ತಡೆಯಲು ದುಸ್ಸಾಧ್ಯವಾದ ಇರಾನ್‌ನ ಖೈಬರ್ ಶೆಕಾನ್
ಘನ ಇಂಧನದ ಆಧಾರದಲ್ಲಿ ಸಾಗುವ ಈ ಕ್ಷಿಪಣಿ ಅಂದಾಜು 1,450 ಕಿಲೋಮೀಟರ್ (ಅಂದಾಜು 900 ಮೈಲಿ) ವ್ಯಾಪ್ತಿ ಹೊಂದಿದ್ದು, 500ರಿಂದ 550 ಕೆಜಿ ತನಕದ ಸಿಡಿತಲೆಯನ್ನು ಒಯ್ಯಬಲ್ಲದು. ಇದು ಇರಾನ್‌ನ ಹಳೆಯ ಕ್ಷಿಪಣಿಗಳಿಗೆ ಹೋಲಿಸಿದರೆ ಅತ್ಯಂತ ಹಗುರವಾಗಿದ್ದು, ಹಿಂದಿನ ಕ್ಷಿಪಣಿ ಮಾದರಿಗಳ ಮೂರನೇ ಒಂದರಷ್ಟು ತೂಕ ಮಾತ್ರವೇ ಹೊಂದಿದೆ. ಆದ್ದರಿಂದ, ಇದು ನೆಲದಾಳದ ಸುರಂಗಗಳಲ್ಲಿ ಸುಲಭವಾಗಿ ಸಂಗ್ರಹಿಸಿ ಇಡಬಹುದಾಗಿದ್ದು, ಅಗತ್ಯ ಬಿದ್ದಾಗ ಬೇಗನೆ ಉಡಾವಣೆಗೊಳಿಸಬಹುದು.
ಬಹುತೇಕ ಬಾಹ್ಯಾಕಾಶದ ಅಂಚಿನ ಎತ್ತರದ ತನಕ ಹಾರುವ ಒಂದು ರಾಕೆಟನ್ನು ಊಹಿಸಿಕೊಳ್ಳಿ. ಅಷ್ಟು ಎತ್ತರಕ್ಕೆ ಸಾಗಿದ ಬಳಿಕ, ಅದು ಒಂದು ಸಿಡಿತಲೆಯನ್ನು ಬಿಡುಗಡೆಗೊಳಿಸುತ್ತದೆ. ಆ ಸಿಡಿತಲೆ ಪ್ರತೀ ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಯುದ್ಧ ವಿಮಾನದ ರೀತಿ ತಿರುವುಗಳನ್ನು ಪಡೆಯುತ್ತಾ ನುಗ್ಗಿ ಬರುವುದನ್ನು ಕಲ್ಪಿಸಿ. ಈ ಒಂದು ಚಿತ್ರಣವೇ ಇರಾನಿನ ಖೈಬರ್ ಶೆಕಾನ್ ಕ್ಷಿಪಣಿ ಯಾಕೆ ವಾಯು ರಕ್ಷಣಾ ಇಂಜಿನಿಯರ್‌ಗಳಿಗೆ ಇಷ್ಟರಮಟ್ಟಿನ ತಲೆನೋವಾಗಿದೆ ಎಂದು ವಿವರಿಸುತ್ತದೆ.
ಖೈಬರ್ ಶೆಕಾನ್ ಒಂದು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇರಾನ್ ಇದನ್ನು ಮೊದಲ ಬಾರಿಗೆ 2022ರಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿತ್ತು. ಇದಕ್ಕೆ ಏಳನೇ ಶತಮಾನದ ಒಂದು ಪ್ರಸಿದ್ಧ ಯುದ್ಧದ ಹೆಸರನ್ನು ಇಡಲಾಗಿದೆ. ಇರಾನ್ ಈ ಕ್ಷಿಪಣಿ ಸಂಪೂರ್ಣವಾಗಿ ತನ್ನ ದೇಶದೊಳಗೇ ವಿನ್ಯಾಸಗೊಂಡು ನಿರ್ಮಿತವಾಗಿದೆ ಎಂದಿದೆ.
ಘನ ಇಂಧನದ ಆಧಾರದಲ್ಲಿ ಸಾಗುವ ಈ ಕ್ಷಿಪಣಿ ಅಂದಾಜು 1,450 ಕಿಲೋಮೀಟರ್ (ಅಂದಾಜು 900 ಮೈಲಿ) ವ್ಯಾಪ್ತಿ ಹೊಂದಿದ್ದು, 500ರಿಂದ 550 ಕೆಜಿ ತನಕದ ಸಿಡಿತಲೆಯನ್ನು ಒಯ್ಯಬಲ್ಲದು. ಇದು ಇರಾನ್‌ನ ಹಳೆಯ ಕ್ಷಿಪಣಿಗಳಿಗೆ ಹೋಲಿಸಿದರೆ ಅತ್ಯಂತ ಹಗುರವಾಗಿದ್ದು, ಹಿಂದಿನ ಕ್ಷಿಪಣಿ ಮಾದರಿಗಳ ಮೂರನೇ ಒಂದರಷ್ಟು ತೂಕ ಮಾತ್ರವೇ ಹೊಂದಿದೆ. ಆದ್ದರಿಂದ, ಇದು ನೆಲದಾಳದ ಸುರಂಗಗಳಲ್ಲಿ ಸುಲಭವಾಗಿ ಸಂಗ್ರಹಿಸಿ ಇಡಬಹುದಾಗಿದ್ದು, ಅಗತ್ಯ ಬಿದ್ದಾಗ ಬೇಗನೆ ಉಡಾವಣೆಗೊಳಿಸಬಹುದು.
ಈ ಕ್ಷಿಪಣಿಯನ್ನು ವಿಶೇಷವಾಗಿಸುವುದು ಏನು ಎಂದು ತಿಳಿಯಲು ಕ್ಷಿಪಣಿಯ ಮೂಗನ್ನು ಗಮನಿಸಬೇಕು. ಒಂದು ಬ್ಯಾಲಿಸ್ಟಿಕ್ ಕ್ಷಿಪಣಿ ಆರಂಭದಿಂದ ಕೊನೆಯ ತನಕ ಒಂದು ವಿಮಾನದ ರೀತಿಯಲ್ಲಿ ಸಾಗುವುದಿಲ್ಲ. ಅದನ್ನು ಗಾಳಿಯಲ್ಲಿ ಎತ್ತರಕ್ಕೆ ಚಿಮ್ಮಿಸಲಾಗುತ್ತದೆ. ಇದು ವಾತಾವರಣದ ಅಂಚಿನ ತನಕ ಹಾರಿ, ಬಳಿಕ ತನ್ನ ಗುರಿಯತ್ತ ಬೀಳುತ್ತದೆ. ಸ್ಫೋಟಕವನ್ನು ಹೊಂದಿರುವ ಇದರ ಮುಂಭಾಗವನ್ನು ರಿ ಎಂಟ್ರಿ ವೆಹಿಕಲ್ ಅಥವಾ ಆರ್‌ವಿ ಎಂದು ಕರೆಯಲಾಗುತ್ತದೆ. ಈ ಭಾಗ ಭೂಮಿಯ ದಪ್ಪನೆಯ ಗಾಳಿಯ ಪದರಗಳನ್ನು ಎದುರಿಸಿ ಮರಳುವಾಗ ಎದುರಾಗುವ ಅತಿಯಾದ ತಾಪಮಾನ ಮತ್ತು ವೇಗವನ್ನು ಸಹಿಸಿಕೊಂಡು, ತನ್ನ ಗುರಿಯತ್ತ ನಿಖರವಾಗಿ ಇಳಿಯಬೇಕಾಗುತ್ತದೆ.
ಬಹುತೇಕ ಹಳೆಯ ಕ್ಷಿಪಣಿಗಳಲ್ಲಿ, ಈ ರಿ ಎಂಟ್ರಿ ವೆಹಿಕಲ್ ದೂರಕ್ಕೆ ಎಸೆಯುವ ಕಲ್ಲಿನಂತೆ ವರ್ತಿಸುತ್ತದೆ. ಇದು ಭೌತಶಾಸ್ತ್ರದ ಅನುಗುಣವಾದ ಪಥದಲ್ಲೇ ಸಾಗುತ್ತದೆ. ಆದ್ದರಿಂದ, ಒಂದು ಉತ್ತಮ ರೇಡಾರ್, ವೇಗವಾದ ಕಂಪ್ಯೂಟರ್ ಹೊಂದಿರುವ ಯಾರು ಬೇಕಾದರೂ ಕ್ಷಿಪಣಿ ಎಲ್ಲಿ ಇಳಿಯಲಿದೆ ಎನ್ನುವುದನ್ನು ಲೆಕ್ಕಾಚಾರ ಹಾಕಬಹುದು. ಬಳಿಕ ರಕ್ಷಣಾ ವ್ಯವಸ್ಥೆಯವರು ಆ ಸ್ಥಳಕ್ಕೆ ಒಂದು ಇಂಟರ್‌ಸೆಪ್ಟರ್ ಕಳುಹಿಸುತ್ತಾರೆ. ಆದರೆ, ಖೈಬರ್ ಶೆಕಾನ್ ಕ್ಷಿಪಣಿ ಈ ಸುಲಭದ ವ್ಯವಸ್ಥೆಯನ್ನು ಭೇದಿಸುತ್ತದೆ. ಇದರ ರಿ ಎಂಟ್ರಿ ವೆಹಿಕಲ್ ತನ್ನ ಇಳಿಯುವಿಕೆಯ ಕೊನೆಯ ಹಂತದಲ್ಲಿ ತಾನೇ ಪಥ ಬದಲಿಸಿ ಚಲಿಸುವ ರೀತಿಯಲ್ಲಿ ನಿರ್ಮಾಣಗೊಂಡಿದೆ. ಇಂಜಿನಿಯರ್‌ಗಳು ಇಂತಹ ಸಿಡಿತಲೆಯನ್ನು ಮನೂವರೇಬಲ್ ರಿ ಎಂಟ್ರಿ ವೆಹಿಕಲ್ ಅಥವಾ ಎಂಎಆರ್‌ವಿ ಎಂದು ಕರೆಯುತ್ತಾರೆ.
ಇರಾನ್ ಈ ಸಿಡಿತಲೆಯ ಭಾಗಕ್ಕೆ ಟ್ರೈ ಕೋನಿಕ್ ವಿನ್ಯಾಸ ಎನ್ನುವ ಆಕಾರವನ್ನು ನೀಡಿದೆ. ಒಂದು ಸುಗಮವಾದ ಇಳಿಜಾರಿನ ಬದಲು, ಹೆಚ್ಚುವರಿ ಹೆಜ್ಜೆಗಳು ಅಥವಾ ಭುಜದಂತಹ ರಚನೆಯನ್ನು ಹೊಂದಿರುವ ಶಂಕುವನ್ನು ಊಹಿಸಿಕೊಳ್ಳಿ. ಈ ಆಕಾರ ಸಿಡಿತಲೆಗೆ ಅತ್ಯಂತ ವೇಗದಲ್ಲಿ ಪಥ ಬದಲಿಸುವಾಗಲೂ ಸ್ಥಿರವಾಗಿರಲು ನೆರವಾಗುತ್ತದೆ. ದೊಡ್ಡದಾದ ಚಲಿಸುವ ಕಿವಿರುಗಳಂತಹ ರಚನೆ ಅಥವಾ ನಿಯಂತ್ರಣ ಮೇಲ್ಮೈಗಳನ್ನು ರಿ ಎಂಟ್ರಿ ವೆಹಿಕಲ್‌ಗೆ ಅಳವಡಿಸಲಾಗುತ್ತದೆ. ಇವು ಸಿಡಿತಲೆ ವಾತಾವರಣಕ್ಕೆ ಮರಳಿ ಪ್ರವೇಶಿಸಿದ ಬಳಿಕ ಬೇಕಾದಂತೆ ಪಥ ಬದಲಿಸಲು ನೆರವಾಗುತ್ತವೆ.
ಕೆಲವು ವರದಿಗಳ ಪ್ರಕಾರ, ಕ್ಷಿಪಣಿಯ ನಿರ್ದಿಷ್ಟ ಆವೃತ್ತಿಗಳು ತಮ್ಮ ಮೂಗಿನಲ್ಲಿ ಸಣ್ಣದಾದ ಥ್ರಸ್ಟರ್‌ಗಳನ್ನು ಹೊಂದಿದ್ದು, ಅವು ಅಂತಿಮ ಸೆಕೆಂಡುಗಳಲ್ಲಿ ಸಿಡಿತಲೆಗೆ ಅಂತಿಮ ಮುಂದೊತ್ತುವಿಕೆ ನೀಡುತ್ತವೆ. ಅಂತಿಮವಾಗಿ ಅಪ್ಪಳಿಸುವ ಸಂದರ್ಭದಲ್ಲಿ ಇದರ ವೇಗ ಮ್ಯಾಕ್ 2ರಿಂದ ಮ್ಯಾಕ್ 3 ಆಗಿರುವ ಸಾಧ್ಯತೆಗಳಿವೆ. ಮ್ಯಾಕ್ ಎನ್ನುವುದು ಶಬ್ದದ ವೇಗಕ್ಕೆ ಹೋಲಿಸಿ ವೇಗವನ್ನು ಅಳೆಯುವ ಮಾಪನವಾಗಿದೆ. ಮ್ಯಾಕ್ 1 ಎಂದರೆ ಶಬ್ದದ ವೇಗ ಎಂದರ್ಥವಾಗಿದ್ದು, ಭೂಮಿಯ ಬಳಿ ಪ್ರತೀ ಗಂಟೆಗೆ 1,200 ಕಿಲೋಮೀಟರ್ ಆಗಿರುತ್ತದೆ. ಆದರೆ ಈ ಸಿಡಿತಲೆ ಶಬ್ದದ ವೇಗಕ್ಕಿಂತಲೂ ಎರಡರಿಂದ ಮೂರು ಪಟ್ಟು ಹೆಚ್ಚು ವೇಗದಲ್ಲಿ ಸಾಗುತ್ತದೆ. ಇದರ ಪರಿಣಾಮವಾಗಿ, ಸಿಡಿತಲೆ ನಿರೀಕ್ಷಿತ ರೀತಿಯಲ್ಲಿ ನೇರವಾಗಿ ಬೀಳುವುದಿಲ್ಲ. ಅದು ಬದಿಗಳಲ್ಲಿ, ಅಂಕುಡೊಂಕಾದ ಪಥದಲ್ಲಿ ಸಾಗಬಹುದಾಗಿದ್ದು, ಇಂಟರ್‌ಸೆಪ್ಟರ್ ಅದನ್ನು ನಿರೀಕ್ಷಿಸುವ ಸ್ಥಳಕ್ಕೆ ಬಂದು ಬೀಳುವುದಿಲ್ಲ.
ಘನ ಇಂಧನ ಇನ್ನೊಂದು ಅನುಕೂಲತೆಯನ್ನೂ ಕಲ್ಪಿಸುತ್ತದೆ. ದ್ರವ ಇಂಧನ ಕ್ಷಿಪಣಿಗಳಿಗೆ ಅವುಗಳ ಉಡಾವಣೆಗೆ ಕೆಲ ಸಮಯದ ಮೊದಲಷ್ಟೇ ಇಂಧನ ತುಂಬಿಸಬೇಕು. ಆದರೆ, ಇದು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ, ಶತ್ರುಗಳಿಗೆ ಕ್ಷಿಪಣಿಯ ಸ್ಥಳವನ್ನೂ ತಿಳಿಸುವ ಸಾಧ್ಯತೆಗಳಿವೆ. ಆದರೆ, ಘನ ಇಂಧನ ಕ್ಷಿಪಣಿಗಳು ಮೊದಲೇ ಸಿದ್ಧವಾಗಿ, ಟ್ರಕ್‌ಗಳಲ್ಲಿ ತಿಂಗಳುಗಟ್ಟಲೆ ಕೂತು ಕಾದಿರುತ್ತವೆ. ಇದನ್ನು ಕೆಲವೇ ನಿಮಿಷಗಳಲ್ಲಿ ಉಡಾವಣೆಗೊಳಿಸಬಹುದಾಗಿದ್ದು, ಶತ್ರುವಿನ ಡ್ರೋನ್ ಬರುವ ಮುನ್ನವೇ ಲಾಂಚರ್‌ಗಳನ್ನು ಬೇರೆಡೆಗೆ ಚಲಾಯಿಸಿ ಒಯ್ದು ಬಚ್ಚಿಡಬಹುದು.
ಅಮೆರಿಕದ ಥಾಡ್ ಮತ್ತು ಪ್ಯಾಟ್ರಿಯಟ್ ಅಥವಾ ಇಸ್ರೇಲಿನ ಆ್ಯರೋದಂತಹ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಗಳ ಪಥವನ್ನು ಗಮನಿಸಿ, ಅದನ್ನು ಗಾಳಿಯಲ್ಲೇ ಹೊಡೆಯುವ ವಿಧಾನದಲ್ಲಿ ಕಾರ್ಯಾಚರಿಸುತ್ತವೆ. ಆದರೆ, ಸಿಡಿತಲೆ ಕೊನೆಯ ನಿಮಿಷಗಳಲ್ಲಿ ಅಥವಾ ಕೊನೆಯ ಸೆಕೆಂಡುಗಳಲ್ಲಿ ತೀವ್ರ ತಿರುವು ಪಡೆದುಕೊಂಡು, ಪಥವನ್ನು ಬದಲಿಸುವಾಗ, ಇಂಟರ್‌ಸೆಪ್ಟರ್ ಬಳಿ ತನ್ನ ಪಥವನ್ನು ಸರಿಪಡಿಸಲು ಅತ್ಯಂತ ಕನಿಷ್ಠ ಸಮಯ ಮತ್ತು ಹೆಚ್ಚುವರಿ ಶಕ್ತಿ ಉಳಿದಿರುತ್ತದೆ. ಇರಾನ್ ಈ ರಕ್ಷಣಾ ವ್ಯವಸ್ಥೆಗಳನ್ನು ಗೊಂದಲಗೊಳಿಸಲು ವಿವಿಧ ವೇಗಗಳು, ಹಾರಾಟ ಪಥಗಳಲ್ಲಿ ಪರೀಕ್ಷೆ ನಡೆಸುವುದನ್ನು ಮುಂದುವರಿಸಿದೆ.
2026ರ ವರದಿಗಳ ಅನುಸಾರ, ಖೈಬರ್ ಶೆಕಾನ್ ಮಧ್ಯ ಪೂರ್ವ ಪ್ರದೇಶಗಳ ಮೇಲಿನ ದಾಳಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿದೆ. ಅವುಗಳ ಪೈಕಿ ಬಹಳಷ್ಟು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದರೂ, ಒಂದಷ್ಟು ಕ್ಷಿಪಣಿಗಳು ತಪ್ಪಿಸಿಕೊಂಡು ಗುರಿ ತಲುಪಿವೆ. ಇಂತಹದ್ದೇ ತಂತ್ರಜ್ಞಾನ ಯಮನ್‌ನ ಹೌದಿ ಸಶಸ್ತ್ರ ಬಂಡುಕೋರರಿಗೂ ಸಿಕ್ಕಿದೆ ಎನ್ನಲಾಗಿದ್ದು, ಗುಪ್ತಚರ ಸಂಸ್ಥೆಗಳು ಇದನ್ನೇ ಹೋಲುವಂತಹ ಕ್ಷಿಪಣಿಗಳ ಚಿತ್ರಗಳನ್ನು ಬಿಡುಗಡೆಗೊಳಿಸಿವೆ.
ಹಣ ಈ ಕಥೆಯ ಮೌನವಾದ ಭಾಗ. ಇರಾನ್ ಎಂದಿಗೂ ಖೈಬರ್ ಶೆಕಾನ್ ಕ್ಷಿಪಣಿಯ ಬೆಲೆಯನ್ನು ಪ್ರಕಟಿಸಿಲ್ಲ. ಆದರೆ, ವಿಶ್ಲೇಷಕರ ಲೆಕ್ಕಾಚಾರದ ಪ್ರಕಾರ, ಈ ಕ್ಷಿಪಣಿ ಇದನ್ನು ತಡೆಯಲು ಬಳಸುವ ಇಂಟರ್‌ಸೆಪ್ಟರ್‌ಗಳಿಗೆ ಹೋಲಿಸಿದರೆ ಸಾಕಷ್ಟು ಅಗ್ಗವಾಗಿದೆ. ಕೇವಲ ಒಂದು ಪ್ಯಾಟ್ರಿಯಟ್ ಅಥವಾ ಥಾಡ್ ಇಂಟರ್‌ಸೆಪ್ಟರ್ ಎರಡರಿಂದ ಹದಿನೈದು ಮಿಲಿಯನ್ ಡಾಲರ್ ವೆಚ್ಚವಾಗುತ್ತವೆ. ಇತ್ತೀಚಿನ ಕದನಕ್ಕೂ ಮುನ್ನ, ಇರಾನ್ ಬಳಿ ಸಾವಿರಾರು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕಡಿಮೆ ವ್ಯಾಪ್ತಿಯ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಮಿಲಿಟರಿ ಬಳಕೆಗೆ ಸಿದ್ಧವಾದ ಬಾಹ್ಯಾಕಾಶ ರಾಕೆಟ್‌ಗಳು ಇದ್ದವು ಎನ್ನಲಾಗಿತ್ತು. ಬಹಳಷ್ಟು ಅಗ್ಗದ, ಬಾಗಿ ಸಾಗುವ ಕ್ಷಿಪಣಿಗಳ ವಿರುದ್ಧ ರಕ್ಷಣೆ ನೀಡುವುದು ಈಗ ಅತ್ಯಂತ ದುಬಾರಿಯಾಗಿದೆ.
ಖೈಬರ್ ಶೆಕಾನ್ ಅನ್ನು ಹೇಗೆ ಬಣ್ಣಿಸಿದರೂ, ಅದು ಒಂದು ನೈಜ ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಅಲ್ಲ. ಅದರ ನೈಜ ಶಕ್ತಿ ಇರುವುದು ಕ್ಷಿಪ್ರ ಉಡಾವಣೆಯ ಘನ ಇಂಧನ, ಹಗುರವಾದ ದೇಹ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಂತಿಮ ಹಂತದಲ್ಲಿ ಪಥ ಬದಲಿಸುವ ಸಿಡಿತಲೆಗಳ ಸಂಯೋಜನೆಯಲ್ಲಿ.
ಇದರ ಪಾಠ ಸರಳ. ಕ್ಷಿಪಣಿಗಳು ಇಂದು ಒಂದು ನಿರ್ದಿಷ್ಟ ಪಥವನ್ನು ಅನುಸರಿಸುವ, ಉಡಾವಣೆಗೊಳಿಸಿ ಮರೆತುಬಿಡುವ ಆಯುಧಗಳಾಗಿ ಉಳಿದಿಲ್ಲ. ವಿನ್ಯಾಸಕರು ಈಗ ಸಿಡಿತಲೆಗಳ ಒಳಗೆ ಮೆದುಳು ಮತ್ತು ಕುಶಲ ಚಲನೆಗಳನ್ನು ಅಳವಡಿಸುತ್ತಿದ್ದು, ಮರು ಪ್ರವೇಶದ ಬಳಿಕ ತಪ್ಪಿಸಿಕೊಳ್ಳುವ ಇದರ ಸಾಮರ್ಥ್ಯ ರಕ್ಷಣಾ ವ್ಯವಸ್ಥೆಗೆ ಬಹುದೊಡ್ಡ ಸವಾಲಾಗಿರಲಿದೆ.