ರಾಜ್ಯಪಾಲರು ಅಂಗೀಕರಿಸಿದ ಒಳ ಮೀಸಲಾತಿ ಮಸೂದೆ ಸಂಚಿಗೆ ಬಲಿಯಾಯಿತೇ?
ಈಗಲೂ ಕಾಲ ಮಿಂಚಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ, 56,432 ಹುದ್ದೆಗಳ ನೇಮಕಾತಿಯಲ್ಲಿ ನ್ಯಾ. ದಾಸ್ ಆಯೋಗದ ವರದಿಯ ದತ್ತಾಂಶಗಳಡಿ ಶೇ. 15 ಮೀಸಲಾತಿ ನಿಗದಿಗೊಳಿಸಲು ನ್ಯಾಯಾಲಯ ನಿರ್ಬಂಧಿಸಿಲ್ಲ. ಅಥವಾ ನ್ಯಾಯಾಲಯದ ತೀರ್ಪು ಬಂದಕೂಡಲೇ ರಾಜ್ಯಪಾಲರಿಂದ ಅಂಗೀಕೃತವಾಗಿರುವ ಶೇ. 17ರ ಮಸೂದೆಯನ್ನು ಜಾರಿಮಾಡಲಿ. ಹಿಂದುಳಿದ ವರ್ಗಗಳಲ್ಲಿ 1960ರ ಕಾಲಘಟ್ಟದಿಂದಲೂ ಒಳ ಮೀಸಲಾತಿಯಿದ್ದರೂ ಅವುಗಳೇನು ವಿಘಟಿತರಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಂದರೂ 101 ಜಾತಿಗಳು ತಮ್ಮ ಎಂದಿನಂತಿನ ಸಾಮಾಜಿಕ ಪರಿದಿಯನ್ನು ದಾಟಲಾರವು. ಈ ವ್ಯಾಖ್ಯಾನಗಳು ರಾಜ್ಯವಾಳುವವರಿಗೆ ಸರಿಯಾಗಿ ಅರ್ಥವಾದರೆ ಸಮಸ್ಯೆ ಸಲೀಸಾಗಿ ಕರಗುತ್ತದೆ. ಇಲ್ಲದಿದ್ದರೆ ಕಗ್ಗಂಟಾಗಿಬಿಡುತ್ತದೆ.
ಭಾರತೀಯ ಸಾಮಾಜಿಕತೆಯ ಹೊರನೋಟದೊಳಗೆ ಅಸಮಾನತೆಯ ಗುಂಪುಗಳಾದ ಜಾತಿ, ಜನಾಂಗ ಮತ್ತು ಧರ್ಮಗಳು ಸಾರ್ವತ್ರಿಕವಾಗಿ ಮೂಡಿದರೂ ಸಹ ಅವುಗಳೊಳಗೆ ಅನೇಕ ಅಂತರ ಸಾಮಾಜಿಕ ವೈರುಧ್ಯಗಳು ಕಾಣುತ್ತವೆ. ಅದರಲ್ಲೂ ಶೂದ್ರಾತಿ ಶೂದ್ರ ಸಮುದಾಯಗಳಲ್ಲಿ ಶ್ರೇಣೀಕೃತ ಅಸಮಾನತೆಯೂ ಜಡಗಟ್ಟಿದೆ. ಇದನ್ನು ಹೋಗಲಾಡಿಸಲು ಸಾಮಾಜಿಕ ನ್ಯಾಯದ ಸಮತಳ ಹಂಚಿಕೆ ಸಿದ್ಧಾಂತವನ್ನು ಡಾ. ಬಿ.ಆರ್. ಅಂಬೇಡ್ಕರ್ ಸಹ ಪ್ರತಿಪಾದಿಸಿದ್ದಾರೆ. ಮೇಲ್ವರ್ಗದವರಿಗೆ ಅಥವಾ ಹಿಂದುಳಿದ ವರ್ಗಗಳಿಗೆ ಇರುವ ಉದ್ಯೋಗ ಆಯ್ಕೆ ಸ್ವಾತಂತ್ರ್ಯ ಅಸ್ಪಶ್ಯ ಸಮುದಾಯಗಳಿಗಿಲ್ಲ. ಆದುದರಿಂದ, ಇಂತಹ ವೈರುಧ್ಯಗಳನ್ನು ಸರಿಗಟ್ಟಲು ಸಮತಳದ ಹಂಚಿಕೆ ಮಾದರಿ ಒಳ ಮೀಸಲಾತಿ ರೂಪದಲ್ಲಿ ಮುನ್ನೆಲೆಗೆ ಬಂದಿದೆ. ಇದರ ಗಾಳಿ ಮೊದಲು ಹರ್ಯಾಣದಿಂದ ದಕ್ಷಿಣ ರಾಜ್ಯಗಳಲ್ಲಿಯೂ ಹಬ್ಬಿ, ಹೋರಾಟದ ಸ್ವರೂಪವನ್ನೇ ಬದಲಾಯಿಸಿತು. ‘‘ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ ಅದೊಂದು ಹಕ್ಕು’’ ಎಂದಿರುವ ಡಾ. ಬಿ.ಆರ್. ಅಂಬೇಡ್ಕರ್‌ಅಭಿಮತಗಳು ಈ ಚರ್ಚೆಗಳಿಗೆ ಪೂರಕವಾಗಿದೆ.
ಅಳೆದು ಸುರಿದು ಒಳ ಮೀಸಲಾತಿಯನ್ನು ನ್ಯಾ. ದಾಸ್‌ಆಯೋಗದ ಶಿಫಾರಸುಗಳನ್ನು ಮಾರ್ಪಡಿಸಿ, ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪ-ವರ್ಗೀಕರಣ) ಮಸೂದೆ, 2025 (ಎಲ್‌ಎ-ಬಿಲ್‌ಸಂ.89/2025) ಅನ್ನು ಉಭಯ ಸದನಗಳಿಂದ ಅಂಗೀಕರಿಸಿ, ರಾಜ್ಯಪಾಲರ ಅನುಮೋದನೆಗೆ ಸರಕಾರ ಸಲ್ಲಿಸಿತ್ತು. ವಿಳಂಬದ ಹಿನ್ನೆಲೆಯಲ್ಲಿ ಸರಕಾರದ ಬಲಗೈ-ಎಡಗೈ ಸಚಿವರು ಭೇಟಿ ಮಾಡಿ ಅವರಿಂದ ಅಂಕಿತ ಪಡೆಯುವಲ್ಲಿ ಯಶಸ್ವಿಯಾದರು. ಸ್ವೀಕೃತಿಯಾದ ಮರು ಘಳಿಗೆಯಲ್ಲೇ ರಾಜ್ಯ ಸರಕಾರ ಮಾಡಿದ ಶಸ್ತ್ರ ಚಿಕಿತ್ಸೆಯಿಂದ ಎಚ್ಚರವಾಗುವ ಮೊದಲೇ ಜೀವಬಿಟ್ಟಿದೆ. ಸರಕಾರ ಧಾರವಾಡ ವಿದ್ಯಾರ್ಥಿಗಳ ಹೋರಾಟ ತಣಿಸಲು 56,432 ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿತು. ರಾಜ್ಯಪಾಲರ ಒಳ ಮೀಸಲಾತಿಯ ಮಸೂದೆಗೆ ಕವಡೆಕಾಸಿನ ಕಿಮ್ಮತ್ತಿಲ್ಲದಾಯಿತು.
ಬಲಗೈ ಸಮಾಜ ಮತ್ತು ಸ್ಪಶ್ಯ ಜಾತಿಗಳು ಬಹಿರಂಗವಾಗಿ ನ್ಯಾ. ದಾಸ್ ಆಯೋಗ ಮಾದಿಗ ಸಮುದಾಯದ ಅನುಕೂಲಕ್ಕೆ ತಕ್ಕಂತೆ ವರದಿ ನೀಡಿದೆ ಎಂದು ಹಾದಿಬೀದಿಯಲ್ಲಿ ಇಂದಿಗೂ ಆರೋಪ ಮಾಡುತ್ತಿವೆೆ. ಆದರೆ ಉದಾಹರಣೆಗೆ ಹೇಳುವುದಾದರೆ ಪರೆಯನ್ 2011ರಲ್ಲಿ 2,418 ಜನರಿದ್ದರು. ಆಯೋಗದಲ್ಲಿ 1,61,164 ಜನರಾಗಿದ್ದಾರೆ. ಹಾಗೆಯೇ ಹೊಲೆಯ ಅಥವಾ ಹೊಲಾರ್ 7.81 ಲಕ್ಷ ದಿಂದ 24.72 ಲಕ್ಷಕ್ಕೇರಿದೆ. ಆಯೋಗ ಮಾದಿಗರ ಪರವಾಗಿದ್ದರೆ ಹೊಲೆಯ ಸಂಬಂಧಿತ ಜಾತಿಗಳ ಬೆಳವಣಿಗೆ ದರ 2011ರಿಂದ 2025 ನಡುವೆ ಅಧಿಕ ಹೆಚ್ಚಳ ಕಂಡಿದೆ. ಮಾದಿಗ ಮತ್ತು ಹೊಲೆಯ ಜಾತಿಗಳ ನಡುವೆ ಹಂಚಲ್ಪಟ್ಟಿರುವ ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜನಸಂಖ್ಯೆಗಳಲ್ಲಿಯೂ ನಕಾರಾತ್ಮಕ ಬೆಳವಣಿಗೆ ದರ ದಾಖಲಾಗಿದೆ. ಇವರೆಡರ ಜನಸಂಖ್ಯೆಗಳು ಹೊಲೆಯ, ಪರೆಯ ಮತ್ತು ಇತರ ಸಮುದಾಯಗಳ ನಡುವೆ ಚದುರಿರುವ ಅಂಶಗಳು ಟೀಕಾಕಾರರ ಕಣ್ಣುಗಳಿಗೆ ಬೀಳುತ್ತಿಲ್ಲವೇಕೆ? ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳು ಸೇರಿದಂತೆ ಆಯೋಗದೊಳಗೆ ತುಂಬಿದ್ದವರೆಲ್ಲರೂ ಬಲಗೈ ಸಮುದಾಯದವರೇ ಆಗಿದ್ದರೂ ‘‘ಅನ್ಯಾಯವಾಗಿದೆ; ಆಯೋಗದ ವರದಿ ಅವೈಜ್ಞಾನಿಕ’’ ಮಣ್ಣು ಮಸಿ ಎಂದರೆ ಸಮಾಜ ಕಲ್ಯಾಣ ಇಲಾಖೆಯೇ ಉತ್ತರಿಸಬೇಕಲ್ಲವೇ?
2022ರಲ್ಲಿ ಭಾಜಪ ಸರಕಾರ ವೋಟಿನ ಆಸೆಗಾಗಿ ಪರಿಶಿಷ್ಟರ ಮೀಸಲು ಪ್ರಮಾಣವನ್ನು ಅವರವರ ಜನಸಂಖ್ಯೆಗೆ ಅನುಗುಣವಾಗಿ ನ್ಯಾ. ದಾಸ್ ಆಯೋಗ ಶಿಫಾರಸಿನಂತೆ ಶೇ. 17 ಮತ್ತು 7.5ಕ್ಕೆ ಏರಿಕೆ ಮಾಡಿತ್ತು. ಇದಕ್ಕಾಗಿ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀಗಳೂ ಸಹ ಸುದೀರ್ಘವಾದ ಸತ್ಯಾಗ್ರಹ ಮಾಡಿದ್ದರು. ಭಾಜಪ ಸರಕಾರ ಈ ಬೇಡಿಕೆಯನ್ನು ಕೇಂದ್ರಕ್ಕೂ ರವಾನಿಸಿತ್ತು. ಆ ಠರಾವು ರವಾನೆಯಾದ ಕಾಗದವಾಯಿತೇ ಹೊರತು ಕಾಯ್ದೆ ರೂಪಕ್ಕೆ ಬರಲಿಲ್ಲ. ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಸಹ ಟೀಕಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ತೀರ್ಪು ಬಂದಕೂಡಲೇ ಒಳ ಮೀಸಲಾತಿ ಜಾರಿಗೆ ಪ್ರಕ್ರಿಯೆಗಳಾದವು. ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಶೇ.17 ಮೀಸಲಾತಿ ಅಡಿ ವರದಿ ಕೇಳಿತ್ತು. ಅದರಂತೆ, ಆಯೋಗ ವರದಿ ಸ್ವೀಕೃತಿಯಾಗಿ, ಶಾಸನವಾಗಿ ರಾಜ್ಯಪಾಲರಿಂದ ಅಂಕಿತ ಪಡೆದಮೇಲೆ ಕಾಂಗ್ರೆಸ್‌ಸರಕಾರ ಬೆನ್ನು ತೋರಿಸುತ್ತಿದೆ. ನಿರುದ್ಯೋಗಿಗಳಿಗೆ ಒಳ ಮೀಸಲಾತಿ ದಿಶೆಯಿಂದ ಅವಕಾಶ ನಿರಾಕರಿಸಲು ಯಾರೂ ಸಮ್ಮತಿಸಿರಲಿಲ್ಲ. ಅದರ ಮೂಲಕ ಒಳ ಮೀಸಲಾತಿ ತುಂಡರಿಸುವ ಬ್ರಹ್ಮಾಸ್ತ್ರವಾಗಿದೆ.
ಕರ್ನಾಟಕ ರಾಜ್ಯಕ್ಕಿಂತ ಮೊದಲೇ ತಮಿಳು ನಾಡು (ಶೇ. 69) ಮಹಾರಾಷ್ಟ್ರ (ಶೇ. 68), ಮಧ್ಯಪ್ರದೇಶ (ಶೇ. 73), ಛತ್ತೀಸಗಡ (ಶೇ. 82),ರಾಜಸ್ಥಾನ (ಶೇ. 68) ಮತ್ತು ಕರ್ನಾಟಕ (ಶೇ. 56) ಮೀಸಲಾತಿ ಏರಿಸಿವೆ. ಶ್ರೀಮತಿ ಜಯಲಲಿತಾ ಅವರ ಸಮಯೋಜಿತ ನಿರ್ಧಾರದಿಂದ ಅವರ ಕಾಯ್ದೆ 9ನೇ ಅನುಸೂಚಿಗೆ ಸೇರಿದೆ. ಇನ್ನುಳಿದ ರಾಜ್ಯಗಳ ಕಾಯ್ದೆಗಳು ಕೇಂದ್ರ ಸರಕಾರದ ಶೈತ್ಯಾಗಾರದಲ್ಲಿ ನಡುಗುತ್ತಿವೆ. ಸುಪ್ರೀಂ ಕೋರ್ಟ್ ಇಡಬ್ಲ್ಯುಎಸ್ ಮೀಸಲಾತಿ ಪರಾಮರ್ಶೆ ಮಾಡುವಾಗ ಇದನ್ನು ಮೀಸಲಾತಿ ಪ್ರಕರಣವೆಂದಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಒಂದು ವೇಳೆ, ಕೇಂದ್ರ ಸರಕಾರ ಇಂದ್ರಾ ಸಹಾನಿ (1992) ಪ್ರಕರಣ ತೀರ್ಪನ್ನು ಪಾಲಿಸಿದ್ದರೆ, ಶೇ. 10 ಮೀಸಲಾತಿ ಜಾರಿ ಮಾಡಲು ಅವಕಾಶವಿರುತ್ತಿರಲಿಲ್ಲ. ಸಂವಿಧಾನ ಅನುಚ್ಛೇದ 16 (1) ಯಾವುದೇ ಸಾರ್ವಜನಿಕ ಉದ್ಯೋಗಾವಕಾಶಗಳ ನೀಡಿಕೆಯಲ್ಲಿ ಸಮಾನ ಅವಕಾಶವನ್ನು ಕೊಡಲು ಬಯಸಿದೆ. ಅದರ 16 (4) ಮತ್ತು 16 (4ಎ) ಹಿಂದುಳಿದ ವರ್ಗಗಳಿಗೆ ಮತ್ತು ಪರಿಶಿಷ್ಟರಿಗೆ ನೇಮಕಾತಿ ವಿಚಾರದಲ್ಲಿ ಯಥೋಚಿತ /ಸಾಕಷ್ಟು ಪ್ರಾತಿನಿಧ್ಯವಿಲ್ಲದಿದ್ದಾಗ ಈ ಬಗ್ಗೆ ಪೂರಕವಾದ ದತ್ತಾಂಶಗಳಡಿ ಅವಕಾಶವನ್ನು ಒದಗಿಸಲು ಪ್ರತಿಪಾದಿಸುತ್ತವೆ.
ಭಾಜಪ ಸರಕಾರಗಳಿಗೆ ಮೀಸಲಾತಿ ಬಗ್ಗೆ ನೈಜ ಕಾಳಜಿಗಳಿದ್ದರೆ ಇಷ್ಟೊತ್ತಿಗೆ ಪೂರಕ ಪರಿಸರವನ್ನು ಬಿಜೆಪಿ ಸೃಷ್ಟಿ ಮಾಡುತ್ತಿತ್ತು. ಅದರ ಅಂತರಂಗ ಸಾಮಾಜಿಕ ಗುಂಪುಗಳು ಪರಸ್ಪರ ಕಿತ್ತಾಡಿಸುವುದರಲ್ಲಿ ಖುಷಿಪಡುತ್ತದೆ. ರಾಜಕೀಯ ದಾಳಗಳನ್ನು ಅಲ್ಲಿಂದಲೇ ಉರುಳಿಸುತ್ತದೆ. ಆದುದರಿಂದ ಈ ರಾಜ್ಯದ ಒಳ ಮೀಸಲಾತಿ ಜಾರಿಯಲ್ಲಿ ಭಾಜಪ ಹಿಂದಿನಿಂದಲೂ ದ್ವಂದ್ವಗಳಲ್ಲಿ ಮುಳುಗಿದೆ. ಅದರ ಅಂತರಂಗ ಮತ್ತು ಬಹಿರಂಗಗಳೆರಡೂ ಸಂಪೂರ್ಣವಾಗಿ ಮಾದಿಗರ ಪರವೆನ್ನುವುದು ಮರ್ಕಟ ಪ್ರೇಮದಂತಿದೆ.
ಒಳ ಮೀಸಲಾತಿ ಇಲ್ಲದ ಆದೇಶದಲ್ಲಿ WP-200448/2025 ದಾವೆಯಡಿ ದಿ: 27-11-2025ರಂದು ನ್ಯಾಯಾಲಯ ಉಲ್ಲೇಖಿಸಿರುವ ಅಭಿಮತಗಳನ್ನು ದಾಖಲಿಸಿ (ದಿ:20-02-2026ರಂದು) ಹಿಂದಿನ ಒಳ ಮೀಸಲಾತಿ ಆದೇಶವನ್ನು ಸ್ಥಗಿತಗೊಳಿಸಿದೆ. ಯಾವುದೇ ಪ್ರಕರಣಗಳಲ್ಲಿ ಕಠಿಣ ಸ್ವರೂಪದ ತಡೆಯಾಜ್ಞೆಗಳಿಲ್ಲ. ಆದರೆ, ವರ್ಗೀಕರಣ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ (17-12-2025) ಮಂಡಿಸಿದಾಗ ಸರಕಾರಕ್ಕೆ ಯಾವ ಕುರುಡುತನವಿತ್ತು. ನ್ಯಾಯಾಲಯದ ಅಭಿಪ್ರಾಯಗಳನ್ನು ಮುಚ್ಚಿಟ್ಟು ಸದನದಲ್ಲೇ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಮೋಸದಾಟ ಆಡಿದಂತಿದೆ. ಶಾಸಕಾಂಗವನ್ನೇ ದಾರಿತಪ್ಪಿಸಿದಂತಾಗಿದೆ. ಅದಕ್ಕೂ ಹಿಂದೆ, ಅಡ್ವೊಕೇಟ್ ಜನರಲ್ (IA 8/2025) ವಾದ ಮಂಡಿಸಿ, ಸುಪ್ರೀಂ ಕೋರ್ಟ್ ಮುಂದೆ ದಾಖಲಾಗಿರುವ ಯೋಗೇಶ್‌ಕುಮಾರ್ ಠಾಕೂರು v/s ಗುರು ಘಸಿದಾಸ್ ಸಾಹಿತ್ಯ ಅವಂ ಸಂಸ್ಕೃತಿ ಅಕಾಡಮಿ ಮತ್ತು ಇತರರ ದಾವೆ ಬಗ್ಗೆ ಬೆಳಕು ಚಲ್ಲಿದ್ದರು (ಛತ್ತೀಸ್‌ಗಡದಲ್ಲಿ ಘಸಿದಾಸಿ ಪಂಥದ ಸತ್ನಾಮಿ ಚಮ್ಮಾರರು ಮತ್ತು 1857 ಸ್ವಾತಂತ್ರ್ಯ ಸಂಗ್ರಾಮದ ಕಲಿಗಳು). ಕರ್ನಾಟಕ ಸರಕಾರ ಶೇ. 56 ಮೀಸಲಾತಿ ಬಗ್ಗೆ ಹಿಗ್ಗಿದಂತೆ ಈ ದಾವೆಯಡಿ ಎದುರು ಕಕ್ಷಿದಾರನಾಗಿ ಸೇರಿಕೊಂಡು ರಕ್ಷಣೆ ಪಡೆಯದೆ ಅಡ್ವೊಕೇಟ್ ಜನರಲ್ ತೇಲಿಕೆಯ ಮಂಡನೆಯಿಂದ ನ್ಯಾಯಾಲಯ ಯಾವುದೇ ಪರಿಹಾರ ನೀಡಲು ಮುಂದಾಗಲಿಲ್ಲ. ಬಹುಶಃ ಸಮಾಜ ಕಲ್ಯಾಣ ಇಲಾಖೆ ಸಚಿವರು ಒಳ ಮೀಸಲಾತಿ ಜಾರಿಗೆ ಬದ್ಧರಾಗಿದ್ದರೆ ಕಾನೂನು ಲೋಪವಾಗದಂತೆ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಕೆಲವು ರಾಜ್ಯಗಳು ಈ ಪ್ರಕರಣದಲ್ಲಿ ಅರ್ಜಿದಾರರಾಗಿದ್ದಾರೆ; ಮಧ್ಯಪ್ರದೇಶ ಸರಕಾರ ಸದರಿ ನ್ಯಾಯಾಲಯದ ಆದೇಶಕ್ಕೆ ಬದ್ಧವೆಂದು ನೇಮಕಾತಿ ಮುಂದುವರಿಸಿದೆ.
ಬಲಗೈ ಸಮಾಜ ಆರೋಪಿಸಿದಂತೆ, ಇಲ್ಲಿಯತನಕ ಅಧಿಸೂಚಿಸಿರುವ ನೇಮಕಾತಿಗಳಲ್ಲಿ ಬಹುತೇಕ ಹುದ್ದೆಗಳು 10ಕ್ಕಿಂತ ಕಡಿಮೆ ಇವೆ. ಅಲ್ಲಿ ಸಹಜವಾಗಿ ಪ್ರವರ್ಗ-ಎ ಬಿಂದುವಿನಲ್ಲಿ ಸ್ಥಗಿತವಾಗಿ, ಮುಂದುವರಿದ ಬಿಂದುಗಳಿಗೆ ಪ್ರಸರಣವಾಗಿಲ್ಲ. ಒಂದು ವೇಳೆ, ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಹುದ್ದೆಗಳೆಲ್ಲವೂ ಏಕಕಾಲಕ್ಕೆ ಅಧಿಸೂಚಿತಗೊಂಡಿದ್ದರೆ ಯಾವುದೇ ರಗಳೆ ಬರುತ್ತಿರಲಿಲ್ಲ. 50 ವರ್ಷ ನೇಮಕಾತಿ ಹಂಚಿಕೆಯಲ್ಲಾದ ಮೋಸ ನೋಡದೆ, ಒಂದಷ್ಟು ಹುದ್ದೆಗಳು ಪ್ರವರ್ಗ-ಎ ಬಂದ ಕಾರಣ 30 ವರ್ಷವಾದರೂ ಉಳಿದವರಿಗೆ ಮೀಸಲಾತಿ ಸಿಗದೆಂಬ ಪುಕಾರನ್ನು ಎಬ್ಬಿಸಿದವರು ಅಂಬೇಡ್ಕರ್‌ವಾದಿಗಳಾಗಲು ಸಾಧ್ಯವೆ? ಅದನ್ನು ಸರಕಾರ ಕುರುಡು ಕುರುಡಾಗಿ ನಂಬಿದೆ ಅಥವಾ ಸರಕಾರ ಮುಂದಿನ 30 ವರ್ಷಗಳ ತನಕ ನೇಮಕಾತಿಗಳಿಲ್ಲವೆಂದು ಶ್ವೇತಪತ್ರ ಹೊರಡಿಸಿದೆಯೇ? ಇದು ಸಹ ಸರಕಾರದ ನಡೆಯನ್ನು ಬದಲಿಸುವ ಕುತಂತ್ರವಾಗಿದೆ.
ಕಾಂಗ್ರೆಸ್ ಪಕ್ಷ 2023ರ ಚುನಾವಣೆ ಪ್ರಣಾಳಿಕೆಯಲ್ಲಿ ‘‘ವಿಧಾನ ಮಂಡಲದ ಮೊದಲ ಅಧಿವೇಶನದಲ್ಲೇ ಅಂಗೀಕಾರಕ್ಕಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಮಂಡನೆ ಹಾಗೂ ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಲ್ಲಿರುವ ಉಪ ಪಂಗಡಗಳಿಗೆ ನ್ಯಾಯ ಕೊಡಿಸಲು (ಒಳ ಮೀಸಲಾತಿ) ಕಾಂಗ್ರೆಸ್ ಪಕ್ಷ ಬದ್ಧ’’ (ಪುಟ-13) ಎಂದು ಘೋಷಣೆಮಾಡಿತ್ತು. ಅಂದು ಭಾಜಪದ ಮೊಗಸಾಲೆಯಿಂದ ಮಾದಿಗ ಮತದಾರರನ್ನು ಸೆಳೆಯಲು ಈ ತಂತ್ರ ಮಾಡಿತ್ತೋ ಅಥವಾ ನೀಡಿದ ವಚನ ಪೂರೈಸಲು ಕಾಂಗ್ರೆಸ್ ಸರಕಾರ ಬದ್ಧವಾಗಿತ್ತೇ ಎಂಬ ಅನುಮಾನಗಳಿಗೆ ನೇರ ಉತ್ತರವಿಲ್ಲ. ಅಥವಾ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸರಿಯಾಗಿ ಸರಕಾರ ಓದಿಲ್ಲವೊ ಆಥವಾ ಓದಿಯೂ ಜಾಣಪೆದ್ದಾಟ ಆಡುತ್ತಿದೆಯೋ ತಿಳಿಯದು. ಸರಕಾರ ಒಳ ಮೀಸಲಾತಿಯಂತಹ ಜ್ವಲಂತ ಸಮಸ್ಯೆಗೆ ಎರಡಲಗಿನ ಕತ್ತಿ ಬಳಸುತ್ತಿರುವ ಕಾರಣಕ್ಕೆ ಎಲ್ಲಿಲ್ಲದ ಗೊಂದಲ ಗೂಡಾಗಿದೆ.
ಕಾಂಗ್ರೆಸ್ ಸರಕಾರ ಒಳ ಮೀಸಲಾತಿ ಕೊಡಲು ಮನಸ್ಸಿಲ್ಲದಿದ್ದರೆ, ಯಾವುದೇ ಸಮುದಾಯಗಳನ್ನು ಕೈಬಿಡಬೇಕೆಂಬ ಕೂಗಿಗೆ ಮಾನ್ಯತೆ ಕೊಡುವುದು ಬೇಡ. ಕೊನೆಯ ಪಕ್ಷ ಮೀಸಲಾತಿ ಅನುಭವಿಸಲು ಮಾದಿಗ ಮತ್ತು ಅದರ ಉಪಜಾತಿಗಳಿಗೆ ಸಾಂವಿಧಾನಿಕವಾಗಿ ಮಾನ್ಯರಲ್ಲವೆಂದು ಕೇರಳ ಮಾದರಿಯಲ್ಲಿ 17 ಜಾತಿ ಮತ್ತು ಪಂಗಡಗಳನ್ನು ಕೈಬಿಟ್ಟಂತೆ ಈ ರಾಜ್ಯದಲ್ಲಿಯೂ ಅವುಗಳನ್ನು ಪಟ್ಟಿಯಿಂದ ತೆಗೆಯಲು ರಾತ್ರೋರಾತ್ರಿ ಶಿಫಾರಸು ಮಾಡಲಿ. ಎಲ್ಲಿಯೂ ಸಲ್ಲದ ಸೂಕ್ಷ್ಮ ಜಾತಿಗಳನ್ನು ಸಾಂವಿಧಾನಿಕವಾಗಿ ತೆಗೆದು ಹಾಕಿದರೆ ಆವಾಗ ಒಳ ಮೀಸಲಾತಿ ತಲೆಬೇನೆ ನಿಲ್ಲುತ್ತದೆ. ರಾಜಕಾರಣದಲ್ಲಿ ಸುರಕ್ಷಿತ ಆಟಗಳನ್ನಾಡಬೇಕು. ಒಳ ಮೀಸಲಾತಿಯಂತಹ ಸೂಕ್ಷ್ಮ ಸಾಮಾಜಿಕ ನ್ಯಾಯ ವಿಚಾರದಲ್ಲಿ ಯಾರಾದರೂ ವಿಕ್ಷಿಪ್ತ ರಾಜಕಾರಣ ಪ್ರದರ್ಶನ ಮಾಡಿದರೆ ಅವರ ಮುತ್ಸದ್ದಿತನ ಗಾಳಿಪಟಗಳಾಗುತ್ತವೆ. ಮಾದಿಗರೆಲ್ಲರೂ ಭಾಜಪ ಪರವೆಂದು ಅವರ ಹಕ್ಕುಬಾಧ್ಯತೆಗಳನ್ನು ನಿರಾಕರಿಸಬಾರದು. ಬಲಗೈ ಸಮಾಜದೊಳಗೆ ಅಂಬೇಡ್ಕರ್‌ವಾದಿಗಳೇ ತುಂಬಿರುವಾಗ ಅಲ್ಲೇಕೆ ಭಾಜಪ ತನ್ನ ರಾಜಕೀಯ ಪೈರುಗಳನ್ನು ನಾಟಿಮಾಡಲು ಶಕ್ತವಾಯಿತು? 2023ರಲ್ಲಿ ಕಾಂಗ್ರೆಸ್ ಕೇವಲ ಬಲಗೈ ಸಮಾಜದಿಂದ ಗೆದ್ದಿಲ್ಲ; ಸರ್ವ ಸಮಾಜಗಳೂ ಬೆಂಬಲಿಸಿವೆ. ಆದುದರಿಂದ, ಶೇ. 43ರಷ್ಟು ಮತಗಳನ್ನು ಗಳಿಸಿ 136 ಸ್ಥಾನವನ್ನು ಗೆದ್ದಿದೆ. ಇದನ್ನು ಅದರ ಹೈಕಮಾಂಡ್ ಸಹ ಒಪ್ಪಿದೆ.
ಈಗಲೂ ಕಾಲ ಮಿಂಚಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ, 56,432 ಹುದ್ದೆಗಳ ನೇಮಕಾತಿಯಲ್ಲಿ ನ್ಯಾ. ದಾಸ್ ಆಯೋಗದ ವರದಿಯ ದತ್ತಾಂಶಗಳಡಿ ಶೇ. 15 ಮೀಸಲಾತಿ ನಿಗದಿಗೊಳಿಸಲು ನ್ಯಾಯಾಲಯ ನಿರ್ಬಂಧಿಸಿಲ್ಲ. ಅಥವಾ ನ್ಯಾಯಾಲಯದ ತೀರ್ಪು ಬಂದಕೂಡಲೇ ರಾಜ್ಯಪಾಲರಿಂದ ಅಂಗೀಕೃತವಾಗಿರುವ ಶೇ. 17ರ ಮಸೂದೆಯನ್ನು ಜಾರಿಮಾಡಲಿ. ಹಿಂದುಳಿದ ವರ್ಗಗಳಲ್ಲಿ 1960ರ ಕಾಲಘಟ್ಟದಿಂದಲೂ ಒಳ ಮೀಸಲಾತಿಯಿದ್ದರೂ ಅವುಗಳೇನು ವಿಘಟಿತರಾಗಿಲ್ಲ. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಂದರೂ 101 ಜಾತಿಗಳು ತಮ್ಮ ಎಂದಿನಂತಿನ ಸಾಮಾಜಿಕ ಪರಿದಿಯನ್ನು ದಾಟಲಾರವು. ಈ ವ್ಯಾಖ್ಯಾನಗಳು ರಾಜ್ಯವಾಳುವವರಿಗೆ ಸರಿಯಾಗಿ ಅರ್ಥವಾದರೆ ಸಮಸ್ಯೆ ಸಲೀಸಾಗಿ ಕರಗುತ್ತದೆ. ಇಲ್ಲದಿದ್ದರೆ ಕಗ್ಗಂಟಾಗಿಬಿಡುತ್ತದೆ.