ಸಯನೈಡ್ ಮೋಹನ್‌ನ 23 ಅತ್ಯಾಚಾರ-ಕೊಲೆಗಳು ಮತ್ತು ಪೊಲೀಸ್ ವೈಫಲ್ಯ!
ಅಸಹಜ ಸಾವುಗಳನ್ನು ನಿರ್ಲಕ್ಷಿಸಿ ಇನ್ನಷ್ಟು ಅತ್ಯಾಚಾರ, ಕೊಲೆಗಳಿಗೆ ಕಾರಣವಾಗಿದ್ದ ಬೆಳ್ತಂಗಡಿ ಪೊಲೀಸರು
ಅಸಹಜ ಸಾವುಗಳ ಪ್ರಕರಣವನ್ನು ನಿಯಮಬದ್ಧವಾಗಿ ವಿಲೇವಾರಿ ಮಾಡದೇ ಇರುವುದೇ ಧರ್ಮಸ್ಥಳದಲ್ಲಿ ನೂರಾರು ಸಾವು-ನೋವು ಅತ್ಯಾಚಾರಗಳು ನಡೆಯಲು ಕಾರಣವಾಗಿದೆ. ಧರ್ಮಸ್ಥಳ ಪ್ರಕರಣ ಮಾತ್ರವಲ್ಲ, ಸಯನೈಡ್ ಕಿಲ್ಲರ್ ಮೋಹನ್ ಕುಮಾರ್ ಎಂಬಾತ 23 ಹುಡುಗಿಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಮುಖ್ಯ ಕಾರಣವಾಗಿದ್ದೇ ಆಗ ಧರ್ಮಸ್ಥಳದಲ್ಲಿ ಔಟ್‌ಪೋಸ್ಟ್ ಹೊಂದಿದ್ದ ಬೆಳ್ತಂಗಡಿ ಪೊಲೀಸರು! ಈ ಬಗ್ಗೆ ಸಿಐಡಿ ಡಿಜಿಪಿಯಾಗಿದ್ದ ಡಾ.ಡಿ.ವಿ.ಗುರುಪ್ರಸಾದ್ ವರದಿಯೊಂದನ್ನು ನೀಡಿದ್ದಾರೆ. ಸಿಐಡಿ ಡಿಜಿಪಿ ಡಿ.ವಿ.ಗುರುಪ್ರಸಾದ್‌ರ ಅಧ್ಯಯನ ವರದಿಯನ್ನು 7-7-2010ರಂದು ಎಲ್ಲ ಪೊಲೀಸ್ ಅಧೀಕ್ಷಕರಿಗೆ No.5/DGP/CID/2010 ಸುತ್ತೋಲೆ ಮೂಲಕ ಕಳುಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿನಾಂಕ 5-8-2010ರಂದು ಓo:ಅಖಒ-3/647/ಆಏ/2010 ಸುತ್ತೋಲೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಠಾಣೆಗಳಿಗೆ ರವಾನಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ನಡೆಸುತ್ತಿರುವಂತೆಯೇ 2000ದಿಂದ 2015ರ ನಡುವೆ ದಾಖಲಾದ ಅಪರಿಚಿತ ಸಾವು ಪ್ರಕರಣಗಳ ಪ್ರಮುಖ ದಾಖಲೆಗಳನ್ನು(UDR) ಪೊಲೀಸರು ಡಿಲೀಟ್ ಮಾಡಿದ್ದಾರೆ ಎಂಬ ಸುದ್ದಿಯ ಬಳಿಕ ಬೆಳ್ತಂಗಡಿ ಪೊಲೀಸರು ಟೀಕೆಗೆ ಗುರಿಯಾಗಿದ್ದಾರೆ. ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಬಾಲಕಿಯರ ಸಹಿತ ಹಲವು ಮೃತದೇಹಗಳನ್ನು ನಾನೇ ಹೂತಿದ್ದೇನೆ ಎಂದು ಸಾಕ್ಷಿದಾರ/ಅಪ್ರೂವರ್ ಪೊಲೀಸರಿಗೆ ಮತ್ತು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ಆ ಅವಧಿಯ ಅಪರಿಚಿತ ಮೃತದೇಹಗಳ ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್‌ಗಳು ಮತ್ತು ಮೃತ ವ್ಯಕ್ತಿಗಳ ಫೋಟೊಗಳನ್ನು ಈಗ ಬೆಳ್ತಂಗಡಿ/ಧರ್ಮಸ್ಥಳ ಪೊಲೀಸರು ಎಸ್‌ಐಟಿಗೆ ನೀಡಬೇಕಿದೆ. ಆದರೆ, ಬೆಳ್ತಂಗಡಿ/ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಂತಹ ಯುಡಿಆರ್ ದಾಖಲೆಗಳೇ ಇಲ್ಲ ಎನ್ನುವುದು ಆಘಾತಕಾರಿಯಾಗಿದೆ.
ಇದು ಇಂದು ನಿನ್ನೆಯ ಕತೆಯಲ್ಲ. ಮೇ 2000ನೇ ಇಸವಿಯಲ್ಲಿ, ಮೋಹನ್ ಕುಮಾರ್ ಎಂಬ ಶಿಕ್ಷಕ ಮಂಗಳೂರಿನ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ ರತ್ನಾಳನ್ನು ಭೇಟಿಯಾಗಿ ಪರಿಚಯ ಮಾಡಿಕೊಂಡು, ಅವಳೊಂದಿಗೆ ಸ್ನೇಹ ಬೆಳೆಸಿದನು. ಆ ಬಳಿಕ ಕೆಲವು ಭೇಟಿಗಳ ನಂತರ ಮದುವೆಯ ಪ್ರಸ್ತಾವ ಮಾಡಿದನು. ರತ್ನಾ ತನ್ನ ಹೆತ್ತವರೊಂದಿಗೆ ಸಮಾಲೋಚಿಸಿ ನಿರ್ಧಾರಕ್ಕೆ ಬರುವುದಾಗಿ ಹೇಳಿದ್ದಳು. 25.8.2000ದಂದು ಆಸ್ಪತ್ರೆಗೆ ಬಂದ ಮೋಹನ್ ಕುಮಾರ್, ‘ನನ್ನ ಮಾವ ನಿನ್ನನ್ನು ಒಮ್ಮೆ ನೋಡಬೇಕು ಎಂದಿದ್ದಾರೆ. ನಮ್ಮ ಮದುವೆಗೆ ಅವರು ಒಪ್ಪಿಗೆ ಸೂಚಿಸಬೇಕು. ಹಾಗಾಗಿ ಮದುವೆಯ ಹೆಣ್ಣಿನಂತೆ ಬಂಗಾರ ಮತ್ತು ಉತ್ತಮ ಸೀರೆಯುಟ್ಟು ಬಾ’ ಎಂದು ಹೇಳಿದನು. ಅದರಂತೆ ಮನೆಯಲ್ಲಿದ್ದ ಒಡವೆಗಳನ್ನು ಹಾಕಿಕೊಂಡು ರತ್ನಾ ನಿಗದಿತ ದಿನದಂದು ಮಂಗಳೂರಿನ ಜ್ಯೋತಿ ಸರ್ಕಲ್ ಬಸ್ ತಂಗುದಾಣಕ್ಕೆ ಹೋದಳು. ಮೋಹನ್ ಕುಮಾರ್ ಅವಳನ್ನು ಭೇಟಿಯಾಗಿ ಉಜಿರೆಗೆ ಬಸ್‌ನಲ್ಲಿ ಕರೆದೊಯ್ದು ಅಲ್ಲಿಂದ ಜೀಪಿನಲ್ಲಿ ಧರ್ಮಸ್ಥಳಕ್ಕೆ ಹೋದರು. ಧರ್ಮಸ್ಥಳದಲ್ಲಿ ಮೋಹನ್ ಕುಮಾರ್ ಆಕೆಯನ್ನು ನೇತ್ರಾವತಿ ನದಿಯ ಬಳಿಗೆ ಕರೆದೊಯ್ದು, ತನ್ನ ಚಿಕ್ಕಪ್ಪನ ಮನೆಗೆ ಹೋಗಲು ಪಾದಚಾರಿ ಸೇತುವೆಯ ಮೇಲೆ ನದಿ ದಾಟಬೇಕು ಎಂದು ಹೇಳಿದನು. ಅವರು ಸೇತುವೆಯನ್ನು ಅರ್ಧದಾರಿಯಲ್ಲಿ ದಾಟುತ್ತಿರುವಾಗ ಮೋಹನ್ ಕುಮಾರ್ ಜಗಳವಾಡಿ, ಆಕೆಯನ್ನು ಸೇತುವೆಯಿಂದ ನದಿಗೆ ತಳ್ಳಿ ಓಡಿಹೋದನು. ರತ್ನಾ ನದಿಗೆ ಬಿದ್ದಾಗ, ಬಟ್ಟೆ ಒಗೆಯುತ್ತಿದ್ದ ಮತ್ತು ವಾಹನಗಳನ್ನು ತೊಳೆಯುತ್ತಿದ್ದ ಜನರು ಅವಳನ್ನು ನೋಡಿ ರಕ್ಷಿಸಿದರು. ಬಳಿಕ ರತ್ನ್ನಾ ಧರ್ಮಸ್ಥಳ ಪೊಲೀಸ್ ಔಟ್ ಪೋಸ್ಟ್ ಠಾಣೆಯಲ್ಲಿ ದೂರು ದಾಖಲಿಸಿದಳು. ಬೆಳ್ತಂಗಡಿ ಪೊಲೀಸ್ ಠಾಣೆ 134/2000 ಐಪಿಸಿ ಸೆಕ್ಷನ್ 504, 307 ಅಡಿಯಲ್ಲಿ ಮೋಹನ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಯಿತು. ಹುಡುಗಿಯರನ್ನು ಮಾತಿನಿಂದ ಮರುಳು ಮಾಡಿ, ವಂಚಿಸಿ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡುವುದು ಮೋಹನ್ ಕುಮಾರ್‌ನ ಹವ್ಯಾಸವಾಗಿತ್ತು. ಈ ಹಿಂದೆಯೂ ಇಂತಹ ಪ್ರಕರಣಗಳು ದಾಖಲಾಗಿದ್ದವು. ಆದರೆ, ಧರ್ಮಸ್ಥಳದಲ್ಲಿ ಪ್ರಕರಣ ದಾಖಲಾದಾಗ ಪೊಲೀಸರು ಎಫ್‌ಐಆರ್ ಮಾಡಿದರೇ ವಿನಹ ಆರೋಪಿ ಮೋಹನ್‌ನ ಪೂರ್ವಾಪರಗಳನ್ನು ಬೇರೆ ಠಾಣೆಯಿಂದ ತಿಳಿದುಕೊಳ್ಳಲಿಲ್ಲ. ಹಾಗಾಗಿ ಕೇವಲ ಎಫ್‌ಐಆರ್ ಹಾಕಿ ಜೈಲಿಗೆ ಕಳುಹಿಸಿದರು. ಕೆಲವು ದಿನಗಳಲ್ಲಿ ಮೋಹನ್ ಕುಮಾರ್ ಜೈಲಿನಿಂದ ಬಿಡುಗಡೆಗೊಂಡರು. ಆ ಬಳಿಕ ಇಬ್ಬರನ್ನು ಮದುವೆಯಾದ ಮೋಹನ್‌ಕುಮಾರ್ ಇಬ್ಬರನ್ನೂ ಬಿಟ್ಟಿದ್ದನು.
2003ರಲ್ಲಿ ಮೋಹನ್ ಕುಮಾರ್ ಬಿಲ್ಲವ ಸಮುದಾಯಕ್ಕೆ ಸೇರಿದ ಗಂಗಮ್ಮ ಎಂಬವರ ಜೊತೆ ಸ್ನೇಹ ಬೆಳೆಸಿ ಆಕೆಯ ಜೊತೆಗೆ ಮದುವೆಯ ಪ್ರಸ್ತಾವ ಮುಂದಿಟ್ಟಿದ್ದ. ಫೆಬ್ರವರಿ 2003ರಲ್ಲಿ ಕಾರ್ಕಳ ಬಸ್ ನಿಲ್ದಾಣಕ್ಕೆ ಬರುವಂತೆ ಹೇಳಿ ಇಬ್ಬರೂ ಲಾಡ್ಜ್‌ಗೆ ಹೋಗುತ್ತಾರೆ. ಮರುದಿನ ಬೆಳಗ್ಗೆ ಇಬ್ಬರೂ ಮಂಗಳೂರಿಗೆ ಬಂದು ವೆನ್ಲಾಕ್ ಆಸ್ಪತ್ರೆಯ ಬಳಿ ಗಂಗಮ್ಮಳಿಗೆ ಐದು ನಿದ್ರೆ ಮಾತ್ರೆಗಳನ್ನು ನೀಡಿ, ಗರ್ಭ ನಿರೋಧಕ ಮಾತ್ರೆಗಳು ಎಂದು ನಂಬಿಸಿ ಅದನ್ನೇ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಮಾತ್ರೆ ತೆಗೆದುಕೊಂಡು ಗಂಗಮ್ಮ ಸಾರ್ವಜನಿಕ ಶೌಚಾಲಯಕ್ಕೆ ಹೋದಾಗ ಮೋಹನ್ ಕುಮಾರ್ ಗಂಗಮ್ಮಳ ಆಭರಣಗಳನ್ನು ಇಟ್ಟುಕೊಳ್ಳುತ್ತಾನೆ. ಗಂಗಮ್ಮ ಶೌಚಾಲಯದಿಂದ ಹೊರಬರದಿದ್ದಾಗ, ಮೋಹನ್ ಸ್ಥಳದಿಂದ ಪರಾರಿಯಾಗಿದ್ದ. ಈ ಮಧ್ಯೆ ಗಂಗಮ್ಮ ನಿದ್ರೆ ಮಾತ್ರೆಗಳ ಪರಿಣಾಮದಿಂದ ಚೇತರಿಸಿಕೊಂಡು ಹೊರಗೆ ಬಂದಾಗ ಮೋಹನ್ ಪರಾರಿಯಾಗಿರುವುದು ಮತ್ತು ತಾನು ಮೋಸ ಹೋಗಿರುವುದು ತಿಳಿಯುತ್ತದೆ. ಆದರೆ, ಮರ್ಯಾದೆಗೆ ಅಂಜಿ ಈ ಘಟನೆಯ ಬಗ್ಗೆ ಅವರು ಯಾವುದೇ ದೂರು ನೀಡಲಿಲ್ಲ. ನಂತರ ಆಕೆ ಆಕಸ್ಮಿಕವಾಗಿ ಬೆಳ್ತಂಗಡಿಯಲ್ಲಿ ಮೋಹನ್ ಕುಮಾರ್‌ನನ್ನು ನೋಡಿ ದೊಡ್ಡ ಕೂಗಾಟ ನಡೆಸಿದಳು. ಆಕೆಯ ಕೂಗಾಟ ಕೇಳಿ ಆಕೆಯ ಸಂಬಂಧಿಕರ ಸಹಾಯದಿಂದ ಮೋಹನ್ ಕುಮಾರ್‌ನನ್ನು ಹಿಡಿದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೋಹನ್ ಕುಮಾರ್ ಮತ್ತು ಗಂಗಮ್ಮ ಅವರ ಸಂಬಂಧಿಕರೊಂದಿಗೆ ರಾಜಿ ಪಂಚಾಯಿತಿ ನಡೆದ ಪ್ರಕಾರ ಚಿನ್ನದ ಆಭರಣಗಳನ್ನು ಹಿಂದಿರುಗಿಸುವುದಾಗಿ ಮೋಹನ್ ಭರವಸೆ ನೀಡುತ್ತಾನೆ. ಮೋಹನ್ ಕುಮಾರ್ ಚಿನ್ನದ ಆಭರಣಗಳನ್ನು ಪೊಲೀಸ್ ಠಾಣೆಗೆ ಹಿಂದಿರುಗಿಸುವ ಮೂಲಕ ಪ್ರಕರಣ ಮುಕ್ತಾಯಗೊಂಡಿತ್ತು.
ಗಂಗಮ್ಮಳಿಗೆ ವಂಚಿಸಿದ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಾಗ ಬೆಳ್ತಂಗಡಿ ಪೊಲೀಸರು ರತ್ನಾಳ ಕೊಲೆ ಯತ್ನ ಕೇಸಿನ ಕಡತವನ್ನು ಪರಿಶೀಲನೆ ಮಾಡಬೇಕಿತ್ತು. ಈ ರೀತಿ ಎಷ್ಟು ಹುಡುಗಿಯರಿಗೆ ವಂಚಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆ ನಡೆಸಬೇಕಿತ್ತು. ರತ್ನಾ ಮತ್ತು ಗಂಗಮ್ಮ ಅದೃಷ್ಟವಶಾತ್ ಬದುಕುಳಿದಿದ್ದು, ಉಳಿದ ಹುಡುಗಿಯರ ಗತಿ ಏನಾಗಿದೆ
ಎಂದು ತನಿಖೆ ಮಾಡಬೇಕಿತ್ತು. ಅದನ್ನು ಮಾಡದೆ ತಕ್ಷಣಕ್ಕೆ ರಾಜಿ ಪಂಚಾಯಿತಿ ಮಾಡಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ.
ಬೆಳ್ತಂಗಡಿ ಪೊಲೀಸರ ಈ ನಿರ್ಲಕ್ಷ್ಯದಿಂದಾಗಿ ಇದೇ ಸಯನೈಡ್ ಮೋಹನ್ ಕುಮಾರ್ ಮುಂದೆ 23 ಹುಡುಗಿಯರನ್ನು ವಂಚಿಸಿ ಅತ್ಯಾಚಾರ ಮಾಡಿ ಸಯನೈಡ್ ಕೊಟ್ಟು ಕೊಲೆ ಮಾಡಿದ್ದ! ಅಂದು ಬೆಳ್ತಂಗಡಿ/ಧರ್ಮಸ್ಥಳ ಪೊಲೀಸರು ಸರಿಯಾದ ತನಿಖೆ ಮೂಲಕ 23 ಹುಡುಗಿಯರನ್ನು ಅತ್ಯಾಚಾರ, ಕೊಲೆಯಿಂದ ರಕ್ಷಿಸಬಹುದಿತ್ತು.
ಇದನ್ನೇ ಸಿಐಡಿ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್‌ರ'SERIAL KILLER MOHAN KUMAR’ A CASE STUDY BY Dr. D.V.GURUPRASAD, IPS, DIRECTOR GENERAL OF POLICE, CID ವರದಿಯ ಭಾಗ 6ರಲ್ಲಿ LESSONS TO BE LEARNT ಎಂಬ ಅಧ್ಯಾಯವಿದ್ದು, ಅದರಲ್ಲಿ 2ನೇ ಕ್ರಮ ಸಂಖ್ಯೆಯಲ್ಲಿ MISHANDLING PRECURSOR CASES ವಿಭಾಗದಲ್ಲಿ ಹೀಗೆ ಬರೆಯುತ್ತಾರೆ:
ಎ)ಕೊಲೆಯತ್ನ ಪ್ರಕರಣದಲ್ಲಿ ಮೋಹನ್ ಕುಮಾರ್‌ನನ್ನು ಖುಲಾಸೆಗೊಳಿಸಿದಾಗ ಆತನ ಮೇಲೆ ನಿಗಾ ಇಡಬಹುದಿತ್ತು. ಇದನ್ನು ಮಾಡಲಾಗಿಲ್ಲ.
ಬಿ)ಖುಲಾಸೆಯಾದ ನಂತರ ಮೋಹನ್ ಕುಮಾರ್ ಫೆಬ್ರವರಿ 2003ರಲ್ಲಿ ಗಂಗಮ್ಮನನ್ನು ಕೊಲ್ಲಲು ಪ್ರಯತ್ನಿಸಿದ್ದ. ಅವನನ್ನು ಹಿಡಿದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದಾಗ ಸಂಪೂರ್ಣವಾಗಿ ವಿಚಾರಣೆ ನಡೆಸಬೇಕಿತ್ತು. ಈ ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಡೈರಿಯಲ್ಲಿ ಯಾವುದೇ ನಮೂದನ್ನು ಮಾಡಲಾಗಿಲ್ಲ.
ಸಿ) ಮತ್ತೆ 2005ರಲ್ಲಿ ಮೋಹನ್ ಕುಮಾರ್‌ನನ್ನು ಸಾರ್ವಜನಿಕರು ಬಂಧಿಸಿ ವೇಣೂರು ಪೊಲೀಸ್ ಠಾಣೆಗೆ ಕಳುಹಿಸಿದರು. 109 ಮತ್ತು 110 ಸಿಆರ್‌ಪಿಸಿ ಅಡಿಯಲ್ಲಿ ಆತನ ಮೇಲೆ ಪ್ರಕರಣ ದಾಖಲಿಸುವಾಗ, ಸ್ಥಳೀಯ ಅಧಿಕಾರಿಗಳು ಆತನ ಹಿಂದಿನ ನಡವಳಿಕೆಯನ್ನು ಉಲ್ಲೇಖಿಸುತ್ತಾರೆ. ಆದರೂ ಅವರು ಆತನ ಮೇಲೆ ನಿಗಾ ಇಡಲಿಲ್ಲ.
ಧರ್ಮಸ್ಥಳ/ಬೆಳ್ತಂಗಡಿ ಪೊಲೀಸರು ಕೇಸ್‌ಗಳನ್ನು ನಿರ್ವಹಿಸುವ ರೀತಿಯನ್ನು ವರದಿಯಲ್ಲಿ ಉಲ್ಲೇಖಿಸಿರುವ ಸಿಐಡಿ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಯುಡಿಆರ್ ಕೇಸ್‌ಗಳನ್ನು ನಿರ್ವಹಿಸುವ ಸಂಬಂಧ ಕೆಲವ ಮಾರ್ಗದರ್ಶಿ ಸೂತ್ರಗಳನ್ನು ಈ ವರದಿಯಲ್ಲಿ ನೀಡುತ್ತಾರೆ. ಅಂದು ಸಯನೈಡ್ ಮೋಹನ್ ಕುಮಾರ್ ಪ್ರಕರಣದಲ್ಲಿ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ನೀಡಿದ ವರದಿ ಇಂದು ಧರ್ಮಸ್ಥಳ ಅಸಹಜ ಸಾವು, ಅತ್ಯಾಚಾರ, ಕೊಲೆ, ಹೆಣ ಹೂತಿಟ್ಟ ಪ್ರಕರಣಕ್ಕೆ ಹೇಳಿ ಮಾಡಿಸಿದಂತೆ
ಅನ್ವಯವಾಗುತ್ತದೆ.
ಪ್ರಕರಣದ ವಿಚಾರಣೆಗಳಲ್ಲಿ ಕಂಡುಬರುವ ದೋಷಗಳು
1.ಬಹುತೇಕ ಎಲ್ಲ ಪ್ರಕರಣಗಳಲ್ಲಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋದ ಬಳಿಕವೇ ಮಹಿಳೆಯರು ಮೋಹನ್ ಕುಮಾರ್ ನೀಡಿದ ವಿಷವನ್ನು ಸೇವಿಸುತ್ತಿದ್ದರು. ಅವರು ಶೌಚಾಲಯದೊಳಗೆಯೇ ಕುಸಿದು ಬಿಡುತ್ತಿದ್ದರು ಅಥವಾ ಹೊರಬಂದು ಕುಸಿಯುತ್ತಿದ್ದರು. ಅವರು ಶೌಚಾಲಯಕ್ಕೆ ಹೋದಾಗ ಅವರ ಕೈಯಲ್ಲಿ ವಿಷವಿರುವ ಬಾಟಲ್ ಹಾಗೂ ನೀರಿನ ಬಾಟಲ್ ಇರುತ್ತಿತ್ತು. ಈ ವಸ್ತುಗಳನ್ನು ಯಾವುದೇ ಪ್ರಕರಣದಲ್ಲೂ ವಶಕ್ಕೆ ಪಡೆಯಲಾಗಿಲ್ಲ.
2. ಮಹಿಳೆಯರು ಸಾಮಾನ್ಯವಾಗಿ ಹ್ಯಾಂಡ್‌ಬ್ಯಾಗ್, ಪರ್ಸ್ ಹೊಂದಿರುತ್ತಾರೆ. ಯಾವುದೇ ಪ್ರಕರಣಗಳಲ್ಲಿ ಪೊಲೀಸರು ಅದನ್ನು ಹುಡುಕುವ ಪ್ರಯತ್ನವೇ ಮಾಡಿಲ್ಲ. ಇದರಿಂದಾಗಿ ಮೃತದೇಹಗಳ ಗುರುತು ಪತ್ತೆಹಚ್ಚಲಾಗಲಿಲ್ಲ.
3. ಬಹುಪಾಲು ಪ್ರಕರಣಗಳಲ್ಲಿ ಮಹಿಳೆಯ ಮೃತದೇಹದ ಮೇಲೆ inquest (ಮರಣ ತನಿಖೆ) ನಡೆಯುವಾಗ ಮಹಿಳಾ ಪಂಚರು ಇಲ್ಲದೆಯೇ ಪಂಚನಾಮೆಗಳನ್ನು ಪೂರ್ಣಗೊಳಿಸಲಾಗಿದೆ.
4. ಒಂದು ಪ್ರಕರಣದಲ್ಲಿ, ಮೃತದೇಹದ ಪಂಚನಾಮೆಯಲ್ಲಿ ಮಹಿಳೆಯನ್ನು ಅಪರಿಚಿತ/ಅಜ್ಞಾತ ಎಂದು
ಉಲ್ಲೇಖಿಸಲಾಗಿದೆ. ಆದರೆ ಮರಣೋತ್ತರ ವರದಿಯಲ್ಲಿ ಆ ಮಹಿಳೆಯ ಹೆಸರು ಉಲ್ಲೇಖಿಸಲಾಗಿದೆ. ಪೊಲೀಸರಿಗೆ ತಿಳಿಯದ ಹೆಸರು ಮರಣೋತ್ತರ ಪರೀಕ್ಷೆಯಲ್ಲಿ ಹೇಗೆ ತಿಳಿಯಿತು ಎಂದು ಹೇಳಲಾಗಿಲ್ಲ.
5. ಮೃತ ಮಹಿಳೆಯ ಬಟ್ಟೆಗಳನ್ನು ಪರಿಶೀಲಿಸಿ ರಕ್ತದ ಕಲೆ, ವೀರ್ಯದ ಕಲೆಗಳು ಅಥವಾ ಕೂದಲು ಕಂಡು ಬರುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗಿಲ್ಲ. ಬಟ್ಟೆಗಳಲ್ಲಿ ಟೈಲರ್ ಅಂಗಡಿಯ ಗುರುತು, ಮಾರುಕಟ್ಟೆ, ತಯಾರಕರ ಗುರುತು ಮುಂತಾದವುಗಳನ್ನು ಪರಿಶೀಲಿಸಬೇಕಿತ್ತು. ಉದಾಹರಣೆಗೆ ಒಂದು ಪ್ರಕರಣದಲ್ಲಿ ಮೃತಳು ಸ್ಥಳೀಯ ಕಂಪೆನಿಯ ಒಳಉಡುಪು ಧರಿಸಿದ್ದಳು. ಅಂತಹ ಒಳಉಡುಪುಗಳು ಕೆಲವು ಭಾಗಗಳಲ್ಲಿ ಮಾತ್ರ ಲಭ್ಯವಿದ್ದವು. ಈ ದಿಕ್ಕಿನಲ್ಲಿ ತನಿಖೆ ನಡೆಸಿದರೆ ಮೃತಳ ಮೂಲಸ್ಥಳವನ್ನು ಪತ್ತೆ ಹಚ್ಚಬಹುದಾಗಿತ್ತು.
6. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತಳ ಬಟ್ಟೆಗಳನ್ನು ಸೂಕ್ತವಾಗಿ ಸಂರಕ್ಷಿಸಲಿಲ್ಲ. ಕೆಲವು ಪ್ರಕರಣಗಳಲ್ಲಿ ಯುಡಿಆರ್ ಪ್ರಕರಣ ಮುಕ್ತಾಯ ಮಾಡಿದ ನಂತರ ಅವುಗಳನ್ನು ನಾಶಪಡಿಸಲಾಯಿತು.
7. ಬಹುತೇಕ ಪ್ರಕರಣಗಳಲ್ಲಿ ಮೃತರ ಫೋಟೊ ತೆಗೆದು ಹಾಕಲಾಗಿದೆ. ಆದರೆ ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಂಚಲಾಗಿಲ್ಲ. ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅಥವಾ ಟಿವಿಯಲ್ಲಿ ಪ್ರಕಟಿಸಿದ್ದರೆ ಮೃತದೇಹಗಳ ಗುರುತು ಪತ್ತೆ ಹಚ್ಚಬಹುದಿತ್ತು.
8. ಒಂದು ಪ್ರಕರಣದಲ್ಲಿ ಅಜ್ಞಾತ ಮಹಿಳೆಯ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಮಾಡಲಾಗಿಲ್ಲ. ಪರೀಕ್ಷೆ ಇಲ್ಲದೆಯೇ ಪೊಲೀಸರು ಮೃತದೇಹವನ್ನು ದಫನ ಮಾಡಿದ್ದಾರೆ.
9. ಇನ್ನೊಂದು ಪ್ರಕರಣದಲ್ಲಿ ಮೃತಳ ಬಳಿ ಫೋನ್ ನಂಬರ್ ಪತ್ತೆಯಾಯಿತು. ಅದರಿಂದ ಕುಟುಂಬಸ್ಥರ ಸಂಪರ್ಕ ಸಾಧಿಸಿ, ಮೃತದೇಹದ ಗುರುತು ಪತ್ತೆ ಹಚ್ಚಲಾಯಿತು. ಮೃತದೇಹ ತಪಾಸಣೆ ವೇಳೆ ಕುಟುಂಬಸ್ಥರು ಶಂಕಿತರ ಹೆಸರು ಹೇಳುತ್ತಾರೆ. ಆದರೆ ಪೊಲೀಸರು ಈ ಮಾಹಿತಿಯಂತೆ ವಿಚಾರಣೆ ನಡೆಸಲಿಲ್ಲ.
10. ಮೈಸೂರಿನ ಬಸ್ ನಿಲ್ದಾಣದಲ್ಲಿ ಎರಡು ಸಾವುಗಳು ಸಂಭವಿಸಿದರೂ, ಪೊಲೀಸರು ಪರಸ್ಪರ ಸಂಬಂಧ ತನಿಖೆ ನಡೆಸಲಿಲ್ಲ. ಇದರಿಂದ ಯುಡಿಆರ್ ಪ್ರಕರಣಗಳ ಮೇಲೆ ಗಮನವಿಲ್ಲದಿರುವುದು ಸ್ಪಷ್ಟವಾಗಿದೆ.
11. ಯುಡಿಆರ್ ಪ್ರಕರಣಗಳಲ್ಲಿ ಮೃತದೇಹದ ಗುರುತು ಪತ್ತೆ ಮಾಡುವ ಕಾರ್ಯವಿಲ್ಲದ ಕಾರಣ, ವಿಷದ ಅಂಶವನ್ನೇ ಪತ್ತೆ ಹಚ್ಚಲಾಗಿಲ್ಲ. ದೀರ್ಘ ವಿಳಂಬದಿಂದ ವಿಷಾಂಶ ನಾಶವಾಗುವ ಸಾಧ್ಯತೆ ಇದೆ.
12. ಮೃತದೇಹ ದಫನ ಮಾಡುವ ಮೊದಲು ಅದರ ಬಟ್ಟೆಗಳು, ಆಭರಣಗಳು, ಬೆರಳಚ್ಚುಗಳು, ದಂತಚಿಹ್ನೆಗಳು ಮತ್ತು ಡಿಎನ್‌ಎ ಮಾದರಿಗಳನ್ನು ಸಂರಕ್ಷಿಸಬೇಕು.
13. ಒಂದು ಪ್ರಕರಣದಲ್ಲಿ ಮೃತಳ ಬಳಿ ಇರುವ ವಸ್ತುಗಳನ್ನು ಕೆಎಸ್ಸಾರ್ಟಿಸಿ ಕ್ಲಾಕ್ ರೂಮ್‌ನಲ್ಲಿ
ಇಡಲಾಗಿದೆ. ಅವುಗಳನ್ನು 24 ಗಂಟೆಗಳ ನಂತರ ಅಲ್ಲಿಂದ ತೆರವು ಮಾಡುತ್ತಾರೆ. ಹಾಗಾಗಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗುವ ಮೃತದೇಹದ ವಸ್ತುಗಳು ಕ್ಲಾಕ್
ರೂಮ್‌ನಲ್ಲಿ ಇವೆಯೇ ಎಂಬ ತಪಾಸಣೆ ಅಗತ್ಯ.
14. ಯುಡಿಆರ್ ಪ್ರಕರಣಗಳ ವಿವರಗಳನ್ನು ಇತರ ಠಾಣೆಗಳೊಂದಿಗೆ ಹಂಚಿಕೊಳ್ಳದ ಕಾರಣ, ಸಮಾನ ಸ್ವರೂಪದ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ.
ಪ್ರಕರಣಗಳ ನಿರ್ಲಕ್ಷ್ಯ
1. ಮೋಹನ್ ಕುಮಾರ್ ವಿರುದ್ಧದ ಮೊದಲ ಹತ್ಯೆ ಯತ್ನದ ಪ್ರಕರಣ ದಾಖಲಾದ ಬಳಿಕ ಪೊಲೀಸರು ಆತನ ಬಗ್ಗೆ ನಿಗಾ ಇರಿಸಬೇಕಿತ್ತು.
2. ಗಂಗಮ್ಮ ಪ್ರಕರಣದಲ್ಲಿ ಮೋಹನ್ ಕುಮಾರ್ ತೀವ್ರ ವಿಚಾರಣೆಗೆ ಒಳಪಡಲಿಲ್ಲ. ಹಾಗೆಯೇ ಠಾಣಾ ದಾಖಲೆಗಳಲ್ಲಿ ನಮೂದು ಕೂಡ ಇಲ್ಲ.
3. ಮೋಹನ್ ಕುಮಾರ್‌ನನ್ನು 2005ರಲ್ಲಿ ಸಾರ್ವಜನಿಕರು ಹಿಡಿದು ತಾವೇ ಠಾಣೆಗೆ ಕರೆದೊಯ್ಯುವ ತನಕ ಪೊಲೀಸರ ಕ್ರಮವಿಲ್ಲ. ಹಿಂದಿನ ವರ್ತನೆ ದಾಖಲಿಸಿದ್ದರೂ ಕ್ರಮವಿಲ್ಲ.
4. ಶಾಂತಿ ಎಂಬವರು ತೀವ್ರ ಕೋಮಾವಸ್ಥೆಯಲ್ಲಿದ್ದರೂ ತನಿಖೆ ಮುಂದುವರಿಯಲಿಲ್ಲ. ಅವರು ಮೋಹನ್ ಕುಮಾರ್ ಬಗ್ಗೆ ತಿಳಿಸಿರಲಿಲ್ಲ. ಆದರೆ ತನಿಖೆಯು ಅಷ್ಟರಲ್ಲೇ ಮುಕ್ತಾಯವಾಯಿತು.
ನಾಪತ್ತೆಯಾದವರ ಹುಡುಕಾಟದ ಪ್ರಕರಣಗಳ ತನಿಖೆ
1.ಗಡಿಭಾಗದ ಪೊಲೀಸ್ ಠಾಣೆಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕಾಗಿದೆ.
2. ಹುಡುಕಾಟದ ಪ್ರಕರಣಗಳ ಜಾಹೀರಾತುಗಳು ಎಲ್ಲಿ ಎಷ್ಟು ಹಂಚಲಾಯಿತು ಎಂಬುದರ ಮೇಲೆ ಗಮನವಿಲ್ಲ.
3. ಕೆಲವು ಪ್ರಕರಣಗಳಲ್ಲಿ ಪುರುಷರು ಮಹಿಳೆಯರ ಜೊತೆ ಫೋನ್ ಸಂಭಾಷಣೆ ನಡೆಸಿದ್ದರು. ಈ ಮಾಹಿತಿ ಆಧಾರವಾಗಿ ಮೊಬೈಲ್ ಟವರ್ ಲೊಕೇಷನ್ ಹುಡುಕಬೇಕಾಗಿತ್ತು.
4. ಒಂದು ಅಧಿಕಾರಿಯೇ ಒಂದು ವರ್ಷ ತನಿಖೆ ಮಾಡುವುದು ಉತ್ತಮ.
5. ಹುಡುಕಾಟದ ಪ್ರಕರಣಗಳ ಜೊತೆಗೆ ಯುಡಿಆರ್ ಪ್ರಕರಣಗಳನ್ನು ತಾಳೆ ಹಾಕಿ ನೋಡಬೇಕಾಗಿದೆ.
6.ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ಕ್ಲಾಕ್ ರೂಮ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡಬೇಕು.
7. ಮೇಲಧಿಕಾರಿಗಳು ಯುಡಿಆರ್ ಮತ್ತು ಹುಡುಕಾಟದ ಪ್ರಕರಣಗಳನ್ನು ಪರಿಶೀಲಿಸುತ್ತಿಲ್ಲ.
ಸಿಐಡಿ ಡಿಜಿಪಿಯಾಗಿದ್ದ ಡಾ.ಡಿ.ವಿ.ಗುರುಪ್ರಸಾದ್‌ರ SERIAL KILLER MOHAN KUMAR ಎಂಬ ಕೇಸ್ ಸ್ಟಡಿ ವರದಿಯು ಧರ್ಮಸ್ಥಳದ ನೂರಾರು ಮಹಿಳೆಯರ ನಾಪತ್ತೆ, ಅಸಹಜ ಸಾವು, ಪತ್ತೆಯಾಗದ ಕೊಲೆ ಪ್ರಕರಣಗಳಿಗೆ ಹೇಳಿ ಮಾಡಿಸಿದ ವರದಿಯಂತಿದೆ. 2010ರಲ್ಲೇ ಈ ವರದಿಯಲ್ಲಿ ‘ಸುತ್ತೋಲೆ’ಯನ್ನಾಗಿ ಎಲ್ಲ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ. ವಿಪರ್ಯಾಸವೆಂದರೆ, ಸಿಐಡಿ ಡಿಜಿಪಿಯವರ ಈ ವರದಿಯಲ್ಲೇ ಬೆಳ್ತಂಗಡಿ, ಧರ್ಮಸ್ಥಳ ಪೊಲೀಸರ ನಿರ್ಲಕ್ಷ್ಯ/ಅಪರಾಧದ ಬಗ್ಗೆ ಉಲ್ಲೇಖವಿದ್ದರೂ ಬೆಳ್ತಂಗಡಿ/ಧರ್ಮಸ್ಥಳ ಪೊಲೀಸರು ಆ ಬಳಿಕವೂ ಯುಡಿಆರ್ ಕೇಸ್, ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ನಿರ್ಲಕ್ಷಿಸುತ್ತಾರೆ ಎಂದರೆ ಆ ಅವಧಿಯ ಪೊಲೀಸರ ವಿರುದ್ಧ ತೀವ್ರತರನಾದ ಕಾನೂನು ಕ್ರಮಗಳು ಜರುಗಬೇಕಾದ ಅಗತ್ಯವಿದೆ.
ಮರಣೋತ್ತರ ಪರೀಕ್ಷೆಯಲ್ಲಿ ದೋಷಗಳು
1. ವೈದ್ಯರಿಗೆ ‘ಹೃದಯಾಘಾತ ಅಥವಾ ಫಿಟ್ಸ್‌ನಿಂದ ಸಾವು’ ಎಂಬ ತಪ್ಪು ಮಾಹಿತಿ ನೀಡಲಾಗಿದೆ.
2.ಅನಾಮಧೇಯ ಮೃತದೇಹಗಳ ಮರಣೋತ್ತರ ಪರೀಕ್ಷೆ ನಿರ್ಲಕ್ಷ್ಯದಿಂದ ನಡೆಸಲಾಗಿದೆ.
3. ಮರಣೋತ್ತರದ ಮೌಲ್ಯಮಾಪನದ ನಂತರ ಡಿಎನ್‌ಎ ಪ್ರೊಫೈಲ್ ಮಾಡದೆಯೇ ಮಾದರಿಗಳನ್ನು ನಾಶಪಡಿಸಲಾಗುತ್ತದೆ.
4. ಲೈಂಗಿಕ ದೌರ್ಜನ್ಯ ತಪಾಸಣೆಗೆ ಬೇಕಾದ ಸ್ಯಾಂಪಲ್‌ಗಳನ್ನು ಪಡೆಯಲಾಗಿಲ್ಲ.
5. ಪೋಸ್ಟ್ ಮಾರ್ಟಂ ವರದಿ ಮತ್ತು ತನಿಖೆಯ ಮಧ್ಯೆ ವ್ಯತ್ಯಾಸವಿದ್ದರೂ ವೈದ್ಯರ ಬಳಿ ಸ್ಪಷ್ಟನೆ ಕೇಳಲಾಗಿಲ್ಲ.
6. ಒಂದು ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯ ತಪಾಸಣೆಗೆ ವೈದ್ಯರು ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿದ್ದರು. ಆದ, ಪೊಲೀಸ್ ತನಿಖಾಧಿಕಾರಿಗಳು ವರದಿ ಕೇಳದ ಕಾರಣ ಲ್ಯಾಬ್ ಉತ್ತರ ನೀಡಿಲ್ಲ.