ಇವರ ಮುಂದಿನ ಗುರಿ ಸಂವಿಧಾನ ನಾಶ
ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತೀಯ ಅನ್ನುವುದು ಏನೂ ಇಲ್ಲ ಎಂದು ಹೇಳಿದ ಗೋಳ್ವಾಲ್ಕರ್ ಇದರ ಬದಲಿಗೆ ಮನುಸ್ಮತಿಯನ್ನು ಆಧರಿಸಿದ ಸಂವಿಧಾನವನ್ನು ತರಬೇಕೆಂದು ಪ್ರತಿಪಾದಿಸಿದರು.ಆದರೆ ಒಮ್ಮ್ಮೆಲೇ ಇದನ್ನು ಮಾಡಲಾಗುವುದಿಲ್ಲ ಅವಸರ ಮಾಡಿದರೆ ದಲಿತ, ಹಿಂದುಳಿದ ಸಮುದಾಯಗಳ ಶೇಕಡ 90ರಷ್ಟು ಜನರು ತಿರುಗಿ ಬೀಳುತ್ತಾರೆ ಎಂಬುದನ್ನು ಅರಿತ ಇವರು ಅದಕ್ಕೆ ಕಾಲ ಪಕ್ವಗೊಳಿಸಲು ಒಂದೊಂದಾಗಿ ಹೆಜ್ಜೆ ಇಡುತ್ತ್ತಾ ಬಂದಿದ್ದಾರೆ.
ಕೇಂದ್ರದಲ್ಲಿ 11 ವರ್ಷಗಳ ಹಿಂದೆ ಇವರು ಅಧಿಕಾರಕ್ಕೆ ಬಂದರು. ಆವಾಗಿನಿಂದ ಮಾಡುತ್ತ ಬಂದ ಅವಾಂತರಗಳೆಲ್ಲ ಅನಿರೀಕ್ಷಿತ ಆಗಿರಲಿಲ್ಲ. ಆದರೆ ಆ ದಿಕ್ಕಿನತ್ತ ಸಾಗಿದ ದಾರಿ ಮತ್ತು ಸಂದರ್ಭ ಮಾತ್ರ ನಿರೀಕ್ಷಿತವಾಗಿರಲಿಲ್ಲ. ಒಂದೊಂದಾಗಿ ಮುಗಿಸುತ್ತ ಬಂದರು. ಕೊನೆಗೆ ಈಗ ಉಳಿದಿರುವುದು ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ.ಇದೇ ಇವರ ನಿಜವಾದ ಟಾರ್ಗೆಟ್.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ) ಎಂಬ ಹೆಸರನ್ನು ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್
(ಗ್ರಾಮೀಣ) (ವಿಬಿ_-ಜಿ ರಾಮ್ ಜಿ) ಎಂದು ಬದಲಿಸಲು ಹೊರಟ ಕೇಂದ್ರದ ಕ್ರಮ ದುರುದ್ದೇಶದಿಂದ ಕೂಡಿದ ರಾಜಕೀಯ ಕ್ರಮ ಮಾತ್ರವಲ್ಲ ಅಂತಿಮವಾಗಿ ಈ ಯೋಜನೆಯನ್ನು ಸಮಾಧಿ ಮಾಡುವುದಾಗಿದೆ. ಅವಕಾಶ ವಂಚಿತರು ಮತ್ತು ಬಡವರಿಗಾಗಿ ಹಿಂದಿನ ಸರಕಾರಗಳು ರೂಪಿಸಿದ ಯಾವ ಯೋಜನೆಯನ್ನೂ ಇವರು ಉಳಿಯಗೊಡುವುದಿಲ್ಲ.
ಅಧಿಕಾರಕ್ಕೆ ಬಂದ ಹನ್ನೊಂದು ವರ್ಷಗಳಲ್ಲಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗದಿದ್ದರೂ ಇರುವ ಯೋಜನೆಗಳ, ಊರುಗಳ, ಬಡಾವಣೆಗಳ ಹೆಸರುಗಳನ್ನು ಬದಲಿಸುವುದು ಇವರ ದುರುದ್ದೇಶ ಪೂರಿತ ಚಾಳಿ. ಆದರೆ ಎಂನರೇಗಾದ ಹೆಸರನ್ನು ಬದಲಿಸುವ ಹಿಂದೆ ಗಾಂಧೀಜಿ ಬಗೆಗಿನ ದ್ವೇಷ ಮಾತ್ರವಲ್ಲ ಹಿಂದಿನ ಸರಕಾರಗಳು ವಿಶೇಷವಾಗಿ ಯುಪಿಎ(1) ರೂಪಿಸಿ ಜಾರಿಗೆ ತಂದುದನ್ನೆಲ್ಲ ಮುಗಿಸುವುದಾಗಿದೆ. ಸ್ವಾತಂತ್ರ್ಯಾನಂತರ ನೆಹರೂ ಕಾಲದಿಂದ ರೂಪುಗೊಂಡದ್ದನ್ನೆಲ್ಲ ಹೊಸಕಿ ಹಾಕುತ್ತ ಬಂದರು. ಎಲ್ಲವೂ ತಮ್ಮ ಕಾಲದಲ್ಲೇ ಶುರುವಾಯಿತು ಎಂದು ದಾಖಲಿಸುವುದು ಇವರ ಮಸಲತ್ತಾಗಿದೆ. ಉದಾಹರಣೆಗೆ ಯೋಜನಾ ಆಯೋಗದ ಹೆಸರನ್ನೇ ಬದಲಿಸಿದರು. ಈಗಿರುವ ಸಂಸತ್ ಭವನಕ್ಕೆ ಬದಲಿಯಾಗಿ ಹೊಸ ಸಂಸತ್ ಭವನವನ್ನೇ ನಿರ್ಮಿಸಿದರು. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ, ಆಗುತ್ತಿದೆ.
ಬಾಬರಿ ಮಸೀದಿ ನೆಲಸಮಗೊಳಿಸಿದ್ದನ್ನು ನ್ಯಾಯಾಲಯವನ್ನು ಮಣಿಸಿ ನ್ಯಾಯ ಸಮ್ಮತಗೊಳಿಸಿದರು.ಆಗಿನಿಂದ ಒಂದೊಂದಾಗಿ ನಾಗಪುರದಲ್ಲಿ ರೂಪುಗೊಂಡ ಕಾರ್ಯ ಸೂಚಿಗಳನ್ನು ಜಾರಿಗೊಳಿಸುತ್ತಲೇ ಇದ್ದಾರೆ. ಈಗ ಇವರ ಮುಂದಿನ ತಕ್ಷಣದ ಗುರಿ ಸಂವಿಧಾನ. ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಸಂವಿಧಾನ ಕಾರಣ ಎಂದು ಸಂಘ ಪರಿವಾರ ಹೇಳುತ್ತಲೇ ಬಂದಿದೆ.ಅದನ್ನು ಹಿಂದೂ ವಿರೋಧಿ ಎಂದು ದೂಷಿಸುತ್ತಲೇ ಬಂದಿದೆ. ಇದೆಲ್ಲ ಇತ್ತೀಚೆಗೆ ರೂಪುಗೊಂಡ ಯೋಜನೆಗಳಲ್ಲ. 1992ರ ಅಕ್ಟೋಬರ್ 13-14ರಂದು ನಡೆದ ವಿಶ್ವ ಹಿಂದೂ ಪರಿಷತ್‌ನ ಸಂತ ಮಂಡಳಿಯ ಸಭೆಯಲ್ಲಿ ಕೈಗೊಂಡ ತೀರ್ಮಾನವಿದು. ಇದಕ್ಕಾಗಿ ಸ್ವಾಮಿ ಮುಕ್ತಾನಂದ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಪ್ರಸಕ್ತ ಸಂವಿಧಾನವನ್ನು ಟೀಕಿಸುವ ಮತ್ತು ಹಿಂದುತ್ವ ಆಧಾರದಲ್ಲಿ ಹೊಸ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿತ್ತು. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಹಾಗೂ ಸಂಘಟನೆಗಳು ಎಚ್ಚರಗೊಳ್ಳಲೇ ಇಲ್ಲ. ಎಡಪಂಥೀಯ ಪಕ್ಷಗಳು ಹಾಗೂ ಸಂಘಟನೆಗಳು ವಿರೋಧಿಸಿದರೂ ಪ್ರಯೋಜನ ಆಗಲಿಲ್ಲ. ಚುನಾವಣಾ ರಾಜಕೀಯದಲ್ಲಿ ಅವರು ಪ್ರಬಲರಾಗುತ್ತ ಬಂದರು.
ಬಾಬಾಸಾಹೇಬರ ನೇತೃತ್ವದಲ್ಲಿ ರೂಪುಗೊಂಡ ಪ್ರಸಕ್ತ ಸಂವಿಧಾನದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮತ ನಿರಪೇಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ. ಆದ್ದರಿಂದ ಶ್ರೇಣೀಕೃತ ಜಾತಿ ಪದ್ಧ್ದತಿಯನ್ನು ಮರು ಸ್ಥಾಪಿಸಲು ಅದಕ್ಕೆ ಮನುಸ್ಮತಿ ಆಧಾರದಲ್ಲಿ ಕಾನೂನಿನ ಸ್ವರೂಪ ಕೊಡಲು ತಮ್ಮದೇ ಆದ ಹೊಸ ಸಂವಿಧಾನ ಇವರಿಗೆ ಬೇಕಾಗಿದೆ. ತಮ್ಮ ಗುರಿಯನ್ನು ಇವರು ಬಚ್ಚಿಟ್ಟುಕೊಂಡಿಲ್ಲ.ಹೇಳುತ್ತಲೇ ಬಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೊದಲ ಸರ ಸಂಘಚಾಲಕ ಕೇಶವ ಬಲರಾಮ ಹೆಡ್ಗೆವಾರ್ ಅವರಿಗಿಂತ ಸಂಘಕ್ಕೆ ಸ್ಪಷ್ಟವಾದ, ನಿರ್ದಿಷ್ಟವಾದ ಸೈದ್ಧಾಂತಿಕ ಪ್ರಣಾಳಿಕೆ ನೀಡಿದವರು ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ . ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತೀಯ ಅನ್ನುವುದು ಏನೂ ಇಲ್ಲ ಎಂದು ಹೇಳಿದ ಗೋಳ್ವಾಲ್ಕರ್ ಇದರ ಬದಲಿಗೆ ಮನುಸ್ಮತಿಯನ್ನು ಆಧರಿಸಿದ ಸಂವಿಧಾನವನ್ನು ತರಬೇಕೆಂದು ಪ್ರತಿಪಾದಿಸಿದರು.ಆದರೆ ಒಮ್ಮ್ಮೆಲೇ ಇದನ್ನು ಮಾಡಲಾಗುವುದಿಲ,್ಲ ಅವಸರ ಮಾಡಿದರೆ ದಲಿತ ,ಹಿಂದುಳಿದ ಸಮುದಾಯಗಳ ಶೇಕಡ 90ರಷ್ಟು ಜನರು ತಿರುಗಿ ಬೀಳುತ್ತಾರೆ ಎಂಬುದನ್ನು ಅರಿತ ಇವರು ಅದಕ್ಕೆ ಕಾಲ ಪಕ್ವಗೊಳಿಸಲು ಒಂದೊಂದಾಗಿ ಹೆಜ್ಜೆ ಇಡುತ್ತ ಬಂದಿದ್ದಾರೆ.ಈಗ ನಿಧಾನವಾಗಿ ಸಂವಿಧಾನದ ಬಳಿ ಬರುತ್ತಿದ್ದಾರೆ. ಇವರ ಅಂತಿಮ ಗುರಿ ಸಂವಿಧಾನ ವಾಗಿದೆ.ಅದಕ್ಕೆ ಈಗ ಅಪಾಯ ಎದುರಾಗಿದೆ.
ಅಸ್ಪಶ್ಯತೆ,ಶ್ರೇಣೀಕೃತ ಜಾತಿ ಪದ್ಧ್ದತಿ, ಸತಿ ಸಹಗಮನ ಪದ್ಧ್ದತಿಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗಗಳೆಂದು ಹಿಂದೊಮ್ಮೆ ಪುರಿ ಶಂಕರಾಚಾರ್ಯರು ಹೇಳಿದಾಗ ಅದನ್ನು ಸಮರ್ಥಿಸಿದ ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತ ಕಾರ್ಯದರ್ಶಿಯಾಗಿದ್ದ ಅಶೋಕ ಸಿಂಘಾಲರು ನಮ್ಮ ಧಾರ್ಮಿಕ ಆಚಾರ್ಯರು ಉಪದೇಶ ಮಾಡಿದ ಧರ್ಮವನ್ನೇ ನಾವು ಕಾನೂನಿಂತೆ ಪಾಲಿಸುತ್ತೇವೆ ಎಂದು ಹೇಳಿದ್ದರು. ಸಿಂಘಾಲ್,ಗೋಳ್ವ್ವಾಲ್ಕರ್ ನಂತರವೂ ಸಂಘ ಪರಿವಾರ ಇದೇ ನಿಲುವಿಗೆ ಬದ್ಧವಾಗಿದೆ.
ಈಗ ತಮಗೆ ಅನುಕೂಲಕರವಾಗಿ ವಾತಾವರಣವನ್ನು ಹೇಗೆ ಬದಲಿಸಿಕೊಂಡಿದ್ದಾರೆ ಅಂದರೆ ಗಾಂಧೀಜಿ, ಜವಾಹರಲಾಲ್ ನೆಹರೂ ಅವರನ್ನು ದ್ವೇಷಿಸುವ, ಹೊಲಸು ಭಾಷೆಯಲ್ಲಿ ಬೈಯುವ ಬಹುದೊಡ್ಡ ಬೆಂಬಲಿಗೆ ವರ್ಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಹೀಗೆ ಒಂದೊಂದಾಗಿ ಜಾರಿಗೆ ತರುತ್ತಾರೆ. ಯಾವುದಕ್ಕೂ ಅವಸರ ಮಾಡುವುದಿಲ್ಲ. ಹೀಗೆ ಮಾಡುತ್ತ ಹೋಗಿ ಕೊನೆಗೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಭಾರತದ ಸಂವಿಧಾನವನ್ನು ಬದಲಿಸಲು ಕೈ ಹಾಕುತ್ತಾರೆ. ಮೊದಲು ಯಾರಾರಿಂದಲೋ ಸಂವಿಧಾನದ ವಿರುದ್ಧ ಹೇಳಿಕೆ ನೀಡಿಸುತ್ತಾರೆ.ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಗಮನಿಸಿ ಮುಂದಿನ ಹೆಜ್ಜೆ ಇಡುತ್ತಾರೆ. ಈಗ ಗುರಿಯತ್ತ ಎಷ್ಟು ಸಮೀಪಿಸಿದ್ದಾರೆ ಎಂದರೆ ದೇಶದ ರಾಜಧಾನಿ ದಿಲ್ಲಿಯಲ್ಲಿ ಸಂಸತ್ ಭವನದ ಸಮೀಪದಲ್ಲೇ ಹಾಡಹಗಲೇ ಸಂವಿಧಾನಕ್ಕೆ ಅಗ್ನಿಸ್ಪರ್ಶ ಮಾಡಿ ದಕ್ಕಿಸಿಕೊಂಡರು. ಇವರೇ ಸೃಷ್ಟಿಸಿದ ಭಕ್ತರ ಮೂಲಕ ಇದನ್ನೆಲ್ಲ ಮಾಡಿಸಿ ಇದಕ್ಕೆ ಬರುವ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದಿನ ಕ್ರಮವನ್ನು ರೂಪಿಸುತ್ತಾರೆ.
ಚುನಾವಣೆಗಳಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುವುದು ಉಳಿದ ಪಕ್ಷಗಳಂತಲ್ಲ. ಬಿಜೆಪಿ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಸೂತ್ರದ ಗೊಂಬೆಯಂತೆ ಕುಣಿಯುವ ಪಕ್ಷ.ಸಮಾನತೆ ಹಾಗೂ ಪ್ರಜಾಪ್ರಭುತ್ವ ಎಂಬ ಪದಗಳು ಬಿಜೆಪಿಗೆ ಅಪಥ್ಯ. ಅದೇ ರೀತಿ ಸಂವಿಧಾನ ಕೂಡ. ಸಂವಿಧಾನದ ಪ್ರಕಾರ ಮಹಿಳೆ ,ಪುರುಷ ಎಲ್ಲರೂ ಸಮಾನರು.ಮನುಸ್ಮತಿಯಲ್ಲಿ ನಂಬಿಕೆ ಇಟ್ಟವರಿಗೆ ಸಂವಿಧಾನ ಇಷ್ಟ ವಾಗುವುದಿಲ್ಲ. ಹೀಗಾಗಿ ಅದನ್ನು ಬದಲಿಸುವ ಬಹುದೊಡ್ಡ ಷಡ್ಯಂತ್ರ ರೂಪುಗೊಂಡಿದೆ.ಅದರ ಭಾಗವಾಗಿ ಸಾಂವಿಧಾನಿಕ ಸಂಸ್ಥೆಗಳಾದ ಚುನಾವಣಾ ಆಯೋಗ,ನ್ಯಾಯಾಂಗ ಮೊದಲಾದವುಗಳನ್ನು ಮುಗಿಸಿದ ನಂತರ ಇವರ ಕೊನೆಯ ಗುರಿ ಸಂವಿಧಾನ ಎಂಬುದು ಹಗಲಿನಷ್ಟು ನಿಚ್ಚಳವಾಗಿದೆ.ಇದು ಎಲ್ಲಿಗೆ ಹೋಗಿ ತಲುಪುವುದೋ ಗೊತ್ತಿಲ್ಲ. ಬಹುತ್ವ ಭಾರತವನ್ನು ಯಾದವೀ ಕಲಹದ ಬೆಂಕಿಗೆ ತಳ್ಳುವ ದಿಕ್ಕಿನತ್ತ ಸಾಗುತ್ತಿದ್ದಾರೆ.
ಸಂವಿಧಾನವನ್ನು ನಾಶ ಮಾಡಲು ಹೊರಟವರಿಗೆ ರಾಜಕೀಯ ಅಧಿಕಾರ ಸಿಕ್ಕಿರುವುದರಿಂದ ಅವರ ಸಾಮರ್ಥ್ಯ ಹೆಚ್ಚಾಗುತ್ತಲೇ ಬಂತು.ಚುನಾವಣೆ ಬಂದಾಗ ಸರಿಯಾದ ಸಂಯುಕ್ತ ಪ್ರತಿರೋಧ ರೂಪಿಸಲಾಗದ ಪ್ರತಿಪಕ್ಷಗಳು ಕೂಡ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯದ ಹೊಣೆಯನ್ನು ಹೊರಬೇಕಾಗಿದೆ.ರಾಜಕೀಯ ಅಧಿಕಾರ ಅವರಿಗೆ ಎಂದೂ ಸಿಗದಂತೆ ಎಚ್ಚರ ವಹಿಸಿದ್ದರೆ ಇದನ್ನು ತಪ್ಪಿಸಬಹುದಾಗಿತ್ತು.ಈಗ ಕಾಲ ಮಿಂಚಿ ಹೋಗಿದೆ.ತಮ್ಮ ವಿಧ್ವ್ವಂಸಕಾರಿ ಚಟುವಟಿಕೆಗಳನ್ನು ಬೆಂಬಲಿಸುವ ಬಹುದೊಡ್ಡ ಬೆಂಬಲಿಗರ ಪಡೆಯನ್ನೇ ಇವರು ಸೃಷ್ಟಿಸಿಕೊಂಡಿದ್ದಾರೆ. ಇದನ್ನು ತಡೆಯಬೇಕಾದ ದೇಶದ ಯುವಜನರನ್ನು ಜಾತಿ,ಧರ್ಮದ ಹೆಸರಿನಲ್ಲಿ ವಿಭಜಿಸಿದ್ದಾರೆ. ನಮ್ಮಂಥವರು ಏನೇ ಬರೆದರೂ ಅವಾಚ್ಯ ಭಾಷೆಯಲ್ಲಿ ಬೆದರಿಕೆಯ ಕರೆಗಳು ಬರುತ್ತವೆ. ಇವರೇನು ಮಾಡುತ್ತಾರೆ ಎಂದು ನಿರ್ಲಕ್ಷಿಸಬಹುದು.ಆದರೆ ಡಾ.ನರೇಂದ್ರ ದಾಭೋಳ್ಕರ್, ಗೋವಿಂದ ಪನ್ಸ್ಸಾರೆ, ಡಾ. ಎಂ.ಎಂ ಕಲಬುರರ್ಗಿ, ಗೌರಿ ಲಂಕೇಶ್ ನೆನಪಿಗೆ ಬರುತ್ತಾರೆ.ಜೀವ ತೆಗೆಯುತ್ತಾರೆ ಎಂದು ಬರೆಯದಿರಲಾಗುವುದಿಲ್ಲ. ಮುಂದೇನು? ಬಹುತ್ವ ಭಾರತದ ಉಳಿವಿನ ದಾರಿ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮುಂದೆ ಸಾಗುವುದೊಂದೇ ಉಳಿದ ದಾರಿಯಾಗಿದೆ.
ಇವರಿಗೆ ಪೂರಕವಾಗಿ ಜಾಗತಿಕವಾಗಿ ನವ ಉದಾರೀಕರಣದ ಆರ್ಥಿಕ ನೀತಿ ಬಂದಿದೆ.ಆರೋಗ್ಯ, ಶಿಕ್ಷಣ, ಸೇರಿ ಎಲ್ಲವನ್ನೂ ಖಾಸಗಿ ತಿಮಿಂಗಿಲಗಳ ಬಾಯಿಗೆ ಹಾಕುವ ಮಸಲತ್ತುಗಳು ನಿತ್ಯವೂ ನಡೆಯುತ್ತಿವೆ.ಇದನ್ನು ವಿರೋಧಿಸಬೇಕಾದವರು ಹಿಂದೂ,_ ಮುಸ್ಲಿಮ್, ಕ್ರೈಸ್ತ ,ಜಾತಿ,ಮತಗಳಲ್ಲಿ ಮುಳುಗಿಹೋಗಿದ್ದಾರೆ. ಈ ಕಾರ್ಗತ್ತಲು ಕವಿದಿರುವ ಕಾಲದಲ್ಲೂ ಭರವಸೆಯ ಬೆಳಕಿಗಾಗಿ ಕಾಯುವುದೊಂದೇ ಉಳಿದ ದಾರಿಯಾಗಿದೆ.