ಸೊಳ್ಳೆ ಕಾಟಕ್ಕೆ ದೇವದುರ್ಗ ಜನರ ಪರದಾಟ
ಸ್ವಚ್ಛತೆ ಕೊರತೆ, ಚರಂಡಿಯಲ್ಲಿ ನಿಂತ ಕೊಳಚೆ ನೀರು; ಫಾಗಿಂಗ್ಗೆ ಸಾರ್ವಜನಿಕರ ಆಗ್ರಹ
ದೇವದುರ್ಗ: ಪಟ್ಟಣದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಂಜೆ ಆಗುತ್ತಿದ್ದಂತೆ ಜನರು ಸೊಳ್ಳೆ ಕಾಟದಿಂದ ಪರದಾಡುವಂತಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಪುರಸಭೆ ಹಾಗೂ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ಪಟ್ಟಣದ ಹಲವು ವಾರ್ಡ್ಗಳಲ್ಲಿ ಚರಂಡಿಗಳಲ್ಲಿ ಕೊಳಚೆ ನೀರು ನಿಂತಿದ್ದು, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಕಸ ವಿಲೇವಾರಿ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿನ ಲೋಪದಿಂದಲೂ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಜ್ವರ, ತಲೆನೋವು, ವಾಂತಿ, ಬೇದಿ, ಮೈ-ಕೈ ನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಜನರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಟ್ಟಣದ ಹಲವು ವಾರ್ಡ್ಗಳಲ್ಲಿ ಸಮರ್ಪಕ ಸ್ವಚ್ಛತೆ ನಡೆಯುತ್ತಿಲ್ಲ. ಚರಂಡಿಗಳಲ್ಲಿ ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸದಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಕಸ ಹಾಗೂ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದೂ ಸಮಸ್ಯೆಗೆ ಕಾರಣವಾಗಿದೆ.
ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆಯೂ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಪ್ರತಿ ಶನಿವಾರ ನಡೆಯುವ ಸಂತೆಯಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದು, ಸಂತೆ ಮುಗಿದ ಬಳಿಕ ಸ್ಥಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಕೆರೆ, ಚರಂಡಿ ಸೇರಿದಂತೆ ವಿವಿಧೆಡೆ ಸೇರುತ್ತಿರುವುದರಿಂದ ಸ್ವಚ್ಛತೆ ಕಾಪಾಡುವುದು ಸವಾಲಾಗಿದೆ.
ಸೊಳ್ಳೆ ನಿಯಂತ್ರಣಕ್ಕಾಗಿ ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯ ಕೈಗೊಂಡು, ಫಾಗಿಂಗ್ ಹಾಗೂ ಕೀಟನಾಶಕ ಸಿಂಪಡಣೆ ನಡೆಸಬೇಕು. ಸಾರ್ವಜನಿಕರಲ್ಲೂ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮನೆಯಲ್ಲಿ ಸೊಳ್ಳೆ ಬತ್ತಿ, ಪರದೆ ಹಾಗೂ ಫ್ಯಾನ್ ಬಳಸುತ್ತಿದ್ದರೂ ಸೊಳ್ಳೆಗಳ ಕಾಟ ಕಡಿಮೆಯಾಗುತ್ತಿಲ್ಲ. ಫಾಗಿಂಗ್ ಹಾಗೂ ಕೀಟನಾಶಕ ಸಿಂಪಡಣೆ ನಡೆಯದಿರುವುದರಿಂದ ಮಕ್ಕಳು ಮತ್ತು ಹಿರಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
-ಸುರೇಶ ಬಾಗೂರು, ಪಟ್ಟಣ ನಿವಾಸಿ
ಸೊಳ್ಳೆಗಳ ಕಾಟದಿಂದ ಮಕ್ಕಳು, ಹಿರಿಯರು ಸಂಜೆ ವೇಳೆ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹಲವು ಬಾರಿ ದೂರು ನೀಡಿದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಬೇಕು.
-ವಿನೋದ ಪೊ. ಪಾಟೀಲ್,
ಯುವ ಮುಖಂಡ, ದೇವದುರ್ಗ