ಹೋರಾಟದ ಹಾಡುಗಳ ಜೀವಂತಿಕೆ
ನಾಡಿನ ಜನಪರ ಚಳವಳಿಗಳಿಗೆ ಹೋರಾಟದ ಹಾಡುಗಳು ಮುಂಬೆಳಕಾಗಿ ಪ್ರಜ್ವಲಿಸಿವೆ. ಈ ಹಾಡುಗಳು ವ್ಯವಸ್ಥೆಯ ಲೋಪಗಳನ್ನು ಲೇವಡಿ ಮಾಡುತ್ತಾ, ಆಳುವ ಸರಕಾರಗಳ ಜನವಿರೋಧಿ ಧೋರಣೆಗಳನ್ನು ಪ್ರಶ್ನಿಸುತ್ತಾ, ಭೂಮಾಲಕ ಜಮೀನ್ದಾರರ ಅಟ್ಟಹಾಸಗಳಿಗೆ ಸವಾಲೆಸೆದು ಸಾಂಸ್ಕೃತಿಕ ಪ್ರತಿರೋಧವನ್ನು ಒಡ್ಡಿದ ಪರಿಣಾಮವಾಗಿ ಇಂದು ಹೋರಾಟದ ಹಾಡುಗಳಿಗೆ ಮನ್ನಣೆ ದೊರೆತಿದೆ ಎನ್ನಬಹುದು. ‘ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು ಒದೆಸಿಕೊಂಡು ಒರಗಿದೋರು ನನ್ನ ಜನಗಳು’ ಎಂಬಂತಹ ಹಾಡುಗಳು, ‘ಬದುಕೆಲ್ಲ ಕಷ್ಟಗಳು ಚಂದಮಾಮ... ಗುಂಡಿಗೆ ತುಂಬ ಗಾಯಗಳು ಚಂದಮಾಮ, ನಮ್ಮ ಗುಂಡಿಗೆ ತುಂಬಾ ಗಾಯಗಳು ಚಂದಮಾಮ’ ಹಾಗೂ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆಯ’ - ಎಂಬಂತಹ ಹಾಡುಗಳು ದಲಿತರ ಬದುಕಿನ ನೋವಿನ ಎಳೆಗಳ ಒಳನೋಟಗಳನ್ನು ತೆರೆದಿಟ್ಟರೆ ‘‘ಬರುತಿಹೆವು ನಾವು ಬರುತಿಹೆವು, ಯುಗ ಯುಗಗಳಿಂದ ನೀವ್ ತುಳಿದ ಜನಗಳ ಕೊರಳ ದನಿಗಳು ನಾವು’’- ಎಂಬಂತಹ ಹಾಡುಗಳು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿಯೂ ಧ್ವನಿಸಿವೆ. ಜಾತಿವಾದಿಗಳ ಚೇಷ್ಟೆ, ದೌರ್ಜನ್ಯ ದಬ್ಬಾಳಿಕೆಗೆ ಪ್ರತಿರೋಧವಾಗಿ ‘‘ಇಕ್ರುಲಾ, ಒದಿರ್ಲಾ..’’ ಎಂಬಂತಹ ಕವನ/ಹಾಡುಗಳೂ, ಜಾತಿವಾದಿಗಳ ಎದೆಗೆ ಅಪ್ಪಳಿಸಿರುವುದೂ ಉಂಟು.
ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯಗಳನ್ನು ಪ್ರಶ್ನಿಸಲು ಈ ಹಾಡುಗಳು ತಕ್ಕ ವೇದಿಕೆಯನ್ನು ಒದಗಿಸಿವೆ ಎಂಬುದನ್ನು ಮೆಚ್ಚಬೇಕು. ಏಕೆಂದರೆ, ಮೌಖಿಕ ಸಂದೇಶಗಳು, ಆರ್ಭಟಿಸುವ ಘೋಷಣೆಗಳು, ಲಿಖಿತ ರೂಪದ ತಕರಾರಿನ ಪ್ರಶ್ನೆಗಳು ಯಾರನ್ನು ಮುಟ್ಟದಿದ್ದರೂ, ಪರಿಹಾರ ಕಾಣದಿದ್ದರೂ ಪ್ರತಿರೋಧದ ಹಾಡುಗಳು ಮಾತ್ರ ವ್ಯವಸ್ಥೆಯನ್ನು, ಆಳುವ ಸರಕಾರದ ಅಧಿಕಾರಿಗಳನ್ನು ಅಂತಿಮವಾಗಿ ದೌರ್ಜನ್ಯಕೋರರನ್ನು ಮುಟ್ಟಿವೆ. ಅಷ್ಟರ ಮಟ್ಟಿಗೆ ಅವು ಸಾರ್ಥಕತೆಯನ್ನು ಗಳಿಸಿವೆ.
ಚಳವಳಿಗಳಲ್ಲಿ ನಿರತ ಕಾರ್ಯಕರ್ತರುಗಳಿಗೆ ಬಂಡಾಯ ಹಾಗೂ ದಲಿತ ಸಾಹಿತ್ಯದ ಆಶಯಗಳನ್ನು ಬಿಂಬಿಸುವ ಈ ಹಾಡುಗಳು ಸ್ಫೂರ್ತಿಯ ಚಿಲುಮೆಗಳಾಗಿವೆ. ಬಾಬಾ ಸಾಹೇಬರನ್ನು ಕುರಿತ ಹಾಡುಗಳ ಮೂಲಕವೇ ಸಭೆ, ಸಮಾರಂಭ ಮತ್ತು ಪ್ರತಿಭಟನಾ ಹೋರಾಟಗಳು ಪ್ರಾರಂಭವಾಗುತ್ತಿದ್ದು, ಒಟ್ಟು ಕಾರ್ಯಕ್ರಮಗಳಿಗೆ ಹೋರಾಟದ ಹಾಡುಗಳೇ ಪ್ರೇರಕಶಕ್ತಿಯಾಗಿ ಕಂಡಿವೆ ಎನ್ನಲ್ಲಡ್ಡಿಯಿಲ್ಲ. ದಲಿತ ಹಾಗೂ ಪ್ರಗತಿಪರ ಸಾಹಿತಿಗಳು, ಚಿಂತಕರು ಇಂತಹ ಹಾಡುಗಳನ್ನು ಬರೆದು ಪೀಠಿಕೆ ಹಾಕಿದರೆ, ಅದಕ್ಕೆ ಪೂರಕವೆಂಬಂತೆ ಹಾಗೂ ಗಟ್ಟಿಧ್ವನಿಯನ್ನು ಪ್ರತಿನಿಧಿಸುವಂತಹ ರಾಗ ಸಂಯೋಜಿಸಿ ಗಾಯಕರ ಮುಂದಿರಿಸಿದ ಪರಿಣಾಮವಾಗಿ ಗಾಯಕರುಗಳು ಅಷ್ಟೇ ಕಾಳಜಿ ಮತ್ತು ವ್ಯವಸ್ಥೆಯ ವಿರುದ್ದ ಪ್ರತಿರೋಧವನ್ನು ಇಂತಹ ಹಾಡುಗಳ ಮೂಲಕ ಮುಟ್ಟಿಸಿರುವುದನ್ನು ಕಾಣಬಹುದು. ಕೇವಲ ಪ್ರತಿಭಟನೆಯ ಹಾದಿಗಳಲ್ಲಿ ಮೊಳಗುತ್ತಿದ್ದ ಹೋರಾಟದ ಹಾಡುಗಳು ಇದೀಗ ಧ್ವನಿಸುರಳಿಗಳಲ್ಲಿ, ಯೂಟ್ಯೂಬ್ ಚಾನೆಲ್‌ಗಳಲ್ಲಿ ಸ್ಥಾನ ಪಡೆದಿವೆ. ಲಕ್ಷಾಂತರ ಕೇಳುಗರನ್ನು ಸೃಷ್ಟಿಸಿಕೊಂಡಿದೆ. ಅಷ್ಟೇ ಧ್ವನಿಪೂರ್ಣವಾಗಿ ರೂಪುಗೊಂಡು ಮತ್ತೆ ಮತ್ತೆ ಕೇಳುವಂತಹ ಸನ್ನಿವೇಶಗಳನ್ನು ಸೃಷ್ಟಿಸಿದೆ. ಇದು ಹೋರಾಟದ ಹಾಡುಗಳಿಗೆ ಮತ್ತಷ್ಟು ಚೈತನ್ಯ ಮತ್ತು ಉತ್ಸಾಹವನ್ನು ತಂದುಕೊಟ್ಟಿದೆ.
ಈ ಹೋರಾಟದ ಹಾಡುಗಳು ಅಂಬೇಡ್ಕರ್ ರವರ ವ್ಯಕ್ತಿಚಿತ್ರಣದ ಕುರಿತಾಗಿ, ಶೋಷಿತ ಸಮುದಾಯದ ನೋವು, ಸಂಕಟ, ಆಕ್ರೋಶಗಳಿಗಷ್ಟೇ ಸೀಮಿತವಾಗದೆ ಜಗತ್ತಿಗೆ ಶಾಂತಿ ಮತ್ತು ಮೈತ್ರಿಯ ಸಂದೇಶವನ್ನು ಸಾರಿದ ಮಹಾ ಮಾನವತಾವಾದಿ ಬುದ್ಧರನ್ನೂ, ಮೈಸೂರು ಸಂಸ್ಥಾನದ ದೊರೆಗಳಾದ ಮೀಸಲಾತಿ ಜನಕ ನಾಲ್ವಡಿ ಕೃಷ್ಣರಾಜ ಒಡೆಯರ್ ರವರನ್ನು ಕುರಿತ ‘ಮರೆಯೋದುಂಟೆ ಮೈಸೂರು ದೊರೆಯ ನಾಲ್ವಡಿ ಕೃಷ್ಣರಾಜ ಒಡೆಯ’ ಎಂಬ ಹಾಡು ಮಾತ್ರವಲ್ಲ ಭಾರತೀಯ ಸಂವಿಧಾನದ ಪೀಠಿಕೆಯನ್ನೂ ಒಳಗೊಂಡ ‘ಭಾರತದ ಪ್ರಜೆಗಳಾದ ನಾವು’ ಶೀರ್ಷಿಕೆಯಲ್ಲಿ ರಚಿತವಾಗಿರುವ ಹಾಡುಗಳು ಜನತೆಯನ್ನು ಬಹು ಬೇಗನೆ ಮುಟ್ಟುತ್ತಿರುವುದರಿಂದ ಅವರಲ್ಲಿ ವೈಚಾರಿಕ ಹಾಗೂ ಐತಿಹಾಸಿಕ ಮಹತ್ವದ ಸಂಗತಿಗಳು ಮುಟ್ಟಲು ಸಾಧ್ಯವಾಗಿದೆ.
ವ್ಯವಸ್ಥೆಯಲ್ಲಿ ಕಾಣಬರುವ ಅಸಮಾನತೆ ಮತ್ತು ದಬ್ಬಾಳಿಕೆಗಳ ವಿರುದ್ಧ ಮೌಖಿಕವಾಗಿ ನೇರಾ ನೇರ ಅಭಿವ್ಯಕ್ತಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಹಾಡುಗಳ ರೂಪದಲ್ಲಿ ನೊಂದವರ ಆಕ್ರೋಶಗಳನ್ನು ವ್ಯಕ್ತ ಮಾಡಿರುವುದನ್ನು ಗಮನಿಸಬಹುದು. ‘‘ಲಕ್ಷ ಲಕ್ಷ ಕೊಟ್ಟೇವೆಂದು ದೇಶವೆಲ್ಲ ಹೇಳಿಕೊಂಡು ವೋಟು ಕೇಳೋ ಕಾರು ಬಂತಣ್ಣ, ಓ ರಾಮಣ್ಣ... ’’ ಎಂಬಂತಹ ಹಾಡುಗಳು, ‘‘ಎಲ್ಲವನ್ನೆಲ್ಲವನೆ ನಮ್ಮ ಭತ್ತ ರಾಗಿಯ ತಿಂದ ...’’ ಎಂಬ ಆಕ್ರೋಶ ಭರಿತ, ಸಂಘರ್ಷವನ್ನು ಸಾರಿ ಹೇಳುವ ಹಾಡುಗಳು ಅಧಿಕಾರಶಾಹಿಗಳಿಗೆ ಚುರುಕು ಮುಟ್ಟಿಸಿದ ಹಾಡುಗಳಾಗಿವೆ. ಇಂತಹ ಹಾಡುಗಳನ್ನು ಕಟ್ಟಿಕೊಟ್ಟು ಜನರಲ್ಲಿ ಹೋರಾಟದ ಮನೋಭೂಮಿಕೆಯನ್ನು ಭದ್ರಪಡಿಸಿರುವ ಜನಪರ ಕವಿಗಳ ಸಾಹಿತ್ಯದೊಂದಿಗೆ ಸುಮಧರ ಕಂಠಸಿರಿ ಹೊಂದಿರುವ ಗಾಯಕರುಗಳ ಗಾಯನದ ವೈಶಿಷ್ಟ್ಯಗಳೂ ಮಿಳಿತಗೊಂಡು ಹೋರಾಟಗಾರರ ಎದೆಯಾಳದ ಧ್ವನಿಯಾಗಿ ಜಗತ್ತಿನ ಜೊತೆ ಸಂವಾದಿಸುತ್ತಿರುವ ಈ ಹೋರಾಟದ ಹಾಡುಗಳಲ್ಲಿ ಈ ನೆಲದ ಸೊಗಡು ಮಾತ್ರವಲ್ಲದೆ, ಬೇರೆ ಭಾಷೆಯ ಅಂದರೆ ತೆಲುಗು ಮುಂತಾದ ಭಾಷೆಗಳಲ್ಲಿ ರಚಿತವಾಗಿರುವ ಹೋರಾಟದ ಹಾಡುಗಳನ್ನು ಕನ್ನಡ ಭಾಷೆಗೆ ತರ್ಜುಮೆ ಗೊಳಿಸಿ ಹಾಡುಗಾರರ ಮಡಿಲಿಗೆ ಹಾಕಿರುವ ಹಿನ್ನೆಲೆಯಲ್ಲಿ ಅವುಗಳು ಕೂಡಾ ಈ ಹೋರಾಟದ ಹಾದಿಯಲ್ಲಿ ಮುಂಬೆಳಕಾಗಿ ದಾರಿ ತೋರಿಸುತ್ತಾ ಬಂದಿವೆ ಎನ್ನಬಹುದು.
ಶೋಷಿತ ಸಮುದಾಯಕ್ಕೆ ರಾಜಕೀಯ ಅಧಿಕಾರ ಬೇಕು ಎನ್ನುವ ಆಶಯವನ್ನೊಳಗೊಂಡ ಹಾಡುಗಳು ‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯಕೊಡಿ’ ಎಂಬ ಗೀತೆಗಳಾಗಬಹುದು, ‘ಆನೆ ಬಲದ ಹಿಂಡಾನೆ ಬಲದವರು ನನ್ನ ಜನ, ನನ್ನ ಜನಾ, ಆಳುತ್ತಾರೆ ಈ ದೇಶವನ್ನಿನ್ನು ಕೊನೆತನಕ...ಕೊನೆತನಕ.. ಈ ಭೂಮಿ ಮೇಲೆ ಉಸಿರಿರೊತನಕ ಎಂಬ ಆಶಯವನ್ನಿರಿಸಿಕೊಂಡು ರಚಿತವಾಗಿರುವ ಹಾಡುಗಳು ಶೋಷಿತ ಬಹುಜನ ಸಮುದಾಯದಲ್ಲಿ ಹೊಸ ಭರವಸೆ ಮತ್ತು ಆಶಾಭಾವನೆಯನ್ನು ಬಿತ್ತಿವೆ.
ಬಾಬಾಸಾಹೇಬರು ಇಲ್ಲದ ಈ ಹೊತ್ತಿನಲ್ಲಿ ಅವರ ಬದುಕಿನ ಕ್ಷಣಗಳನ್ನು ಸ್ಮರಿಸುತ್ತಲೇ ‘ನೀ ಹೋದ ಮರು ದಿನ ಮೊದಲಂಗೆ ನಮ್ಮ ಬದುಕು ಆಗ್ಯಾದೋ ಬಾಬಾಸಾಹೇಬ’ ಎಂದು ಬಾಬಾಸಾಹೇಬರೊಂದಿಗೆ ನಿವೇದಿಸಿಕೊಳ್ಳುವ ಹಾಡುಗಳು, ‘ಕಟ್ಟುತ್ತೇವ ನಾವು ಕಟ್ಟುತ್ತೇವಾ ನಾವು ಕಟ್ಟೇ ಕಟ್ಟುತ್ತೇವಾ, ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವ ನಾವು ಕನಸ ಕಟ್ಟುತ್ತೇವ ನಾವು ಮನಸ ಕಟ್ಟುತ್ತೇವಾ’ ಎಂದು ಎದೆಯುಬ್ಬಿಸಿ ಮುಷ್ಟಿ ಹಿಡಿದು ಮುನ್ನುಗ್ಗುವ ಛಾತಿಯನ್ನು ಮೂಡಿಸುವ ಹಾಡುಗಳು ಜನಪರ ಚಳವಳಿಗಳಿಗೆ ಹಾಗೂ ಅದರ ಮುನ್ನಡೆಗೆ ಬೆಳಕು ತೋರಿವೆ. ‘ಅಂಬೇಡ್ಕರಾ ಹೇಳಿದ ಮಾತು, ಮರೆಯಬೇಡಿ; ಮರೆತು ಮಲಗಾಬೇಡಿ’ ಎಂದು ಸಂದೇಶ ನೀಡಿರುವ ಜನಪರ ಕವಿಗಳು ಕೇವಲ ಆಕ್ರೋಶ, ಸಂಕಟ ಮತ್ತು ಪ್ರತಿಭಟನೆಯ ಕಾವನ್ನು ಮೂಡಿಸುವ ಸಾಹಿತ್ಯವನ್ನಷ್ಟೇ ಬರೆಯದೆ ಸಮಾಜದಲ್ಲಿ ಪ್ರೀತಿ, ಪ್ರೇಮ, ಬಡತನ ಸಿರಿತನಗಳ ನಡುವೆ ಅರಳಿರುವ ಬದುಕಿನ ಗಳಿಗೆಗಳನ್ನೂ ಸಹ ತಮ್ಮ ಸಾಹಿತ್ಯದಲ್ಲಿ ದಾಖಲಿಸಿದ್ದು, ಅಂತಹ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲೂ ಮಾನವೀಯ ಮೌಲ್ಯಗಳ ಪರವಾಗಿ ಅವರ ತುಡಿತಗಳಿರುವುದು ‘‘ಬಡವ ನಾದರೆ ಏನು ಪ್ರಿಯೆ? ಕೈ ತುತ್ತು ತಿನಿಸುವೆ..’ ಎಂಬಂತಹ ಹಾಡುಗಳಲ್ಲಿ, ‘ಮೇಲು ಕೀಳಿನ ಬೇಲಿ ಜಿಗಿದು ಪ್ರೇಮ ಲೋಕಕೆ ನಿನ್ನ ಬಿಗಿದು ಬರುವ ಸಂಕಟ ಎಲ್ಲಾ ಮರೆತು ಸಾವು ನೋವನು ಮೀರಬೇಕು...’ಎಂಬಂತಹ ಹಾಡುಗಳಲ್ಲಿ ಜೀವಪರ ದನಿಯನ್ನು ಗುರುತಿಸಬಹುದಾಗಿದೆ.