×
Ad

ಹರಪನಹಳ್ಳಿ | ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟ ಡಾ.ಅಂಬೇಡ್ಕರ್ ವಸತಿ ಶಾಲೆ

Update: 2026-03-08 07:20 IST

ಹರಪನಹಳ್ಳಿ: ನಗರದ ಐಬಿ ವೃತ್ತದ ಪೋಲೀಸ್ ಠಾಣೆ ಹಿಂಭಾಗದಲ್ಲಿರುವ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ನಿರ್ವಹಣೆಯ ಕೊರತೆಯಿಂದ ಹಲವು ವರ್ಷಗಳಿಂದ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಇದನ್ನು 1998ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಡಿ ಅಂದಿನ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ದಿ.ಎಂ.ಪಿ.ಪ್ರಕಾಶ್ ಉದ್ಘಾಟನೆ ಮಾಡಿದ ನಂತರ 2023ರವರೆಗೆ ಸುಗಮವಾಗಿ ನಡೆದ ಶಾಲೆಯು ಮೇಲ್ಚಾವಣಿಯ ಕುಸಿತದ ನೆಪದಿಂದ ಸಮರ್ಪಕ ನಿರ್ವಹಣೆ ಇಲ್ಲದೆ ಇಂದು ಹಾಳು ಕೊಂಪೆಯಾಗಿ ಬದಲಾಗಿದೆ.

ಇಂದು ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಗಿಡ ಗಂಟಿಗಳು, ಅಲ್ಲಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಧೂಮಪಾನ ಮಾಡಿ ಬಿಸಾಡಿರುವ ಸಿಗರೇಟಿನ ತುಂಡುಗಳು, ಪುಂಡ ಪೋಕರಿಗಳು ಕುಡಿದು ಅಡುಗೆ ಮಾಡಲು ಬಳಸಿರುವ ಕಲ್ಲಿನ ಒಲೆ-ಕಟ್ಟಿಗೆಗಳು ಕಟ್ಟಡದ ಪಾಳು ಕೊಂಪೆಗೆ ಸಾಕ್ಷಿಯಾಗಿವೆ.

ದಲಿತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ 1ರಿಂದ 5ರವರೆಗೆ ಒಟ್ಟು 250 ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಆರಂಭದಿಂದಲೂ ಉತ್ತಮ ನಿರ್ವಹಣೆ ಇತ್ತು. ಬಳಿಕ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇದಕ್ಕೆ ಹೊಂದಿಕೊಂಡ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವಿದ್ದು, ನಿಲಯ ಪಾಲಕ ಜುಂಜಪ್ಪನವರ ಉತ್ತಮ ನಿರ್ವಹಣೆಯಿಂದ 60 ಮಕ್ಕಳು ಈಗಲೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಹೊಂದಿಕೊಂಡ ಅಂಬೇಡ್ಕರ್ ವಸತಿ ಶಾಲೆ ಪಾಳು ಬಿದ್ದಿದೆ.

ತಾಲೂಕಿನಾದ್ಯಂತ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಿತ್ಯ ನಗರಕ್ಕೆ ಬರುತ್ತಾರೆ. ಆದರೆ ಹಾಸ್ಟೆಲ್ ಸೌಲಭ್ಯಗಳು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಸಿಕ್ಕರೆ, ಇನ್ನೂ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸಿಗದೆ, ಊರಿಂದ ಅಲೆದಾಡುವ ಪರಿಸ್ಥಿತಿ ಇದೆ.

ದಲಿತ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ನಿರ್ಮಾಣಗೊಂಡಿದ್ದ ಶಾಲೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಮಕ್ಕಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.

-ಕೆ.ಸುಭಾಷ್, ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ

ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಬಳಕೆ ಇಲ್ಲದೆ ಪಾಳುಬಿದ್ದಿದೆ. ಅವುಗಳನ್ನು ನೆಲಸಮಗೊಳಿಸುವ ಕೆಲಸವಾಗಲಿ, ಇಲ್ಲವೇ ನಿರ್ವಹಣೆಯೂ ನಡೆಯದ ಕಾರಣದಿಂದ ಗಿಡಗಂಟಿ ಬೆಳೆದು ಅವು ಸರಿಸೃಪಗಳ ಆವಾಸವಾಗಿ ಪರಿಣಮಿಸಿದೆ.

ಅಂಬೇಡ್ಕರ್ ವಸತಿ ಶಾಲೆ ಕೊಠಡಿ ದುರಸ್ತಿಗೆ ಸರಕಾರಕ್ಕೆ ಈಗಾಗಲೆ ಮನವಿ ನೀಡಲಾಗಿದೆ. ಮಕ್ಕಳ ಭದ್ರತೆಯ ದೃಷ್ಟಿಯಿಂದ ಅಲ್ಲಿಯ ಮಕ್ಕಳನ್ನು ನಗರದ ಬಸ್ ಡಿಪೋ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.

-ಗಂಗಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ

ಸೂಕ್ತ ನಿರ್ವಹಣೆಯಿಲ್ಲದೆ ಕಟ್ಟಡ ಅವನತಿಗೆ ಕಾರಣವಾಗಿದೆ. ಬಹುತೇಕ ಕೊಠಡಿ, ಕಟ್ಟಡಗಳು ಅವನತಿ ಅಂಚಿನಲ್ಲಿದೆ, ಅಭಿವೃದ್ಧಿಯತ್ತ ಅಧಿಕಾರಿಗಳು ಗಮನ ಹರಿಸಬೇಕು.

-ಗುಳೇದಹಟ್ಟಿ ಸಂತೋಷ್ ವಿದ್ಯಾರ್ಥಿ ಸಂಘದ ರಾಜ್ಯ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗುಡಿಹಳ್ಳಿ ಭೋವಿ ಮಂಜುನಾಥ್

contributor

Similar News