ಸಾಂದರ್ಭಿಕ ಚಿತ್ರ (PTI)

ಮಡಿಕೇರಿ : ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಈ ಅವಧಿಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಕರಡು ಪಟ್ಟಿಯಲ್ಲಿರುವ ಮುಸ್ಲಿಮ್ ಮತಗಳನ್ನು ಡಿಲೀಟ್ ಮಾಡಲು ಫಾರಂ-7 ಬಳಸಿ ಅರ್ಜಿ ಸಲ್ಲಿಸಿರುವ ಘಟನೆಗಳು ಬೆಳಕಿಗೆ ಬರುತ್ತಿದೆ. ಇದೀಗ ಕೊಡಗು ಜಿಲ್ಲೆಯಲ್ಲಿಯೂ ಫಾರಂ-7 ಬಳಸಿ ಮುಸ್ಲಿಮ್ ಮತದಾರರನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸಿರುವ ಘಟನೆ ಬಯಲಿಗೆ ಬಂದಿದೆ.

ಮಡಿಕೇರಿ ಕ್ಷೇತ್ರದ ಬ್ಯಾಡಗೊಟ್ಟ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟ ಬೂತ್-21 ರಲ್ಲಿ 66 ಮುಸ್ಲಿಮ್ ಮತದಾರರನ್ನು ತೆಗೆದು ಹಾಕಲು ಸ್ಥಳೀಯ ಬಿಜೆಪಿ ಬೂತ್ ಏಜೆಂಟ್ ಹಾಗೂ ಬಿಜೆಪಿ ಮುಖಂಡರು ಅರ್ಜಿ ಸಲ್ಲಿಸಿರುವ ಫಾರಂ-7 ಪ್ರತಿಗಳು ‘ವಾರ್ತಾಭಾರತಿ’ಗೆ ಲಭ್ಯವಾಗಿದ್ದು, ಅರ್ಜಿಗಳಲ್ಲಿ Absent, Shifted Non resident ಎಂದು ಉಲ್ಲೇಖಿಸಿ ಡಿಲೀಟ್ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಬ್ಯಾಡಗೊಟ್ಟ ಬೂತ್‌ನಲ್ಲಿ ಹಲವು ವರ್ಷಗಳಿಂದ ಮತ ಚಲಾಯಿಸಿ ಬರುತ್ತಿರುವ, ಎಸ್‌ಐಆರ್ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಅರ್ಹ ಮುಸ್ಲಿಮರನ್ನೇ ಟಾರ್ಗೆಟ್ ಮಾಡಿ ಬಿಜೆಪಿಗರು ಅರ್ಜಿ ಸಲ್ಲಿಸಿದ್ದಾರೆ. ವಿಶೇಷವಾಗಿ ಬ್ಯಾಡಗೊಟ್ಟ ವ್ಯಾಪ್ತಿ ಒಂದೇ ಕುಟುಂಬದ 9 ಮಂದಿಯ ಹೆಸರನ್ನು ತೆಗೆಯಲು ಅರ್ಜಿ ಸಲ್ಲಿಸಲಾಗಿದೆ. ಇನ್ನೂ ಬ್ಯಾಡಗೊಟ್ಟ ಗ್ರಾಮದಲ್ಲಿ ವಾಸವಿದ್ದು, ಬೇರೆ ಕಡೆಗಳಲ್ಲಿ ಉದ್ಯೋಗದಲ್ಲಿರುವ ಮುಸ್ಲಿಮ್ ಮತದಾರರ ಹೆಸರು ಡಿಲೀಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಹಕ್ಕು ಮತ್ತು ಆಕ್ಷೇಪ ಸಲ್ಲಿಸಲು ಅವಕಾಶವಿದ್ದ ಕೊನೆಯ ದಿನವಾದ ಸೆ.23ರಂದು ಎಲ್ಲ ಅರ್ಜಿಗಳು ಬಿಎಲ್‌ಒಗೆ ನೀಡಲಾಗಿದೆ.

ಅರ್ಜಿ ಪಡೆದು ಅಪ್ಲೋಡ್ ಮಾಡದ ಬಿಎಲ್‌ಒ: ಬ್ಯಾಡಗೊಟ್ಟ ಬೂತ್‌ನಲ್ಲಿ 66 ಮತಗಳನ್ನು ಡಿಲೀಟ್ ಮಾಡಲು ಫಾರಂ-7 ಸಲ್ಲಿಸಿರುವ ಅರ್ಜಿಗಳನ್ನು ಸ್ಥಳೀಯ ಬಿಎಲ್‌ಒ ಅವರು ಪರಿಶೀಲಿಸಿ ಅಪ್ಲೋಡ್ ಮಾಡಿಲ್ಲ ಎಂದು ಸ್ಥಳೀಯ ಮುಖಂಡರು ಮಾಹಿತಿ ನೀಡಿದ್ದಾರೆ. ಒಂದು ವೇಳೆ ಬಿಎಲ್‌ಒ ಸಹಿ ಹಾಕಿ ಫಾರಂ-7ಸಲ್ಲಿಸಿದ್ದರೆ ಮತಗಳು ಡಿಲೀಟ್ ಆಗುವ ಸಾಧ್ಯತೆಗಳೂ ಇದ್ದವು.

ಹಕ್ಕು, ಆಕ್ಷೇಪ ಮಾಹಿತಿ ಅಳಿಸಿ ಹಾಕುತ್ತಿರುವ ಆಯೋಗ

ಚುನಾವಣಾ ಆಯೋಗದ CEO ವೆಬ್‌ಸೈಟ್‌ನಲ್ಲಿ ಹಕ್ಕು ಮತ್ತು ಆಕ್ಷೇಪ ಸಲ್ಲಿಸಿರುವವರ ಮಾಹಿತಿಯನ್ನು ಸೆ.1ರಿಂದ ಅಪ್ಲೋಡ್ ಮಾಡಲಾಗುತ್ತಿತ್ತು. ಆದರೆ ಎರಡು ದಿನದ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದಂತೆ, ಮೊದಲ ಎರಡು ದಿನದ ಮಾಹಿತಿಯನ್ನು ಅಳಿಸಿ ಹಾಕಲಾಗುತ್ತಿದೆ. ಈವರೆಗೆ ಸಲ್ಲಿಕೆಯಾದ ಆಕ್ಷೇಪಗಳಲ್ಲಿ ಸೆ.24ರವರೆಗಿನ ಎಲ್ಲಾ ಮಾಹಿತಿಗಳನ್ನು ಪೋರ್ಟಲ್‌ನಿಂದ ತೆಗೆದು ಹಾಕಲಾಗಿದೆ.

ನಾನು ಮತ್ತು ನಮ್ಮ ಕುಟುಂಬ ತಂದೆ-ತಾಯಿ ಹುಟ್ಟಿ ಬೆಳೆದ ಊರಿನಲ್ಲಿಯೇ ಮತದಾರರಾಗಿದ್ದೇವೆ. ನಮ್ಮ ಕುಟುಂಬದ ಒಟ್ಟು 7 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ನಮ್ಮದೇ ಗ್ರಾಮದವರು ರಾಜಕೀಯ ಪಿತೂರಿಯಿಂದ ಫಾರಂ-7 ಅರ್ಜಿ ಸಲ್ಲಿಸಿರುವುದು ತಿಳಿದು ಬೇಸರವಾಯಿತು. 2002ರಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಮತ ಚಲಾಯಿಸಿಕೊಂಡು ಬಂದಿರುವ ನಮ್ಮನ್ನು ನಮ್ಮ ಬೂತ್‌ನ ಬಿಜೆಪಿ ಮುಖಂಡರು ಮುಸ್ಲಿಮರ ಮತದ ಹಕ್ಕನ್ನು ಕಸಿಯುವ ದುರುದ್ದೇಶದಿಂದ ‘ಗೈರುಹಾಜರಿ’ ಎಂದು ಅರ್ಜಿ ಸಲ್ಲಿಸಿರುವುದನ್ನು ನಾನು ಖಂಡಿಸುತ್ತೇನೆ.

ಅಬ್ದುಲ್ ನಾಸಿರ್ ಬಿ.ಎಂ., ಬ್ಯಾಡಗೊಟ್ಟ

ದಿಲ್ಲಿ ಮಟ್ಟದಲ್ಲಿ ನಡೆಯುತ್ತಿದ್ದ ವೋಟ್ ಚೋರಿ ಸಂಬಂಧಿತ ವಿಷಯಗಳು ನಮ್ಮ ಗ್ರಾಮಗಳಲ್ಲೂ ನಡೆದಿರುವುದು ದಿಗ್ಭ್ರಮೆ ಉಂಟು ಮಾಡಿದೆ. ಎಲ್ಲ ಜನಾಂಗದ ಬಾಂಧವರು ಅನ್ಯೋನ್ಯತೆಯಿಂದ ಬದುಕುತ್ತಿರುವ ವಾತಾವರಣದಲ್ಲಿ ಒಂದೇ ಧರ್ಮದ ಮತದಾರರ ಹೆಸರನ್ನು ಅಳಿಸಲು ನಮೂನೆ-7 ರಲ್ಲಿ ಅರ್ಜಿ ಸಲ್ಲಿಸಿರುವುದು ಸರಿಯಲ್ಲ.

ಮುಹಮ್ಮದ್ ಹನೀಫ್, ಬ್ಯಾಡಗೊಟ್ಟ ಗ್ರಾಪಂ ಮಾಜಿ ಅಧ್ಯಕ್ಷ

ಬ್ಯಾಡಗೊಟ್ಟ ಗ್ರಾಮದಲ್ಲಿ ನಾವೆಲ್ಲರೂ ಅನ್ಯೋನ್ಯತೆಯಿಂದ ಇದ್ದೇವೆ. ಈಗ ನಮ್ಮ ಊರಿನವರೇ ಈ ರೀತಿ ಕೋಮುದ್ವೇಷ ಇಟ್ಟುಕೊಂಡು ಒಂದೇ ಧರ್ಮದವರನ್ನು ಗುರಿಯಾಗಿಸಿಕೊಂಡು, ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಏಕಕಾಲದಲ್ಲಿ ಮತದಾರರ ಹೆಸರು ತೆಗೆಯಲು ಅರ್ಜಿ ಸಲ್ಲಿಸಿರುವುದು ಖಂಡನೀಯ.

ಡಿ.ಎ.ಸುಲೈಮಾನ್, ಬ್ಯಾಡಗೊಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ.ಇಸ್ಮಾಯಿಲ್ ಕಂಡಕರೆ

contributor