ಕುಡ್ಲದವನು ಕಂಡ ಚೀನಾದೇಶ
ಗೋದಾಮಿನಲ್ಲಿ ಅಡಗಿರುವ ಸತ್ಯಗಳೆಲ್ಲಾ ಶೋ ಕೇಸ್ ನಲ್ಲಿ ಕಾಣಿಸುವಷ್ಟು ಸುಂದರವಾಗಿರುವುದಿಲ್ಲ. ಅದನ್ನೆಲ್ಲ ತಿಳಿಯಲು, ಅಳೆಯಲು ಬಹಳ ದೀರ್ಘ ಅವಧಿ ಬೇಕಾಗುತ್ತದೆ. ಬಹಳಷ್ಟು ಪ್ರಯಾಣಿಸಬೇಕಾಗುತ್ತದೆ. ಸಾವಿರಾರು ಮಂದಿಯನ್ನು, ಸಂಸ್ಥೆಗಳನ್ನು ಭೇಟಿಯಾಗಬೇಕಾಗುತ್ತದೆ. ಸಾಮಾನ್ಯರೊಡನೆ ಮಾತ್ರವಲ್ಲ ತಜ್ಞರೊಡನೆ ಸವಿಸ್ತಾರವಾಗಿ ಮಾತನಾಡ ಬೇಕಾಗುತ್ತದೆ. ಇತಿಹಾಸ, ಸಂಸ್ಕೃತಿ, ಭಾಷೆ, ಆರ್ಥಿಕತೆ, ಆಡಳಿತ, ವೈಚಾರಿಕ ಪೈಪೋಟಿಗಳು ಇತ್ಯಾದಿ ಅನೇಕ ವಿಷಯಗಳ ಕುರಿತಾದ ಸಂಶೋಧನಾ ಗ್ರಂಥಗಳ ಅಧ್ಯಯನ ನಡೆಸಬೇಕಾಗುತ್ತದೆ. ಇದಾವುದನ್ನೂ ಮಾಡದೆ ಕೇವಲ ಮೇಲ್ಪದರದಲ್ಲಿ ನನ್ನ ಗಮನ ಸೆಳೆದ ಕೆಲವು ಅಂಶಗಳನ್ನು ಮಾತ್ರ ಹಂಚಿಕೊಂಡಿದ್ದೇನೆ.
ಗಾತ್ರದಲ್ಲಿ ನಮ್ಮ ಭಾರತ ದೇಶಕ್ಕಿಂತ ಸುಮಾರು ಮೂರು ಪಾಲು ದೊಡ್ಡದು, ನಮ್ಮ ನೆರೆಯ ಚೀನಾ ದೇಶ.
ಇತ್ತೀಚೆಗೆ, ಚೀನಾ ದೇಶಕ್ಕೆ ಹೋಗಿದ್ದೆ. ಅಷ್ಟೊಂದು ದೊಡ್ಡ ದೇಶದ ಬಗ್ಗೆ ಕೇವಲ ಒಂದು ವಾರದಲ್ಲಿ ಎಷ್ಟು ತಾನೇ ಕಲಿಯಲು ಸಾಧ್ಯ? ಇತಿಮಿತಿಗಳ ಪ್ರಜ್ಞೆಯೊಂದಿಗೆ ಕೆಲವು ಸೀಮಿತ ಅನುಭವಗಳು ಇಲ್ಲಿವೆ:
ಅಲ್ಲಿಯ ನೆಲವನ್ನು ಪ್ರವೇಶಿಸಿದೊಡನೆ ಮೊದಲ ಹಂತದಲ್ಲೇ ಹಲವು ಜಟಿಲ ಸಮಸ್ಯೆಗಳು ಎದುರಾದವು. ಉದಾ:
ಹಲವು ಭಾಷೆಗಳ ಪರಿಚಯ ಉಳ್ಳವರು ಕೂಡಾ ಚೀನಾದಲ್ಲಿ ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಂಡು ಬೆಪ್ಪು ತಕ್ಕಡಿಯಾಗಿರಬೇಕಾಗುತ್ತದೆ. ಅಲ್ಲಿ ಹೊರಗಿನ ಯಾವ ಭಾಷೆಯೂ ನಡೆಯುವುದಿಲ್ಲ. ಸರಿ,
ಇಂಗ್ಲಿಷ್ ಭಾಷೆಗೆ ಶರಣಾಗೋಣ ಅಂದರೆ ಅಲ್ಲಿ ಅದಕ್ಕೂ ಗ್ರಾಹಕರಿಲ್ಲ. ನೀವು ಯಾವ ಭಾಷೆ ಮಾತನಾಡಿದರೂ ಅಲ್ಲಿನವರು ಸ್ವಲ್ಪವೂ ಬೇಸರಿಸದೆ ತಮ್ಮದೇ ಭಾಷೆ ಮಾತನಾಡುತ್ತಾರೆ. ಅಪರೂಪಕ್ಕೆ ಒಬ್ಬಿಬ್ಬರು
ಇಂಗ್ಲಿಷ್ ಭಾಷೆ ಬಲ್ಲವರು ಸಿಕ್ಕರೂ ಅವರಲ್ಲಿ ಹಲವರ ಧಾಟಿ ನಮಗೆ ಅಪರಿಚಿತವಾಗಿರುತ್ತದೆ. ಟಿಕೆಟ್ ಗಳಲ್ಲಿ ಅಥವಾ ಬೋರ್ಡ್ ಗಳಲ್ಲಿ ಕೂಡಾ ಅಸ್ತವ್ಯಸ್ತವಾಗಿರುವ ಜೇಡರ ಬಲೆಯಂತೆ ಕಾಣುವ ಸ್ಥಳೀಯ ಲಿಪಿಯದ್ದೇ ವೈಭವ ಕಾಣಿಸುತ್ತದೆ. ಅಪರೂಪಕ್ಕೆ ಎಲ್ಲಾದರೂ ಇಂಗ್ಲಿಷ್ ಅಕ್ಷರಗಳು ಕಾಣಸಿಕ್ಕರೆ ನೀವು ಭಾಗ್ಯವಂತರು. ಅವರು ಮಾತನಾಡುವಾಗ ಚಾ, ಪಾ, ತಾ, ಟಾ, ಷಾ, ಮಾ, ಮತ್ತು ಕೆಲವು ಅನುನಾಸಿಕ ವ್ಯಂಜನಗಳು ಮಾತ್ರ ಪರಿಚಿತವೆಂಬಂತೆ ಕೇಳಿಸುತ್ತವೆ. ಆದರೆ ಅರ್ಥವಾಗುವುದಿಲ್ಲ. ಮೂಗನ್ನು ಗಟ್ಟಿಯಾಗಿ ಮುಚ್ಚಿಕೊಂಡರೆ ಮಾತ್ರ ಅವರಂತೆ ಕೆಲವು ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ. ನಿಮ್ಮ ಭಾಷೆ ಮತ್ತು ಸ್ಥಳೀಯ ಭಾಷೆ ಗೊತ್ತಿರುವ ಯಾರಾದರೂ ನಿಮ್ಮ ಜೊತೆ ಇರದಿದ್ದರೆ ನಿಮಗೆ, ಏಕಕಾಲದಲ್ಲಿ ಕಿವುಡರೂ ಮೂಗರೂ ಆಗಿರುವ ಮಂದಿಯ ಪಾಡು ಹೇಗಿರುತ್ತದೆಂಬುದರ ಅನುಭವ ಪ್ರಾಪ್ತವಾಗುತ್ತದೆ.
ಇಲ್ಲಿ ಕೆಲವು ಸ್ಥಳೀಯರು ಜೊತೆ ಸೇರಿ ಪರಸ್ಪರ ಮಾತನಾಡತೊಡಗಿದರೆ ಮೊದಲು ತೊದಲಾಟದಂತೆ ಮತ್ತು ಕ್ರಮೇಣ ಒದರಾಟದಂತೆ ಕೇಳಿಸುವ ಅವರ ಸಂಭಾಷಣೆಯು ಬಹುಬೇಗನೆ ಚೀರಾಟವಾಗಿ ಕೇಳಿಸತೊಡಗುತ್ತದೆ. ಅವರು ಜಗಳಾಡುತ್ತಿರುವುದು ಯಾತಕ್ಕೆ? ಎಂದು ಕೇಳಿದರೆ, ಅದು ಜಗಳವಲ್ಲ, ಅದು ಅವರ ಆತ್ಮೀಯ ಸಂಭಾಷಣೆಯ ವರಸೆ ಎಂಬ ಮಾಹಿತಿ ಸಿಗುತ್ತದೆ. ಅವರು ಸ್ವಲ್ಪ ಅಮಲಿನಲ್ಲಿದ್ದರಂತೂ ಅವರ ಸಂಭಾಷಣೆಯ ಧ್ವನಿ ಮತ್ತಷ್ಟು ತಾರಕಕ್ಕೇರಿರುತ್ತದೆ.
ಚೀನಾದ ನಗರಗಳ ಹೆಸರುಗಳು ಕೂಡಾ ಹೊಸಬರ ಪಾಲಿಗೆ ವಿಚಿತ್ರವಾಗಿರುತ್ತವೆ. ಎಲ್ಲ ಹೆಸರುಗಳು ನಿಗೂಢವೆನಿಸುತ್ತವೆ. ಉದಾ: ಚ್ವಾಂಗ್ ಕ್ವಿನ್ಗ್, ಟಿಯಾಂಜಿನ್, ವೂಹಾನ್, ಯೀವು, ಕ್ಸಿಯಾನ್, ಹೈಲಿನ್, ಹೈಲುನ್, ಹೀಹೆ, ಮೋಹೇ, ನೀಹೆ, ಸುಯಿಹುವಾ, ಯಿಹುನ್.... ಇತ್ಯಾದಿ. ಕೆಲವು ಹೆಸರುಗಳು ಹಲವುಗೊಂದಲಗಳಿಗೆ ಕಾರಣವಾಗುತ್ತವೆ. ಉದಾ: ಹ್ಯಾಂಗ್ ಜ್ಹೌ (ಊಚಿಟಿgzhou) ಮತ್ತು ಗ್ವಾಂಗ್ ಜ್ಹೌ (ಉuಚಿಟಿgzhou) - ಈ ಎರಡು ಹೆಸರುಗಳು ಬಹುತೇಕ ಒಂದೇ ಥರ ಕೇಳಿಸುತ್ತವೆ. ಆದರೆ ಆ ಎರಡು ನಗರಗಳ ನಡುವೆ ಒಂದು ಸಾವಿರ ಕಿ.ಮೀ. ಗಿಂತ ಹೆಚ್ಚು ಅಂತರವಿದೆ. ಬರಹದ ಬದಲು ಉಚ್ಚಾರವನ್ನು ನಂಬಿದರೆ ಪಣಂಬೂರು ತಲುಪುವ ಸಾಧ್ಯತೆ ಇದೆ.
ಚೀನಾದಲ್ಲಿ ನಿಮಗೆ ಅತ್ಯಂತ ಕಠಿಣ ಸವಾಲು ಎದುರಾಗುವುದು ಅಲ್ಲಿನ ಶೌಚಾಲಯಗಳಲ್ಲಿ. ನೀವಲ್ಲಿ ನಂಬರ್ 1 ಕ್ಕೆ ಹೋಗಿ ಅಥವಾ ನಂಬರ್ 2 ಕ್ಕೆ ಹೋಗಿ. ಅಲ್ಲಿನ ಶೌಚಾಲಯಗಳಲ್ಲಿ ಫ್ಲಶಿಂಗ್ ಬಿಟ್ಟರೆ ಬೇರಾವುದಕ್ಕೂ ನೀರು ಲಭ್ಯವಿಲ್ಲ. ಎಲ್ಲದಕ್ಕೂ ಕಾಗದವೇ ಗತಿ. ನಂಬರ್ 1 ಕ್ಕೆ ಹೋಗುವವರು ಹೊರಗಿನಿಂದ ಸಣ್ಣ ಬಾಟಲಿ ಅಥವಾ ಲೋಟದಲ್ಲಿ ನೀರು ಸಾಗಿಸಬಹುದು. ನಂಬರ್ 2ಕ್ಕೆ ನಮಗೆ ಬೇಕಾಗುವ ಬಕೆಟ್ ಗಟ್ಟಲೆ ನೀರನ್ನು ಹೊರಗಿನಿಂದ ಒಳಕ್ಕೆ ಸಾಗಿಸುವುದು ಹೇಗೆ? ಅಲ್ಲಿ ಆ ಗಾತ್ರದ ದೊಡ್ಡ ಬಕೆಟ್ ಶೌಚಾಲಯದ ಆಸುಪಾಸಿನಲ್ಲಂತೂ ಸಿಗುವುದಿಲ್ಲ. ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ವಿರಾಮವಿತ್ತು. ಅಲ್ಲಿ ಹಲವು ಶೌಚಾಲಯಗಳನ್ನು ಖುದ್ದಾಗಿ ಪರಿಶೀಲಿಸಿ, ನಿಲ್ದಾಣದುದ್ದಕ್ಕೂ ಸಾಕಷ್ಟು ಓಡಾಡಿ ಸಮೀಕ್ಷೆ, ಸಂಶೋಧನೆ ಇತ್ಯಾದಿ ನಡೆಸಿದ ಬಳಿಕವೂ ನೀರಿರುವ ಶೌಚಾಲಯ ಕಾಣಲು ಸಿಕ್ಕಿರಲಿಲ್ಲ. ನಿಮಗೆ ದೀರ್ಘ ಸಂಯಮದ ಮಹಿಮೆ ಅರಿಯಬೇಕಿದ್ದರೆ, ಈರೀತಿ ನಿರಾಶರಾಗಿ ಗಂಟೆಗಟ್ಟಲೆ ಸಂಯಮ ಪಾಲಿಸಿದವರೊಡನೆ ಕೇಳಿ ನೋಡಬೇಕು. ಚೀನಾದಲ್ಲಿ ಸಂಪ್ರದಾಯಸ್ಥ ಭಾರತೀಯರ ಅಥವಾ ಯಾವುದಾದರೂ ದೇಶದ ಮುಸ್ಲಿಮರ ಹೋಟೆಲ್ ಅಥವಾ ಮನೆಗಳ ಪರಿಚಯವಿದ್ದವರು ಮಾತ್ರ ಈ ಹಿಂಸೆಯಿಂದ ಹೇಗೂ ಬಚಾವಾಗುತ್ತಾರೆ. ಅವರ ಹೋಟೆಲು ಮತ್ತು ನಿವಾಸಗಳಲ್ಲಿ ನೀರು ಲಭ್ಯವಿರುವ ಶೌಚಾಲಯಗಳಿರುತ್ತವೆ.
ನಿತ್ಯದ ಬಹುತೇಕ ಎಲ್ಲ ವ್ಯವಹಾರಗಳೂ ಚೀನಾದಲ್ಲಿ ಯಾಂತ್ರೀಕೃತವಾಗಿವೆ. ನಮ್ಮ ಜೆನ್ ಝೀ ಯವರು ಅಲ್ಲಿಗೆ ಹೋದರೆ ಬೇಗನೆ ಎಲ್ಲದಕ್ಕೂ ಸುಲಭವಾಗಿ ಒಗ್ಗಿಕೊಳ್ಳಬಹುದು. ಆದರೆ ಅವರ ಅಪ್ಪಅಮ್ಮಂದಿರು ಮಾತ್ರ ಅಲ್ಲಿ ಬಹಳಷ್ಟು ಪಾಡು ಪಡಬೇಕಾಗುತ್ತದೆ. ಕರೆನ್ಸಿ ನೋಟುಗಳಿಗೆ ಅಲ್ಲಿ ದೊಡ್ಡ ಪಾತ್ರವೇನೂ ಇಲ್ಲ. ಕ್ರೆಡಿಟ್ ಕಾರ್ಡ್ ಗಳ ಬಳಕೆ ಕೂಡಾ ಅಪರೂಪ. ಹೆಚ್ಚಿ ನೆಲ್ಲಾ ಪಾವತಿಗಳು ಮೊಬೈಲ್ ಕ್ಯೂ ಆರ್ ಕೋಡ್ ಮೂಲಕವೇ ನಡೆಯುತ್ತವೆ. ಟ್ಯಾಕ್ಸಿಗಳಲ್ಲಿ ಹಾಗೂ ಮಾಲ್ ಗಳಲ್ಲೆಲ್ಲಾ ‘ಅಲೀ ಪೇ’ ಅಥವಾ ‘ವೀ ಚಾಟ್ ಪೇ’ ಎಂಬ ಮೊಬೈಲ್ ಡಿಜಿಟಲ್ ವಾಲ್ಲೆಟ್‌ಗಳದ್ದೇ ಪಾರಮ್ಯ. ಅಲ್ಲಿಯ ಕರೆನ್ಸಿ ‘ಯುವಾನ್’. ಒಂದು ಯುವಾನ್ ಭಾರತದ ಕನಿಷ್ಠ 14 ರೂಪಾಯಿಗೆ ಸಮಾನವಾಗಿರುತ್ತದೆ. ಬಜೆಟ್ ಪ್ರಜ್ಞೆ ಉಳ್ಳವರು ಯಾವುದೇ ವಸ್ತುವಿನ ಬೆಲೆ ಕೇಳಿದ ಬಳಿಕ ನಮ್ಮ ಕರೆನ್ಸಿಯಲ್ಲಿ ಆ ಮೊತ್ತ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕಬೇಕಾಗುತ್ತದೆ. ಗಣಿತದಲ್ಲಿ ಚುರುಕಾಗಿರುವವರು ಭಾಗ್ಯವಂತರು.
ಗೂಗ್ಲ್, ಫೇಸ್ ಬುಕ್, ವಾಟ್ಸ್‌ಆ್ಯಪ್, ಇನ್ಸ್ ಟಾಗ್ರಾಮ್, ಎಕ್ಸ್ ಇತ್ಯಾದಿಗಳ ಮೇಲೆ ಚೀನಾದಲ್ಲಿ ಕಟ್ಟು ನಿಟ್ಟಿನ ನಿರ್ಬಂಧವಿದೆ. ನಾವು ಭಾರತದಲ್ಲಿ ಕ್ಷಣಕ್ಷಣವೂ ಅವಲಂಬಿಸಿರುವ ಸಾಮಾಜಿಕ ಮಾಧ್ಯಮದ ಈ ನಮ್ಮ ನಿತ್ಯ ಮಿತ್ರರು ಅಲ್ಲಿ ನಮ್ಮ ಜೊತೆಗಿರುವುದಿಲ್ಲ. ಇದರ ಅರಿವಾದಾಗ ನಮಗೆ ಹಠಾತ್ತನೆ ಅನಾಥ ಹಾಗೂ ಅಸಹಾಯಕರಾದಂತೆ ಅನಿಸತೊಡಗುತ್ತದೆ. ಚೀನಾ ದೇಶದಲ್ಲಿ ಅಲ್ಲಿನ ಸರಕಾರವು ಅನುಮತಿಸಿರುವ ಮತ್ತು ಕಟ್ಟುನಿಟ್ಟಾಗಿ ತನ್ನ ತೀವ್ರ ಮೇಲ್ವಿಚಾರಣೆಗೊಳಪಡಿಸಿರುವ ವೇದಿಕೆಗಳು ಮಾತ್ರ ಲಭ್ಯ. ವಿಪಿಎನ್ ಮೂಲಕ ಕೆಲವರು ಪರಿಹಾರ ಕಂಡುಕೊಳ್ಳುತ್ತಾರಾದರೂ ಅದಕ್ಕೂ ಇತಿಮಿತಿಗಳಿವೆ. ಈ ಸನ್ನಿವೇಶದಲ್ಲಿ, ಸದ್ಯ ನಾವು ಭಾರತದಲ್ಲಿ ಅನುಭವಿಸುತ್ತಿರುವ ಸ್ವಾತಂತ್ರ್ಯದ ಮೌಲ್ಯ ಅರ್ಥವಾಗುತ್ತದೆ. ಈ ನಮ್ಮ ಸ್ವಾತಂತ್ರ್ಯಕ್ಕೆ ಎದುರಾಗಿರುವ ಬೆದರಿಕೆಗಳು ನೆನಪಾಗುತ್ತವೆ ಮತ್ತು ಅದನ್ನು ಉಳಿಸಿ, ಬೆಳೆಸುವ ಚಿಂತೆ ಕಾಡುತ್ತದೆ. ಮೋದಿ ಪಾಳಯ ಸ್ಥಾಪಿಸಬಯಸುವ ನಿಯಂತ್ರಿತ ಭಾರತ ಹೇಗಿರುತ್ತದೆ ಎಂಬುದನ್ನು ಊಹಿಸಲು ತಕ್ಕ ಮಟ್ಟಿಗೆ ಸಾಧ್ಯವಾಗುತ್ತದೆ.
ಚೀನಾದ ನಗರಗಳಲ್ಲಿ ಹುಡುಕಲು ಹೊರಟರೆ ವಿವಿಧ ಸಮುದಾಯಗಳ ಜನರಿಗೆ ಅವರವರ ಧಾರ್ಮಿಕ ಆರಾಧನಾ ಸ್ಥಳಗಳು ಸಿಗುತ್ತವೆ. ಶುಕ್ರವಾರ ನಾನು ಹೋದ ಮಸೀದಿಯಲ್ಲಿ ಮಧ್ಯಾಹ್ನ ಜುಮಾ ನಮಾಝ್‌ಗೆ ಸ್ಥಳೀಯರು ಮತ್ತು ವಿವಿಧ ವಿದೇಶಿ ಮೂಲದವರು ಸೇರಿದಂತೆ ಕನಿಷ್ಠ 4 ಸಾವಿರ ಮಂದಿ ಜಮಾಯಿಸಿದ್ದರು. ಮೊದಲು ಒಂದರ್ಧ ಗಂಟೆ ಸ್ಥಳೀಯ ಭಾಷೆಯಲ್ಲಿ ಉಪದೇಶ ನಡೆಯಿತು. ಆಬಳಿಕ ಅರಬಿ ಭಾಷೆಯಲ್ಲಿ ವಿಧ್ಯುಕ್ತ ಖುತ್ಬಾ ಅಥವಾ ಪ್ರವಚನ ನಡೆಯಿತು. ನಮಾಝ್‌ನಲ್ಲಿ ಕುರ್ ಆನ್ ಪಠಣ ತುಂಬಾ ಸುಶ್ರಾವ್ಯವಾಗಿತ್ತು.
ಇಲ್ಲಿ ಧರ್ಮ ಮತ್ತು ದೇವರುಗಳು ಬೀದಿ, ಪೇಟೆಗಳಲ್ಲಿ ಕಾಣಸಿಗುವುದು ಕಡಿಮೆ. ಶಿಸ್ತು, ಪ್ರಾಮಾಣಿಕತೆ ಮಾತ್ರ ಇಲ್ಲಿ ಬಹುತೇಕ ಎಲ್ಲ ಕಡೆ ಎದ್ದು ಕಾಣುತ್ತದೆ. ಹಲವು ಕಡೆ, ವಿಶೇಷವಾಗಿ ಬಡಾವಣೆಗಳಲ್ಲಿ ಎಷ್ಟೋ ಸಣ್ಣ ತರಕಾರಿ, ಹಣ್ಣುಹಂಪಲುಗಳ ಅಂಗಡಿಗಳಲ್ಲಿ ಬುಟ್ಟಿಯ ಮೇಲೆ ಬೆಲೆ ಬರೆದಿರುತ್ತದೆ. ಜನರು ತಮಗೆ ಬೇಕಾದದ್ದನ್ನು ಹೆಕ್ಕಿ
ಕ್ಯೂ ಆರ್ ಕೋಡ್ ಮೂಲಕ ಪಾವತಿ ಮಾಡಿ ಹೋಗುತ್ತಾರೆ. ಈವಿಷಯ ಹಿಂದೆಯೂ ಕೇಳಿದ್ದೆ. ಆದರೆ ನಂಬಿದ್ದು ಕಣ್ಣಾರೆ ಕಂಡು ಪರಾಮರ್ಶಿಸಿದ ಬಳಿಕ ಮಾತ್ರ. ಹತ್ತು ಹದಿನೈದು ವರ್ಷಗಳಿಂದ ಅಲ್ಲಿರುವ ನಮ್ಮ ಕೆಲವು ಮಿತ್ರರ ಪ್ರಕಾರ ಅವರಿಗೆ ಉದ್ಯಮ-ವ್ಯವಹಾರಗಳಲ್ಲಿ ಸ್ಥಳೀಯರು ಮೋಸಮಾಡಿದ ಒಂದೆರಡು ಅನುಭವಗಳಿವೆ. ಆದರೆ ಯಾರಾದರೂ ಇತರರಿಗೆ ಸೇರಿದ ಸೊತ್ತನ್ನು, ಬ್ಯಾಗ್, ಪರ್ಸ್, ಮೊಬೈಲ್, ವಾಹನ ಇತ್ಯಾದಿಗಳನ್ನು ಕದ್ದು ಅಥವಾ ದೋಚಿ ಓಡಿದ ಘಟನೆಯನ್ನು ಅವರೆಂದೂ ಕಂಡಿಲ್ಲ. ಯಾರಾದರೂ ಬೆದರಿಸಿ ಅಥವಾ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ ಅನುಭವ ಉಳ್ಳವರೂ ಕಾಣಲು ಸಿಗಲಿಲ್ಲ. ಹಲವಾರು ಸ್ಥಳೀಯರು ಹಾಗೂ ಪರಿಚಿತರೊಡನೆ ಭ್ರಷ್ಟಾಚಾರದ ಬಗ್ಗೆ ವಿಚಾರಿಸಿದಾಗ ನಾವೆಂದೂ ಯಾರಿಗೂ ಲಂಚ ಕೊಟ್ಟಿಲ್ಲ ಅನ್ನುತ್ತಾರೆ. ಅವರ ಪ್ರಕಾರ ಇದಕ್ಕೆ ಕಾರಣ, ಇಲ್ಲಿ ಲಂಚ ಹಾಗೂ ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನುಗಳು. ಇಲ್ಲಿ ಬೇಹುಗಾರಿಕೆಯ ಜಾಲ ಬಲಿಷ್ಠವಾಗಿದೆ. ಹಾಗೆಯೇ ಇಲ್ಲಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸುವ ಮತ್ತು ಉಲ್ಲಂಘನೆ ನಡೆದಾಗ ಕ್ಷಿಪ್ರವಾಗಿ ವಿಚಾರಿಸಿ ಕೆಲವೇ ದಿನಗಳಲ್ಲಿ ಉಗ್ರ ದಂಡನೆ ಜಾರಿಗೊಳಿಸುವ ದಕ್ಷ ನ್ಯಾಯಾಂಗ ವ್ಯವಸ್ಥೆಯೂ ಇದೆ.
ಚೀನಾದವರಿಗೆ ತಮ್ಮ ದೇಶದ ವಿಶಾಲ ಗಾತ್ರ, ತಮ್ಮ ಆರ್ಥಿಕ ಬಲ, ಭಾಷೆ, ಇತಿಹಾಸ, ಸಂಸ್ಕೃತಿ, ನಾಗರಿಕತೆ ಇತ್ಯಾದಿಗಳ ಬಗ್ಗೆ ಬಹಳಷ್ಟು ಅಭಿಮಾನವಿದೆ. ಕೃಷಿ, ವ್ಯವಸಾಯ ಮತ್ತು ವಿಶೇಷವಾಗಿ ವಿಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮ ದೇಶ ಪಶ್ಚಿಮದ ದೇಶಗಳನ್ನು ಹಿಂದಿಕ್ಕಿರುವುದಕ್ಕೆ ಅವರ ಬಳಿ ಧಾರಾಳ ಪುರಾವೆಗಳಿವೆ. ತುಂಬಾ ಹತ್ತಿರ ಹೋಗಿ ಆತ್ಮೀಯವಾಗಿ ಮಾತನಾಡಿಸಿದರೆ ಜನಾಂಗವಾದದ ವಾಸನೆ ಕೂಡಾ ಮೂಗಿಗೆ ಬಡಿಯುತ್ತದೆ. ನಮಗೆ ಸಾಮಾನ್ಯವಾಗಿ ಚೀನಾ, ಜಪಾನ್, ಥಾಯ್ಲೆಂಡ್, ಕೊರಿಯಾ ಮುಂತಾದ ದೇಶಗಳ ಜನರೆಲ್ಲಾ ಸಮರೂಪಿಗಳಾಗಿ ಕಾಣಿಸುತ್ತಾರೆ. ಆದರೆ ಚೀನಾದವರು ಅವರನ್ನು ತಮಗೆ ಸಮಾನರೆಂದು ಅಂಗೀಕರಿಸುವುದಿಲ್ಲ. ಚೀನಾದವರೆಲ್ಲಾ ಒಂದೇ ರೂಪ ಮತ್ತು ಒಂದೇ ಗಾತ್ರದವರೆಂಬ ನಮ್ಮ ಹಳೆಯ ನಂಬಿಕೆ ಆ ದೇಶದೊಳಗೆ ಪ್ರವೇಶಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ನುಚ್ಚುನೂರಾಗಿ ಬಿಡುತ್ತದೆ. ಅಲ್ಲಿ 50 ಕ್ಕೂ ಹೆಚ್ಚು ತೀರಾ ವಿಭಿನ್ನ ಜನಾಂಗೀಯ ಹಿನ್ನೆಲೆಯ ಜನರಿದ್ದಾರೆ. ಅಂದರೆ ಬಣ್ಣ, ಕಾಯ, ಗಾತ್ರ, ಮುಖ, ಆಯಕಟ್ಟು, ಹಾವಭಾವ ಇತ್ಯಾದಿ ಎಲ್ಲ ವಿಷಯಗಳಲ್ಲಿ ವೈವಿಧ್ಯ ಎದ್ದುಕಾಣುತ್ತದೆ. ವಿವಿಧ ಜನಾಂಗಗಳ ನಡುವೆ ಯಾರು ಶ್ರೇಷ್ಠರೆಂಬ ಸ್ಪರ್ಧೆಯೂ ಇದೆ. ಅಲ್ಲಿನ ಭಾಷೆಯೂ ಒಂದಲ್ಲ. 300ಕ್ಕೂ ಮಿಕ್ಕಿದ ಭಾಷೆಗಳು ಮತ್ತು ಅವುಗಳ ಶಾಖೆಗಳು ಅಲ್ಲಿ ಸಕ್ರಿಯವಾಗಿ ಚಲಾವಣೆಯಲ್ಲಿವೆ. ಪ್ರಾಂತಕ್ಕನುಸಾರವಾಗಿ ಧಾಟಿ ಬದಲಾಗುತ್ತದೆ. ನಮಗೆ ಸಿಕ್ಕ ಸ್ಥಳೀಯರು ಭಾರತೀಯರನ್ನು ಮತ್ತು ಕೊಲ್ಲಿ ದೇಶಗಳ ಜನರನ್ನು ಆದರಿಸುತ್ತಾರೆ. ಯುರೋಪನ್ನು ತಮ್ಮ ಪ್ರತಿಸ್ಪರ್ಧಿಯಾಗಿ ಕಾಣುತ್ತಾರೆ. ಅಮೆರಿಕ ಮತ್ತು ಜಪಾನ್ ದೇಶಗಳ ಬಗ್ಗೆ ಮಾತ್ರ ಅವರಿಗೆ ಆಕ್ರೋಶ ಇರುವಂತಿದೆ.
ದೇವರು ಸದಾ ನಮ್ಮನ್ನು ನೋಡುತ್ತಿರುತ್ತಾನೆ ಎಂಬ ನಂಬಿಕೆಗಿಂತ ಹೆಚ್ಚಾಗಿ, ಗುಪ್ತ ಸಿಸಿ ಕ್ಯಾಮರಾಗಳಲ್ಲಿ ನಮ್ಮ ಚಲನವಲನಗಳೆಲ್ಲಾ ದಾಖಲಾಗುತ್ತಿವೆ ಮತ್ತು ಸರಕಾರದ ಮೊನಿಟರಿಂಗ್ ಕೇಂದ್ರಗಳಲ್ಲಿ ಅವುಗಳನ್ನೆಲ್ಲಾ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂಬ ಪ್ರಜ್ಞೆ ಇಲ್ಲಿಯ ಜನಮಾನಸದಲ್ಲಿ ಆಳವಾಗಿ ಬೇರೂರಿದೆ. ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಗಳು ಯಾವುದೇ ಕ್ಷಣ ನಮ್ಮ ವಿರುದ್ಧ ಸಾಕ್ಷಿಯಾಗಬಹುದು ಎಂಬ ಅರಿವು ಇಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಈ ಅರಿವು ಜನರನ್ನು ಹೆಚ್ಚು ಜಾಗೃತ ಹಾಗೂ ಹೊಣೆಗಾರರಾಗಿ ಮಾಡಿದೆ. ಕೆಲವೆಡೆ ನಿಜವಾಗಿ ಕ್ಯಾಮರಾ ಇಲ್ಲದಿದ್ದರೂ ಇಲ್ಲೇ ಎಲ್ಲಾದರೂ ಅದು ಅಡಗಿರಬಹುದು ಎಂಬ ಸಂಶಯವಿರುತ್ತದೆ. ವ್ಯಕ್ತಿಗಳ ಗುರುತು, ಮುಖಚಿತ್ರ, ಬೆರಳಚ್ಚು ಮತ್ತಿತರ ಮಾಹಿತಿಗಳೆಲ್ಲಾ ಕೇಂದ್ರೀಕೃತ ಡೇಟಾ ಜಾಲದಲ್ಲಿ ಒಳಗೊಂಡಿರುವುದರಿಂದ ತಪ್ಪಿತಸ್ಥರನ್ನು ಗುರುತಿಸಿ ಹಿಡಿಯುವ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ.
ನಾವು ಅಲ್ಲಿನ ಸರಕಾರ, ಆಡಳಿತ ಇತ್ಯಾದಿ ವಿಷಯಗಳ ಕುರಿತು ಮಾತನಾಡ ಬಯಸಿದರೆ, ಹೆಚ್ಚಿನವರು ಆ ಕುರಿತು ನಿರಾಸಕ್ತಿ ಪ್ರಕಟಿಸುತ್ತಾರೆ. ನಿಜವಾಗಿ ಅಲ್ಲಿ, ಎಡ ಮತ್ತು ಬಲ ಎಂಬ ಎರಡೂ ತದ್ವಿರುದ್ಧ ಪಂಥಗಳು ಬಯಸುವಂತಹ, ಪ್ರಶ್ನೆ ಕೇಳದ, ಪ್ರತಿಭಟನೆಗೆ ಇಳಿಯದ, ಮುಷ್ಕರ ನಡೆಸದ ಸಮಾಜ ನಿರ್ಮಿತವಾಗಿದೆ. ಜನತೆಗೆ ವಿಚಾರ ಸ್ವಾತಂತ್ರ್ಯವಾಗಲಿ, ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿ ಇಲ್ಲದ ಎಡ ಮತ್ತು ಬಲ ಪಂಥೀಯರ ಕನಸಿನ ಸಾಮ್ರಾಜ್ಯವನ್ನು ಇಲ್ಲಿ ಕಾಣಬಹುದು. ಇಲ್ಲಿ ಯಾರೂ ನಮ್ಮ ಮೇಲೆ ಯಾವುದೇ ವಿಚಾರಧಾರೆಯನ್ನು ಹೇರುವ ಪ್ರಯತ್ನ ಮಾಡುವುದಿಲ್ಲ ಎಂದು ಹಲವರು ನೆಮ್ಮದಿ ವ್ಯಕ್ತಪಡಿಸುತ್ತಾರೆ. ಕಾನೂನು ಪಾಲಿಸುತ್ತಾ ಬದುಕುವವರಿಗೆ ಇಲ್ಲಿ ಯಾವ ಸಮಸ್ಯೆಯೂ ಇಲ್ಲ, ಆಹಾರ, ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ವಾಣಿಜ್ಯ ಮುಂತಾದ ಹಲವಾರು ರಂಗಗಳಲ್ಲಿ ಸ್ಥಳೀಯ ನಾಗರಿಕರಿಗೆ ಸರಕಾರದ ಕಡೆಯಿಂದ ಅನೇಕ ಉದಾರ ಸವಲತ್ತುಗಳು, ರಿಯಾಯಿತಿಗಳು ಮತ್ತು ಕಲ್ಯಾಣ ಯೋಜನೆಗಳಿವೆ. ಸಾರಿಗೆ, ಸಂವಹನ ಮತ್ತಿತರ ಸಾರ್ವಜನಿಕ ಸವಲತ್ತುಗಳು ಉತ್ತಮ ಮಟ್ಟದಲ್ಲಿವೆ ಎಂದು ಹಲವರು ಅಭಿಮಾನದಿಂದ ಹೇಳುತ್ತಾರೆ. ನನಗೆ ಸಿಕ್ಕವರು ಕಮ್ಯುನಿಸ್ಟ್ ವಿಚಾರಧಾರೆಯ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಆದರೆ ಮತಾಂಧತೆ ಹಾಗೂ ಕ್ಯಾಪಿಟಲಿಸಮ್ ನಿಂದಾಗಿ ಜಗತ್ತಿನ ಇತರೆಡೆಗಳಲ್ಲಿ ಆಗಿರುವ ದುರಂತಗಳ ಬಗ್ಗೆ ಅವರಲ್ಲಿ ಜಾಗೃತಿ ಇದೆ.
ಅಲ್ಲಲ್ಲಿ ಸಾರ್ವಜನಿಕ ಸಾರಿಗೆಗೆಂದು ಸಣ್ಣಗಾತ್ರದ ಇಲೆಕ್ಟ್ರಿಕಲ್ ಸ್ಕೂಟರ್ ಗಳ ನಿಲ್ದಾಣವಿದೆ. ಅಗತ್ಯವಿದ್ದವರು ಅವುಗಳನ್ನು ಬಳಸಿ, ಕ್ಯೂ ಆರ್ ಕೋಡ್ ಮೂಲಕ ಪಾವತಿಸಿ ಬೇರೊಂದು ನಿಲ್ದಾಣದಲ್ಲಿ ಬಿಟ್ಟುಹೋಗಬಹುದು. ಈ ವ್ಯವಸ್ಥೆ ಅಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿ ಜಾರಿಯಲ್ಲಿದೆ. ಪ್ರತಿದಿನ ಸುಮಾರು 30 ಕೋಟಿ ಮಂದಿ ಅವುಗಳಿಂದ ಪ್ರಯೋಜನ ಪಡೆಯುತ್ತಾರೆ.
ಚೀನಾದಲ್ಲಿ ವಿಮಾನನಿಲ್ದಾಣಗಳ ಗೇಟುಗಳಲ್ಲಿ ಬಿಟ್ಟರೆ ಬೇರೆಲ್ಲೂ ಪೊಲೀಸರು ಕಾಣಸಿಗುವುದು ಅಪರೂಪ. ಮಫ್ತಿಯಲ್ಲಿ ಬೇಹುಗಾರರು ಬೇತಾಳಗಳಂತೆ ಅಲೆಯುತ್ತಿರುತ್ತಾರೆ ಎಂಬ ನಂಬಿಕೆ ಜನರಲ್ಲಿದೆ. ಟ್ರಾಫಿಕ್ ಸಹಿತ ಎಲ್ಲವನ್ನೂ ಕಣ್ಣಿಗೆ ಕಾಣದ ಕ್ಯಾಮರಾಗಳ ವ್ಯಾಪಕ ಜಾಲದ ಮೂಲಕವೇ ನಿಯಂತ್ರಿಸಲಾಗುತ್ತದೆ. ಸಣ್ಣ ಮಟ್ಟದ ಸಮಸ್ಯೆಯೇನಾದರೂ ತಲೆದೋರಿದರೆ, ಅಪಘಾತವಾದರೆ, ಜಗಳವಾದರೆ ಅಥವಾ ಯಾವುದಾದರೂ ಬಗೆಯಲ್ಲಿ ಕಾನೂನಿನ ಉಲ್ಲಂಘನೆ ನಡೆದರೆ ಕೆಲವೇ ಕ್ಷಣಗಳಲ್ಲಿ ಪೊಲೀಸರು ಹಾಜರಾಗುತ್ತಾರೆ ಎಂದು ಜನ ನಂಬಿರುತ್ತಾರೆ. ಆದ್ದರಿಂದ ಆರೀತಿ ಪೊಲೀಸರು ಪ್ರತ್ಯಕ್ಷರಾಗುವ ದೃಶ್ಯವನ್ನು ಕಣ್ಣಾರೆ ಕಾಣುವ ಭಾಗ್ಯ ಸಿಗಲಿಲ್ಲ. ರಸ್ತೆಗಳಲ್ಲಿ ಸಾರ್ವಜನಿಕ ಸಾರಿಗೆ ಬಸ್ಸುಗಳಿಗೆ ಪ್ರಥಮ ಪ್ರಾಶಸ್ತ್ಯವಿದೆ. ಅವುಗಳಿಗಾಗಿ ರಸ್ತೆಗಳಲ್ಲಿ ಒಂದು ಪ್ರತ್ಯೇಕ ಸಾಲಿದೆ. ಇತರರು ತಮ್ಮ ವಾಹನಗಳನ್ನು ಆ ಸಾಲಿನಲ್ಲಿ ಚಲಾಯಿಸಬಹುದು. ಆದರೆ ಹಿಂದಿನಿಂದ ಬಸ್ಸು ಬರುತ್ತಿದ್ದರೆ, ಸಾಲು ಬದಲಿಸಿ ಬಸ್ಸಿಗೆ ದಾರಿ ಬಿಟ್ಟುಕೊಡಬೇಕು. ಸರಕಾರಿ ಕ್ಯಾಮರಾಗಳು ಫೇಸ್ ರೀಡಿಂಗ್ ಮೂಲಕವೇ ಜನರನ್ನು ಗುರುತಿಸುತ್ತವೆ. ನಿಯಮಗಳ ಉಲ್ಲಂಘನೆಗಳು ದಾಖಲಾದಂತೆ ದಂಡ ಕೂಡಾ ದಾಖಲಾಗುತ್ತಿರುತ್ತದೆ. ಇಲ್ಲಿ ಎಲ್ಲವನ್ನೂ ನೇರವಾಗಿ ಸರಕಾರವೇ ನಿಯಂತ್ರಿಸುವುದಿಲ್ಲ. ಎಲ್ಲ ವಿಷಯಗಳ ಮೇಲ್ವಿಚಾರಣೆಯನ್ನು ಮಾತ್ರ ಸರಕಾರವೇ ಕಟ್ಟುನಿಟ್ಟಾಗಿ ಮಾಡುತ್ತದೆ. ರಸ್ತೆ, ಕಟ್ಟಡ, ಸೇತುವೆ ಇತ್ಯಾದಿಗಳ ಕಾಮಗಾರಿಯನ್ನು ಟೆಂಡರ್ ಮೂಲಕ ಅರ್ಹ ಕಂಪೆನಿಗಳಿಗೆ ನೀಡಲಾಗುತ್ತದೆ. ಕಾಮಗಾರಿ ಕಳಪೆ ಯಾಗಿದ್ದರೆ ಉಗ್ರ ದಂಡನೆ ಎದುರಿಸಬೇಕಾಗುತ್ತದೆ.
ಹತ್ತಾರು ಬಗೆಯ ಮಸಾಜ್ ಗಳನ್ನು ಆಫರ್ ಮಾಡುವ ಅತ್ಯಾಧುನಿಕ ವಿನ್ಯಾಸ ಹಾಗೂ ವಿಶೇಷ ಯಂತ್ರೋಪಕರಣಗಳೆಲ್ಲಾ ಇರುವ ಮಸಾಜ್ ಸೆಂಟರ್ ಗಳು ಅಲ್ಲಲ್ಲಿ ಕಾಣ ಸಿಗುತ್ತವೆ. ಬಡಾವಣೆಗಳಲ್ಲಿ ವೃದ್ಧರ ಸಾಮೂಹಿಕ ಚಟುವಟಿಕೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಕನಿಷ್ಠ 60 ವರ್ಷ ಮೀರಿದ ಹಿರಿಯ ಪುರುಷರು ಮತ್ತು ಮಹಿಳೆಯರು ತಮ್ಮದೇ ಆದ ತಂಡಗಳನ್ನು ರಚಿಸಿಕೊಂಡು ಜೊತೆಜೊತೆಯಾಗಿ ವಾಕಿಂಗ್, ಜಾಗಿಂಗ್, ಸರಳ ವ್ಯಾಯಾಮಗಳು, ಗಿಡ ಮರಗಳಿಗೆ ನೀರು ಹರಿಸುವುದು, ಗಿಡಗಳ ಗೆಲ್ಲುಗಳಿಗೆ ರೂಪಕೊಡುವುದು, ಹಣ್ಣು, ಹೂವು ಕಸ-ಕಡ್ಡಿಗಳನ್ನು ಹೆಕ್ಕುವುದು ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಿ ಲವಲವಿಕೆಯೊಂದಿಗಿರುತ್ತಾರೆ. ಬೋರ್ ಆದಾಗ ಜೊತೆಗೆ ಕೂತು ಪರಸ್ಪರರ ಕಥೆ, ಜೋಕ್ಸ್ ಇತ್ಯಾದಿ ಕೇಳುತ್ತಾರೆ. ಜೊತೆಗೂಡಿ ತಮ್ಮ ಹಳೆಯ ಸಾಂಪ್ರದಾಯಿಕ ಹಾಡುಗಳನ್ನೂ ಹಾಡುತ್ತಾರೆ.
ಅನೇಕ ಸ್ಥಳೀಯರು ಎಲ್ಲಾದರೂ ನಿಂತಿರುವಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಮಾಲ್ ಗಳಲ್ಲಿ ಅಥವಾ ಬೀದಿಗಳಲ್ಲೂ ನಡೆದಾಡುತ್ತಿರುವಾಗ ಹಠಾತ್ತನೆ ಒಂದೆರಡು ನಿಮಿಷಗಳ ಲಘು ವ್ಯಾಯಾಮ ಮಾಡುತ್ತಾರೆ. ಬೀದಿಗಳಲ್ಲಿ ಕೆಲವೆಡೆ ಭವಿಷ್ಯ ಹೇಳುವವರೂ ಕಾಣಸಿಕ್ಕಿದರು. ಜನರು ಅವರನ್ನು ಮನರಂಜನೆಯ ಭಾಗವಾಗಿ ಕಾಣುತ್ತಾರೆ. ನಮ್ಮ ಮಿತ್ರರ ಪ್ರಕಾರ ಇಲ್ಲಿಯ ಜನ ಹೊರಗಿನವರ ಜೊತೆ ಹೆಚ್ಚು ಬೆರೆಯುವುದಿಲ್ಲ. ಆದರೆ ಒಮ್ಮೆ ಸ್ನೇಹವಾದರೆ ತುಂಬಾ ಆಪ್ತರಾಗಿ ಬಿಡುತ್ತಾರೆ. ಉಡುಗೆಯ ವಿಷಯದಲ್ಲಿ ಮಾತ್ರ ಇಲ್ಲಿಯ ಜೆನ್ - ಝೀಯವರು ತುಂಬಾ ಜಿಪುಣರು. ಹುಡುಗಿಯರಂತೂ ತೀರಾ ಕನಿಷ್ಠ ಪ್ರಮಾಣ ಸಾಕು ಎಂಬ ವಿಪರೀತ ಅಲ್ಪತೃಪ್ತಿಯ ನಿಲುವಿನವರು. ತಂತ್ರಜ್ಞಾನದಲ್ಲಿ ಚೀನಾ ಪಶ್ಚಿಮವನ್ನು ಮೀರಿದ್ದರೂ, ಉಡುಗೆ ಸಹಿತ ಎಲ್ಲ ಫ್ಯಾಷನ್ ಗಳ ವಿಷಯದಲ್ಲಿ ಪಶ್ಚಿಮದವರನ್ನು ಗುರುಗಳಾಗಿ ಸ್ವೀಕರಿಸಿದಂತಿದೆ.
ಇಲ್ಲಿಯ ಪೇಟೆ, ಮಾಲ್ ಅಥವಾ ಹೊಟೇಲುಗಳಲ್ಲಿ ಜಗತ್ತಿನ ಬೇರೆ ಬೇರೆ ದೇಶಗಳ ಜನರು ಕಾಣಸಿಗುತ್ತಾರೆ. ಇರಾನ್ ಮೂಲದ ವ್ಯಾಪಾರಿಯೊಬ್ಬರು ಸಿಕ್ಕಿದ್ದರು. ಅವರು ಇರಾನ್ ಸರಕಾರವನ್ನು ಕಟುವಾಗಿ ಟೀಕಿಸುತ್ತಿದ್ದರು. ಅದೇವೇಳೆ ಅಮೆರಿಕದ ವಿರುದ್ಧ ಆಕ್ರೋಶ ಪ್ರಕಟಿಸಿದರು. ಬರ್ಮಾದಿಂದ ನಿರ್ವಸಿತರಾದ ಒಬ್ಬ ಸಂಪ್ರದಾಯಸ್ಥ ಮುಸ್ಲಿಮ್ ಮಹಿಳೆ ಮತ್ತು ಆಕೆಯ ಯುವ ಪುತ್ರ ಸಿಕ್ಕಿದರು. ತುಸು ಅನುಕೂಲಸ್ಥರಂತೆ ಕಂಡರು. ಬರ್ಮಾದ ಸ್ಥಿತಿಗತಿಗಳ ಕುರಿತು ನಾವು ಅವರನ್ನು ಮಾತನಾಡಿಸಬಯಸಿದೆವು. ಆದರೆ ಅವರು ಆಸಕ್ತಿ ತೋರಲಿಲ್ಲ.
ಚೀನಾದವರಲ್ಲಿ ಹೆಚ್ಚಿನವರು ಮಾಂಸಾಹಾರಿಗಳು. ಆದರೆ ಇಲ್ಲಿನ ಮಾಂಸಾಹಾರಿಗಳ ತಟ್ಟೆಯ ಒಂದು ದೊಡ್ಡ ಭಾಗವು ಸಸ್ಯಾಧಾರಿತ ಆಹಾರಗಳನ್ನು ಒಳಗೊಡಿರುತ್ತದೆ. ಸಸ್ಯಾಹಾರಿಗಳೂ ಇದ್ದಾರೆ. ಸಮಸ್ಯೆ ಏನೆಂದರೆ ಇವರಿಗೆ ಸಸ್ಯಾಹಾರ ಅಥವಾ ಮಾಂಸಾಹಾರ ಮತ್ತು ಮದ್ಯದ ವಿಷಯದಲ್ಲಿ ನಮ್ಮಂತಹ ಮಡಿವಂತಿಕೆ ಇಲ್ಲವಾದ್ದರಿಂದ ಯಾವಾಗ ಯಾವುದು ಯಾವುದರ ಜೊತೆ ಮಿಶ್ರವಾಗಿ ಬಿಡುತ್ತದೆಂದು ಖಚಿತವಾಗಿ ಹೇಳಲಿಕ್ಕಾಗುವುದಿಲ್ಲ. ಇಲ್ಲಿ ಹಂದಿ ಮಾಂಸವು
ಹೆಚ್ಚಿನ ಮಾಂಸಾಹಾರಿಗಳ ನೆಚ್ಚಿನ ಖಾದ್ಯವಾದ್ದರಿಂದ ಭಾರತೀಯ ಮೂಲದ ಹೆಚ್ಚಿನ ಮಾಂಸಾಹಾರಿಗಳು ಕೂಡಾ ಇವರ ಮೆನ್ಯೂಗೆ ಅಂಜುತ್ತಾರೆ. ಆಂಧ್ರದಿಂದ ಬಂದಿದ್ದ ಭಟ್ಟರೊಬ್ಬರು ಹೇಳಿದ ಪ್ರಕಾರ ಮೂರು ವಾರಗಳಿಗಾಗಿ ಚೀನಾ ದೇಶಕ್ಕೆ ಬಂದಿದ್ದ ಅವರು ಮೊದಲ ಎರಡು ಮೂರು ದಿನ ಆಹಾರ ಮತ್ತು ಶೌಚಾಲಯದ ವಿಷಯದಲ್ಲಿ ಭಾರೀ ಮಡಿವಂತಿಕೆ ಪಾಲಿಸಿ ಕೊನೆಗೆ ಸೋಲೊಪ್ಪಿ ಕಾಂಪ್ರೊಮೈಸ್ ಮಾಡಿಕೊಂಡರು. ಊರಿಗೆ ಮರಳಿದ ಬಳಿಕ ಪ್ರಾಯಶ್ಚಿತ್ತ ಮತ್ತು ಪಾಪ ಪರಿಹಾರಕ್ಕೆ ತಗಲುವ ವೆಚ್ಚದ ಬಗ್ಗೆ ಅವರು ಚಿಂತಿತರಾಗಿದ್ದರು. ಅನ್ನ, ನೂಡಲ್, ಮಾಂಸ ಸಮೇತ ಯಾವುದೇ ಆಹಾರ ಸೇವನೆಗೆ ಇಲ್ಲಿನವರು ತೆಳ್ಳಗಿನ ಪೆನ್ಸಿಲ್ ಗಾತ್ರದ ಎರಡು ಕಡ್ಡಿಗಳನ್ನು ಬಳಸುತ್ತಾರೆ. ಅದಕ್ಕೆ ಬೇಕಾಗುವ ಚಾಕಚಕ್ಯತೆಯನ್ನು ರೂಢಿಸಿಕೊಳ್ಳುವುದಕ್ಕೆ ನಮಗೆ ಒಂದೆರಡು ವಾರಗಳು ಬೇಕಾಗುತ್ತವೆ. ಅನುಭವ ಇಲ್ಲದ ಹೊರಗಿನವರು ಆರಂಭದಲ್ಲಿ ಅವುಗಳನ್ನು ಬಳಸುವ ಪ್ರಯತ್ನ ಮಾಡಿ ಬೇಗನೇ ಕೈಬಿಡುತ್ತಾರೆ.
ನಿರ್ದಿಷ್ಟ ಬಡಾವಣೆಗಳಲ್ಲಿರುವ ವಸತಿ ಸಮುಚ್ಚಯಗಳಲ್ಲಿ ಬಹುತೇಕ ಸಮರೂಪದ, 20ಕ್ಕೂ ಹೆಚ್ಚು ಅಂತಸ್ತುಗಳಿರುವ ಭಾರೀ ಎತ್ತರದ ಹಲವಾರು ಕಟ್ಟಡಗಳಿರುತ್ತವೆ. ಈ ಕಟ್ಟಡಗಳ ನಡುವೆ ಸಂದರ್ಶಕರ ವಾಹನ ನಿಲುಗಡೆಗೆ, ನಡೆದಾಡುವುದಕ್ಕೆ, ಲಘು ವ್ಯಾಯಾಮಕ್ಕೆ, ಮಕ್ಕಳ ಮನರಂಜನೆ, ಸೈಕ್ಲಿಂಗ್ ಗೆ, ಕೆಲವು ಕ್ರೀಡಾ ಚಟುವಟಿಕೆಗಳಿಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗಿಡ, ಮರ ಮತ್ತು ಹೂದೋಟಗಳಿಗೆ ಧಾರಾಳ ಸ್ಥಳ ಮೀಸಲಿರುತ್ತದೆ. ವಸತಿ ಸಮುಚ್ಚಯಗಳಲ್ಲಿ ವರ್ಷದ ಹೆಚ್ಚಿನ ಋತುಗಳಲ್ಲಿ ಹಣ್ಣುಗಳನ್ನು ಅಥವಾ ಹೂವುಗಳನ್ನು ಉತ್ಪಾದಿಸುವ ಗಿಡಮರಗಳಿಗೆ ಪ್ರಾಶಸ್ತ್ಯನೀಡಲಾಗಿದೆ. ನಾವು ಹೋದ ಸಮಯವು ವರ್ಷದ ಅತ್ಯಧಿಕ ಸೆಖೆಯ ಸಮಯವಾಗಿದ್ದರೂ, ಈ ವಸತಿಗಳ ನಡುವೆ ಪ್ರಸ್ತುತ ಮರಗಳ ನೆರಳಲ್ಲಿ ಬಹಳಷ್ಟು ಹಿತವೆನಿಸುತ್ತಿತ್ತು.
ನಾನು ಚೀನಾದಲ್ಲಿದ್ದ ಅಲ್ಪಾವಧಿಯಲ್ಲಿ ಕಂಡದ್ದೆಲ್ಲಾ ಮೇಲ್ನೋಟಕ್ಕೆ ಕಾಣುವ ದೃಶ್ಯಗಳನ್ನು ಮಾತ್ರ - ಅದರಲ್ಲೂ ಹೆಚ್ಚಿನದ್ದೆಲ್ಲಾ ನಗರ ಪ್ರದೇಶಗಳಲ್ಲಿ. ಯಾವುದೇ ಸಮಾಜವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೆ, ಅಲ್ಲಿಯ ತಳ ಮಟ್ಟದ ವಾಸ್ತವಗಳನ್ನು ಅರಿಯುವುದಕ್ಕೆ, ಮುಖವಾಡಗಳ ಹಿಂದಿರುವ ಸತ್ಯಗಳನ್ನು ಗುರುತಿಸುವುದಕ್ಕೆ, ತೆರೆಮರೆಯ ಸಂಕೀರ್ಣತೆಗಳನ್ನು ಕಾಣುವುದಕ್ಕೆ ಬಹಳಷ್ಟು ಪಾಡುಪಡಬೇಕಾಗುತ್ತದೆ. ಗೋದಾಮಿನಲ್ಲಿ ಅಡಗಿರುವ ಸತ್ಯಗಳೆಲ್ಲಾ ಶೋ ಕೇಸ್ ನಲ್ಲಿ ಕಾಣಿಸುವಷ್ಟು ಸುಂದರವಾಗಿರುವುದಿಲ್ಲ. ಅದನ್ನೆಲ್ಲ ತಿಳಿಯಲು, ಅಳೆಯಲು ಬಹಳ ದೀರ್ಘ ಅವಧಿ ಬೇಕಾಗುತ್ತದೆ. ಬಹಳಷ್ಟು ಪ್ರಯಾಣಿಸಬೇಕಾಗುತ್ತದೆ. ಸಾವಿರಾರು ಮಂದಿಯನ್ನು, ಸಂಸ್ಥೆಗಳನ್ನು ಭೇಟಿಯಾಗಬೇಕಾಗುತ್ತದೆ. ಸಾಮಾನ್ಯರೊಡನೆ ಮಾತ್ರವಲ್ಲ ತಜ್ಞರೊಡನೆ ಸವಿಸ್ತಾರವಾಗಿ ಮಾತನಾಡ ಬೇಕಾಗುತ್ತದೆ. ಇತಿಹಾಸ, ಸಂಸ್ಕೃತಿ, ಭಾಷೆ, ಆರ್ಥಿಕತೆ, ಆಡಳಿತ, ವೈಚಾರಿಕ ಪೈಪೋಟಿಗಳು ಇತ್ಯಾದಿ ಅನೇಕ ವಿಷಯಗಳ ಕುರಿತಾದ ಸಂಶೋಧನಾ ಗ್ರಂಥಗಳ ಅಧ್ಯಯನ ನಡೆಸಬೇಕಾಗುತ್ತದೆ. ಇದಾವುದನ್ನೂ ಮಾಡದೆ ಕೇವಲ ಮೇಲ್ಪದರದಲ್ಲಿ ನನ್ನ ಗಮನ ಸೆಳೆದ ಕೆಲವು ಅಂಶಗಳನ್ನು ಮಾತ್ರ ಹಂಚಿಕೊಂಡಿದ್ದೇನೆ.
ಸದ್ಯ ನಮ್ಮಲ್ಲಿರುವ ಮಟ್ಟದ ಚಾಲೂ ಪುಢಾರಿಗಳು ಚೀನಾದಲ್ಲಿ ಇಲ್ಲವಾದ್ದರಿಂದ ಅಲ್ಲಿ ಯಾರೂ ತಾವೇ ವಿಶ್ವಗುರುಗಳು ಅಂತ ಹೇಳಿ ಕೊಳ್ತಾ ಇಲ್ಲ. ನನಗಂತೂ ಹಾಗೆ ನಂಬಿಕೊಂಡವರು ಕೂಡಾ ಅಲ್ಲಿ ಕಾಣಸಿಗಲಿಲ್ಲ.