×
Ad

ಕುಡಿಯುವ ನೀರಿಗಾಗಿ ಅಂಬೇಡ್ಕರ್ ನಗರ ನಿವಾಸಿಗಳ ಪರದಾಟ

Update: 2025-06-01 13:00 IST

ಯಾದಗಿರಿ, ಮೇ 31: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 2023-24ನೇ ಸಾಲಿನ ಮೈಕ್ರೋ ಯೋಜನೆಯಡಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೊಂಡು ಎರಡು ತಿಂಗಳಾದರೂ ಒಂದು ಹನಿ ನೀರು ಇಲ್ಲಿಯ ನಗರದ ನಿವಾಸಿಗಳು ನೋಡಿಲ್ಲ. ಲಕ್ಷಾಂತರ ರೂ. ಖರ್ಚು ಮಾಡಿ ಘಟಕ ನಿರ್ಮಿಸಿದರೂ ಜನರಿಗೆ ಉಪಯೋಗಕ್ಕೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮುಂಗಾರು ಮಳೆ ಆರಂಭವಾಗಿದೆ ಇಡೀ ಯಾದಗಿರಿ ನಗರದ ಚರಂಡಿ ನೀರು ನದಿಗೆ ಸೇರುವುದರಿಂದ ನದಿಯ ನೀರು ಕಲುಷಿತಗೊಂಡು ಅದೇ ನೀರು ನಗರಕ್ಕೆ ಸರಬರಾಜು ಮಾಡಲಾಗುತ್ತದೆ. ಹಾಗಾಗಿ ಕುಡಿಯಲು ಶುದ್ಧ ನೀರು ಸಿಗದೆ ಪರದಾಡುವಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರ ಮಾತಾಗಿದೆ.

ನಗರದಾದ್ಯಂತ ಆರು ಕಡೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಕುಡಿಯುವ ನೀರಿನ ಘಟಕಗಳು ನಿರ್ಮಿಸಲಾಗಿದ್ದು, ಇದು ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿಲ್ಲ ಮತ್ತು 17- ಮತ್ತು 18 ನಗರದಲ್ಲಿ ಒಂದು ಬೋರ್‌ವೆಲ್‌ಗಳು ಕೂಡ ಇಲ್ಲದಿರುವುದರಿಂದ ಇಲ್ಲಿಯ ಜನರಿಗೆ ಕುಡಿಯುವ ನೀರಿಗಾಗಿ ಸಂಕಷ್ಟ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಅಂಬೇಡ್ಕರ್ ನಗರದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಒಂದು ನೀರಿನ ಘಟಕ ಮಲಮೂತ್ರದ ವಾಸನೆಯಿಂದ ಗಬ್ಬೆದ್ದು ನಾರುತ್ತಿರುವ ಪರಿಸರದಲ್ಲಿ ಅಳವಡಿಸಿರುವುದರಿಂದ ಇಲ್ಲಿಯ ಜನ ಅಲ್ಲಿಗೆ ಹೋಗುತ್ತಿಲ್ಲ. ಹೀಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಕುಡುಕರ ತಾಣವಾದ ಹೊಸ ಶುದ್ಧ ಕುಡಿಯುವ ನೀರಿನ ಘಟಕ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 2023-24ನೇ ಸಾಲಿನ ಮೈಕ್ರೋ ಯೋಜನೆಯಡಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ರಾತ್ರಿ ವೇಳೆ ಕುಡುಕರು ಮದ್ಯಪಾನ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ. ಇದೀಗ ಕುಡುಕರ ತಾಣದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅಂಬೇಡ್ಕರ್ ನಗರದಲ್ಲಿ ನೀರಿನ ಘಟಕ ಇದ್ದೂ, ಜನರಿಗೆ ಉಪಯೋಗಕ್ಕೆ ಇಲ್ಲದಂತಾಗಿದೆ. ಯಾಕೆಂದರೆ ಎರಡು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಗೊಂಡಿದ್ದರೂ ಊರವರ ಪ್ರಯೋಜನಕ್ಕೆ ಸಿಕ್ಕಿಲ್ಲ.

-ಚಂದ್ರ ಕುಮಾರ್ ಛಲವಾದಿ, ಅಂಬೇಡ್ಕರ್ ನಗರ ನಿವಾಸಿ

ನಗರದ ಜನ ಪ್ರತಿ ನಿತ್ಯ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ನೀರಿಗಾಗಿ ಬೇರೆ ಬೇರೆ ನಗರಗಳನ್ನು ಆಶ್ರಯಿಸುವ ಸ್ಥಿತಿ ಬಂದಿದೆ. ಉದ್ಘಾಟನೆಗೊಂಡ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಜನೋಪಯೋಗಕ್ಕೆ ಸಿಗುವಂತೆ ಮಾಡಬೇಕಿದೆ.

- ಶ್ರೀಕಾಂತ್ ಸುಂಗಲಕರ್, ನಗರದ ನಿವಾಸಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ

contributor

Similar News