ಸಾಂದರ್ಭಿಕ ಚಿತ್ರ | Photo Credit : PTI

ವಿಜಯಪುರ: ಬೆಳಗಾವಿಯಲ್ಲಿ ಶಾಸಕ ಅಭಯ ಪಾಟೀಲ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ತೆರವುಗೊಳಿಸಲು ಬರೆದಿದ್ದರೆನ್ನಲಾದ ಪತ್ರ ರಾಜಕೀಯ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ, ಸಚಿವ ಎಂ.ಬಿ. ಪಾಟೀಲ ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲೂ ಅದೇ ಮಾದರಿಯ ’ಮತ ಡಿಲೀಟ್’ ಹುನ್ನಾರ ಬೆಳಕಿಗೆ ಬಂದಿದೆ.

ಚುನಾವಣಾ ನಿಯಮಾವಳಿಗಳನ್ನು ಗಾಳಿಗೆ ತೂರಿ, ’ಫಾರ್ಮ್-7’ ಮೂಲಕ ನಿರ್ಣಾಯಕ ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿಕೊಂಡು ಸಾಮೂಹಿಕವಾಗಿ ಅರ್ಜಿ ಸಲ್ಲಿಸಿರುವುದು ಎಸ್‌ಎಸ್‌ಆರ್ ಪ್ರಕ್ರಿಯೆಯನ್ನೇ ಸಂಶಯದ ಸುಳಿಗೆ ಸಿಲುಕಿಸಿದೆ.

ಹೈವೋಲ್ಟೇಜ್ ಕ್ಷೇತ್ರದಲ್ಲಿ ಪರೋಕ್ಷ ಅಸ್ತ್ರ! :

ಬಬಲೇಶ್ವರ ಕ್ಷೇತ್ರವು ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಮುಖವಾದ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಮಿತ್ ಶಾ ಮೊದಲಾದವರು ಇಲ್ಲಿ ಸರಣಿ ಪ್ರಚಾರ ನಡೆಸಿದ್ದರೂ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ಚುನಾವಣಾ ಕಣದಲ್ಲಿ ನೇರವಾಗಿ ಎದುರಿಸಲು ಸಾಧ್ಯವಾಗದೆ, ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಪಟ್ಟಿಯಿಂದಲೇ ತೆರವುಗೊಳಿಸುವ ಪರೋಕ್ಷ ಹುನ್ನಾರ ನಡೆಸಲಾಗುತ್ತಿದೆಯೇ ಎಂಬ ಬಲವಾದ ಅನುಮಾನಗಳು ವ್ಯಕ್ತವಾಗಿವೆ.

ಏಳು ಜನರಿಂದ 1,564 ಅರ್ಜಿ! :

ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಫಾರ್ಮ್-7 ಬಳಸಿ ಆಕ್ಷೇಪಣೆ ಸಲ್ಲಿಸಲು ಮತದಾರ ಸ್ವತಃ ಅಥವಾ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಅಕಾಶವಿರುತ್ತದೆ. ಪಕ್ಷದ ಬೂತ್ ಮಟ್ಟದ ಏಜೆಂಟ್ ಗಳು (ಬಿಎಲ್‌ಒ) ದಿನಕ್ಕೆ ಗರಿಷ್ಠ 50 ಅರ್ಜಿಗಳನ್ನು ಮಾತ್ರ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ ಬಬಲೇಶ್ವರದಲ್ಲಿ ಕೇವಲ ಏಳೆಂಟು ವ್ಯಕ್ತಿಗಳು ಈ ನಿಯಮ ಗಾಳಿಗೆ ತೂರಿ, ದಿನಕ್ಕೆ ನೂರಾರು ಅರ್ಜಿ ಸಲ್ಲಿಸಿ ಒಟ್ಟು 1,564 ಆಕ್ಷೇಪಣೆಗಳನ್ನು ಎಸ್‌ಎಸ್‌ಆರ್ ಪ್ರಕ್ರಿಯೆಗೆ ಸೇರಿಸಿದ್ದಾರೆ. ಇದರಲ್ಲಿ 1,500ಕ್ಕೂ ಹೆಚ್ಚು ಅರ್ಜಿಗಳು ಕೇವಲ ಮುಸ್ಲಿಂ ಮತದಾರರ ವಿರುದ್ಧವೇ ಇರುವುದು ಸಂಚನ್ನು ಬಹಿರಂಗಪಡಿಸಿದೆ.

ಚುನಾವಣಾ ನಿಯಮಗಳ ಪ್ರಕಾರ ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆದುಹಾಕುವ ಕುರಿತು ಫಾರ್ಮ್-7 ಮೂಲಕ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಗೆ ನಿರ್ದಿಷ್ಟ ನಿಯಮಗಳಿವೆ. ಆದರೆ, ಈ ಪ್ರಕರಣದಲ್ಲಿ ಕೆಲವೇ ವ್ಯಕ್ತಿಗಳಿಂದ ಇಷ್ಟೊಂದು ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಇನ್ನೊಂದೆಡೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಬಿಜೆಪಿಯಿಂದ ಸಲ್ಲಿಕೆಯಾಗಿದ್ದ 18,000 ಮತದಾರರ ವಿರುದ್ಧದ ಆಕ್ಷೇಪಣಾ ಅರ್ಜಿಗಳನ್ನು (ಫಾರ್ಮ್ ಎಫ್ 7) ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಅರ್ಜಿಯಲ್ಲಿ ಯಾವುದೇ ಮೂಲಭೂತ ಮಾಹಿತಿ ನೀಡಿರಲಿಲ್ಲ, ಕೇವಲ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಲಾಗಿತ್ತು ಮತ್ತು ಭಾವಚಿತ್ರಗಳು ಅತ್ಯಂತ ಅಸ್ಪಷ್ಟವಾಗಿದ್ದವು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯಾದ್ಯಂತ 65 ಸಾವಿರ ಮತ ಡಿಲೀಟ್ ಹುನ್ನಾರ :

ಈ ಆತಂಕಕಾರಿ ಬೆಳವಣಿಗೆಯ ಕುರಿತು ಕೆಪಿಸಿಸಿ ಮುಖಂಡ ಬಿ.ಕೆ. ಹರಿಪ್ರಸಾದ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 65,000 ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲು ಅಕ್ರಮ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದರ ಪ್ರತಿಗಳು ನನ್ನ ಬಳಿ ಇವೆ. ಹುಬ್ಬಳ್ಳಿ-ಧಾರವಾಡದಲ್ಲೂ ಇಂತಹ ಯತ್ನಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳು ಯಾರೊಬ್ಬರೂ ನೂರಾರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಅಂತಹ ಅರ್ಜಿಗಳನ್ನು ಸ್ವೀಕರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ, ವಾಸ್ತವದಲ್ಲಿ ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಿಸ್ಟಮ್ ನಲ್ಲಿ ಅಪ್ಲೋಡ್ ಆಗಿರುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

 

ವಿಜಯಪುರ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಪ್ರಜಾಪ್ರಭುತ್ವ ವಿರೋಧಿಯಾಗಿ ಡಿಲೀಟ್ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಬಬಲೇಶ್ವರ ಮತ್ತು ವಿಜಯಪುರ ನಗರ ಕ್ಷೇತ್ರಗಳಲ್ಲಿ ಸುಳ್ಳು ಫಾರ್ಮ್-7 ಅರ್ಜಿಗಳನ್ನು ಬಳಸಿ ಸಾವಿರಾರು ಮುಸ್ಲಿಂ ಮತದಾರರ ಹೆಸರನ್ನು ಪಟ್ಟಿಯಿಂದ ತೆರವುಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ತಕ್ಷಣವೇ ಕ್ರಿಮಿನಲ್ ಪ್ರಕರಣ (ಎಫ್‌ಐಆರ್) ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಮುದಾಯದ ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕನ್ನು ರಕ್ಷಿಸಲು ನಾವು ಬೃಹತ್ ಹೋರಾಟ ರೂಪಿಸಲಿದ್ದೇವೆ.

-ಅಬ್ದುಲ್ ಹಮೀದ್ ಮುಶ್ರೀಫ್, ಕೆಪಿಸಿಸಿ ಸದಸ್ಯ, ವಿಜಯಪುರ.

ದೇಶದ ವಿವಿಧೆಡೆ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ಕೈ ಬಿಡುತ್ತಿರುವುದು ವರದಿಯಾಗುತ್ತಲೇ ಇದೆ. ಇದೀಗ ನನ್ನ ಸ್ವಕ್ಷೇತ್ರ ಬಬಲೇಶ್ವರದಲ್ಲೂ ಇಂತಹ ಗಂಭೀರ ಕೃತ್ಯ ಬೆಳವಣಿಗೆ ಬೆಳಕಿಗೆ ಬಂದಿದೆ. ಕೇವಲ 7 ವ್ಯಕ್ತಿಗಳಿಂದ 1,564 ಅರ್ಜಿಗಳು ಸಲ್ಲಿಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಷ್ಟೊಂದು ಅರ್ಜಿಗಳನ್ನು ಸಲ್ಲಿಸಿರುವ ಹಿನ್ನೆಲೆ ಹಾಗೂ ಅವುಗಳನ್ನು ಸ್ವೀಕರಿಸಿ ಅಪ್ಲೋಡ್ ಮಾಡಿರುವ ಪ್ರಕ್ರಿಯೆಯ ಕುರಿತು ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಕ್ರಮ ಸಾಬೀತಾದರೆ, ಭಾಗಿಯಾ ದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

-ಎಂ.ಬಿ. ಪಾಟೀಲ. ಬೃಹತ್ ಕೈಗಾರಿಕಾ ಸಚಿವರು. ಬಬಲೇಶ್ವರ ಮತಕ್ಷೇತ್ರ.

ಯಾರೋ ಅರ್ಜಿ ಕೊಟ್ಟರು ಎಂದ ತಕ್ಷಣ ಪರಿಶೀಲಿಸದೇ ಹೆಸರುಗಳನ್ನು ತೆಗೆದುಹಾಕಲು ಬರುವುದಿಲ್ಲ. ಆಟೋಮ್ಯಾಟಿಕ್ ಆಗಿ ಹೆಸರು ತೆಗೆಯಲು ನಿಯಮಗಳಲ್ಲಿ ಎಂದಿಗೂ ಅವಕಾಶವಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರೇ ತಮ್ಮ ಅರ್ಜಿಗಳನ್ನು ವಾಪಸ್ ಪಡೆದುಕೊಂಡಿರುವುದರಿಂದ ಮುಂದಿನ ಪ್ರಕ್ರಿಯೆಗಳು ಉದ್ಭವಿಸುವುದಿಲ್ಲ. ಆಕ್ಷೇಪಣೆ ಸಲ್ಲಿಸುವವರಿಗೂ ಜವಾಬ್ದಾರಿ ಇರುತ್ತದೆ; ಹೆಸರು ತೆಗೆಯಲು ಇಆರ್‌ಒ ಅವರಿಗೆ ಸುಳ್ಳು ದಾಖಲೆ ಅಟ್ಯಾಚ್ ಮಾಡಿ ತಪ್ಪು ಮಾಹಿತಿ ನೀಡಿದ್ದರೆ, ಅವರ ವಿರುದ್ಧ ಕಾನೂನು ಪ್ರಕಾರ ಆಕ್ಷನ್ ತೆಗೆದುಕೊಳ್ಳಲು ಅವಕಾಶವಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅರ್ಜಿದಾರರು ತಾವಾಗಿಯೇ ಅರ್ಜಿ ಹಿಂಪಡೆದಿದ್ದಾರೆ.

-ಡಾ. ಆನಂದ್ ಕೆ. ಜಿಲ್ಲಾ ಚುನಾವಣಾಧಿಕಾರಿ, ಡಿಸಿ, ವಿಜಯಪುರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor