32 ಲಕ್ಷ ಜನಸಂಖ್ಯೆಯ ಕಲಬುರಗಿಗೆ ಬೇಕಿದೆ ಕೈಗಾರಿಕಾ ಭಾಗ್ಯ!
ವಲಸೆ ತಡೆಗೆ ಉದ್ಯೋಗ ಸೃಷ್ಟಿ ಅನಿವಾರ್ಯ; ಬಜೆಟ್‌ನಲ್ಲಿ ಈಡೇರುವುದೇ ಬೇಡಿಕೆ
ಕಲಬುರಗಿ, ಮಾ.5: ರಾಜ್ಯದಲ್ಲಿ ಕಲ್ಯಾಣ (ಹೈದರಾಬಾದ್) ಕರ್ನಾಟಕ ಎಂದರೆ ಥಟ್ಟನೆ ನೆನಪಾಗುವುದು ಹಿಂದುಳಿದ ಪ್ರದೇಶ. ಇದರ ಕೇಂದ್ರ ಭಾಗವಾಗಿರುವ ಕಲಬುರಗಿಯ ಸರ್ವತೋಮುಖ ಅಭಿವೃದ್ಧಿಗೆ ಇನ್ನೂ ಸಾಕಷ್ಟು ಶ್ರಮಿಸಬೇಕಿದೆ. ಮಳೆಗಾಗಿ ರೈತ ಆಕಾಶ ನೋಡುವಂತೆ ಇಲ್ಲಿನ ಪದವೀಧರ, ಕೃಷಿ, ಕಾರ್ಮಿಕರು ನಿತ್ಯವೂ ಕೆಲಸದತ್ತ ಮುಖ ಮಾಡುವಂತಾಗಿದೆ.
2011ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ 25.66 ಲಕ್ಷವಾದರೆ, 2025ರ ಯೋಜಿತ ಜನಸಂಖ್ಯೆ 32.35 ಲಕ್ಷಕ್ಕೆ ಏರಿರುವ ಇಂತಹ ದೊಡ್ಡ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲದೆ ಬಹುಕಾಲದಿಂದಲೂ ಇಲ್ಲಿನ ಕಾರ್ಮಿಕರು ವಲಸೆ ಹೋಗುವ ಸ್ಥಿತಿ ಮುಂದುವರಿಯುತ್ತಲೇ ಇದೆ. ಹಾಗಾಗಿ ಈ ಸಲ ಭಾರೀ ನಿರೀಕ್ಷೆ ಮೂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಕಲಬುರಗಿಗೆ ಕೈಗಾರಿಕಾ ಸ್ಥಾಪನೆ, ಐಟಿಬಿಟಿ, ಸ್ಟಾರ್ಟ್ ಅಪ್ ಪಾರ್ಕ್ ಅಥವಾ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಭಾಗ್ಯಗಳ ಸರದಾರ ಸಿಎಂ ಸಿದ್ದರಾಮಯ್ಯ ಅವರು ಕೈಗಾರಿಕಾ ಭಾಗ್ಯದ ಜೊತೆಗೆ ಮಹತ್ವದ ಯೋಜನೆ ಘೋಷಿಸುತ್ತಾರೆ ಎನ್ನುವುದು ಈ ಭಾಗದ ಪ್ರಮುಖ ನಿರೀಕ್ಷೆಯಾಗಿದೆ.
10,954 ಚದರ ಕಿ.ಮೀ. ಹೊಂದಿರುವ ಕಲಬುರಗಿ ಜಿಲ್ಲೆಯಲ್ಲಿ 8 ಸಿಮೆಂಟ್ ಹಾಗೂ 5 ಸಕ್ಕರೆ ಕಾರ್ಖಾನೆಗಳನ್ನು ಬಿಟ್ಟರೆ ಬೇರೆ ಯಾವುದೇ ಕೃಷಿ, ಸೇವಾ ವಲಯಕ್ಕೆ ಸಂಬಂಧಪಟ್ಟಂತಹ ದೊಡ್ಡ ಉದ್ಯಮಗಳೇ ಇಲ್ಲ. ಈ 13 ಕೈಗಾರಿಕೆಗಳಲ್ಲಿ 10,046 ಕಾರ್ಮಿಕರು, 338 ಸಣ್ಣ ಕೈಗಾರಿಕಾ ಘಟಕಗಳಲ್ಲಿ 3,736 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇನ್ನು, 267 ತೊಗರಿ ಕಾರ್ಖಾನೆಗಳಲ್ಲಿ ಇಂದು ಕೇವಲ 155 ಕಾರ್ಖಾನೆಗಳು ಚಾಲ್ತಿಯಲ್ಲಿದ್ದು, 112 ಸ್ಥಗಿತಗೊಂಡಿವೆ. ಸಕ್ರಿಯ ಕಾರ್ಖಾನೆಗಳಲ್ಲಿ 1500 ಕಾರ್ಮಿಕರಷ್ಟೇ ಕೆಲಸದಲ್ಲಿದ್ದಾರೆ ಎಂದು ಕೈಗಾರಿಕಾ ಇಲಾಖೆಯ ಮಾಹಿತಿಯಿಂದ ಗೊತ್ತಾಗಿದೆ.
ಪ್ರಗತಿಯಲ್ಲಿಲ್ಲದ ಜವಳಿ ಪಾರ್ಕ್; ತಾಂಡಾಗಳಲ್ಲಿ ವಲಸೆ ಹೆಚ್ಚು ಕಲಬುರಗಿ ನಗರದ ಸುತ್ತಮುತ್ತಲಿರುವ ಕೈಗಾರಿಕಾ ಪ್ರದೇಶಗಳಲ್ಲಿ 530 ಎಕರೆಯಲ್ಲಿ 3 ಹಂತಗಳಲ್ಲಿ ಕಪನೂರ, 800 ಎಕರೆಯಲ್ಲಿ ನಂದೂರು, ಕೆಸರಟಗಿ 2 ಹಂತಗಳ ಕೈಗಾರಿಕಾ ಪ್ರದೇಶ ಹೊಂದಿದೆ. ಇದನ್ನು ಬಿಟ್ಟರೆ ಇತ್ತೀಚೆಗೆ ಘೋಷಣೆಯಾಗಿರುವ ಪಿಎಂ ಮಿತ್ರ ಜವಳಿ ಪಾರ್ಕ್ ಮಾತ್ರ. ಇದರ ಅನುಷ್ಠಾನಕ್ಕೆ ಫರಹತಾಬಾದ ಸಮೀಪ 1,000 ಎಕರೆ ಭೂಮಿ ಮೀಸಲಿಡಲಾಗಿದೆ. ಆದರೆ ಕೆಲಸ ಪ್ರಗತಿಯಲ್ಲಿಲ್ಲ. ಇನ್ನುಳಿದಂತೆ ಯಾವುದೇ ಕ್ಷೇತ್ರಗಳಲ್ಲಿ ಕೆಲಸವಿಲ್ಲದ ಕಾರಣ ಈ ಭಾಗದ ಜನರು ಉದ್ಯೋಗಕ್ಕಾಗಿ, ತುತ್ತು ಅನ್ನಕ್ಕಾಗಿ ವಲಸೆ ಹೋಗುವುದು ರೂಢಿಯಾಗಿದೆ. ಜಿಲ್ಲೆಯ ಗಡಿ ತಾಲೂಕುಗಳ ಗಡಿ ಗ್ರಾಮಗಳಲ್ಲಿ ಹೆಚ್ಚಿನ ವಲಸೆ ಹೋಗುವುದರ ಜೊತೆಗೆ ವಿವಿಧ ತಾಂಡಾಗಳಲ್ಲಿಯೂ ವಲಸೆ ಪ್ರಮಾಣ ದಟ್ಟವಾಗಿದೆ.
ಕೈಗಾರಿಕಾ ಕಾರಿಡಾರ್, ಸ್ಟಾರ್ಟ್ ಅಪ್ ಪಾರ್ಕ್
ಜಿಲ್ಲೆಯಲ್ಲಿ ವಲಸೆ ಹೋಗುವುದನ್ನು ತಡೆಗಟ್ಟಲು ಹಾಗೂ ಉದ್ಯೋಗ ಸೃಷ್ಟಿಗೆ ಸ್ಥಳೀಯ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆ, ಸೇವಾವಲಯದ ಸ್ಟಾರ್ಟ್ ಅಪ್‌ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಹೀಗೆ ಸರ್ವತೋಮುಖ ಪ್ರಗತಿಗೆ ಕೈಗಾರಿಕಾ ಕಾರಿಡಾರ್ ಸ್ಥಾಪನೆ, ಸ್ಟಾರ್ಟ್ ಅಪ್ ಪಾರ್ಕ್ ಘೋಷಣೆ ಸೇರಿದಂತೆ ಐಟಿಬಿಟಿ ಪಾರ್ಕ್ ಘೋಷಣೆ ಮಾಡಬೇಕೆನ್ನುವುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದೆ. ಬೇಡಿಕೆಗಿಂತ ಹೆಚ್ಚು ಇವುಗಳ ಅನುಷ್ಠಾನ ಅನಿವಾರ್ಯವಾಗಿದೆ. ಅಲ್ಪಸ್ವಲ್ಪ ಜಾರಿಯಾದ ನಂಜುಂಡಪ್ಪ ವರದಿಯಂತೆ ಗೋವಿಂದರಾವ್ ವರದಿಯಲ್ಲಿರುವ ಅಂಶಗಳೆಲ್ಲವೂ ಜಾರಿಯಾಗಬೇಕಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನ
ಕೈಗಾರಿಕೆಗಳಿಲ್ಲದೆ ಕಾರ್ಮಿಕರ ಕೈಗಳಿಗೆ ಕೆಲಸವಿಲ್ಲದೆ ಬಿಕೋ ಎನ್ನುತ್ತಿರುವ ಕಲಬುರಗಿ ಜಿಲ್ಲೆಯೂ ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ತಲಾ ಆದಾಯದಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಹೊಸ ಕೈಗಾರಿಕೆ, ಸೇವಾ ವಲಯದ ದೊಡ್ಡ ಉದ್ಯಮಗಳನ್ನು ಸ್ಥಾಪಿಸಿದರೆ ಮಾತ್ರ ತಲಾ ಆದಾಯ ಸೇರಿದಂತೆ ಜಿಲ್ಲೆಯ ಒಟ್ಟು ಉತ್ಪಾದನಾ ವೆಚ್ಚವೂ ಹೆಚ್ಚಿಸಬಹುದು. ಕೇಂದ್ರ, ರಾಜ್ಯ ಸರಕಾರಗಳಿಗೆ ಮನದಟ್ಟು ಮಾಡಲು ಇಲ್ಲಿನ ಸಚಿವ, ಸಂಸದ, ಶಾಸಕರೂ ಒತ್ತಡವು ಹೇರಲೇಬೇಕಾದ ಸ್ಥಿತಿ ಬಂದಿದೆ.
ಕಲಬುರಗಿ, ಶಹಾಬಾದ ಮತ್ತು ವಾಡಿ ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಪಿಎಂ ಮಿತ್ರ ಜವಳಿ ಪಾರ್ಕ್ ಕೆಲಸ ತ್ವರಿತವಾಗಿ ಪೂರ್ಣಗೊಳಿಸಬೇಕು. ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ತವರು ಜಿಲ್ಲೆಗೆ 100 ಎಕರೆ ಪ್ರದೇಶದಲ್ಲಿ ಐಟಿಬಿಟಿ ಮತ್ತು ಸ್ಟಾರ್ಟ್ ಅಪ್ ಪಾರ್ಕ್ ಘೋಷಿಸಬೇಕು.
ಮುತ್ತಣ್ಣ ನಡಗೇರಿ, ಅಭಿವೃದ್ಧಿಪರಹೋರಾಟಗಾರ
ನಮ್ಮ ಭಾಗಕ್ಕೆ ಕೈಗಾರಿಕೆಗಳು ಬರುತ್ತಿಲ್ಲ ಎನ್ನುವ ಕೊರಗಿದೆ. ಕೈಗಾರಿಕೆಗಳ ಸ್ಥಾಪನೆ, ಹೂಡಿಕೆಗೆ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಕೈಗಾರಿಕಾ ಸಚಿವರಿಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮುಖ್ಯಮಂತ್ರಿ, ಸಚಿವರನ್ನೂ ಭೇಟಿಯಾಗಿ ಮನವಿ ಮಾಡಿದ್ದೇವೆ. ಏನಾಗುತ್ತದೆ ಕಾದುನೋಡಬೇಕು.
-ಡಾ.ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
ವಿವಿಧ ಯೋಜನೆ, ಕಾಮಗಾರಿಗಳಿಗಾಗಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ನಮ್ಮ ಹಲವು ಬೇಡಿಕೆಗಳಿವೆ. ನಮ್ಮ ಜಿಲ್ಲೆಗೂ ಹೆಚ್ಚಿನ ಅನುದಾನ ಬರಲಿ ಎನ್ನುವುದು ನಿರೀಕ್ಷೆಯಿದೆ. ಯಾವೆಲ್ಲಾ ಘೋಷಣೆ ಆಗುತ್ತವೆ ಎನ್ನುವುದು ಬಜೆಟ್ ಬಂದ ಬಳಿಕ ಗೊತ್ತಾಗಲಿದೆ.
-ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ