×
Ad

ಫುಟ್‌ಪಾತ್ ಮೇಲೆ ನಡೆದಾಡುವ ಹಕ್ಕು : ಸುಪ್ರೀಂ ತೀರ್ಪು ಜಾರಿಗೆ ರಾಯಚೂರಿನಲ್ಲಿ ಸವಾಲು

ಖಾಸಗಿ ಹೋಟೆಲ್, ಆಸ್ಪತ್ರೆಗಳ ಅತಿಕ್ರಮಣದಿಂದ ಪಾದಚಾರಿಗಳಿಗೆ ಸಂಕಷ್ಟ

Update: 2026-07-04 07:50 IST

ರಾಯಚೂರು: ಪಾದಚಾರಿಗಳಿಗೆ ಸುರಕ್ಷಿತವಾಗಿ ಫುಟ್‌ಪಾತ್ ಮೇಲೆ ನಡೆದಾಡುವ ಹಕ್ಕು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಈ ತೀರ್ಪಿನ ಆಶಯವನ್ನು ರಾಯಚೂರು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜಾರಿಗೊಳಿಸುವುದು ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ಗಳ ಕೊರತೆ, ಇರುವ ಫುಟ್‌ಪಾತ್‌ಗಳ ಅತಿಕ್ರಮಣ, ಅಡ್ಡಾದಿಡ್ಡಿ ವಾಹನ ನಿಲುಗಡೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯಿಂದ ಪಾದಚಾರಿಗಳು ರಸ್ತೆ ಮಧ್ಯೆಯೇ ನಡೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ವೃದ್ಧರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ವಿಶೇಷಚೇತನರ ಸಂಚಾರ ದಿನದಿಂದ ದಿನಕ್ಕೆ ಅಪಾಯಕಾರಿಯಾಗಿದೆ.

ಸಾಮಾನ್ಯವಾಗಿ ಫುಟ್‌ಪಾತ್ ಅತಿಕ್ರಮಣವೆಂದರೆ ಬೀದಿ ಬದಿ ವ್ಯಾಪಾರಿಗಳನ್ನೇ ಗುರಿಯಾಗಿಸಲಾಗುತ್ತದೆ. ಆದರೆ, ರಾಯಚೂರಿನಲ್ಲಿ ಪ್ರತಿಷ್ಠಿತ ಲಾಡ್ಜಿಂಗ್ ಹೋಟೆಲ್‌ಗಳು, ಖಾಸಗಿ ಆಸ್ಪತ್ರೆಗಳು ಹಾಗೂ ವ್ಯಾಪಾರ ಮಳಿಗೆಗಳ ಮುಂಭಾಗದಲ್ಲಿಯೂ ಪಾದಚಾರಿ ಮಾರ್ಗಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಬಳಸಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳೇ ಬಲಿಪಶುಗಳಾಗುತ್ತಿದ್ದು, ಪ್ರಭಾವಿ ಕಟ್ಟಡ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆಕ್ರೋಶ ಕೇಳಿಬರುತ್ತಿದೆ.

ನಗರದ ಸ್ಟೇಷನ್ ರಸ್ತೆ, ಬಸವೇಶ್ವರ ರಸ್ತೆ, ಗಂಜ್ ರಸ್ತೆ, ಗಾಂಧಿ ಚೌಕ್ ಸುತ್ತಮುತ್ತ ಖಾಸಗಿ ಆಸ್ಪತ್ರೆಗಳು ಹಾಗೂ ಲಾಡ್ಜಿಂಗ್ ಹೋಟೆಲ್‌ಗಳ ಮುಂಭಾಗದ ಪಾದಚಾರಿ ಮಾರ್ಗ ಮಾತ್ರವಲ್ಲದೆ, ಕೆಲವು ಕಡೆ ಅರ್ಧ ರಸ್ತೆವರೆಗೂ ವಾಹನ ನಿಲುಗಡೆ ಕಂಡುಬರುತ್ತದೆ. ಸ್ಟೇಷನ್ ಚೌಕ್‌ನಿಂದ ಬಸವೇಶ್ವರ ರಸ್ತೆಯವರೆಗಿನ ಮಾರ್ಗದಲ್ಲಿ ಫುಟ್‌ಪಾತ್ ಕಾಣದಂತಾಗಿದ್ದು, ಬೃಹತ್ ವಾಹನಗಳ ಸಂಚಾರದ ನಡುವೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ನಡೆದು ಹೋಗುವ ಸ್ಥಿತಿ ಇದೆ.

ಸ್ಟೇಷನ್ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ರೋಗಿಗಳು ಹಾಗೂ ಕೆಲಸಕ್ಕೆ ಹೋಗುವ ಜನರು ವಾಹನಗಳ ನಡುವೆ ನಡೆದು ಹೋಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಪಟೇಲ್ ರಸ್ತೆ, ನೇತಾಜಿ ರಸ್ತೆ, ಸರಾಫ್ ಬಜಾರ್, ತೀನ್ ಖಂದಿಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಪಾದಚಾರಿ ಮಾರ್ಗಗಳು ಅತಿಕ್ರಮಣಕ್ಕೆ ಒಳಗಾಗಿವೆ. ಅಂಗಡಿಗಳು, ವ್ಯಾಪಾರ ಮಳಿಗೆಗಳು, ಬೀದಿ ಬದಿ ವ್ಯಾಪಾರಿಗಳು ಹಾಗೂ ವಾಹನ ನಿಲುಗಡೆಯಿಂದ ಪಾದಚಾರಿಗಳಿಗೆ ನಡೆದಾಡುವ ಜಾಗವೇ ಇಲ್ಲದಂತಾಗಿದೆ. ಕೆಲವೆಡೆ ಚರಂಡಿಗಳ ಮೇಲೆಯೂ ಅತಿಕ್ರಮಣ ನಡೆದಿದ್ದು, ಇದು ಪಾದಚಾರಿ ಸುರಕ್ಷತೆ ಮತ್ತು ಸ್ವಚ್ಛತೆ ಎರಡಕ್ಕೂ ಧಕ್ಕೆಯಾಗಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಚಂದ್ರಮೌಳೇಶ್ವರ ರಸ್ತೆ ಮಾರ್ಗವಾಗಿ ಬಸವೇಶ್ವರ ರಸ್ತೆ, ಪಟೇಲ್ ರಸ್ತೆಯಿಂದ ಶೆಟ್ಟಿಭಾವಿ ಚೌಕ್, ತೀನ್ ಖಂದಿಲ್, ಭಗತ್ ಸಿಂಗ್ ವೃತ್ತ ಹಾಗೂ ತಹಶೀಲ್ದಾರರ ಕಚೇರಿ ಮಾರ್ಗಗಳಲ್ಲಿ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ. 10 ನಿಮಿಷದ ದಾರಿಗೆ 20ರಿಂದ 25 ನಿಮಿಷ ಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲು ಒಂದು ಗಂಟೆ ಮುಂಚೆಯೇ ಹೊರಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಸಂಚಾರ ನಿಯಂತ್ರಿಸಬೇಕಾದ ಪೊಲೀಸರು ಕೆಲವು ಪ್ರಮುಖ ಸ್ಥಳಗಳಲ್ಲಿ ಸಮರ್ಪಕವಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಅನೇಕ ಬಾರಿ ವಾಹನ ಸವಾರರು ಬೈದಾಡಿಕೊಂಡು ಜಗಳಕ್ಕೆ ಬೀಳುವುದು ಸಾಮಾನ್ಯವಾಗಿದೆ. ರಸ್ತೆ ಅತಿಕ್ರಮಿಸಿ ವ್ಯಾಪಾರ ನಡೆಸುವವರಿಂದ ತಿಂಗಳ ಮಾಮೂಲು ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆ ತನಿಖೆ ನಡೆಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ಈ ಆರೋಪದ ಬಗ್ಗೆ ಸಂಬಂಧಪಟ್ಟವರ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ನೃಪತುಂಗ, ಪ್ರಿಯಾ, ಉಮಾ ಸೇರಿದಂತೆ ಹಲವೆಡೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಗ್ರಾಹಕರ ಕಾರುಗಳು ರಸ್ತೆಯ ಮೇಲೆಯೇ ಗಂಟೆಗಟ್ಟಲೆ ನಿಲ್ಲುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಸಂಚಾರಿ ಪೊಲೀಸರು ಇದನ್ನು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ನಗರದ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ರಸ್ತೆ ಅಗಲೀಕರಣ, ಫುಟ್‌ಪಾತ್ ನಿರ್ಮಾಣ, ಜೀಬ್ರಾ ಕ್ರಾಸಿಂಗ್, ಸೂಚನಾ ಫಲಕಗಳು ಹಾಗೂ ವೇಗ ನಿಯಂತ್ರಣ ವ್ಯವಸ್ಥೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಇದರಿಂದ ಪಾದಚಾರಿಗಳ ಸುರಕ್ಷತೆ ಗಂಭೀರ ಪ್ರಶ್ನೆಯಾಗಿದೆ.

ರಾಯಚೂರು ನಗರ ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ಪಾದಚಾರಿಗಳ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ಫುಟ್‌ಪಾತ್‌ಗಳನ್ನು ಅತಿಕ್ರಮಣ ಮುಕ್ತಗೊಳಿಸಬೇಕು. ಶಾಲೆ, ಕಾಲೇಜು, ಆಸ್ಪತ್ರೆ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಸುರಕ್ಷಿತ ಪಾದಚಾರಿ ಮಾರ್ಗ ನಿರ್ಮಿಸಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.

ರಸ್ತೆ ಮತ್ತು ಪಾದಚಾರಿ ಮಾರ್ಗಗಳು ಕೇವಲ ವಾಹನಗಳಿಗಷ್ಟೇ ಅಲ್ಲ; ಪಾದಚಾರಿಗಳಿಗೂ ಸೇರಿವೆ. ನಾಗರಿಕರ ಸುರಕ್ಷಿತ ಸಂಚಾರದ ಹಕ್ಕನ್ನು ಖಾತ್ರಿಪಡಿಸಿದಾಗ ಮಾತ್ರ ಸುಪ್ರೀಂ ಕೋರ್ಟ್ ತೀರ್ಪಿನ ಆಶಯ ರಾಯಚೂರಿನಲ್ಲಿ ಸಾಕಾರಗೊಳ್ಳಲಿದೆ.

ರಸ್ತೆ ವಿಸ್ತರಣೆ ಇಲ್ಲ, ವಾಹನಗಳ ಒತ್ತಡ ಹೆಚ್ಚು :

ರಾಯಚೂರು ನಗರದ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ಪ್ರಮುಖ ರಸ್ತೆಗಳ ಅಗಲೀಕರಣ ಮತ್ತು ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಸ್ಟೇಷನ್ ರಸ್ತೆಯಲ್ಲಿ ಶಾಲೆ-ಕಾಲೇಜುಗಳು, ವ್ಯಾಪಾರ ಮಳಿಗೆಗಳು ಹಾಗೂ ಹೋಟೆಲ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬರುವ ಬಸ್‌ಗಳು, ಲಾರಿಗಳು, ಟಿಪ್ಪರ್‌ಗಳ ಸಂಚಾರವೂ ಹೆಚ್ಚಾಗಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಪಾದಚಾರಿಗಳು ರಸ್ತೆ ಮಧ್ಯೆಯೇ ನಡೆದು ಹೋಗುವ ಪರಿಸ್ಥಿತಿ ಇದೆ.

‘ಫುಟ್‌ಪಾತ್‌ಗಳನ್ನು ಅತಿಕ್ರಮಣ ಮುಕ್ತಗೊಳಿಸಿ’ರಾಯಚೂರು ನಗರ ಸ್ಥಳೀಯ ಸಂಸ್ಥೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ಪಾದಚಾರಿಗಳ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ನಗರದಲ್ಲಿನ ಫುಟ್ಪಾತ್ಗಳನ್ನು ಅತಿಕ್ರಮಣ ಮುಕ್ತಗೊಳಿಸುವುದು, ಶಾಲೆ-ಆಸ್ಪತ್ರೆಗಳ ಸುತ್ತ ಸುರಕ್ಷಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ. ರಸ್ತೆ ಹಾಗೂ ಪಾದಾಚಾರಿ ಮಾರ್ಗವು ಕೇವಲ ವಾಹನಗಳಿಗಷ್ಟೇ ಅಲ್ಲ, ಪಾದಚಾರಿಗಳಿಗೂ ಸೇರಿವೆ. ಜಿಲ್ಲಾಡಳಿತ ವರ್ಗವು ನಾಗರಿಕರ ಸುರಕ್ಷಿತ ಸಂಚಾರದ ಹಕ್ಕನ್ನು ಖಾತ್ರಿಪಡಿಸುವ ಮೂಲಕವೇ ಸುಪ್ರೀಂ ಕೋರ್ಟ್ ತೀರ್ಪಿನ ಆಶಯವನ್ನು ಸಾಕಾರಗೊಳಿಸಲು ಮುಂದಾಗಬೇಕು.

-ಅನಿಲ್ ಕುಮಾರ, ಶೇಖ್ ಜಮೀರ್ ಪಾಷಾ, ಸ್ಥಳೀಯರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News