ಅನ್ನಭಾಗ್ಯ: ಆಹಾರ ಧಾನ್ಯ ಹಂಚಿಕೆಯಲ್ಲಿ ಪ್ರಾದೇಶಿಕ ಅಸಮತೋಲನ
►ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅತೀ ಕನಿಷ್ಠ ►ಬಡವರ ಬದುಕು ದುಸ್ತರ
ಬಹು ಆಯಾಮದ ಬಡತನ ಸೂಚ್ಯಂಕ ಪ್ರಕರಣಗಳು ಈಶಾನ್ಯ ಕರ್ನಾಟಕದಲ್ಲಿ ಅಂದರೆ ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಸಮರ್ಪಕವಾಗಿ ಆಹಾರ ಧಾನ್ಯಗಳು ಪೂರೈಕೆಯಾಗುತ್ತಿವೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಬೆಂಗಳೂರು, ಡಿ.21: ಆಹಾರ ಭದ್ರತೆ ಮತ್ತು ಶೂನ್ಯ ಹಸಿವಿನ ಎಸ್‌ಡಿಜಿ ಗುರಿ ಸಾಧಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ ಆಹಾರ ಧಾನ್ಯಗಳ ಹಂಚಿಕೆಯಲ್ಲಿಯೂ ಪ್ರಾದೇಶಿಕ ಅಸಮತೋಲನ ಎದ್ದು ಕಾಣುತ್ತಿದೆ.
ಉತ್ತಮ ಸ್ಥಿತಿಯಲ್ಲಿರುವ ಜಿಲ್ಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿರುವ ಸರಕಾರವು, ಬಹು ಆಯಾಮದ ಬಡತನ ಹೊಂದಿರುವ ಈಶಾನ್ಯ ಕರ್ನಾಟಕ ಜಿಲ್ಲೆಗಳಿಗೆ ಕಡಿಮೆ ಪ್ರಮಾಣದಲ್ಲಿ ವಿತರಿಸುತ್ತಿದೆ. ಅಲ್ಲದೇ ತಿಂಗಳಿಗೆ 20,000 ರೂ.ನಿಂದ 50,000 ರೂ.ವರೆಗೆ ಸಂಬಳ ಪಡೆಯುತ್ತಿರುವವರೂ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಸಂಗತಿಯು ಮೌಲ್ಯಮಾಪನದಿಂದ ಬಹಿರಂಗವಾಗಿದೆ.
ರಾಜ್ಯದಲ್ಲಿ ಆಹಾರ ಭದ್ರತೆ ಮತ್ತು ಶೂನ್ಯ ಹಸಿವಿನ ಎಸ್‌ಡಿಜಿ ಗುರಿ 2 ಅನ್ನು ಸಾಧಿಸುವಲ್ಲಿ ಅನುಷ್ಠಾನದಲ್ಲಿರುವ ಅನ್ನಭಾಗ್ಯ ಯೋಜನೆಯ (2013-14ರಿಂದ 2018-19) ಪ್ರಭಾವದ ಕುರಿತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಬಾಹ್ಯ ಸಂಸ್ಥೆ ಮೂಲಕ ನಡೆಸಿರುವ ಮೌಲ್ಯಮಾಪನವು, ಅನ್ನಭಾಗ್ಯ ಯೋಜನೆಯ ಹಲವು ಮುಖಗಳನ್ನು ತೆರೆದಿಟ್ಟಿದೆ.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕೆ.ಜಿ. ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ಸಚಿವ ಸಂಪುಟವು ತೀರ್ಮಾನ ಕೈಗೊಂಡಿರುವ ಬೆನ್ನಲ್ಲೇ ಅನ್ನಭಾಗ್ಯ ಯೋಜನೆಯ ಪ್ರಭಾವದ ಕುರಿತು 2025ರ ಜೂನ್‌ನಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಿರುವ ಮೌಲ್ಯಮಾಪನ ವರದಿಯು ಮುನ್ನೆಲೆಗೆ ಬಂದಿದೆ.
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಪ್ಯಾನ್ ಇಂಡಿಯಾ ನೆಟ್ವರ್ಕ್ ಸಂಶೋಧನೆ ಸಂಸ್ಥೆಯು ಮೌಲ್ಯಮಾಪನ ನಡೆಸಿದೆ. ಡಾ. ಸೈಯದ್ ಅಜ್ಮಲ್ ಪಾಷಾ ಪ್ರಧಾನ ಸಂಶೋಧಕರ ನೇತೃತ್ವದ ತಂಡವು 2025ರ ಜೂನ್‌ನಲ್ಲಿ ವರದಿ ಸಲ್ಲಿಸಿದೆ. ಈ ವರದಿಯ ಪ್ರತಿಯು‘the-file.in’ಗೆ ಲಭ್ಯವಾಗಿದೆ.
ಮೌಲ್ಯಮಾಪನ ತಂಡವು ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಉತ್ತರ ಕನ್ನಡ, ಮಂಡ್ಯ, ಚಾಮರಾಜನಗರ ಜಿಲ್ಲೆಯನ್ನು ಅಧ್ಯಯನ ಮತ್ತು ಮೌಲ್ಯಮಾಪನಕ್ಕಾಗಿ ಆಯ್ದುಕೊಂಡಿತ್ತು.
ಈ ತಂಡವು ವಿವಿಧ ಭೌಗೋಳಿಕ ವ್ಯವಸ್ಥೆಗಳಲ್ಲಿ ಅನ್ನಭಾಗ್ಯ ಯೋಜನೆಯ ವ್ಯಾಪ್ತಿ ಮತ್ತು ಸಫಲತೆಯನ್ನು ಅಧ್ಯಯನ ಮಾಡಿದೆ. ವಿವಿಧ ವರ್ಗಗಳಲ್ಲಿ ಫಲಾನುಭವಿಗಳನ್ನು ಗುರುತಿಸುವುದು, ಬಜೆಟ್ ವಿಶ್ಲೇಷಣೆ, ಹಂಚಿಕೆಗಳು, ವರ್ಷಾನುಕ್ರಮದಲ್ಲಿ ಬಿಡುಗಡೆ, ಖರ್ಚು ಸಮರ್ಪಕತೆ, ಪುನರಾವರ್ತನೆಯ ದರ, ನಿರಂತರತೆ ಮತ್ತು ಕಾಲಾನುಕ್ರಮದಲ್ಲಿ ವ್ಯತ್ಯಾಸಗಳು, ಆಹಾರ ಭದ್ರತೆಯ ಅವಶ್ಯಕತೆಗಳನ್ನು ವಿಶ್ಲೇಷಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಅನುದಾನ ಅವಶ್ಯಕತೆಗಳ ಬೇಡಿಕೆ, ಪೂರೈಕೆಗಳ ವಿಶ್ಲೇಷಣೆ, ಪೂರೈಕೆ ಮಾಡಿದ ಆಹಾರದ ಸಮರ್ಪಕತೆ, ಆಹಾರದ ಪ್ರಮಾಣ ಮತ್ತು ಗುಣಮಟ್ಟ, ದಾಸೋಹ ಯೋಜನೆಯಡಿಯಲ್ಲಿ ಕಲ್ಯಾಣ ಸಂಸ್ಥೆಗಳಿಗೆ ಆಹಾರ ಧಾನ್ಯಗಳ ಪೂರೈಕೆ, ಆಹಾರ ಧಾನ್ಯಗಳ ಬಳಕೆಯ ನಮೂನೆ, ಎಎವೈ, ಪಿಎಚ್‌ಎಚ್, ಎನ್‌ಪಿಎಚ್‌ಎಚ್ ವರ್ಗಗಳ ಅಡಿಯಲ್ಲಿರುವ ಅಥವಾ ಸಾಮಾಜಿಕ ವರ್ಗದ ಮೇಲೆ ಈ ಮೌಲ್ಯಮಾಪನ ವರದಿಯು ಬೆಳಕು ಚೆಲ್ಲಿರುವುದು ಗೊತ್ತಾಗಿದೆ.
ಕಸುಬು, ಆದಾಯದ ಮಟ್ಟ, ಶಿಕ್ಷಣ ಪ್ರಮಾಣ, ಸಾಮಾಜಿಕ ಆರ್ಥಿಕ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕೃತವಾಗಿರುವ ಪಿಎಚ್‌ಎಚ್ ಮತ್ತು ಎನ್‌ಪಿಎಚ್ ಕುಟುಂಬಗಳನ್ನು ಗುರುತಿಸಿರುವ ಅಧ್ಯಯನ ನಡೆಸುವುದು, ಆಹಾರ ಧಾನ್ಯಗಳ ಬಳಕೆ ನಮೂನೆ ಮತ್ತು ಹೆಚ್ಚುವರಿ ಉಳಿದಲ್ಲಿ ಅದರ ವಿಲೇವಾರಿ ಸೇರಿದಂತೆ ಇನ್ನಿತರ ಗುರಿಗಳನ್ನಾಧರಿಸಿ ಈ ತಂಡವು ಅಧ್ಯಯನ ನಡೆಸಿರುವುದು ತಿಳಿದು ಬಂದಿದೆ.
ಆಯ್ದ ಜಿಲ್ಲೆಗಳ ಎಂಪಿಐ(ಬಹು ಆಯಾಮದ ಬಡತನ ಸೂಚ್ಯಂಕ) ನ್ನು ಬಳಸಿಕೊಳ್ಳಲಾಗಿದೆ. ಎಂಪಿಐನಲ್ಲಿ ಪಟ್ಟಿ ಮಾಡಿರುವಂತೆ ಗ್ರಾಮ ಪಂಚಾಯತ್‌ಗಳಲ್ಲಿನ ಬಡತನ ವ್ಯಾಪ್ತಿಯನ್ನು ಮೌಲ್ಯಮಾಪನ ತಂಡವು ಬಳಸಿಕೊಂಡಿದೆ. ಗ್ರಾಮ ಪಂಚಾಯತ್ ಮತ್ತು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದ್ದ ಮೌಲ್ಯಮಾಪನ ತಂಡವು ಅತ್ಯಂತ ಹೆಚ್ಚಿನ ಬಡತನ, ಮಧ್ಯಮ ಹಂತದ ಬಡತನ ಮತ್ತು ಕಡಿಮೆ ಬಡತನ ವ್ಯಾಪ್ತಿಗಳಿಗೆ ಸಮಾನ ಪ್ರಾತಿನಿಧ್ಯ ನೀಡಿದೆ. ಅಲ್ಲದೆ ಜಾಗರೂಕತೆಯಿಂದ ಗ್ರಾಮ ಪಂಚಾಯತ್ ಮತ್ತು ಹಳ್ಳಿಗಳನ್ನು ಆಯ್ದು ಕೊಂಡಿರುವುದು ಗೊತ್ತಾಗಿದೆ.
ಈಶಾನ್ಯ ಕರ್ನಾಟಕದಲ್ಲಿ ಬಹು ಆಯಾಮ ಬಡತನ, ಆದರೂ ದೊರೆತಿಲ್ಲ ಸಮಾನ ಪಾಲು :
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಸೇರಿದಂತೆ ಇನ್ನಿತರ ಆಹಾರ ಧಾನ್ಯಗಳನ್ನು ಪಡಿತರ ಚೀಟಿದಾರರ ಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗುತ್ತಿದೆ. ಆದರೆ ಬಹು ಬಡತನ ಆಯಾಮ ಹೊಂದಿರುವ ಈಶಾನ್ಯ ಕರ್ನಾಟಕದ ಜಿಲ್ಲೆಗಳಿಗೆ ನಿಗದಿಯಂತೆ ಆಹಾರ ಧಾನ್ಯಗಳು ಹಂಚಿಕೆಯಾಗುತ್ತಿಲ್ಲ ಎಂಬುದನ್ನು ಮೌಲ್ಯಮಾಪನ ತಂಡ ಹೊರಗೆಡವಿದೆ. ಉತ್ತಮ ಸ್ಥಿತಿಯಲ್ಲಿರುವ ಜಿಲ್ಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುವ ಮೂಲಕ ಇಲ್ಲಿಯೂ ಸಹ ಪ್ರಾದೇಶಿಕ ಅಸಮತೋಲನವಾಗಿರುವುದು ವರದಿಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ.
ಜಿಲ್ಲೆಗಳಲ್ಲಿ ಆಹಾರ ಧಾನ್ಯಗಳ ವಿತರಣೆಯು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಬೇಕು. ಉತ್ತಮ ಸ್ಥಿತಿಯಲ್ಲಿರುವ ಆಹಾರ ಧಾನ್ಯಗಳ ಪಾಲನ್ನು ಕಡಿತಗೊಳಿಸಿ ಅದನ್ನು ಇತರ ಬಡ ಜಿಲ್ಲೆಗಳಿಗೆ ಹಂಚಬಹುದು. ಉದಾಹರಣೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ 2016ರಿಂದ 2022ರವರೆಗೆ ವಿತರಣಾ ಪ್ರಮಾಣವು ಶೇ.45ರಷ್ಟು ಕಡಿಮೆಯಿದೆ. ಹಾಗೆಯೇ ಆಹಾರ ಧಾನ್ಯಗಳ ವಿತರಣಾ ಪ್ರಮಾಣವು ಅದೇ ಅವಧಿಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಶೇ.60ರಿಂದ ಶೇ.70ರಷ್ಟಿದೆ.
ಈ ಜಿಲ್ಲೆಗಳ ಆಹಾರ ಧಾನ್ಯಗಳ ಪಾಲನ್ನು ಕಡಿತಗೊಳಿಸಿ ಅದನ್ನು ಕಲಬುರಗಿ, ರಾಯಚೂರು, ಬಳ್ಳಾರಿ, ಚಾಮರಾಜನಗರ ಇತ್ಯಾದಿ ಜಿಲ್ಲೆಗಳಿಗೆ ವರ್ಗಾಯಿಸಬಹುದಾಗಿದೆ. ಏಕೆಂದರೆ ಈ ಜಿಲ್ಲೆಗಳಲ್ಲಿ ಬಹು ಆಯಾಮದ ಬಡತನ ಹೊಂದಿರುವ (ಚಾಮರಾಜನಗರ ಮತ್ತು ಯಾದಗಿರಿ) ಜನಸಂಖ್ಯೆಯ ಸರಾಸರಿಯು ಶೇ.19ರಿಂದ 42ರಷ್ಟಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.
ಮೌಲ್ಯಮಾಪನದಲ್ಲಿ ಕಂಡುಬಂದ ಸಂಗತಿಗಳೇನು? :
2016-17ರಿಂದ 2021-22ರವರೆಗೆ ರಾಜ್ಯದಲ್ಲಿ ವಿತರಣೆಯಾಗಿರುವ ಪಡಿತರ ಚೀಟಿಗಳ ಪ್ರಮಾಣವು ಶೇ. 23ರಷ್ಟು ಹೆಚ್ಚಾಗಿದೆ. 2016-17ರಲ್ಲಿ 1,07,42,794ರಿಂದ 2021-22ರಲ್ಲಿ 1,32,12,740 ಪಡಿತರ ಚೀಟಿಗಳನ್ನು ವಿತರಿಸಲಾಗಿತ್ತು.
ಈ ಪೈಕಿ ಎಎವೈ ಕಾರ್ಡ್‌ಗಳು ಶೇ.37ರಷ್ಟಿದ್ದವು. 2016-17ರಲ್ಲಿ 7,93,321ರಿಂದ 2021-22ರಲ್ಲಿ 10,85,947ರಷ್ಟಿದ್ದವು.
ಪಿಎಚ್‌ಎಚ್ ಕಾರ್ಡ್‌ಗಳು ಶೇ.17ರಷ್ಟಿದ್ದವು. 2016-17ರಲ್ಲಿ 97,28,718ರಿಂದ 2021-22ರಲ್ಲಿ 1,14,28,081ರಷ್ಟಿದ್ದವು.
ಹಾಗೂ ಎನ್‌ಪಿಎಚ್‌ಎಚ್ ಕಾರ್ಡ್‌ಗಳು ಶೇ.217ರಷ್ಟಿದ್ದವು. 2016-17ರಲ್ಲಿ 2,20,755ರಿಂದ 2021-22ರಲ್ಲಿ 6,98,712ರಷ್ಟು ಏರಿಕೆಯಾಗಿದ್ದವು.
ಅಧ್ಯಯನ ಕೈಗೊಂಡ ಎಲ್ಲಾ ಜಿಲ್ಲೆಗಳಲ್ಲಿ ಪಡಿತರ ಚೀಟಿಗಳ ಪಟ್ಟಿಗೆ ಸೇರಿಸಲು ಬಡ ಮತ್ತು ಅತಿ ಬಡ ಕುಟುಂಬಗಳನ್ನು ಗುರುತಿಸಲಾಗಿದೆ ಮತ್ತು ಪಟ್ಟಿಗೆ ಸೇರಿಸಲಾಗಿದೆ. ಜೊತೆಗೆ ಆಯ್ದ ಜಿಲ್ಲೆಗಳ ಮಾದರಿ ವಿಶ್ಲೇಷಣೆಯಲ್ಲಿ ಸುಮಾರು ಶೇ.11ರಷ್ಟು ಬಿಪಿಎಲ್ ಕಾರ್ಡ್‌ದಾರರನ್ನು ರಾಜ್ಯಮಟ್ಟದಲ್ಲಿ ತಪ್ಪಾಗಿ ಸೇರಿಸಲಾಗಿದೆ. ಈ ಪ್ರಮಾಣವು ಬೇರೆ ಬೇರೆ ವಿಭಾಗಗಳಲ್ಲಿ ಬೇರೆ ಬೇರೆ ರೀತಿ ಇದೆ. ಮೈಸೂರು ವಿಭಾಗದಲ್ಲಿ ಶೇ. 15.4 ಅಂದರೆ ಗರಿಷ್ಠವಿದೆ.
ನಂತರದಲ್ಲಿ ಬೆಳಗಾವಿ ವಿಭಾಗದ ಶೇ. 10.6, ಬೆಂಗಳೂರಿನಲ್ಲಿ ಶೇ. 10, ಕಲಬುರಗಿಯಲ್ಲಿ ಶೇ. 9.7ರಷ್ಟು(ಕನಿಷ್ಠ) ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2021-22ರಲ್ಲಿ 315.270 ಮೆಟ್ರಿಕ್ ಟನ್ ಅಕ್ಕಿ ಮತ್ತು 157.635 ಮೆಟ್ರಿಕ್ ಟನ್ ಗೋಧಿಯನ್ನು ದಾಸೋಹ ಯೋಜನೆಯಡಿಯಲ್ಲಿ ಕಲ್ಯಾಣ ಸಂಸ್ಥೆಗಳಿಗೆ ಒದಗಿಸಲಾಗಿದೆ ಮತ್ತು ಅದರಿಂದ 381 ಸಂಸ್ಥೆಗಳು ಹಾಗೂ 31,527 ಫಲಾನುಭವಿಗಳು ಪ್ರಯೋಜನ ಪಡೆದಿರುವುದು ಗೊತ್ತಾಗಿದೆ.
147 ಸಂಸ್ಥೆಗಳಿಗೆ ಭಾರತ ಸರಕಾರವು ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿತ್ತು. ಈ ಸಂಸ್ಥೆಗಳಲ್ಲಿ 8,775 ಫಲಾನುಭವಿಗಳಿದ್ದು ಕರ್ನಾಟಕ ಸರಕಾರವು 234 ಸಂಸ್ಥೆಗಳಲ್ಲಿನ 22,752 ಫಲಾನುಭವಿಗಳು ಸೇರಿ ಒಟ್ಟಾರೆ ದಾಸೋಹ ಯೋಜನೆಯಡಿ 381 ಸಂಸ್ಥೆಗಳ 31,527 ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿತ್ತು.
ನಾರಿನಿಕೇತನಗಳು, ವೃದ್ಧಾಶ್ರಮಗಳು, ಅನಾಥಾಶ್ರಮಗಳು, ವಿದ್ಯಾರ್ಥಿ ನಿಲಯ, ನಿರಾಶ್ರಿತ, ಭಿಕ್ಷುಕರ ಪುನರ್ವಸತಿ ಕೇಂದ್ರಗಳು, ರಿಮಾಂಡ್ ಹೋಂಗಳು, ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಉಚಿತ ಊಟ ಮತ್ತು ವಸತಿ ನಿಲಯಗಳೂ ಇದ್ದವು.
ಶೇ.100ರಷ್ಟು ಹಂಚಿಕೆಯಾಗದ ಪಡಿತರ ವಿತರಣೆ :
ಅಧ್ಯಯನ ಮಾಡಿದ್ದ ಎಲ್ಲಾ ಜಿಲ್ಲೆಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ (2018ರಿಂದ 2022) ಅವಶ್ಯಕತೆ ಇರುವ ಕುಟುಂಬಗಳಿಗೆ (ಪಡಿತರ ಚೀಟಿ ಹೊಂದಿರುವವರು) ಯಾವ ರೀತಿ ಅಕ್ಕಿಯನ್ನು ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ ಎಂದು ತಿಳಿಯುತ್ತದೆ. ಈ ಐದು ವರ್ಷಗಳಲ್ಲಿ ಯಾವ ಜಿಲ್ಲೆಯೂ ಶೇ.100ರಷ್ಟು ಹಂಚಿಕೆಯನ್ನು ಸಾಧಿಸಿಲ್ಲ ಎಂಬುದು ಮೌಲ್ಯಮಾಪನ ವರದಿಯಿಂದ ತಿಳಿದು ಬಂದಿದೆ.
ಅದರ ಅರ್ಥ ಹಲವಾರು ಅರ್ಹ ಕುಟುಂಬಗಳನ್ನು ಕೈ ಬಿಡಲಾಗಿದೆ ಅಥವಾ ಆ ಕುಟುಂಬಗಳಿಗೆ ಪಡಿತರ ಆಹಾರ ಧಾನ್ಯಗಳ ಅಗತ್ಯವೇ ಇಲ್ಲ. ಅಲ್ಲದೆ ಜಿಲ್ಲಾವಾರು ಸರಾಸರಿ ವಿತರಣೆಯು ಬೆಂಗಳೂರು, ಉಡುಪಿ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆಯಿದೆ. ಈ ಬೆಳವಣಿಗೆ ಹೊಂದಿರುವ ಜಿಲ್ಲೆಗಳಿಗೆ ಪಡಿತರ ಆಹಾರ ಧಾನ್ಯಗಳ ಅವಶ್ಯಕತೆ ಕಡಿಮೆ ಇದೆ ಎಂದು ಈ ಮೂಲಕ ತಿಳಿಯುತ್ತದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.
ಅದನ್ನು ಬೇರೆ ಹಿಂದುಳಿದ ಮತ್ತು ತುಲನಾತ್ಮಕ ಬಡ ಜಿಲ್ಲೆಗಳಿಗೆ ಹಂಚಬಹುದು. ಜತೆಗೆ ಹಲವು ಪ್ರಕರಣಗಳಲ್ಲಿ ಪಿಎಚ್‌ಎಚ್ ಕಾರ್ಡ್‌ದಾರರ ಫಲಾನುಭವಿಗಳು ಅಕ್ಕಿಯನ್ನೂ ಸೇರಿದಂತೆ ಯಾವ ಆಹಾರ ಧಾನ್ಯಗಳನ್ನೂ ಪ್ರತೀ ತಿಂಗಳು ಪಡೆಯುತ್ತಿಲ್ಲ. ಬಹುತೇಕ ಅವರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದರೂ ಅವರಿಗೆ ಉದ್ದ ಸಾಲಿನಲ್ಲಿ ಕಾದು ನಿಲ್ಲಲು ಇಷ್ಟವಿಲ್ಲ. ಹಾಗಾಗಿ ಅವರು ಆ ಕಾರ್ಡ್‌ಗಳನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆಹಾರ ಧಾನ್ಯಗಳ ಮಂಜೂರಾತಿ ಶೇಕಡವಾರು ವಿತರಣೆ ಹೇಗಿದೆ? :
ಬೆಂಗಳೂರು ನಗರ ಜಿಲ್ಲೆಗೆ ಅಕ್ಕಿ ಶೇ.45.5, ಗೋಧಿ ಶೇ.48.26ರಷ್ಟು ಮಂಜೂರಾತಿಯಾಗಿತ್ತು. ಉಡುಪಿಗೆ ಶೇ. 39.76ರಷ್ಟು ಅಕ್ಕಿ, ಶೇ. 44.44ರಷ್ಟು ಗೋಧಿ, ಕೊಡಗಿಗೆ ಶೇ.40.43ರಷ್ಟು ಅಕ್ಕಿ, ಶೇ.45.54ರಷ್ಟು ಗೋಧಿ, ದಕ್ಷಿಣ ಕನ್ನಡಕ್ಕೆ ಶೇ.41.60ರಷ್ಟು ಅಕ್ಕಿ, ಶೇ.45.90ರಷ್ಟು ಗೋಧಿ ಮಂಜೂರಾಗಿತ್ತು.
ಕಲಬುರಗಿ ವಿಭಾಗದಲ್ಲಿ ಎಎಐ ಕಾರ್ಡ್‌ದಾರರ ಸಂಖ್ಯೆ 2,11,918 ಕಾರ್ಡ್‌ದಾರದೊಂದಿಗೆ ಅತ್ಯಂತ ಹೆಚ್ಚು ಇದ್ದವು. ಮೈಸೂರು ವಿಭಾಗದಲ್ಲಿ 70,531 ಕಾರ್ಡ್‌ದಾರರಿದ್ದು ಇದು ಅತ್ಯಂತ ಕಡಿಮೆಯಿತ್ತು. ಅತ್ಯಂತ ಹೆಚ್ಚಿನ ಎನ್‌ಪಿಎಚ್‌ಎಚ್ ಸರಾಸರಿಯು ಬೆಳಗಾವಿ ವಿಭಾಗದಲ್ಲಿತ್ತು. ಅದರ ಪ್ರಮಾಣ ಆ ವಿಭಾಗದ ಒಟ್ಟಾರೆ ಕಾರ್ಡ್‌ದಾರರ ಸಂಖ್ಯೆ ಶೇ.21ರಷ್ಟಿತ್ತು.
ಅತ್ಯಂತ ಕಡಿಮೆ ಎನ್‌ಪಿಎಚ್‌ಎಚ್ ಕಾರ್ಡ್ ದಾರರು ಮೈಸೂರು ವಿಭಾಗದಲ್ಲಿದ್ದಾರೆ. ಚಾಮ ರಾಜನಗರ ಜಿಲ್ಲೆಯು ಹಿಂದು ಳಿದ ಜಿಲ್ಲೆಯಾಗಿದ್ದರೂ ಸಹ ಅಲ್ಲಿನ ಎಎಐ ಕಾರ್ಡ್‌ದಾರರ ಸಂಖ್ಯೆ 35,950ರಷ್ಟಿದ್ದವು. ಅದು ಜಿಲ್ಲೆಯ ಒಟ್ಟು ಪಡಿತರ ಚೀಟಿದಾರರ ಶೇ.12ರಷ್ಟು ಮಾತ್ರ ಇತ್ತು.
ಎನ್‌ಪಿಎಚ್‌ಎಚ್ ಕಾರ್ಡ್‌ಗಳು ಅತೀ ಹೆಚ್ಚಿನ ಸರಾಸರಿಯು ಬೆಳಗಾವಿ ವಿಭಾಗದಲ್ಲಿವೆ. ಒಟ್ಟು ಪಡಿತರ ಚೀಟಿದಾರರ ಸುಮಾರು ಶೇ.21ರಷ್ಟಿದೆ.
ಒಟ್ಟಾರೆ ಕಾರ್ಡ್‌ದಾರರಲ್ಲಿ ಮಹಿಳಾ ಕಾರ್ಡ್‌ದಾರರ ಅನುಪಾತವು ಕಾಲಾನುಕ್ರಮದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅಧ್ಯಯನ ಮಾದರಿ ಸಂಗ್ರಹದ ಪ್ರಕಾರ ಮಹಿಳಾ ಕಾರ್ಡ್‌ದಾರರ ಪ್ರಮಾಣವು ಶೇ.59ರಷ್ಟಿದೆ.
ಉತ್ತರ ಕನ್ನಡದಲ್ಲಿ ಶೇ. 69.8, ಯಾದಗಿರಿಯಲ್ಲಿ ಶೇ.72.8ರಷ್ಟಿದ್ದವು. ಎಎಐ ಕಾರ್ಡ್‌ದಾರರಲ್ಲಿ ಹೆಚ್ಚು ಮಹಿಳೆಯರೇ ಕಂಡು ಬಂದಿದ್ದರು.
ಯಾವುದೇ ವಯೋಮಿತಿಯಿಲ್ಲದೇ ಒಂಟಿ ಮಹಿಳೆಯರಿಗೂ ಕೂಡಾ ಎಎಐ ಕಾರ್ಡ್ ನೀಡಿರುವುದು ಇದಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕದಾದ್ಯಂತ ಒಟ್ಟು 12 ಜಿಲ್ಲೆಗಳ ಫಲಾನುಭವಿಗಳ ಮಾದರಿ ಸಂಗ್ರಹಣೆಯ ಸಮೀಕ್ಷೆ ಆಧಾರದಲ್ಲಿ ಶೇ.92ರಷ್ಟು ಹಿಂದೂಗಳು ಇದ್ದಾರೆ. (ಎಸ್‌ಸಿ, ಎಸ್‌ಟಿ, ಒಬಿಸಿ ಇತರ ವರ್ಗದವರೂ) ಅಲ್ಲದೇ ಶೇ.5.2ರಷ್ಟು ಮುಸ್ಲಿಮರು, ಶೇ.0.5ರಷ್ಟು ಕ್ರೈಸ್ತರು, ಶೇ.1.3ರಷ್ಟು ಬೌದ್ಧರು, ಶೇ.0.2ರಷ್ಟು ಜೈನರಿದ್ದಾರೆ.
ಅದೇ ರೀತಿ ನ್ಯಾಯಬೆಲೆ ಅಂಗಡಿಗಳ ಮಾಲಕರಲ್ಲಿ ಶೇ.97.3ರಷ್ಟು ಹಿಂದೂಗಳಿದ್ದಾರೆ. ಶೇ.2.3ರಷ್ಟು ಮುಸ್ಲಿಮರಿದ್ದಾರೆ. ಶೇ.0.4ರಷ್ಟು ಕ್ರೈಸ್ತರಿದ್ದಾರೆ ಎಂದು ವರದಿಯಲ್ಲಿ ಪಟ್ಟಿಯನ್ನು ಒದಗಿಸಿದೆ.
ಒಟ್ಟಾರೆ ಅಧ್ಯಯನಕ್ಕೊಳಪಟ್ಟ 6,768 ಫಲಾನುಭವಿಗಳ ಪೈಕಿ 2,778 ಫಲಾನುಭವಿಗಳು ರೈತರಾಗಿದ್ದರು. ಇದು ಶೇ.41ರಷ್ಟಿತ್ತು. ಶೇ.9ರಷ್ಟು ಅಂದರೇ 602ರಷ್ಟು ಫಲಾನುಭವಿಗಳು ಸಂಬಳ ವರ್ಗದವರಾಗಿದ್ದರು. ಇದರಲ್ಲಿ ಸರಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳೂ ಸೇರಿದ್ದರು. ಸುಮಾರು ಶೇ.11ರಷ್ಟು ಅಂದರೇ 717 ಮಂದಿ ಸ್ವ ಉದ್ಯೋಗಿಗಳಾಗಿದ್ದರು.
ಶೇ.2ರಷ್ಟು ಫಲಾನಭವಿಗಳು ವಿದ್ಯಾರ್ಥಿಗಳು ಇದ್ದರು. ಸುಮಾರು ಶೇ.7ರಷ್ಟು ಫಲಾನುಭವಿಗಳು ವ್ಯಾಪಾರಿಗಳೂ ಇದ್ದರು. ಸುಮಾರು ಶೇ.31ರಷ್ಟು ಫಲಾನುಭವಿಗಳು 2,073ರಷ್ಟು ಮಂದಿ ದಿನಗೂಲಿ, ಅಂಗಡಿ ಕೆಲಸ, ದಲ್ಲಾಳಿ ಇತ್ಯಾದಿ ಕೆಲಸ ಮಾಡುತ್ತಿದ್ದರು.
ಸುಮಾರು ಶೇ.85ರಷ್ಟು ಅಂದರೆ 5,734 ಮಂದಿ ಫಲಾನುಭವಿಗಳು ದುಡಿಯುವ ವರ್ಗದವರಾಗಿದ್ದರು. ತಿಂಗಳಿಗೆ 20,000 ರೂ. ದುಡಿಯುತ್ತಿದ್ದರು. ಹಾಗೂ ಶೇ.10.3ರಷ್ಟು ಅಂದರೆ 697 ಮಂದಿ ತಿಂಗಳಿಗೆ 21,000 ರೂ.ಯಿಂದ 50,000 ರೂ.ವರೆಗೆ ದುಡಿಯುತ್ತಿದ್ದರು ಎಂದು ವರದಿಯಲ್ಲಿ ವಿವರಿಸಿದೆ.
ಮಾದರಿ ಸಂಗ್ರಹಣೆಯಾದ ನ್ಯಾಯಬೆಲೆ ಅಂಗಡಿಗಳಲ್ಲಿ ಶೇ.29.3ರಷ್ಟು ಅಂಗಡಿಗಳು ಕಚ್ಚಾ ಗೋದಾಮುಗಳಲ್ಲಿ ಆಹಾರ ಸಂಗ್ರಹಿಸುತ್ತಿವೆ. (ಮಣ್ಣಿನ ಗೋಡೆಗಳು, ಛಾವಣಿಯಲ್ಲಿ ಹುಲ್ಲಿನ ತಡಿಕೆ ಮತ್ತು ಶೀಟ್‌ಗಳು) ಸುಮಾರು ಶೇ.9ರಷ್ಟು ಅಂಗಡಿಗಳು ಗುಡಿಸಲಿನಲ್ಲಿ ಸಂಗ್ರಹಿಸುತ್ತಿವೆ. ಕೆಲವು ಗೋದಾಮುಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ.
ಅಧ್ಯಯನ ತಂಡವು ಸಂಗ್ರಹಿಸಿದ್ದ ಮಾದರಿಯಂತೆ ಬಹುತೇಕ ಯಾವುದೇ ಗೋದಾಮುಗಳಲ್ಲಿ ವಿಶಾಲ ಹಜಾರವಿಲ್ಲ. ಇದರಿಂದ ವಿಶೇಷವಾಗಿ ಮಳೆಗಾಲದಲ್ಲಿ ಧಾನ್ಯಗಳ ಲೋಡಿಂಗ್ ಮತ್ತು ಅನ್ ಲೋಡಿಂಗ್ ಪ್ರಕ್ರಿಯೆಗಳಿಗೆ ತೊಡಕಾಗುತ್ತಿದೆ ಎಂದು ವರದಿಯಿಂದ ಗೊತ್ತಾಗಿದೆ.
ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯೂ ಇದೆ. ಸಾಕಷ್ಟು ವರ್ಷಗಳಿಂದ ಕೊರತೆಯ ಒತ್ತಡವು ಹೆಚ್ಚುತ್ತಲೇ ಇದೆ. ಒಬ್ಬ ಆಹಾರ ನಿರೀಕ್ಷಕ, ಶಿರಸ್ತೇದಾರ ಸುಮಾರು 150ರಿಂದ 200 ನ್ಯಾಯಬೆಲೆ ಅಂಗಡಿಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಇದರಿಂದ ಮಾಹಿತಿ, ಶಿಕ್ಷಣ, ಸಂವಹನ ಪ್ರಕ್ರಿಯೆಗಳಿಗೆ ತೊಡಕಾಗಿದೆ. ಯೋಜನೆ ನಿರ್ವಹಣೆಗೆ ಸವಾಲಾಗಿದೆ.
ಆಹಾರ ಧಾನ್ಯಗಳ ವಿತರಣೆಯು ಎಲ್ಲ ಜಿಲ್ಲೆಗಳ ಅರ್ಹ ಫಲಾನುಭವಿಗಳನ್ನೂ ಒಳಗೊಂಡಿರಬೇಕು. ಇ-ಕೆವೈಸಿಯನ್ನು ಬಳಸಿಕೊಂಡು ಶೇ.100ರಷ್ಟು ತಪ್ಪು ಮತ್ತು ಅನರ್ಹ ಕಾರ್ಡ್ ದಾರರನ್ನು ಕೂಡಲೇ ಪಟ್ಟಿಯಿಂದ ತೆಗೆಯಬೇಕು. (ಮಾದರಿ ಸಂಗ್ರಹಣೆ ಪ್ರಕಾರ ಶೇ.11ರಷ್ಟು )ಫಲಾನುಭವಿಗಳು ಇ-ಕೆವೈಸಿ ಮಾಡಿಸಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ರಾಜ್ಯದ 12 ಜಿಲ್ಲೆಗಳಲ್ಲಿ 6,768 ಫಲಾನುಭವಿಗಳು ಅನ್ನ ಭಾಗ್ಯ ಕಾರ್ಡ್‌ದಾರರನ್ನು ಒಳಗೊಂಡು ನಡೆಸಿದ ಸಮೀಕ್ಷೆಯಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ವೇತನದಾತರು ಶೇ.8.9ರಷ್ಟಿದ್ದಾರೆ. ವಿದ್ಯಾರ್ಥಿಗಳು ಶೇ.2ರಷ್ಟು, ನಿವೃತ್ತ ನಾಗರಿಕರು ಶೇ.1ರಷ್ಟಿದ್ದಾರೆ. ಅಲ್ಲದೆ 6,768 ಫಲಾನುಭವಿಗಳ ಮಾಸಿಕ ವೇತನ ಅಂದಾಜಿಸಿದಾಗ ಸುಮಾರು 1,023 ಅಂದರೆ ಶೇ. 15.1ರಷ್ಟು ಫಲಾನುಭವಿಗಳು 50,000 ರೂ.ವರೆಗೂ ಮಾಸಿಕ ವೇತನ ಹೊಂದಿದ್ದಾರೆ. ಆದ್ದರಿಂದ 1,023 ಫಲಾನುಭವಿಗಳನ್ನು ರಾಜ್ಯ ಸರಕಾರದ ನಿಯಮಾವಳಿಗಳ ಅನ್ವಯ ಸುಲಭವಾಗಿ ಪಟ್ಟಿಯಿಂದ ಕೈಬಿಡಬಹುದು ಎಂದು ಶಿಫಾರಸು ಮಾಡಿದೆ.
ಗೋದಾಮು ಮತ್ತು ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳಿಲ್ಲ. ಗೋದಾಮುಗಳ ಎದುರಿನಲ್ಲಿ ವೇ ಬ್ರಿಡ್ಜ್ ಗಳಿಲ್ಲ. ಸರಕಾರಿ ಗೋದಾಮುಗಳ ಸಂಖ್ಯೆ ಕಡಿಮೆ ಇದೆ. ಸುಸಜ್ಜಿತ ಕಟ್ಟಡಗಳಲ್ಲಿ ನ್ಯಾಯಬೆಲೆ ಅಂಗಡಿಗಳಿಲ್ಲ. ಆಹಾರ ಧಾನ್ಯಗಳನ್ನು ಶೇಖರಿಸಿಡಲು ಸೂಕ್ತ ಮತ್ತು ಸಾಕಷ್ಟು ಜಾಗವಿಲ್ಲ. ಕಣ್ಗಾವಲು ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ ಮತ್ತು ನಿಯಮಿತವಾಗಿ ಸಭೆ ನಡೆಸುತ್ತಿಲ್ಲ. ಅನೇಕ ಸಮಿತಿಗಳು ಸಕ್ರಿಯವಾಗಿಲ್ಲ ಎಂದು ತಿಳಿಸಿದೆ.
ಅನಿಯಮಿತ ಹಂಚಿಕೆ :
ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯಗಳ ಹಂಚಿಕೆಯು ನಿಯಮಿತವಾಗಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟು ದಿನಕ್ಕೊಮ್ಮೆ ಆಹಾರ ಧಾನ್ಯಗಳನ್ನು ಹಂಚಲಾಗುತ್ತದೆ ಎಂಬುದನ್ನು ನಿರ್ಧರಿಸಿದೆ.
ಇದರ ಪ್ರಕಾರ ಶೇ.41.3ರಷ್ಟು ಫಲಾನುಭವಿಗಳು ತಿಂಗಳಿನ ಮೊದಲ ವಾರದಲ್ಲಿ ಮತ್ತು ಶೇ.6ರಷ್ಟು ಮಂದಿ ನ್ಯಾಯಬೆಲೆ ಅಂಗಡಿಗಳಿಂದ ತಿಂಗಳಿನ ಕೊನೆಯವಾರದಲ್ಲಿ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ. ನ್ಯಾಯಬೆಲೆ ಅಂಗಡಿಗಳು ಒಂದೇ ಸಲಕ್ಕೆ ಆಹಾರ ಧಾನ್ಯಗಳನ್ನು ಉಗ್ರಾಣದಿಂದ ಎತ್ತಿಕೊಂಡರೂ ಸಹ ವಿತರಣೆಯಲ್ಲಿ ಈ ಬಗೆಯ ಅನಿಯಮಿತ ವೇಳಾಪಟ್ಟಿ ಇದೆ. ನ್ಯಾಯ ಬೆಲೆ ಅಂಗಡಿಗಳು ತಿಂಗಳ ಕೊನೆಯ ವಾರದವರೆಗೂ ಏಕೆ ಧಾನ್ಯಗಳ ದಾಸ್ತಾನನ್ನು ಇಟ್ಟುಕೊಳ್ಳುತ್ತಿದ್ದಾರೆ.
ಬೆಂಗಳೂರು ವಿಭಾಗದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ ವಿಭಾಗದ ಬೆಳಗಾವಿ, ಉತ್ತರ ಕನ್ನಡ, ಕಲಬುರಗಿ ವಿಭಾಗದ ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿಯಲ್ಲಿ ನ್ಯಾಯ ಬೆಲೆ ಅಂಗಡಿ ಮಾಲಕರು ತಿಂಗಳಿಡೀ ಆಹಾರ ಧಾನ್ಯಗಳನ್ನು ಹಂಚುತ್ತಿದ್ದಾರೆ. ಕೆಲವರು ಮೊದಲ ವಾರದಲ್ಲಿ ಮತ್ತು ಕೆಲವರು ತಿಂಗಳ ಕೊನೆಯ ವಾರದಲ್ಲಿ ಹಂಚುತ್ತಿದ್ದಾರೆ.
ರಿಟೇಲ್ ವ್ಯಾಪಾರಿಗಳು ತಮಗೆ ನಿಗದಿಯಾಗಿರುವ ವೋಲ್‌ಸೇಲ್ ಕೇಂದ್ರದಿಂದ ಆಹಾರ ಧಾನ್ಯಗಳನ್ನು ಪ್ರತಿತಿಂಗಳ 15ನೇ ತಾರೀಕಿಗಿಂತ ಮುಂಚೆ ತೆಗೆದುಕೊಂಡು ಫಲಾನಭವಿ ಕಾರ್ಡ್ ದಾರರಿಗೆ ಪ್ರತೀತಿಂಗಳ 25 ತಾರೀಕಿಗಿಂತ ಮುಂಚೆ ಹಂಚಬೇಕು ಮತ್ತು ವೇಳಾಪಟ್ಟಿ ಅನುಸರಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.