ಜೀರ್ಣಾವಸ್ಥೆಯ ಶಾಲಾ ಕಟ್ಟಡದಲ್ಲಿ ಪಾಠ: ವಿದ್ಯಾರ್ಥಿಗಳ ಜೀವಕ್ಕೆ ಅಪಾಯ
ಬಿರುಕು ಬಿಟ್ಟ ಗೋಡೆಗಳು; ಸೋರುತ್ತಿರುವ ಛಾವಣಿ
ಹೂಲಸೂರ್: ಶಾಲೆ ಎಂದರೆ ಮಕ್ಕಳ ಭವಿಷ್ಯ ರೂಪುಗೊಳ್ಳುವ ಆಲಯ. ಆದರೆ, ಸುರಕ್ಷಿತ ವಾತಾವರಣದಲ್ಲಿ ಶಿಕ್ಷಣ ಪಡೆಯಬೇಕಾದ ಮಕ್ಕಳು ಶಿಥಿಲಗೊಂಡ ಕಟ್ಟಡದಲ್ಲಿ ಪಾಠ ಆಲಿಸುತ್ತಿರುವ ಘಟನೆಗಳು ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಮುಂದುವರಿದಿವೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ತಾಲೂಕಿನ ಗಡಿಗೌಡಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದಲ್ಲಿರುವ ಮಾಚನಾಳ್ ಗ್ರಾಮದ ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಪಾಯದ ನೆರಳಿನಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಶಾಲಾ ಕಟ್ಟಡದ ಸ್ಥಿತಿ ಹದಗೆಟ್ಟಿದ್ದು, ಹಲವು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಕೆಲವು ಕಡೆ ಗೋಡೆಗಳ ಸಿಮೆಂಟ್ ಉದುರುತ್ತಿದ್ದು, ಮಳೆಗಾಲದಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ. ಕಟ್ಟಡದ ದುರ್ಬಲ ಸ್ಥಿತಿ ಕಂಡು ಪಾಲಕರು ಮತ್ತು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಶಾಲೆಯಲ್ಲಿ ಒಟ್ಟು 29 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ನಾಲ್ವರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಲ್ಕು ಕೊಠಡಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಮಕ್ಕಳು ಪ್ರತಿದಿನ ಪಾಠ ಆಲಿಸುತ್ತಿದ್ದಾರೆ. ಆದರೆ, ಯಾವುದೇ ಕ್ಷಣದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇರುವ ಕಟ್ಟಡದಲ್ಲೇ ಶಿಕ್ಷಣ ನಡೆಯುತ್ತಿರುವುದು ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿರುಕು ಬಿಟ್ಟ ಗೋಡೆಗಳು :
ಶಾಲೆಯ ಕೆಲವು ಕೊಠಡಿಗಳ ಗೋಡೆಗಳಲ್ಲಿ ಆಳವಾದ ಬಿರುಕುಗಳು ಕಾಣಿಸಿಕೊಂಡಿವೆ. ಹಲವು ವರ್ಷಗಳಿಂದ ದುರಸ್ತಿ ಕಾರ್ಯ ನಡೆಯದ ಪರಿಣಾಮ ಕಟ್ಟಡದ ಬಾಳಿಕೆ ಕುಂಠಿತಗೊಂಡಿದೆ. ಮೇಲ್ನೋಟಕ್ಕೆ ಕೇವಲ ಬಣ್ಣ ಬಳಿದು ಅಥವಾ ಛಾವಣಿಗೆ ಪೇಂಟ್ ಹಚ್ಚುವ ಮೂಲಕ ಸಮಸ್ಯೆ ಮುಚ್ಚಿಹಾಕುವ ಪ್ರಯತ್ನ ನಡೆದಿದೆಯೇ ಹೊರತು ಮೂಲಭೂತ ದುರಸ್ತಿ ಕಾರ್ಯ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ನಿರಂತರ ಮಳೆಯಿಂದ ಕಟ್ಟಡದ ದುರ್ಬಲ ಭಾಗಗಳು ಕುಸಿಯುವ ಅಪಾಯ ಎದುರಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಶಾಲಾ ಕಟ್ಟಡ ಕುಸಿತದಿಂದ ವಿದ್ಯಾರ್ಥಿಗಳು ಗಾಯಗೊಂಡ ಘಟನೆಗಳು ನಡೆದಿರುವುದರಿಂದ ಪಾಲಕರ ಆತಂಕ ಹೆಚ್ಚಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ :
ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಶಾಲೆಯ ಕಟ್ಟಡದ ದುಸ್ಥಿತಿಯ ಬಗ್ಗೆ ಸ್ಥಳೀಯರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಆದರೂ ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮಕ್ಕಳು ಪ್ರತಿದಿನ ಅಪಾಯದ ನಡುವೆ ಶಿಕ್ಷಣ ಪಡೆಯುತ್ತಿದ್ದರೂ ಅಧಿಕಾರಿಗಳು ಕೇವಲ ದಾಖಲೆಗಳ ಮಟ್ಟದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಸರಕಾರದ ಗಮನಕ್ಕೆ :
ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳೂ ಜಾರಿಯಲ್ಲಿವೆ. ಆದರೂ ಮಾಚನಾಳದಂತಹ ಗ್ರಾಮೀಣ ಭಾಗದ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವುದು ಕಳವಳಕಾರಿ ಸಂಗತಿ. ಶಾಲಾ ಕಟ್ಟಡಗಳ ಸುರಕ್ಷತಾ ಪರಿಶೀಲನೆ ನಡೆಸಿ ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸವನ್ನು ಶಿಕ್ಷಣ ಇಲಾಖೆ ತುರ್ತಾಗಿ ಕೈಗೊಳ್ಳಬೇಕಾಗಿದೆ.
ಯಾವುದೇ ಅನಾಹುತ ಸಂಭವಿಸಿದ ಬಳಿಕ ಪರಿಹಾರ ಘೋಷಿಸುವ ಬದಲು, ಮುನ್ನೆಚ್ಚರಿಕಾ ಕ್ರಮವಾಗಿ ಮಾಚನಾಳ ಶಾಲೆಗೆ ಹೊಸ ಕಟ್ಟಡ ಮಂಜೂರು ಮಾಡುವುದು ಅಥವಾ ಹಳೆಯ ಕಟ್ಟಡದ ಸಮಗ್ರ ದುರಸ್ತಿ ಕೈಗೊಳ್ಳುವುದು ಅಗತ್ಯವಾಗಿದೆ. ಮಕ್ಕಳ ಜೀವದೊಂದಿಗೆ ಚೆಲ್ಲಾಟ ನಡೆಯುವ ಮುನ್ನ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಸೋರುತ್ತಿರುವ ಬಿಸಿಯೂಟ ಕೊಠಡಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೊಠಡಿಯ ಸ್ಥಿತಿಯೂ ಉತ್ತಮವಾಗಿಲ್ಲ. ಮಳೆ ಬಂದಾಗ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದ್ದು, ಅದೇ ಸ್ಥಳದಲ್ಲಿ ಅಡುಗೆ ತಯಾರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದು ಗಂಭೀರ ಸಮಸ್ಯೆಯಾಗಿದೆ.
ಬಿಸಿಯೂಟ ಯೋಜನೆ ಮಕ್ಕಳ ಪೌಷ್ಟಿಕಾಂಶದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದರೂ, ಸುರಕ್ಷಿತ ಅಡುಗೆ ಕೊಠಡಿ ಇಲ್ಲದಿರುವುದು ಇಲಾಖೆಯ ನಿರ್ಲಕ್ಷ್ಯವನ್ನು ಬಯಲಿಗೆಳೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸುವ ಹಾಗಿಲ್ಲ. ಯಾವ ಯಾವ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ ಅವುಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದ್ದು, ನೆಲಸಮಗೊಳಿಸಲಾಗುವುದು. ಅವಶ್ಯಕತೆ ಇರುವ ಕಡೆಗೆ ಹೊಸ ಕಟ್ಟಡ ಕಟ್ಟಲಾಗುವುದು.
-ಸಿದ್ಧವಿರಯ್ಯ ರುದನೂರ್ ಕ್ಷೇತ್ರ ಶಿಕ್ಷಣಾಧಿಕಾರಿ, ಹುಲಸೂರ್
ಮಕ್ಕಳ ಸುರಕ್ಷತೆಗಿಂತ ದೊಡ್ಡ ವಿಷಯ ಮತ್ತೊಂದಿಲ್ಲ. ಗೋಡೆಗಳಲ್ಲಿ ಬಿರುಕು ಬಿಟ್ಟಿರುವ ಶಾಲೆಯಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಿಸುವುದು ಅಪಾಯಕಾರಿ. ಯಾವುದೇ ದುರಂತ ಸಂಭವಿಸುವ ಮುನ್ನ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಕಟ್ಟಡ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.
-ಕೃಷ್ಣ ಮುದಗಡೆ ಸ್ಥಳೀಯ ಸಣ್ಣ ವ್ಯಾಪಾರಿ, ಮಾಚನಾಳ
ಮಳೆ ಬಂದಾಗ ಬಿಸಿಯೂಟ ಕೊಠಡಿ ಸಂಪೂರ್ಣ ಸೋರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಆಹಾರ ತಯಾರಿಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಉದ್ಭವಿಸಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಅಗತ್ಯವಾಗಿದೆ.
-ನರಸಿಂಗ್ ಅಂಬೆಗಾಂವೆ ಹಾಗೂ ಹಣಮಂತ್ ಜಾಧವ್, ವಿದ್ಯಾರ್ಥಿ ಪೋಷಕರು, ಮಾಚನಾಳ