಚಂದ್ರರ ಕೆತ್ತನೆಯ ವಿನ್ಯಾಸ ಗಮನಾರ್ಹವಾಗಿದೆ. ಸಾಮಾನ್ಯವಾಗಿ ಸೂರ್ಯ-ಚಂದ್ರರ ಚಿತ್ರಗಳು ಶಾಸನದ ಮೇಲ್ಭಾಗದಲ್ಲಿ ಕಂಡುಬರುತ್ತವೆ. ಆದರೆ ಇಲ್ಲಿ ಅವು ಕೆಳಭಾಗದಲ್ಲಿರುವುದು ಈ ಶಾಸನದ ವೈಶಿಷ್ಟ್ಯ ಹೆಚ್ಚಿಸಿದೆ. ಇದರ ಸಮಗ್ರ ಅಧ್ಯಯನದಿಂದ ಅಂದಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಕುರಿತು ಮತ್ತಷ್ಟು ಮಹತ್ವದ ಮಾಹಿತಿಗಳು ದೊರೆಯುವ ಸಾಧ್ಯತೆಯಿದೆ.

-ಡಾ. ಗೋವಿಂದ

ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾಲಯ

ಈ ಶಾಸನದಲ್ಲಿರುವ ಶಾಪಾಶಯ ಹಾಗೂ ಅದರ ಕೆಳಭಾಗದಲ್ಲಿರುವ ವಿಶಿಷ್ಟ ಶಿಲ್ಪ ಎರಡೂ ಕುತೂಹಲಕಾರಿ ಅಂಶಗಳಾಗಿವೆ. ಇವುಗಳನ್ನು ಕೇವಲ ವಿಚಿತ್ರ ಅಥವಾ ಅಶ್ಲೀಲ ಅಭಿವ್ಯಕ್ತಿಗಳೆಂದು ನೋಡುವ ಬದಲು, ಅಂದಿನ ಜನಪದ ನಂಬಿಕೆಗಳು, ಸಾಮಾಜಿಕ ಮನೋಭಾವ, ಆಸ್ತಿ ರಕ್ಷಣೆ ಮತ್ತು ಶಿಲ್ಪಕಲೆಯ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಿದೆ. ನಮ್ಮ ಚರಿತ್ರೆಯ ದಾಖಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದ ಇಂತಹ ಶಾಸನಗಳ ಸಂರಕ್ಷಣೆ ಅಗತ್ಯವಾಗಿದೆ.

-ಪ್ರೊ.ಎಚ್. ತಿಪ್ಪೇಸ್ವಾಮಿ

ನಿರ್ದೇಶಕರು, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಮಹಮ್ಮದ್ ಖಾಸೀಂ

contributor