ಕೊಪ್ಪಳ : ತುಂಗಭದ್ರಾ ಜಲಾಶಯದಿಂದ ಕೈಗಾರಿಕೆಗಳಿಗೆ ನೀರು ಹರಿಸಲು ಅಳವಡಿಸಲಾಗಿದ್ದ ಪಂಪ್‌ಸೆಟ್‌ಗಳನ್ನು ರೈತರ ಸಮ್ಮುಖದಲ್ಲಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಿರುವ ನಡುವೆಯೂ ಕೈಗಾರಿಕೆಗಳಿಗೆ ನೀರು ಹರಿಸಲಾಗುತ್ತಿದೆ ಎಂಬ ಕುರಿತು ‘ಬರದಲ್ಲೂ ಕಾರ್ಖಾನೆಗಳಿಗೆ ಹರಿಯುತ್ತಿದೆಯೇ ತುಂಗಭದ್ರಾ ನೀರು?’ ಎಂಬ ಶೀರ್ಷಿಕೆಯಡಿ ವಾರ್ತಾ ಭಾರತಿ ವರದಿ ಪ್ರಕಟಿಸಿತ್ತು. ಸರಕಾರದ ಆದೇಶವನ್ನು ಉಲ್ಲಂಘಿಸಿ ಕೈಗಾರಿಕೆಗಳಿಗೆ ನೀರು ಹರಿಸಲಾಗುತ್ತಿದೆ ಎಂಬ ಆರೋಪವನ್ನೂ ವರದಿ ಬೆಳಕಿಗೆ ತಂದಿತ್ತು.

ಈ ಕುರಿತಾಗಿ ರೈತರು ಪ್ರತಿಭಟನೆ ಕೂಡಾ ನಡೆಸಿದ್ದು, ಇದರ ಬೆನ್ನಲ್ಲೇ ಜಲಾಶಯದಲ್ಲಿ ಕೈಗಾರಿಕೆಗಳಿಗೆ ನೀರು ಹರಿಸಲು ಅಳವಡಿಸಲಾಗಿದ್ದ ಪಂಪ್‌ಸೆಟ್‌ಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ವರದಿಯ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

ಸರಕಾರದ ಆದೇಶವಿದ್ದರೂ ಕೈಗಾರಿಕೆಗಳಿಗೆ ನೀರು ಹರಿಸಲು ಅವಕಾಶ ನೀಡಿದ್ದೇಕೆ? ಸಚಿವರ ಸೂಚನೆಗಳನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದೇಕೆ? ಕೈಗಾರಿಕೆಗಳೊಂದಿಗೆ ಅಧಿಕಾರಿಗಳ ಸಂಬಂಧವೇನು? ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಎತ್ತಿದ್ದಾರೆ.

ಸರಕಾರದ ಆದೇಶ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor