×
Ad

ಅಲ್ಲಾಪುರ ಸರಕಾರಿ ಪ್ರೌಢಶಾಲೆಗೆ ಕೊಠಡಿ ಕೊರತೆ; ಬಯಲಲ್ಲೇ ಪಾಠ

ಅನುಮತಿ ನೀಡಿ 3 ವರ್ಷ ಕಳೆದರೂ ಮೂಲಸೌಕರ್ಯ ಕಲ್ಪಿಸದ ಶಿಕ್ಷಣ ಇಲಾಖೆ

Update: 2026-07-14 14:11 IST

ಯಡ್ರಾಮಿ ತಾಲೂಕಿನ ಗಡಿಗ್ರಾಮ ಅಲ್ಲಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಶಿಕ್ಷಕರು ಬಯಲಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು.

ಯಡ್ರಾಮಿ: ತಾಲೂಕಿನ ಗಡಿಗ್ರಾಮ ಅಲ್ಲಾಪುರದಲ್ಲಿ ಆರಂಭಗೊಂಡಿರುವ ಸರಕಾರಿ ಪ್ರೌಢಶಾಲೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಶಾಲೆ ಆರಂಭವಾಗಿ ಮೂರು ವರ್ಷ ಕಳೆದರೂ ಅಗತ್ಯ ತರಗತಿ ಕೊಠಡಿಗಳು, ಸುರಕ್ಷತಾ ವ್ಯವಸ್ಥೆ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸದ ಕಾರಣ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯ್ ಸಿಂಗ್ ಪ್ರತಿನಿಧಿಸುವ ನೂತನ ಯಡ್ರಾಮಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೂ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮುಂದುವರಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲಾಪುರ ಗ್ರಾಮದಲ್ಲಿ 2022-23ನೇ ಸಾಲಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿಯೇ ಪ್ರೌಢಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು. ಇದಕ್ಕೂ ಮೊದಲು ಗ್ರಾಮದ ವಿದ್ಯಾರ್ಥಿ

ಗಳು ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಪ್ರೌಢ ಶಿಕ್ಷಣಕ್ಕಾಗಿ ಸುಮಾರು 10 ಕಿ.ಮೀ. ದೂರದ ಮಳ್ಳಿ ಗ್ರಾಮಕ್ಕೆ ಅಥವಾ ಸುಮಾರು 6 ಕಿ.ಮೀ. ದೂರದಲ್ಲಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಶಾಲೆಗೆ ತೆರಳಬೇಕಾಗಿತ್ತು.

ದೂರದ ಶಾಲೆಗಳಿಗೆ ಪ್ರತಿದಿನ ತೆರಳುವುದು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತೀವ್ರ ತೊಂದರೆಯಾಗಿದ್ದರಿಂದ ಗ್ರಾಮಸ್ಥರು ಹಲವು ಬಾರಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಲ್ಲಾಪುರದಲ್ಲಿಯೇ ಪ್ರೌಢಶಾಲೆ ಆರಂಭಿಸಲು ಅನುಮತಿ ನೀಡಿತ್ತು. ಆದರೆ ಶಾಲೆ ಆರಂಭವಾಗಿ ಮೂರು ವರ್ಷ ಕಳೆದರೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಇಲಾಖೆ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಎರಡು ಕೊಠಡಿಗಳಲ್ಲೇ ಕಚೇರಿ, ತರಗತಿ: ಪ್ರಸ್ತುತ ಅಲ್ಲಾಪುರ ಸರಕಾರಿ ಪ್ರೌಢಶಾಲೆಯಲ್ಲಿ 9 ಮತ್ತು 10ನೇ ತರಗತಿಗಳು ನಡೆಯು

ತ್ತಿದ್ದು, ಒಟ್ಟು 63 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೋಧನೆಗಾಗಿ ಐವರು ಕಾಯಂ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ ಶಾಲೆಯಲ್ಲಿ ಕೇವಲ ಎರಡು ಕೊಠಡಿಗಳಿದ್ದು, ಅದೇ ಕೊಠಡಿಗಳಲ್ಲಿ ಶಾಲಾ ಕಚೇರಿ ಮತ್ತು ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಥಳಾವಕಾಶದ ಕೊರತೆಯಿಂದ ಶಿಕ್ಷಕರು ಶಾಲೆಯ ಬಯಲಲ್ಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.

ಮಳೆ ಮತ್ತು ಬಿಸಿಲಿನ ಸಂದರ್ಭದಲ್ಲಿ ಹೊರಗಡೆ ತರಗತಿ ನಡೆಸುವುದು ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಆತಂಕವನ್ನು ಪಾಲಕರು ವ್ಯಕ್ತಪಡಿಸಿದ್ದಾರೆ.

ಪ್ರೌಢಶಾಲೆಗೆ ಪ್ರತ್ಯೇಕ ಅನುದಾನವಿಲ್ಲ: ಅಲ್ಲಾಪುರ ಸರಕಾರಿ ಪ್ರೌಢಶಾಲೆ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿಯೇ ಆರಂಭ ಗೊಂಡಿರುವುದರಿಂದ ಪ್ರೌಢಶಾಲೆಗೆ ಪ್ರತ್ಯೇಕ ಅನುದಾನ ದೊರೆಯುತ್ತಿಲ್ಲ. ಸರಕಾರದಿಂದ ಬರುವ ಅನುದಾನವು ಪ್ರಾಥಮಿಕ ಶಾಲೆಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದ ಹೊಸ ಕೊಠಡಿಗಳ ನಿರ್ಮಾಣ, ದುರಸ್ತಿ ಕಾರ್ಯ ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸಾಧ್ಯವಾಗುತ್ತಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸುರಕ್ಷತೆಗೂ ಆತಂಕ: ಪ್ರೌಢಶಾಲೆಯ ತರಗತಿಗಳು ಪ್ರಾಥಮಿಕ ಶಾಲೆಯ ಮೇಲ್ಭಾಗದಲ್ಲಿರುವ ಎರಡು ಕೊಠಡಿಗಳಲ್ಲಿ ನಡೆಯುತ್ತಿವೆ. ಆದರೆ ಕೊಠಡಿಗಳ ಸುತ್ತ ಯಾವುದೇ ಸುರಕ್ಷತಾ ತಡೆಗೋಡೆ ಇಲ್ಲ. ವಿದ್ಯಾರ್ಥಿಗಳು ತರಗತಿಗಳಿಗೆ ತೆರಳುವ ಮೆಟ್ಟಿಲುಗಳ ಎರಡೂ ಬದಿಗಳಲ್ಲಿಯೂ ರಕ್ಷಣಾ ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತ ಸಂಭವಿಸುವ ಆತಂಕ ಎದುರಾಗಿದೆ.

ಸೌಲಭ್ಯವಿಲ್ಲದಿದ್ದರೂ ಶೇ.100 ಫಲಿತಾಂಶ: ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಅಲ್ಲಾಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ವರ್ಷ ಶೇ.100ರಷ್ಟು ಫಲಿತಾಂಶ ಸಾಧಿಸಿರುವುದು ಗಮನಾರ್ಹವಾಗಿದೆ. ಕಡಿಮೆ ಸೌಲಭ್ಯಗಳ ನಡುವೆಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಶಿಕ್ಷಕರು ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲೆ ಆರಂಭಿಸಲು ಅನುಮತಿ ನೀಡಿದ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಹೆಚ್ಚುವರಿ ಕೊಠಡಿಗಳ ನಿರ್ಮಾಣ, ವಿದ್ಯಾರ್ಥಿಗಳ ಸುರಕ್ಷತಾ ವ್ಯವಸ್ಥೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳು ಈ ವರ್ಷ ಶೇ.100ರಷ್ಟು ಫಲಿತಾಂಶ ಸಾಧಿಸಿರುವುದು ಹೆಮ್ಮೆಯ ವಿಷಯ. ಆದರೆ ಶಾಲೆಗೆ ಅಗತ್ಯವಾದ ಕೊಠಡಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬೋಧನೆಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು.

-ರೇಣುಕಾ ದೊಡ್ಡಮನಿ, ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಢಶಾಲೆ, ಅಲ್ಲಾಪುರ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News