ಗಂಗಾನದಿಯಲ್ಲಿ ತೇಲುವ ಸಿಎನ್‌ಜಿ ಸ್ಟೇಷನ್ : ದೋಣಿಗಳಿಂದಾಗುವ ಮಾಲಿನ್ಯಕ್ಕೆ ಕಡಿವಾಣ
ವಾರಣಾಸಿ : ವಾರಣಾಸಿಯ ನಮೋ ಘಾಟ್ ಮತ್ತು ರವಿದಾಸ್ ಘಾಟ್‌ನಲ್ಲಿ ಗಂಗಾನದಿಯ ಕಿನಾರೆಯಲ್ಲಿ ಸ್ಥಾಪನೆ ಗೊಂಡಿರುವ ನೈಸರ್ಗಿಕ ಅನಿಲ (ಸಿಎನ್‌ಜಿ) ಸ್ಥಾವರಗಳ ಸ್ಥಾಪನೆಯಿಂದಾಗಿ ದೋಣಿಗಳಿಗೆ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಇಂಧನ ದೊರೆಯುವಂತಾಯಿತು.
ತೇಲುವ ಸಿಎನ್‌ಜಿ ಸ್ಟೇಷನ್ ಸ್ಥಾಪನೆ ಯಿಂದಾಗಿ ಗಂಗಾ ನದಿಯಲ್ಲಿ ಡಿಸೇಲ್ ಇಂಜಿನ್ ದೋಣಿಗಳಿಂದ ಉಂಟಾಗುತ್ತಿದ್ದ ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ.
ಗೇಲ್ ಇಂಡಿಯಾ ಲಿಮಿಟೆಡ್‌ನ ತೇಲುವ ಸಿಎನ್‌ಜಿ ಸ್ಟೇಷನ್ ರವಿದಾಸ್ ಘಾಟ್‌ನಲ್ಲಿ 2023ರ ನ.23ರಂದು ಆರಂಭಗೊಂಡಿತ್ತು. ನಮೋ ಘಾಟ್‌ನಲ್ಲಿ 2021ರ ಡಿಸೆಂಬರ್‌ನಲ್ಲಿ ಸಿಎನ್‌ಜಿ ಸ್ಟೇಷನ್ ಸ್ಥಾಪನೆಯಾಗಿದ್ದು, ಇದು ದೇಶದ ಪ್ರಥಮ ತೇಲುವ ಸಿಎನ್‌ಜಿ ಸ್ಟೇಷನ್ ಆಗಿದೆ.
ಹಳೆಯ ಡೀಸೆಲ್ ಇಂಜಿನ್‌ಗಳ ಬದಲಿಗೆ ಸಿಎನ್‌ಜಿ ಕಿಟ್ ಅಳವಡಿಸುವುದರಿಂದ ದೋಣಿಯವರು ಶೇ.35ರಿಂದ 40ರಷ್ಟು ಅಧಿಕ ಮೈಲೇಜ್ ಪಡೆಯುತ್ತಿದ್ದಾರೆ. ಇದಲ್ಲದೇ, ಡೀಸೆಲ್ ದೋಣಿಗಳಿಂದಾಗಿ ಗಂಗಾನದಿಯಲ್ಲಿ ಉಂಟಾಗುತ್ತಿದ್ದ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಾರಣಾಸಿಯ ತೇಲುವ ಸಿಎನ್‌ಜಿ ಸ್ಟೇಷನ್‌ಗಳನ್ನು ಸುಮಾರು 17.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.
ವಾರಣಾಸಿ ನಗರ ನಿಗಮದಲ್ಲಿ ನೋಂದಾಯಿತವಾಗಿರುವ ಬಹುತೇಕ ದೋಣಿಗಳನ್ನು ಗೇಲ್‌ನ ಸಿಎಸ್‌ಆರ್ ಯೋಜನೆಯಡಿ ಸಿಎನ್‌ಜಿಗೆ ಪರಿವರ್ತಿಸಲಾಗಿದೆ.
ನಮೋ ಘಾಟ್‌ನ ಸ್ಟೇಷನ್‌ನಿಂದ ದಿನಕ್ಕೆ 1,000-1,500 ದೋಣಿಗಳಿಗೆ ಮತ್ತು ರವಿದಾಸ್ ಘಾಟ್‌ನ ಸ್ಟೇಷನ್ 300-400 ದೋಣಿಗಳಿಗೆ ಇಂಧನ ಪೂರೈಕೆ ಸಾಮರ್ಥ್ಯ ಹೊಂದಿವೆ. ನಮೋ ಘಾಟ್‌ನಿಂದ ನೈಸರ್ಗಿಕ ಇಂಧನವನ್ನು ಜಲ ಮಾರ್ಗದ ಮೂಲಕ ರವಿದಾಸ್ ಘಾಟ್ ಸ್ಟೇಷನ್‌ಗೆ ಸಾಗಿಸಲಾಗುತ್ತದೆ.
ಈ ಎರಡು ನಿಲ್ದಾಣಗಳ ನಿರ್ಮಾಣದ ಯಶಸ್ಸು ದೇಶದ ಇತರ ಭಾಗಗಳಲ್ಲಿ ಇಂತಹ ಸ್ಟೇಷನ್ ನಿರ್ಮಾಣ ಹಾದಿಯಲ್ಲಿ ಚಿಂತನೆ ಮಾಡಿಕೊಟ್ಟಂತಾಗಿದೆ.
ಬೆಂಗಳೂರಿನಿಂದ ಉತ್ತರ ಪ್ರದೇಶ ರಾಜ್ಯಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿರುವ ಕರ್ನಾಟಕದ ಪತ್ರಕರ್ತರು, ವಾರಣಾಸಿಯ ತೇಲುವ ಸಿಎನ್‌ಜಿ ಸ್ಟೇಷನ್‌ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಪ್ರವಾಸ ಆಯೋಜಿಸಿರುವ ಪಿಐಬಿ ಅಧಿಕಾರಿಗಳು ಸಹಕಾರ ನೀಡಿದರು.