ಬೆಂಗಳೂರು, ಸೆ.26: ಬೆಳ್ತಂಗಡಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಸ್ವಾಭಾವಿಕ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಒಟ್ಟು 73 ದೂರು ಅರ್ಜಿಗಳನ್ನು ಸ್ವೀಕರಿಸಿದೆ. ಈ ಬಗ್ಗೆ ಎಲ್ಲಾ ಆಯಾಮಗಳಲ್ಲೂ ಸಮಗ್ರವಾಗಿ ವಿಚಾರಣೆ ಮಾಡಲಾಗುತ್ತಿದೆ ಎಂದಿರುವ ವಿಶೇಷ ತನಿಖಾ ತಂಡವು 2002, 2003, 2009 ಮತ್ತು 2010ರಂದು ದಾಖಲಾಗಿರುವ ಪ್ರಕರಣಗಳ ಕುರಿತಾದ ತನಿಖೆಯ ಮಾಹಿತಿಯನ್ನಷ್ಟೇ ರಾಜ್ಯ ಮಹಿಳಾ ಆಯೋಗದೊಂದಿಗೆ ಹಂಚಿಕೊಂಡಿದೆ.

ಆಯೋಗದೊಂದಿಗೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ನಾಲ್ಕು ಪ್ರಕರಣಗಳು ಕಾನೂನು ಪ್ರಕ್ರಿಯೆಗೆ ಒಳಪಟ್ಟಿದೆ. ಪ್ರಕರಣವೊಂದರಲ್ಲಿ ಮೃತರ ವಾರಸುದಾರರು ಪತ್ತೆಯಾಗಿಲ್ಲ. ಇನ್ನೊಂದು ಪ್ರಕರಣದಲ್ಲಿ ಶವದ ಪರೀಕ್ಷೆಯ ವರದಿಯು ದಾಖಲೆಗಳಲ್ಲಿ ಲಭ್ಯವಿಲ್ಲ. ಯುಡಿಆರ್ ನೋಂದಣಿಯಲ್ಲಿರುವ ಶವ ಸಂಸ್ಕಾರದ ವಿವರಗಳ ದಾಖಲೆಯಲ್ಲಿನ ಅಂಕಿ ಅಂಶಕ್ಕೂ ಪಂಚಾಯ್ತಿಯು ನಿರ್ವಹಿಸುವ ಶವ ಸಂಸ್ಕಾರ ದಾಖಲೆಗಳ ಅಂಕಿ ಅಂಶದ ಮಧ್ಯೆ ವ್ಯತ್ಯಾಸ ಕಂಡುಬಂದಿದೆ ಎಂದು ಆಯೋಗಕ್ಕೆ ಮಾಹಿತಿ ಒದಗಿಸಿದೆ.

ಅಲ್ಲದೇ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಕೋರಿರುವಂತೆ ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡವು ತನಿಖೆ ನಡೆಸುವ ಸಂಬಂಧ ಸರಕಾರವು ಆದೇಶ ಹೊರಡಿಸಬೇಕಿದೆ. ಅಲ್ಲದೇ ಈ ಪ್ರಕರಣಗಳನ್ನು ಡಿಜಿ ಮತ್ತು ಐಜಿಪಿ ಅವರು ಈ ವಿಶೇಷ ತನಿಖಾ ತಂಡಕ್ಕೆ ಪ್ರಕರಣಗಳನ್ನು ವರ್ಗಾಯಿಸಬೇಕಿದೆ. ಆ ನಂತರ ತನಿಖೆ ನಡೆಸುವ ಸಂಬಂಧ ಸೂಕ್ತ ಆದೇಶ ಹೊರಡಿಸಿದ್ದಲ್ಲಿ ಮಾತ್ರ ವಿಶೇಷ ತನಿಖಾ ತಂಡವು ತನಿಖೆ ನಡೆಸಲಿದೆ ಎಂದು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ತಿಳಿಸಿದ್ದಾರೆ.

ಯಾವುದೇ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ತನಿಖೆ, ವಿಚಾರಣೆ ಮಾಡಲು ವಿಶೇಷ ತನಿಖಾ ತಂಡಕ್ಕೆ ಅಧಿಕಾರ ಇಲ್ಲ. ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡವು ತನಿಖೆ ಮಾಡಬೇಕಾದಲ್ಲಿ ಡಿಜಿ ಮತ್ತು ಐಜಿಪಿ ಅವರು ವರ್ಗಾಯಿಸಬೇಕು. ತನಿಖೆಗೆ ಆದೇಶಿಸಿದರೆ ಆ ಪ್ರಕರಣಗಳ ತನಿಖೆಯನ್ನೂ ಕೈಗೊಳ್ಳಬಹುದು ಎಂದು ಆಯೋಗದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ತನಿಖಾ ತಂಡವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ವರದಿಯನ್ನೇ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ವರದಿಯನ್ನು 2026ರ ಆಗಸ್ಟ್ 31ರಂದು ಸಲ್ಲಿಸಿದೆ. ಈ ವರದಿಯನ್ನು ಅಶ್ವಿನ್ ಕುಮಾರ್ ಎಂಬುವರು ಮಾಹಿತಿ ಹಕ್ಕಿನ ಅಡಿಯಲ್ಲಿ ಪಡೆದುಕೊಂಡಿದ್ದಾರೆ. ಇದರ ಪ್ರತಿಯು ‘the-file.in‘ಗೆ ಲಭ್ಯವಾಗಿದೆ.

ವಿಶೇಷ ತನಿಖಾ ತಂಡವು ನೀಡಿದ್ದ ಈ ಮಾಹಿತಿ ಮತ್ತು ವರದಿ ಆಧರಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಯಾವುದೇ ಸಭೆಯನ್ನೂ ನಡೆಸಿಲ್ಲ. ಧರ್ಮಸ್ಥಳದಲ್ಲಿ ವರದಿಯಾಗಿದ್ದ 30 ಅಸಹಜ ಸಾವು (ಯುಡಿಆರ್) ಪ್ರಕರಣಗಳ ವ್ಯತ್ಯಾಸ ಹಾಗೂ ಬೆಳ್ತಂಗಡಿ ಯುಡಿಆರ್ ಸಂ.69/2003ರ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ನಿಖರ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ವಿಶೇಷ ತನಿಖಾ ತಂಡವು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.

ವಿಶೇಷ ತನಿಖಾ ತಂಡವು ಈವರೆಗೆ ನಡೆದಿರುವ ತನಿಖೆ ಮತ್ತು ತನಿಖೆಯಲ್ಲಿ ಕಂಡುಬಂದಿರುವ ಅಂಶಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದೆ. ಸಲ್ಲಿಸಿದ್ದ ತನಿಖಾ ವರದಿಯಲ್ಲಿನ ಪ್ರಮುಖ ಅಂಶಗಳು ಚರ್ಚೆಗೆ ಗ್ರಾಸವಾಗಿವೆ.

ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ (ಮೊ.ಸಂ. 39/2025) ವಿಶೇಷ ತನಿಖಾ ತಂಡವು ಇದುವರೆಗೆ ಕೈಗೊಂಡಿರುವ ವಿಚಾರಣೆ ಹಾಗೂ ತನಿಖಾ ಪ್ರಗತಿಯ ಸಮಗ್ರ ವರದಿಯನ್ನು ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಮೂಲಕ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಎಸ್‌ಐಟಿಯ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ತಿಳಿಸಿರುವುದು ಗೊತ್ತಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಸರದಲ್ಲಿ ಶೋಧನೆ ಮಾಡಲಾಗಿದೆ. ಆ ಸಮಯದಲ್ಲಿ ಪರಿಸರದಲ್ಲಿ 7 ತಲೆ ಬುರುಡೆ ಮತ್ತು ಮಾನವನ ಶರೀರದ ಅಸ್ಥಿಪಂಜರ ಸಿಕ್ಕಿದೆ. ಇವುಗಳನ್ನು ತಜ್ಞರ ಅಭಿಪ್ರಾಯಕ್ಕಾಗಿ ಕಳಿಸಲಾಗಿದೆ. ಮಾನವನ ದೇಹಕ್ಕೆ ಸಂಬಂಧಿಸಿದ ಅಸ್ಥಿ ಪಂಜರಗಳು ಹಾಗೂ ತಲೆಬುರುಡೆಗಳು ಪುರುಷನದೇ ಅಥವಾ ಮಹಿಳೆಯದೇ ಹಾಗೂ ಅವುಗಳ ಮರಣದ ಕಾರಣ, ಇತ್ಯಾದಿಗಳ ಸ್ಪಷ್ಟ ಅಭಿಪ್ರಾಯ ಕೋರಲಾಗಿದೆ. ಈ ಮೃತ ದೇಹಗಳ ಅಸ್ಥಿ ಪಂಜರ ಮತ್ತು ತಲೆಬುರುಡೆಗಳ ಗುರುತು ಪತ್ತೆ ಹಚ್ಚುವ ಸಲುವಾಗಿ ಸ್ಥಳದಲ್ಲಿ ಸಿಕ್ಕ ಲಭ್ಯ ಸಾಕ್ಷ್ಯಾಧಾರಗಳ ಮೇಲೆ ಅವರ ರಕ್ತ ಸಂಬಂಧಿಕರನ್ನು ಪತ್ತೆ ಹಚ್ಚಿ ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ ಎಂದು ಮೊಹಂತಿ ಅವರು ಆಯೋಗಕ್ಕೆ ವಿವರಿಸಿರುವುದು ಗೊತ್ತಾಗಿದೆ. ಮೊಹಂತಿ ಅವರು ನೀಡಿದ್ದ ಈ ಮಾಹಿತಿಯನ್ನಾಧರಿಸಿ ನಾಗಲಕ್ಷ್ಮೀ ಚೌಧುರಿ ಅವರು ಈಗಾಗಲೇ ಡಾ.ಶಾಲಿನಿ ರಜನೀಶ್‌ಗೆ ಪತ್ರ ಬರೆದಿದ್ದಾರೆ. ಪತ್ತೆಯಾಗಿರುವ 7 ಮಾನವ ಅಸ್ತಿ ಪಂಜರಗಳ ಡಿಎನ್‌ಎ ಹಾಗೂ ವಿಧಿವಿಜ್ಞಾನ ವರದಿಗಳನ್ನು ಶೀಘ್ರವಾಗಿ ಪಡೆದು ಮೃತರ ಗುರುತು ಪತ್ತೆ ಹಚ್ಚಬೇಕು. ಎಲ್ಲ ಪ್ರಕರಣಗಳು/ವಿಷಯಗಳನ್ನು ಪೊಲೀಸ್ ಮಹಾನಿರ್ದೇಶಕರ ಮುಖಾಂತರ ಈಗಾಗಲೇ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿ, ಅಗತ್ಯವಿದ್ದಲ್ಲಿ ಎಸ್‌ಐಟಿ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿ ಸರಕಾರಿ ಆದೇಶ ಹೊರಡಿಸಿ ಎಂದು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ.ಮಹಾಂತೇಶ್,

contributor