ರಾಯಚೂರಿನಲ್ಲಿ ಭೂಗರ್ಭ ರಹಸ್ಯಗಳ ಅನ್ವೇಷಣೆ
ಹೆಲಿಬೋನ್ ಏರಿಯಲ್ ಸಮೀಕ್ಷೆ ಆರಂಭ ಕಬ್ಬಿಣ, ಯುರೇನಿಯಂ, ಚಿನ್ನದ ಶೋಧನೆಗೆ ಕೇಂದ್ರದ ಹೆಜ್ಜೆ
ಸಾಂದರ್ಭಿಕ ಚಿತ್ರ
ರಾಯಚೂರು: ಜಿಲ್ಲೆಯಲ್ಲಿ ಅಪರೂಪದ ಖನಿಜ ಸಂಪತ್ತಿನ ಪತ್ತೆಗೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಹೆಜ್ಜೆ ಇಡಲಾಗಿದೆ. ಭಾರತ ಸರಕಾರದ ಗಣಿಗಾರಿಕೆ ಸಚಿವಾಲಯದ ಅಧೀನದ ಭೌಗೋಳಿಕ ವಾಯು ಸಮೀಕ್ಷಾ ವಿಭಾಗವು (ಜಿಎಸ್‌ಐ)ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೆಲಿಬೋನ್ ಏರಿಯಲ್ ಸಮೀಕ್ಷೆ ಆರಂಭವಾಗಿದೆ.
ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸುತ್ತಮುತ್ತ ಹಾಗೂ ರಾಯಚೂರು ನಗರ ಹೊರವಲಯದ ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಕಬ್ಬಿಣ, ಯುರೇನಿಯಂ ಮತ್ತು ಚಿನ್ನ ಸೇರಿದಂತೆ ಮೌಲ್ಯಯುತ ಖನಿಜ ಸಂಪನ್ಮೂಲಗಳ ಪತ್ತೆಗಾಗಿ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ಈಗಾಗಲೇ ಕಾರ್ಯಾರಂಭವಾಗಿದ್ದು, ಏಪ್ರಿಲ್ 30ರವರೆಗೆ ಹಂತ ಹಂತವಾಗಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವ ತಂತ್ರಜ್ಞಾನ ಬಳಸಲಾಗುತ್ತಿದೆ? :
ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಟೈಮ್ ಡೊಮೇನ್ ಎಲೆಕ್ಟ್ರೊ ಮ್ಯಾಗ್ನೆಟಿಕ್ ಹಾಗೂ ಮ್ಯಾಗ್ನೆಟಿಕ್ ಭೂ-ಭೌತಿಕ ಸಮೀಕ್ಷೆ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಹೆಲಿಕಾಪ್ಟರ್‌ಗೆ ವಿಶೇಷ ಸಾಧನಗಳನ್ನು ಅಳವಡಿಸಿ ಭೂಗರ್ಭದ ವಿದ್ಯುತ್ ವಾಹಕತೆ ಹಾಗೂ ಚುಂಬಕೀಯ ಲಕ್ಷಣಗಳನ್ನು ಅಳೆಯಲಾಗುತ್ತದೆ.
ಈ ದತ್ತಾಂಶಗಳ ಆಧಾರದ ಮೇಲೆ ಭೂಗರ್ಭದಲ್ಲಿ ಖನಿಜಗಳ ಅಸ್ತಿತ್ವದ ಸಾಧ್ಯತೆಗಳ ನಕ್ಷೆ ತಯಾರಿಸಲಾಗುತ್ತದೆ. ಸಂಭಾವ್ಯ ಪ್ರದೇಶಗಳು ಗುರುತಾದ ಬಳಿಕ ಮಾತ್ರ ಬೋರ್‌ವೆಲ್ ಮೂಲಕ ತಪಾಸಣಾ ತೊಡಕು (ಡ್ರಿಲ್ಲಿಂಗ್) ಕೈಗೊಳ್ಳಲಾಗುತ್ತದೆ.
ರಾಷ್ಟ್ರೀಯ ಮಟ್ಟದ ಪೈಲಟ್ ಯೋಜನೆ :
ಹೆಲಿಬೋನ್ ಸಮೀಕ್ಷೆ ರಾಷ್ಟ್ರೀಯ ಮಟ್ಟದ ಪೈಲಟ್ ಯೋಜನೆಯಡಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಈ ಹಿಂದೆ ರಾಜಸ್ಥಾನದ ಸಿರೋಹಿ ಹಾಗೂ ಒಡಿಶಾದ ಸಂಬಲ್ಪುರ, ದೇವಗಢ, ಧೆಂಕನಾಲ್, ಜಾಜ್ಪುರ್ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿತ್ತು.
ಇದೀಗ ಆಂಧ್ರ ಪ್ರದೇಶದ ಸತ್ಯ ಸಾಯಿ (ಪುಟ್ಟಪರ್ಥಿ) ಹಾಗೂ ಕರ್ನಾಟಕದ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗಗಳಲ್ಲೂ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಈ ಸಮೀಕ್ಷೆಗಳನ್ನು ಬೆಂಗಳೂರಿನ ಜಿಎಸ್‌ಐ ದೂರ ಸಂವೇದಿ ಮತ್ತು ವಾಯು ಸಮೀಕ್ಷಾ ವಿಭಾಗದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ.
ಹಾರಾಟದ ವಿವರ :
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕಾರ್ಯಾಚರಣೆ (ಪ್ರತಿ ಹಾರಾಟ ಸುಮಾರು 3 ಗಂಟೆ) ಭೂಮಿಯ ಮೇಲ್ಮಟ್ಟದಿಂದ 200-1000 ಅಡಿ ಎತ್ತರದಲ್ಲಿ ಹಾರಾಟ ಹವಾಮಾನ ಅನುಕೂಲಕ್ಕೆ ಅನುಗುಣವಾಗಿ ವೇಳಾಪಟ್ಟಿ ಸಮೀಕ್ಷೆಗೆ ಅಗತ್ಯ ಅನುಮತಿಗಳನ್ನು ವಿವಿಧ ಸರಕಾರಿ ಸಂಸ್ಥೆಗಳಿಂದ ಪಡೆಯಲಾಗಿದೆ. ಜಿಎಸ್‌ಐ ನಿರ್ದೇಶಕ ಡಾ. ರಾಜೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಹಕಾರ ಕೋರಿದ್ದಾರೆ. ಅದರಂತೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ಪರಿವೀಕ್ಷಕರಿಗೆ ಅಗತ್ಯ ಭದ್ರತೆ ಮತ್ತು ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ.
ಹಟ್ಟಿ ಚಿನ್ನದ ಗಣಿ, ಬಳಿಕ ಸಂಶೋಧನೆ :
ಭೂಗರ್ಭದಲ್ಲಿ ಖನಿಜ ಸಂಪತ್ತು ಇರುವ ಪ್ರದೇಶಗಳಲ್ಲಿ ಕೆಲವೊಂದು ಸಸ್ಯವರ್ಗದ ಬೆಳವಣಿಗೆ, ಮಣ್ಣಿನ ಬಣ್ಣ, ಚುಂಬಕೀಯ ಲಕ್ಷಣಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇವು ಭೂ ವಿಜ್ಞಾನಿಗಳಿಗೆ ಮಹತ್ವದ ಸೂಚಕಗಳಾಗುತ್ತವೆ.
ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ ಹಟ್ಟಿ ಚಿನ್ನದ ಗಣಿ ಅಸ್ತಿತ್ವದಲ್ಲಿರುವ ಹಿನ್ನೆಲೆಯಲ್ಲಿ ಇತರೆ ಮೌಲ್ಯಯುತ ಖನಿಜ ಸಂಪನ್ಮೂಲಗಳ ಸಾಧ್ಯತೆಗಳತ್ತ ಜಿಎಸ್‌ಐ ಗಮನ ಹರಿಸಿದೆ.
ಏರಿಯಲ್ ಸಮೀಕ್ಷೆಯಿಂದ ದೊರೆಯುವ ದತ್ತಾಂಶ ಆಧರಿಸಿ ಮುಂದಿನ ಹಂತದಲ್ಲಿ ನೆಲಮಟ್ಟದ ತಪಾಸಣೆ ನಡೆಯಲಿದೆ. ಸದ್ಯಕ್ಕೆ ಕೇವಲ ವಾಯು ಸಮೀಕ್ಷೆ ಮಾತ್ರ ನಡೆಯುತ್ತಿದ್ದು, ಗಣಿಗಾರಿಕೆ ಕಾರ್ಯಾಚರಣೆ ಪ್ರಾರಂಭವಾಗಿಲ್ಲ ಎಂದು ಇಲಾಖಾ ಮೂಲಗಳು ಸ್ಪಷ್ಟಪಡಿಸಿವೆ.
ಈ ಸಮೀಕ್ಷೆ ಯಶಸ್ವಿಯಾದರೆ ಜಿಲ್ಲೆಗೆ ಹೊಸ ಕೈಗಾರಿಕಾ ಹೂಡಿಕೆ, ಉದ್ಯೋಗಾವಕಾಶ ಹಾಗೂ ಆರ್ಥಿಕ ಚೈತನ್ಯ ಸಿಗುವ ಸಾಧ್ಯತೆ ಇದೆ. ಆದರೆ, ಪರಿಸರ ಸಂರಕ್ಷಣೆ ಹಾಗೂ ಸ್ಥಳೀಯ ಜನರ ಹಿತಾಸಕ್ತಿ ಕಾಪಾಡುವ ವಿಚಾರವೂ ಸಮಾನವಾಗಿ ಗಮನದಲ್ಲಿರಬೇಕಿದೆ.
ರಾಯಚೂರು ಭೂಗರ್ಭ ಸಂಪತ್ತಿನ ನಕ್ಷೆಯಲ್ಲಿ ಮತ್ತೊಮ್ಮೆ ಗಮನ ಸೆಳೆಯಬಹುದೇ ಎಂಬುದು ಈ ಸಮೀಕ್ಷೆಯ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.
ಟಿಡಿಇಎಮ್ ವಿಧಾನವು ಕಾಂತೀಯ ದತ್ತಾಂಶ ದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಭೂಗತ ಭೂವೈಜ್ಞಾನಿಕ ರಚನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಮೂಲ್ಯವಾದ ಖನಿಜ ನಿಕ್ಷೇಪಗಳೊಂದಿಗೆ ಸಂಬಂಧಿಸಿದ ವಾಹಕ ವಲಯಗಳನ್ನು ಸೂಚಿಸುತ್ತದೆ. ಇದು ಭಾರತದ ಖನಿಜ ಪರಿಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಅದರ ಗಣಿಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವ ವಿಶಾಲ ಉಪಕ್ರಮದ ಒಂದು ಭಾಗವಾಗಿದೆ. ಮೆಸ್ಸರ್ಸ್ ಎಕ್ಸ್ಕ್ಯಾಲಿಬರ್ ಮೆಕ್‌ಫಾರ್ ಪ್ರೈವೇಟ್ ಲಿಮಿಟೆಡ್ ಹೆಲಿಬೋರ್ನ್ ಟೈಮ್ ಡೊಮೇನ್ ಎಲೆಕ್ಟ್ರೋಮ್ಯಾಗ್ನೆಟಿಕ್ (ಟಿಡಿಇಎಮ್) ಮತ್ತು ಮ್ಯಾಗ್ನೆಟಿಕ್ ಸಮೀಕ್ಷೆಗಳಿಗಾಗಿ ಯೋಜನಾ ಅನುಷ್ಠಾನ ಸಂಸ್ಥೆ (ಪಿಎಲ್‌ಎ) ಆಗಿದೆ. ಯೋಜನೆಯ ಪೂರ್ಣಗೊಂಡ ನಂತರ ಈ ಅಮೂಲ್ಯ ದತ್ತಾಂಶ ಸರಕಾರ ಮತ್ತು ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಸಂಗ್ರಹಣಾ ಪೋರ್ಟಲ್ (ಎನ್‌ಜಿಡಿಆರ್) ಮೂಲಕ ಲಭ್ಯವಾಗುವಂತೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು. ಈ ಸಮೀಕ್ಷೆಯ ಸಂಶೋಧನೆಗಳನ್ನು ಪರಿಶೋಧನಾ ತಂತ್ರಗಳನ್ನು ಪರಿಷ್ಕರಿಸಲು ಮತ್ತು ಭವಿಷ್ಯದ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು ಬಳಸಲಾಗುತ್ತದೆ.
-ಎಮ್.ನಾಗದಿವ್ಯಾಭಾರತದ ಭೂವೈಜ್ಞಾನಿಕ ಸಮೀಕ್ಷೆಯ ಭೂ ಭೌತಶಾಸ್ತ್ರಜ್ಞ