ಯಾದಗಿರಿ: ಉಪಯೋಗಕ್ಕೆ ಬಾರದ ವಸತಿ ನಿಲಯ
ಅಕ್ರಮ ಚಟುವಟಿಕೆಗಳ ತಾಣವಾದ 23.75 ಕೋಟಿ ರೂ. ವೆಚ್ಚದ ಕಟ್ಟಡ
ಯಾದಗಿರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಗುಣಮಟ್ಟದ ಉನ್ನತ ಶಿಕ್ಷಣ ಮತ್ತು ಸುರಕ್ಷಿತ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ನಗರದ ಮುದ್ನಾಳ ಸಮೀಪ 2019ರಲ್ಲಿ ಸುಮಾರು 23.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಸತಿ ನಿಲಯಗಳು ಇಂದಿಗೂ ಬಳಕೆಯಾಗದೆ ಪಾಳು ಬಿದ್ದಿವೆ.
ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ನಿರ್ಮಿಸಲಾದ ಸುಸಜ್ಜಿತ ಕಟ್ಟಡಗಳು ನಿರ್ವಹಣೆಯ ಕೊರತೆಯಿಂದ ಜೀರ್ಣಾವಸ್ಥೆ ತಲುಪುತ್ತಿವೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಮೂಲಸೌಕರ್ಯ ಸಮರ್ಪಕವಾಗಿ ಬಳಕೆಯಾಗದಿರುವುದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ವಸತಿ ಸೌಲಭ್ಯ ಲಭ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳ, ವಿಶೇಷವಾಗಿ ಎಸ್‌ಸಿ-ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳಲ್ಲಿ ಹಲವರು ಉನ್ನತ ಶಿಕ್ಷಣಕ್ಕಾಗಿ ಕಲಬುರಗಿ, ರಾಯಚೂರು ಸೇರಿದಂತೆ ಬೇರೆ ಜಿಲ್ಲೆಗಳ ಕಾಲೇಜುಗಳನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರದ ಮೂಲ ಉದ್ದೇಶವೇ ಈಡೇರದಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಬಿ.ಎ., ಬಿ.ಕಾಂ., ಬಿ.ಎಸ್‌ಸಿ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳೊಂದಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರೂಪಿಸಲಾದ ಈ ಯೋಜನೆ ಹಲವು ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಜಾರಿ ಯಾಗದಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಸ್‌ಸಿ-ಎಸ್‌ಟಿ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ವಿದ್ಯಾರ್ಥಿಗಳಿಗೆ ದೊರೆಯಬೇಕಾದ ವಸತಿ ಹಾಗೂ ಇತರ ಮೂಲಭೂತ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ಲಭ್ಯವಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದರಿಂದ ಕಾಲೇಜಿನ ಶೈಕ್ಷಣಿಕ ವಾತಾವರಣದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದರ ನಡುವೆ, ಬಳಕೆಯಾಗದೆ ಬಿದ್ದಿರುವ ಕೊಠಡಿಗಳಲ್ಲಿ ಇಸ್ಪೀಟು ಆಟ ಸೇರಿದಂತೆ ಕೆಲವು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳೂ ಕೇಳಿಬಂದಿವೆ.
ಜಿಲ್ಲಾಡಳಿತ, ಉನ್ನತ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ವಸತಿ ನಿಲಯಗಳನ್ನು ಶೀಘ್ರ ಆರಂಭಿಸಿ, ಕಟ್ಟಡಗಳ ಸಂರಕ್ಷಣೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿರ್ವಹಣೆಯ ಕೊರತೆಯಿಂದ ವಸತಿ ನಿಲಯಗಳು ಹಾಳಾಗುವ ಹಂತ ತಲುಪಿವೆ. ಹಲವು ಕೊಠಡಿಗಳ ಬಾಗಿಲು-ಕಿಟಕಿಗಳು ಒಡೆದಿದ್ದು, ವಿದ್ಯುತ್ ಪ್ಯಾನೆಲ್‌ಗಳು ಕಳುವಾಗಿವೆ ಎಂಬ ಆರೋಪಗಳಿವೆ. ನಳದ ಪೈಪ್‌ಗಳು ಮುರಿದು ಬಿದ್ದಿದ್ದು, ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ. ವಸತಿ ನಿಲಯಗಳು ಹಾವು, ಚೇಳು ಹಾಗೂ ವಿಷಕಾರಿ ಹುಳುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ ಎಂದು ಸ್ಥಳೀಯರು ದೂರಿದ್ದಾರೆ.
ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ವಸತಿ ಸೌಲಭ್ಯ ಬಳಕೆಯಾಗದೆ ಕಟ್ಟಡಗಳು ಹಾಳಾಗುತ್ತಿರುವುದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಕಾರಣ. ಶಿಕ್ಷಣದಿಂದ ಈಗಾಗಲೇ ಹಿಂದುಳಿದಿರುವ ಎಸ್‌ಸಿ-ಎಸ್‌ಟಿ ಮಕ್ಕಳಿಗೆ ಮೂಲಭೂತ ಸೌಲಭ್ಯಗಳು ಕೈತಪ್ಪುತ್ತಿರುವುದು ಅತ್ಯಂತ ವಿಷಾದನೀಯ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ವಸತಿ ನಿಲಯಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು.
-ಟಿ.ಎನ್.ಭೀಮು ನಾಯಕ, ಜಿಲ್ಲಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಯಾದಗಿರಿ ನಗರದ ಮುದ್ನಾಳ ಸಮೀಪ ನಿರ್ಮಿಸಿರುವ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಷಯವನ್ನು ನಾವು ಹಲವು ಬಾರಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ. ಈ ಭಾಗದ ಎಸ್‌ಸಿ-ಎಸ್‌ಟಿ ಸೇರಿದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉತ್ತಮ ಉದ್ದೇಶದಿಂದ ಸರಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಲೇಜು ಹಾಗೂ ವಸತಿ ಕಟ್ಟಡ ನಿರ್ಮಿಸಿದೆ. ಆದರೆ ಇಂದಿಗೂ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸದಿರುವುದು ಈ ಭಾಗದ ಮಕ್ಕಳಿಗೆ ಅನ್ಯಾಯವಾಗಿದೆ. ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣ ಅಗತ್ಯ ಕ್ರಮ ಕೈಗೊಂಡು ವಸತಿ ಸೌಲಭ್ಯ ಆರಂಭಿಸಬೇಕು.
-ಮರೆಪ್ಪ ಚಟ್ಟೇರಕರ್, ಜಿಲ್ಲಾ ಸಂಚಾಲಕ, ಡಿಎಸ್‌ಎಸ್