ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿದ್ದಕ್ಕಾಗಿಯೇ ದಕ್ಷಿಣ ರಾಜ್ಯಗಳು ಅನ್ಯಾಯಕ್ಕೆ ತುತ್ತಾಗಬೇಕಾಗಿದೆಯೇ?
ಜನಸಂಖ್ಯೆ ಆಧಾರಿತ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವ ಈಗಾಗಲೇ ಬಹಳ ಸಮಯದಿಂದ ಚರ್ಚೆಯಲ್ಲಿದೆ. ಅದನ್ನು ಭಾರತದ ಒಕ್ಕೂಟ ರಚನೆಗೆ ಹೊಡೆತ, ರಾಜ್ಯಗಳು ಮತ್ತು ಕೇಂದ್ರದ ನಡುವಿನ ಸಾಂವಿಧಾನಿಕ ಸಮತೋಲನಕ್ಕೆ ಬೆದರಿಕೆ ಎಂದೆಲ್ಲ ನೋಡಲಾಗುತ್ತಿದೆ.
ಕೇಂದ್ರದ ಜನಸಂಖ್ಯಾ ನಿಯಂತ್ರಣ ಯೋಜನೆಯ ಯಶಸ್ಸಿಗೆ ದೊಡ್ಡ ಪಾಲು ಕೊಟ್ಟಿರುವ ದಕ್ಷಿಣ ರಾಜ್ಯಗಳು ಆ ಕಾರಣಕ್ಕೇ ಈಗಾಗಲೇ ಅನ್ಯಾಯಕ್ಕೆ ಒಳಗಾಗಿವೆ. ಅದಕ್ಕಾಗಿ ಅವು ಶಿಕ್ಷೆ ಅನುಭವಿಸುವಂತೆ ಕಾಣುತ್ತಿದೆ.
ಇದನ್ನು ಆರ್‌ಬಿಐ ಮಾಜಿ ಗವರ್ನರ್ ಡಾ. ದುವ್ವರಿ ಸುಬ್ಬರಾವ್ ಬಹಳ ಸ್ಪಷ್ಟವಾಗಿ ಹೇಳುತ್ತಿದ್ದಾರೆ.
‘ದಿ ವೈರ್’ಗಾಗಿ ಕರಣ್ ಥಾಪರ್ ಅವರೊಂದಿಗಿನ ಮಾತುಕತೆಯಲ್ಲಿ, ದಕ್ಷಿಣ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿದ್ದಕ್ಕಾಗಿ ಹೇಗೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅನ್ಯಾಯ ಎದುರಿಸಬೇಕಾಗಿದೆ ಎಂಬುದನ್ನು ಡಾ. ಸುಬ್ಬರಾವ್ ವಿವರಿಸಿದ್ದಾರೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕಳೆದ ಒಂದು ವರ್ಷದಲ್ಲಿ ಹಲವಾರು ಸಲ ಒಂದು ಮಾತು ಹೇಳುತ್ತಾ ಬಂದಿದ್ದಾರೆ. ತಮ್ಮ ರಾಜ್ಯಗಳಲ್ಲಿ ಜನರು ಹೆಚ್ಚು ಮಕ್ಕಳನ್ನು ಹೊಂದಬೇಕಾಗಿದೆ ಎಂಬುದು ಅವರ ಪ್ರತಿಪಾದನೆ. ಜನಸಂಖ್ಯಾ ನಿಯಂತ್ರಣದಲ್ಲಿ ಸಾಧಿಸಿದ ಯಶಸ್ಸಿನಿಂದಾಗಿ ದಕ್ಷಿಣ ರಾಜ್ಯಗಳು ಆರ್ಥಿಕ ಮತ್ತು ರಾಜಕೀಯ ಅನ್ಯಾಯ ಎದುರಿಸಬೇಕಾಗಿದೆ ಎಂಬ ಕಳವಳ ಅವರ ಈ ಮಾತಿನಲ್ಲಿದೆ ಎಂಬುದನ್ನು ಡಾ. ಸುಬ್ಬರಾವ್ ಉಲ್ಲೇಖಿಸುತ್ತಾರೆ.
ಜನಸಂಖ್ಯಾ ನಿಯಂತ್ರಣದಿಂದಾಗಿ ಈ ರಾಜ್ಯಗಳು ಬಲಿಪಶುಗಳಾಗುವಂತಾಗಿದೆ ಎಂಬುದು ಈ ರಾಜಕೀಯ ನಾಯಕರ ಮಾತುಗಳಲ್ಲಿ ವ್ಯಕ್ತವಾಗಿದೆ.
ಜನಸಂಖ್ಯಾ ನಿಯಂತ್ರಣದಲ್ಲಿ ಈ ರಾಜ್ಯಗಳು ಸಾಧಿಸಿದ ಯಶಸ್ಸೇ ಹೇಗೆ ಇವಕ್ಕೆ ಮಾರಕವಾಗಿ ಪರಿಣಮಿಸಿದೆ ಎಂಬುದನ್ನು ಡಾ. ಸುಬ್ಬರಾವ್ ವಿವರಿಸಿದ್ದಾರೆ.
ರಾಜ್ಯಗಳಿಗೆ ಕೇಂದ್ರ ಸಂಪನ್ಮೂಲ ವರ್ಗಾವಣೆ ನಡೆಯುವಾಗ, ರಾಜ್ಯದ ಜನಸಂಖ್ಯೆ ಪರಿಗಣನೆಗೆ ಬರುತ್ತದೆ.
ಕೇಂದ್ರ ಸರಕಾರ ಸಂಗ್ರಹಿಸುವ ಪ್ರತೀ ರೂಪಾಯಿ ತೆರಿಗೆಗೆ ಪ್ರತಿಯಾಗಿ ರಾಜ್ಯಗಳಿಗೆ 41 ಪೈಸೆ ನೀಡುತ್ತದೆ. ಆ 41 ಪೈಸೆಯ ಬೆಲೆಗಳನ್ನು ನಿರ್ಧರಿಸಲು ಇರುವ ಮಾನದಂಡ ಕೂಡ ಜನಸಂಖ್ಯೆ. ಹೆಚ್ಚಿನ ಜನಸಂಖ್ಯೆಯುಳ್ಳ ರಾಜ್ಯಗಳು ಹೆಚ್ಚು ಪಡೆಯುತ್ತವೆ.
ಇನ್ನು ಗ್ರಾಮೀಣ ಉದ್ಯೋಗ ಖಾತರಿ, ಆಯುಷ್ಮಾನ್ ಭಾರತ್ ಮೊದಲಾದ ಕೇಂದ್ರ ಪ್ರಾಯೋಜಿತ ಯೋಜನೆಗಳ ಫಂಡ್ ಕೂಡ ಜನಸಂಖ್ಯೆಯ ಅನುಪಾತದಲ್ಲಿ ಹಂಚಿಕೆಯಾಗುವ ಸಾಧ್ಯತೆಯೇ ಹೆಚ್ಚು.
ಇದಲ್ಲದೆ, ರಸ್ತೆಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು ಇಂಥ ಕೇಂದ್ರ ಹೂಡಿಕೆಯ ವಲಯಗಳಲ್ಲಿಯೂ ಜನಸಂಖ್ಯೆಯನ್ನು ನಿಯಂತ್ರಿಸಿದ ರಾಜ್ಯಗಳು ಹೆಚ್ಚಿನ ನಷ್ಟ ಅನುಭವಿಸಿವೆ. ಡಾ.ಸುಬ್ಬರಾವ್ ಹೇಳುವಂತೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆಯೆಂಬ ಗ್ರಹಿಕೆ ಬಲಗೊಳ್ಳುತ್ತಿದೆ.
ಆರ್ಥಿಕವಾಗಿ ಅವು ರಾಷ್ಟ್ರೀಯ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ. ಆದರೆ ಅದಕ್ಕೆ ಪ್ರತಿಯಾಗಿ ಪಡೆಯುತ್ತಿರುವುದು ಕಡಿಮೆ.
ಕೇಂದ್ರಕ್ಕೆ ಕೊಡುವ ಪ್ರತೀ ರೂಪಾಯಿಗೆ ಪ್ರತಿಯಾಗಿ ಪಡೆಯುವುದು ಒಂದು ರೂಪಾಯಿಗಿಂತ ಕಡಿಮೆ. ಆದರೆ ಇದಕ್ಕೆ ಪೂರ್ತಿ ವಿರುದ್ಧವಾಗಿ, ಹೆಚ್ಚಿನ ಜನಸಂಖ್ಯೆ ಮತ್ತು ಕಡಿಮೆ ತಲಾ ಆದಾಯ ಹೊಂದಿರುವ ಉತ್ತರ ರಾಜ್ಯಗಳು ತಾವು ನೀಡುವುದಕ್ಕಿಂತ ಹೆಚ್ಚನ್ನು ಪಡೆಯುತ್ತವೆ. ಹಾಗಾಗಿಯೇ, ದಕ್ಷಿಣ ರಾಜ್ಯಗಳು ತಮ್ಮ ಮೇಲಿನ ಅನ್ಯಾಯವನ್ನು ಪ್ರಶ್ನಿಸಲು ಪ್ರಾರಂಭಿಸಿವೆ ಎಂದು ಡಾ.ಸುಬ್ಬರಾವ್ ಹೇಳುತ್ತಾರೆ.
ಇದು ಒಕ್ಕೂಟ ವ್ಯವಸ್ಥೆಯಲ್ಲಿ ದೊಡ್ಡ ಹೊಡೆತ ಮತ್ತು ಸಹಕಾರಿ ಒಕ್ಕೂಟದ ತತ್ವ ಕುಸಿಯಲು ಕಾರಣವಾಗುವ ಅಂಶ ಎನ್ನುತ್ತಾರೆ ಅವರು.
ಇನ್ನು ಕ್ಷೇತ್ರ ಮರುವಿಂಗಡಣೆ ವಿಷಯ.
ಪ್ರತೀ ಜನಗಣತಿಯ ನಂತರ ದೇಶಾದ್ಯಂತ ಸಮಾನ ಪ್ರಾತಿನಿಧ್ಯ ಇರುವಂತೆ ಸರಿಹೊಂದಿಸಲು ಹೊಸ ಮರುವಿಂಗಡಣೆ ಅಗತ್ಯವಾಗುತ್ತದೆ.
ಕ್ಷೇತ್ರಗಳ ಜನಸಂಖ್ಯೆ ಗಮನಿಸಿದರೆ, 30 ಲಕ್ಷದಷ್ಟು ಜನಸಂಖ್ಯೆ ಹೊಂದಿರಬಹುದಾದ ಕ್ಷೇತ್ರಗಳು ಒಂದೆಡೆ ಇರುವಂತೆ, ಬರೀ 5 ಲಕ್ಷ ಜನಸಂಖ್ಯೆ ಇರುವ ಕ್ಷೇತ್ರಗಳೂ ಇವೆ. ಆದ್ದರಿಂದ ಪ್ರತಿನಿಧಿಸುವ ಜನರ ಸಂಖ್ಯೆಯಲ್ಲಿನ ಈ ಅಸಮಾನತೆ ಒಂದು ಸಮಸ್ಯೆಯಾಗಿದೆ.
ನಮ್ಮ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತಕ್ಕೆ ಒಂದು ಮೌಲ್ಯ ಎಂಬ ತತ್ವವಿದೆ. ಆದರೆ ಜನಸಂಖ್ಯೆಯ ಅಗಾಧ ವ್ಯತ್ಯಾಸಗಳಿರುವ ಕ್ಷೇತ್ರಗಳನ್ನು ಗಮನಿಸಿದರೆ, ಅಂಥಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತಕ್ಕೆ ಒಂದು ಮೌಲ್ಯ ಇರುವುದಿಲ್ಲ. ಅದಕ್ಕಾಗಿಯೇ ಇದನ್ನು ಪರಿಹರಿಸಲು ಡಿಲಿಮಿಟೇಶನ್ ಅಗತ್ಯವಿದೆ. ಇಲ್ಲದಿದ್ದರೆ ಈ ವ್ಯತ್ಯಾಸ, ಈ ಅಸಮಾನತೆ ಮುಂದುವರಿಯುತ್ತದೆ.
ಈಗ ಡಿಲಿಮಿಟೇಶನ್ ನಡೆದರೆ ತಮಿಳುನಾಡು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಈಗಿರುವ 39 ಸ್ಥಾನಗಳಿಂದ ಕೇವಲ 31ಕ್ಕೆ ಕುಗ್ಗುತ್ತದೆ. ಅದಕ್ಕಾಗಿಯೇ ಡಿಲಿಮಿಟೇಶನ್ ಅನ್ನು ದಕ್ಷಿಣ ಭಾರತದ ನೆತ್ತಿಯ ಮೇಲಿನ ಕತ್ತಿ ಎಂದು ಕರೆಯಲಾಗುತ್ತಿದೆ. ಹೀಗಾದಲ್ಲಿ, ತಮಿಳುನಾಡಿನಂಥ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗುತ್ತದೆ.
ಅದು ಕೇವಲ ಸಂಸದೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದಿಲ್ಲ. ಬದಲಾಗಿ ಅದು ರಾಜಕೀಯ ಪ್ರಭಾವವನ್ನು ಕಳೆದುಕೊಳ್ಳುತ್ತದೆ. ಉತ್ತರ ಮತ್ತು ದಕ್ಷಿಣದ ನಡುವಿನ ರಾಜಕೀಯ ಸಮತೋಲನ ಉತ್ತರದ ಪರವಾಗಿ ಬದಲಾಗಲಿದೆ ಎಂಬುದು ಡಾ.ಸುಬ್ಬರಾವ್ ಅಭಿಪ್ರಾಯ.
ಮಾತುಕತೆಯಲ್ಲಿ ಯೋಗೇಂದ್ರ ಯಾದವ್ ಅವರ ಒಂದು ಅಭಿಪ್ರಾಯವನ್ನೂ ಪ್ರಸ್ತಾಪಿಸಲಾಗಿದೆ.
ಕೇಂದ್ರದ ಸಂಪನ್ಮೂಲಗಳನ್ನು ನ್ಯಾಯಯುತ ಮತ್ತು ಸಮಾನತೆ ಆಧಾರದ ಮೇಲೆ ಹಂಚಬೇಕು ಎಂದು ದಕ್ಷಿಣ ರಾಜ್ಯಗಳು ಒಪ್ಪಿಕೊಂಡಿರುವಂತೆಯೇ, ದಕ್ಷಿಣ ರಾಜ್ಯಗಳ ರಾಜಕೀಯ ಪ್ರಭಾವ ಕಡಿಮೆಯಾಗದಂತೆ ಮರುವಿಂಗಡಣೆ ಬಗ್ಗೆ ಉತ್ತರ ರಾಜ್ಯಗಳು ಒಪ್ಪಿಕೊಳ್ಳಬೇಕು ಎಂಬುದು ಯೋಗೇಂದ್ರ ಯಾದವ್ ಸಲಹೆ.
ಆದರೆ ಅದು ಮಾಡಲು ತುಂಬಾ ಕಷ್ಟಕರವಾದದ್ದೆಂಬುದು ಡಾ. ಸುಬ್ಬರಾವ್ ವಾದವಾಗಿದೆ.
ಪ್ರತಿಯೊಂದು ಒಕ್ಕೂಟ ವ್ಯವಸ್ಥೆಯೂ ಕೇಂದ್ರ-ರಾಜ್ಯಗಳ ನಡುವಿನ ದೊಡ್ಡ ಚೌಕಾಸಿಯೇ ಆಗಿದ್ದರೂ, ಇಂಥದೊಂದು ದೊಡ್ಡ ಮಟ್ಟದ ಚೌಕಾಸಿ ಕಾರ್ಯರೂಪಕ್ಕೆ ಬರುತ್ತದೆಂಬ ನಂಬಿಕೆಯಿಲ್ಲ. ಹಾಗಾಗಿ, ಅದಕ್ಕಿಂತ ಬೇರೆ ಬಗೆಯ ಸೂಕ್ತ ಪರಿಹಾರವನ್ನು ಹುಡುಕಬೇಕಿದೆ ಎನ್ನುತ್ತಾರೆ.
ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳು ಸೀಟುಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಅಮಿತ್ ಶಾ ಈಗಾಗಲೇ ಹೇಳಿದ್ದಾರೆ. ಆದರೆ, ಇಂಥ ಭರವಸೆ ನೀಡಿರುವ ಅವರು, ಉತ್ತರ ರಾಜ್ಯಗಳ ಸೀಟುಗಳ ಸಂಖ್ಯೆ ಹೆಚ್ಚಾಗುವುದಿಲ್ಲ ಎಂಬ ಯಾವುದೇ ಗ್ಯಾರಂಟಿಯನ್ನು ನೀಡಿಲ್ಲ.
ದಕ್ಷಿಣ ರಾಜ್ಯಗಳು ಸೀಟುಗಳನ್ನು ಕಳೆದುಕೊಳ್ಳದೆ, ಉತ್ತರ ರಾಜ್ಯಗಳು ಹೆಚ್ಚು ಸೀಟುಗಳನ್ನು ಪಡೆದರೆ ಆಗಲೂ ಉತ್ತರ ಮತ್ತು ದಕ್ಷಿಣದ ನಡುವಿನ ರಾಜಕೀಯ ಸಮತೋಲನ ಉತ್ತರದ ಪರವಾಗಿ ವಾಲುತ್ತದೆ. ಅದು ದಕ್ಷಿಣ ರಾಜ್ಯಗಳ ಅಸಮಾಧಾನಕ್ಕೆ ಎಡೆ ಮಾಡಿಕೊಡುತ್ತದೆ.
ಈಗ ಬಿಜೆಪಿ ಪುನರ್ವಿಂಗಡಣೆಯನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ದೊಡ್ಡ ಪ್ರಶ್ನೆ. ಎಲ್ಲವೂ ಬಿಜೆಪಿ ಅದನ್ನು ಹೇಗೆ ನಿಭಾಯಿಸಲಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಡಾ. ಸುಬ್ಬರಾವ್ ಒಪ್ಪುತ್ತಾರೆ.
ದಕ್ಷಿಣದ ಕಾಳಜಿಗಳನ್ನು ಗಣನೆಗೆ ತೆಗೆದುಕೊಂಡು ಅವುಗಳನ್ನು ಸಮಾಧಾನಪಡಿಸುತ್ತದೆಯೆ? ಅಥವಾ ಬಿಜೆಪಿ ಹೆಚ್ಚು ಬಲವಾಗಿರುವ ಉತ್ತರ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯವನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತದೆಯೆ?
ಬಿಜೆಪಿ ಯಾವುದೇ ಪರಿಹಾರಕ್ಕೆ ಬಂದರೂ ಅದು ಉತ್ತರಕ್ಕೆ ಹೆಚ್ಚು ಲಾಭದಾಯಕವಾಗಬಹುದು.
ಬಹುಶಃ ದಕ್ಷಿಣಕ್ಕೆ ಸೀಟುಗಳ ನಷ್ಟವಾಗದಿದ್ದರೂ, ಖಂಡಿತವಾಗಿಯೂ ದಕ್ಷಿಣಕ್ಕೆ ಅನನುಕೂಲಕರ ಸ್ಥಿತಿ ಇರಬಹುದು.
ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳಿಗಿಂತ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದರೆ ಅದು ರಾಜಕೀಯವಾಗಿ ಬಿಜೆಪಿಗೆ ಲಾಭ ತರುತ್ತದೆ. ದಕ್ಷಿಣದಲ್ಲಿ ಅದರ ರಾಜಕೀಯ ಪ್ರಭಾವಕ್ಕೆ ಹೋಲಿಸಿದರೆ ಉತ್ತರ ರಾಜ್ಯಗಳಲ್ಲಿ ಪ್ರಬಲವಾಗಿದ್ದು, ಬಿಜೆಪಿ ಆ ರಾಜ್ಯಗಳಲ್ಲಿ ತನ್ನ ಶಕ್ತಿಯನ್ನು ಬಲಪಡಿಸಲು ಅವಕಾಶವಿದ್ದರೆ, ಖಂಡಿತವಾಗಿಯೂ ಅದನ್ನು ಮಾಡಲು ಬಯಸುತ್ತದೆ ಎಂದು ಡಾ. ಸುಬ್ಬರಾವ್ ಹೇಳುತ್ತಾರೆ.
ಈಗ ಬಿಜೆಪಿ ತನ್ನ ರಾಜಕೀಯ ಲಾಭವನ್ನು ನೋಡುವ ನಿರ್ಧಾರ ತೆಗೆದುಕೊಳ್ಳುತ್ತದೆಯೇ ಅಥವಾ ದೇಶದ ದೃಷ್ಟಿಯಿಂದ ನೋಡುತ್ತದೆಯೇ ಎಂಬುದು ಪ್ರಶ್ನೆ.
ದಕ್ಷಿಣವನ್ನು ಸಮಾಧಾನಪಡಿಸುವುದು ವಿಶಾಲವಾದ, ರಾಷ್ಟ್ರೀಯ ಹಿತಾಸಕ್ತಿಯದ್ದಾದ ಹೆಜ್ಜೆಯಾಗಿರುತ್ತದೆ. ಆದರೆ ಉತ್ತರ ರಾಜ್ಯಗಳಿಗೆ ಸೀಟುಗಳನ್ನು ಹೆಚ್ಚಿಸುವುದು ನೇರವಾಗಿ ಬಿಜೆಪಿಯ ರಾಜಕೀಯ ಲಾಭಕ್ಕೆ ಕಾರಣವಾಗುತ್ತದೆ.
ಆದ್ದರಿಂದ, ಆಡಳಿತ ಪಕ್ಷವಾಗಿ ಬಿಜೆಪಿ ತನಗೇನು ಪ್ರಯೋಜನ ಎಂಬುದರ ಲೆಕ್ಕಾಚಾರದ ಮೇಲೆ, ಮತ್ತೊಂದು ಅವಧಿಯನ್ನು ಗೆಲ್ಲುವುದಕ್ಕಾಗಿ ತಂತ್ರ ಮಾಡುತ್ತದೆಯೇ ಅಥವಾ ಅದನ್ನು ಮೀರಿ ನಿರ್ಧಾರ ತೆಗೆದುಕೊಳ್ಳುತ್ತದೆಯೆ?