×
Ad

ಬಜೆಟ್ ಮೇಲೆ ವಿಜಯಪುರದ ಕಣ್ಣು: ಮೆಡಿಕಲ್ ಕಾಲೇಜು, ಯುಕೆಪಿ ಅನುದಾನ ನಿರೀಕ್ಷೆ

Update: 2026-03-06 11:22 IST

ವಿಜಯಪುರ, ಮಾ.5: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಎದುರಾಗಿದೆ. ನಮ್ಮ ಜಿಲ್ಲೆಗೂ ಬಂಪರ್ ಕೊಡುಗೆ ದೊರಕಬಹುದು ಎಂಬ ನಿರೀಕ್ಷೆಯ ಆಶಾಗೋಪುರ ಈ ಬಾರಿಯೂ ಗುಮ್ಮಟ ನಗರಿಯ ಜನತೆ ನಿರ್ಮಿಸಿಕೊಂಡು ಬಜೆಟ್ ಮಂಡನೆಯನ್ನು ಎದುರು ನೋಡುತ್ತಿದ್ದಾರೆ.

ಯಾವ ಯೋಜನೆಗಳು ಜಿಲ್ಲೆಗೆ ದೊರಕಲಿವೆ, ಘೋಷಣೆಯಾಗಿರುವ ಸರಕಾರಿ ಮೆಡಿಕಲ್ ಕಾಲೇಜಿಗೆ ಅಸ್ತು ಎನ್ನುವ ಮಹತ್ವದ ನಿರ್ಧಾರ, ಕೈಗಾರಿಕೆಗಳ ಸ್ಥಾಪನೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಭರಪೂರ ಅನುದಾನ ಮೊದಲಾದ ನಿರೀಕ್ಷೆಗಳು ಮನೆ ಮಾಡಿವೆ.

ವಿಜಯಪುರ ಜಿಲ್ಲೆಯು ಐತಿಹಾಸಿಕವಾಗಿ ಮಹತ್ವವನ್ನು ಪಡೆದಿದ್ದರೂ, ಇಲ್ಲಿ ಜ್ವಲಂತ ಸಮಸ್ಯೆಗಳಿವೆ. ಇದು ಕರ್ನಾಟಕದ ಹಿಂದುಳಿದ ಜಿಲ್ಲೆಯೆಂದೇ ಪರಿಗಣಿಸಲ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡಿಸಲು ಸಜ್ಜಾಗಿದ್ದು, ಸಹಜವಾಗಿ ಜಿಲ್ಲೆಯ ವಿವಿಧ ವಲಯಗಳ ಜನರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ ಹಂತ-3ನೇ) ಅನುಷ್ಠಾನಕ್ಕೆ ಸರಕಾರದಿಂದ ಅಗತ್ಯವಾದ ಅನುದಾನವನ್ನು ತುರ್ತಾಗಿ ಒದಗಿಸಬೇಕಾಗಿದೆ. ಮುಳುಗಡೆಯಾಗುವ ಜಮೀನಿಗೆ 40-30 ಲಕ್ಷ ರೂ. ಮತ್ತು ಕಾಲುವೆಗಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ 30-25 ಲಕ್ಷ ರೂ. ನಿಗದಿ ಮೂಡುವ ಮೂಲಕ ಸರಕಾರ ಹೊಸ ಭರವಸೆಯನ್ನು ಬಜೆಟ್‌ನಲ್ಲಿ ಅನುದಾನ ನೀಡಿ ಕಾರ್ಯಗತಗೊಳಿಸಬೇಕು.

ಜಿಲ್ಲೆಗೆ ಹಲವಾರು ವರ್ಷದಿಂದ ಬೇಡಿಕೆಯಾದ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಕುರಿತು ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಿಸಿ, ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕಾಲೇಜು ಆರಂಭಕ್ಕೆ ಅವಶ್ಯವಾದ ಅನುದಾನ ನೀಡಬೇಕಿದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕು ಎಂಬ ಬೇಡಿಕೆಯೂ ಜನರದ್ದಾಗಿದೆ.

ಬಸವಣ್ಣರ ಜನ್ಮಭೂಮಿ ಬಸವನ ಬಾಗೇವಾಡಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿದ್ದರೂ, ಅನುದಾನ ನೀಡಿಲ್ಲ. ಈ ಪ್ರಾಧಿಕಾರಕ್ಕೆ ವಿಶೇಷ ಅನುದಾನ ಘೋಷಿಸಬೇಕಿದೆ. ಜಿಲ್ಲೆಯು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಫುಡ್ ಪಾರ್ಕ್ ನಿರ್ಮಿಸಬೇಕೆಂಬುದು ದಶಕಗಳ ಬೇಡಿಕೆಯಾಗಿದೆ. ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಆಗಬೇಕು ಎಂಬುವುದು ಸಹ ಜನರ ಬಹು ವರ್ಷಗಳ ಬೇಡಿಕೆಯಾಗಿದೆ.

ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಆದರೆ, ಅನೇಕ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಗೋಳಗುಮ್ಮಟ, ಇಬ್ರಾಹಿಂ ರೋಜಾ ರೀತಿಯಲ್ಲೇ ಅನೇಕ ಮಹತ್ತರವಾದ ಸ್ಮಾರಕ ಬಗ್ಗೆ ಪ್ರಚಾರ ನೀಡಿ ಪ್ರವಾಸಿಗರ ಸೆಳೆಯಬೇಕಿದೆ. 2024-25ನೇ ಬಜೆಟ್‌ನಲ್ಲಿ ಪುರಾತನ ನೀರು ಸರಬರಾಜು ವ್ಯವಸ್ಥೆಯಾದ ಕರೇಜ್ ಪುನರುಜ್ಜೀವನಗೊಳಿಸುವ ಬಗ್ಗೆ ಘೋಷಿಸಲಾಗಿದೆ. ಆದರೆ, ಅದು ಸಹ ಇನ್ನೂ ಸಾಕಾರಗೊಂಡಿಲ್ಲ.

ಗೋಳಗುಮ್ಮಟ, ಮಹಿಳಾ ವಿವಿ ಅಭಿವೃದ್ಧಿಗೆ ಹಣ ಬೇಕು

ವಿಶ್ವವಿಖ್ಯಾತ ಗೋಳಗುಮ್ಮಟಕ್ಕೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಮಾರಕವು ಹಲವಾರು ಮೂಲಭೂತ ಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿದೆ. ಮೈಸೂರು ಅರಮನೆ ರೀತಿಯಲ್ಲಿ ಈ ಸ್ಮಾರಕಕ್ಕೆ ಹಣ ಒದಗಿಸಿ ಇದನ್ನು ವಿಶ್ವ ವಿಖ್ಯಾತ ಪರಂಪರೆಗಳ ಪಟ್ಟಿಗೆ ಸೇರಿಸಬೇಕೆಂಬುದು ಇಲ್ಲಿನ ಜನರ ಒತ್ತಾಯವಾಗಿದೆ. ಇನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಈ ವಿಶ್ವವಿದ್ಯಾಲಯದಲ್ಲಿ ಉನ್ನತ ಪಟ್ಟದ ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಹೀಗಾಗಿ, ಈ ವಿಶ್ವವಿದ್ಯಾಯವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಹಣ ಬೇಕಿದೆ. ಈ ಬಜೆಟ್‌ನಲ್ಲಿ ಜನರು ವಿಶೇಷ ಅನುದಾನವನ್ನು ನಿರೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor

Similar News