ವಿಜಯಪುರ ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯರ ಸ್ಥಳಾಂತರ?
ದೇವನಹಳ್ಳಿ : ತಾಲೂಕಿನ ವಿಜಯಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ತ್ರೀರೋಗ ತಜ್ಞರು, ಅರಿವಳಿಕೆ ತಜ್ಞರು, ಮತ್ತು ಮಕ್ಕಳ ತಜ್ಞರನ್ನು ತಾಯಿ ಮತ್ತು ಮಕ್ಕಳ ಸಾವಿನ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ತಾಲೂಕು ಕೇಂದ್ರ ಆಸ್ಪತ್ರೆಗೆ ಸ್ಥಳಾಂತರ ಮಾಡಲು ಆರೋಗ್ಯ ಇಲಾಖೆ ನಡಾವಳಿಯಲ್ಲಿ ಪ್ರಸ್ತಾಪಿಸಿದ್ದು, ಇಲ್ಲಿ ಕೇವಲ ಎಂಬಿಬಿಎಸ್ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಪಟ್ಟಣ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರತಿನಿತ್ಯ 350 ಕ್ಕೂ ಹೆಚ್ಚು ಮಂದಿ ರೋಗಿಗಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರ 100 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆರಿಗೆ ಮಾಡಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಪಟ್ಟಿ ಮಾಡಿದ್ದು, ಈ ಪಟ್ಟಿಯಲ್ಲಿ ವಿಜಯಪುರವೂ ಸೇರಿದೆ.
ಆಸ್ಪತ್ರೆಗೆ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಸ್ತ್ರೀ ರೋಗ ತಜ್ಞರ ಬಳಿಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಹೆರಿಗೆ ಮಾಡಿಸಿಕೊಳ್ಳಲು ಬಂದಾಗ, ವೈದ್ಯರು ಪಾಳಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಕಾರಣ, ತಾಲೂಕು ಆಸ್ಪತ್ರೆಗೆ ಹೆರಿಗೆ ಮಾಡಿಸಿಕೊಳ್ಳುವುದರಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಗುತ್ತಿರುವ ಪ್ರಮಾಣ ಕಡಿಮೆಯಾಗುತ್ತಿದೆ. ತ್ರಿವಳಿ ವೈದ್ಯರ ತಂಡ ಸಮರ್ಪಕವಾಗಿ ಒಂದೇ ಬಾರಿಗೆ ಕರ್ತವ್ಯ ನಿರ್ವಹಿಸಿದರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗುವ ಪ್ರಮಾಣವೂ ಏರಿಕೆಯಾಗಲಿದೆ.
ಇಲ್ಲಿನ ತಜ್ಞ ವೈದ್ಯರು, ಒಬ್ಬೊಬ್ಬರೂ ಪಾಳಿ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸುವ ಕಾರಣ, ಹೆರಿಗೆಗಾಗಿ ಬರುವ ಗರ್ಭಿಣಿಯರು, ತಜ್ಞ ವೈದ್ಯರಿಲ್ಲದ ಕಾರಣ, ತಾಲೂಕು ಆಸ್ಪತ್ರೆಯನ್ನೂ ಬಿಟ್ಟು, ಬೇರೆ ಆಸ್ಪತ್ರೆಗಳಿಗೆ ಹೋಗಿ, ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರು ಕೇವಲ ಹೆರಿಗೆ ಮಾತ್ರವಲ್ಲದೆ, ಫಿಸಿಷಿಯನ್‌ಗಳಾಗಿಯೂ ಕೆಲಸ ಮಾಡುತ್ತಿದ್ದು, ವೈದ್ಯರನ್ನು ಇಲ್ಲಿಂದ ಸ್ಥಳಾಂತರ ಮಾಡಿದರೆ, ಇಲ್ಲಿಗೆ ಬರುವ ಹೊರರೋಗಿಗಳಿಗೆ ತುಂಬಾ ತೊಂದರೆಯಾಗಲಿದೆ.
ಮೇಲ್ದರ್ಜೆಗೇರಿಸಲು ಒತ್ತಾಯ: ಪಟ್ಟಣದಲ್ಲಿ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಇಲ್ಲಿಗೆ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಔಷಧಿಗಳ ಕೊರತೆ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 2 ತಿಂಗಳಿನಿಂದ ಔಷಧಿಗಳ ಕೊರತೆ ಕಾಡುತ್ತಿದೆ. ಕೆಮ್ಮಿನ ಸಿರಪ್, ಡೈಕ್ಲೋ ಚುಚ್ಚು ಮದ್ದು, ಬಾಟಲಿಗಳು, ಡ್ರಿಪ್‌ಸೆಟ್‌ಗಳ ಕೊರತೆ ಕಾಡುತ್ತಿದೆ ಎಂದು ಇಲ್ಲಿಗೆ ಬರುತ್ತಿರುವ ರೋಗಿಗಳು ಅಲವತ್ತುಕೊಂಡಿದ್ದು ತ್ವರಿತವಾಗಿ ಔಷಧಿಗಳನ್ನು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದ ಬಾಟಲಿಗಳನ್ನು ಕ್ವಾರಂಟೈನ್‌ನಲ್ಲಿ ಇಟ್ಟು ಪರೀಕ್ಷೆಗೆ ಕಳುಹಿಸಿದ್ದರು. ಈಗ ಬಿಡುಗಡೆ ಮಾಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಗಳಿಗೆ ಔಷಧಿಗಳ ಪೂರೈಕೆಯಾಗಲಿದೆ. ಉಳಿದ ಔಷಧಿಗಳನ್ನೂ ಪೂರೈಕೆ ಮಾಡಲಾಗುತ್ತದೆ. ವೈದ್ಯರನ್ನು ಸ್ಥಳಾಂತರಿಸುವುದು ಸರಕಾರದ ನಿರ್ಧಾರ.
-ಡಾ.ಲಕ್ಕಾಕೃಷ್ಣಾರೆಡ್ಡಿ, ಡಿಎಚ್‌ಒ ಬೆಂ.ಗ್ರಾ, ಜಿಲ್ಲೆ