ಸೇಡಂ: ಮುಳ್ಳುಕಂಟಿಯಿಂದ ಇಕ್ಕಟ್ಟಾದ ರಸ್ತೆ: ಹಾಸ್ಟೆಲ್ ವಿದ್ಯಾರ್ಥಿಗಳ ಪರದಾಟ
ಸೇಡಂ: ತಾಲೂಕಿನ ಆಡಕಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಮುಳ್ಳುಕಂಟಿ ಗಿಡಗಳು ದಟ್ಟವಾಗಿ ಬೆಳೆದ ಪರಿಣಾಮ ರಸ್ತೆ ಇಕ್ಕಟ್ಟಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸುಮಾರು ಎರಡು ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ಮುಳ್ಳುಕಂಟಿಗಳು ರಸ್ತೆಯೊಳಗೆ ಚಾಚಿಕೊಂಡಿರುವುದರಿಂದ ವಸತಿ ಶಾಲೆಗೆ ದಿನನಿತ್ಯ ಓಡಾಡುವ ನೂರಾರು ವಿದ್ಯಾರ್ಥಿಗಳು, ಬೈಕ್ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಗೆ ತೆರಳುವಾಗ ವಿದ್ಯಾರ್ಥಿಗಳ ದೇಹಕ್ಕೆ ಮುಳ್ಳುಗಳು ಸವರಿಕೊಳ್ಳುವುದು ಸಾಮಾನ್ಯವಾಗಿದ್ದು, ಎದುರಿನಿಂದ ಬರುವ ವಾಹನಗಳು ಮುಳ್ಳು ಗಂಟಿಯಿಂದಾಗಿ ಮರೆಯಾಗುವುದರಿಂದ ಅಪಘಾತದ ಭೀತಿಯೂ ಕಾಡುತ್ತಿದೆ.
ಆಡಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ರಸ್ತೆಯಲ್ಲಿರುವ ಮುಳ್ಳುಕಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಕೂಡ ರಸ್ತೆ ಬದಿಯ ಗಿಡಗಂಟಿಗಳನ್ನು ತಕ್ಷಣ ತೆರವುಗೊಳಿಸಿ, ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ ರಸ್ತೆಯಲ್ಲಿ ಬೆಳೆದಿರುವ ಮುಳ್ಳುಕಂಟಿಗಳ ಕುರಿತು ಪ್ರಾಂಶುಪಾಲರು ಈಗಾಗಲೇ ನನ್ನ ಗಮನಕ್ಕೆ ತಂದಿದ್ದಾರೆ. ಒಂದು ವಾರದೊಳಗೆ ಮುಳ್ಳುಕಂಟಿಗಳನ್ನು ತೆರವುಗೊಳಿಸಿ, ರಸ್ತೆ ಬದಿಯಲ್ಲಿ ಅಗತ್ಯವಿರುವ ಕಡೆ ವಿದ್ಯುತ್ ಕಂಬಗಳನ್ನು ಅಳವಡಿಸಲು ಕೂಡ ಕ್ರಮ ಕೈಗೊಳ್ಳಲಾಗುವುದು.
-ಪ್ರಿಯಾಂಕಾ, ಆಡಕಿ ಗ್ರಾಪಂ ಪಿಡಿಒ