ಅಮೆರಿಕದೊಂದಿಗೆ ಸ್ನೇಹ: ಸುರಕ್ಷಿತ ಅಂತರವಿರಲಿ
ಅಂತರ್‌ರಾಷ್ಟ್ರೀಯ ಸಂಬಂಧಗಳನ್ನು ಅರ್ಥ ಮಾಡಿಕೊಂಡು ವಿಶ್ಲೇಷಣೆಗೆ ಗುರಿ ಪಡಿಸುವುದು ಸುಲಭದ ಮಾತಲ್ಲ. ಯಾಕೆಂದರೆ ಅಲ್ಲಿನ ಸಂಕೀರ್ಣತೆ, ಒತ್ತಡಗಳು, ಒಳ ಸುಳಿಗಳೆಲ್ಲ ಮೇಲ್ನೋಟಕ್ಕೆ ಗೋಚರಿಸುವಂತಿರುವುದಿಲ್ಲ. ಇನ್ನು ದೇಶಗಳ ನಾಯಕರ ವೈಯಕ್ತಿಕ ಸ್ನೇಹ, ಒತ್ತಾಸೆಗಳು ಸಂಬಂಧಗಳ ನಡುವೆ ತಲೆ ಹಾಕಿದರೆ ಹೇಳುವುದೇ ಬೇಡ. ಆಗ ವಿಷಯ ಜಟಿಲಗೊಂಡು ಹೊರಗಿನವರಿಗೆ ಒಂದು ತೀರ್ಮಾನಕ್ಕೆ ಬಂದು ಬಿಡಲು ಕಷ್ಟವಾಗುತ್ತದೆ. ಆದರೆ ಅಮೆರಿಕದಂತಹ ದೇಶ ಮತ್ತು ಟ್ರಂಪ್ ಅವರಂತಹ ನಾಯಕನ ವಿಷಯದಲ್ಲಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಅಂತಹ ಬುದ್ಧಿವಂತಿಕೆಯ ಅಗತ್ಯವಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಟ್ರಂಪ್ ಅವರ ಎರಡನೇ ಅಧಿಕಾರ ಅವಧಿಯ ಹೇಳಿಕೆಗಳು ಮತ್ತು ನಡವಳಿಕೆಗಳು ಈ ಅಭಿಪ್ರಾಯವನ್ನು ಧ್ವನಿಪೂರ್ಣವಾಗಿ ಸಮರ್ಥಿಸುವಂತಿವೆ.
ಅಮೆರಿಕ ಪಕ್ಕಾ ವ್ಯಾವಹಾರಿಕ ದೇಶ ಎಂಬುದು ಎಲ್ಲರಿಗೂ ಗೊತ್ತು. ಆ ದೇಶಕ್ಕೆ ಲಾಭವಿಲ್ಲದೆ ಇನ್ನೊಂದು ದೇಶಕ್ಕೆ ಅನುಕೂಲ ಮಾಡಿಕೊಡುವುದು ಅದರ ಜಾಯಮಾನದಲ್ಲೇ ಇಲ್ಲ. ಇನ್ನು ಜಗತ್ತಿನ ಯಾಜಮಾನಿಕೆ ವಹಿಸಿಕೊಂಡು ಎಲ್ಲದರಲ್ಲೂ ತನ್ನ ಕೈ ಮೇಲು ಎಂದು ಸಾಧಿಸುವುದು ಆ ದೇಶದ ಅಲಿಖಿತ ನೀತಿ. ಹೀಗಾಗಿ ಯಾರು ಒಪ್ಪಲಿ ಬಿಡಲಿ ಅದು ಜಗತ್ತಿಗೆ ದೊಡ್ಡಣ್ಣ! ಅದರ ಸಾಧನೆ ಮತ್ತು ಸಾಮರ್ಥ್ಯಗಳೂ ಹಾಗೆ ಇವೆ ಕೂಡಾ. ರಶ್ಯದಂತಹ ದೇಶದ ಪತನದ ಬಳಿಕ ಅದನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಇಲ್ಲಿ ಚೀನಾ ನೇರಾ ನೇರ ಅಖಾಡಕ್ಕೆ ಇಳಿಯದಿರುವುದು ಸದ್ಯಕ್ಕೆ ಅಮೆರಿಕದ ಸ್ಥಾನಮಾನ ಅಭಾದಿತವೆನ್ನಬಹುದು. ಇಂತಹ ದೇಶಕ್ಕೆ ಟ್ರಂಪ್ ಅವರಂತಹ ವ್ಯಕ್ತಿ ಅಧ್ಯಕ್ಷರಾಗಿ ಬಂದರೆ ಏನಾಗ ಬಹುದು?
ಏನಾಗಿದೆ, ಏನಾಗುತ್ತಿದೆ ಎಲ್ಲವೂ ನಮ್ಮ ಕಣ್ಣ ಮುಂದಿವೆ. ಮುಂದೆ ಏನಾಗಲಿವೆ ಎಂಬುದನ್ನು ಆತಂಕದಿಂದ ಕಾದು ನೋಡ ಬೇಕಾದ ಪರಿಸ್ಥಿತಿ ಬಂದೊದಗಿದೆ.
ಪ್ರಸಕ್ತ ಭಾರತ ಮತ್ತು ಅಮೆರಿಕದ ಸಂಬಂಧ ಆಗಾಗ ಮಹತ್ವದ ತಿರುವು ತೆಗೆದು ಕೊಳ್ಳುತ್ತಿರುವುದರಿಂದ ಈ ನಿಟ್ಟಿನಲ್ಲಿ ಚಿಂತಿಸುವುದು ಅತ್ಯಂತ ಅಗತ್ಯವಾಗಿದೆ. ಇದನ್ನು ಎಲ್ಲಿಂದ ಪ್ರಾರಂಭಿಸುವುದು; ಎಲ್ಲಿಗೆ ನಿಲ್ಲಿಸುವುದು?
ಹೊಸ ಸುದ್ದಿ ಬಂದಿದೆ, ನೋಡಿ. ಭಾರತಕ್ಕೆ ಇನ್ನು 30 ದಿನಗಳ ವರೆಗೆ ರಶ್ಯದಿಂದ ತೈಲ ಅಮದು ಕೊಳ್ಳುವುದಕ್ಕೆ ವಿನಾಯಿತಿ ಇದೆ! ಹೀಗಂತ ಅಮೆರಿಕ ಅಪ್ಪಣೆ ಕೊಡಿಸಿದೆ. ಭಾರತ ಒಂದು ಸರ್ವ ಸ್ವತಂತ್ರ ಸಾರ್ವಭೌಮ ದೇಶವೆಂದು ಅಮೆರಿಕಕ್ಕೆ ಮರೆತು ಹೋಯಿತೇ? ಭಾರತದ ಆಂತರಿಕ ವಿಷಯದೊಳಗೆ ಈ ರೀತಿ ಮಧ್ಯ ಪ್ರವೇಶ ಮಾಡಲು ಆ ದೇಶಕ್ಕೆ ಯಾವ ಅಧಿಕಾರವಿದೆ? ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ತಕ್ಕುದಾಗಿ ಪ್ರತಿಕ್ರಿಯಿಸ ಬೇಕಾಗಿರುವುದು ಅಗತ್ಯ. ಇಂತಹ ಅಧಿಕ ಪ್ರಸಂಗದ ನಡವಳಿಕೆ ಅಮೆರಿಕದಿಂದ ಮೊದಲ ಬಾರಿ ಏನಲ್ಲ.
ಈ ಹಿಂದೆ ಟ್ರಂಪ್ ಭಾರತವನ್ನು ನಿರಂತರ ಅವಮಾನ, ಸಂಕಷ್ಟಕ್ಕೆ ಗುರಿ ಮಾಡಿರುವುದನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಭಾರತ ಪಾಕಿಸ್ತಾನದೊಂದಿಗೆ ಸ್ಪಷ್ಟ ಮೇಲುಗೈ ಸಾಧಿಸಿದಂತಹ ‘ಅಪರೇಷನ್ ಸಿಂಧೂರ’ ದ ಯಶಸ್ಸನ್ನು ಸಂಭ್ರಮಿಸಲು ಟ್ರಂಪ್ ಅವರ ಉಡಾಫೆ ಹೇಳಿಕೆಗಳು ಅಡ್ಡಿ ಉಂಟು ಮಾಡಿರುವುದನ್ನೊಮ್ಮೆ ನೆನಪಿಸಿಕೊಳ್ಳೋಣ. ಸೈನಿಕರ ಶೌರ್ಯದ ಫಲವಾಗಿ ಯಶಸ್ಸು ನಮ್ಮದಾಗಿತ್ತು. ಈ ಯುದ್ಧವನ್ನು ನಿಲ್ಲಿಸಿದ್ದು ತಾನೇ ಎಂದು ಟ್ರಂಪ್‌ಮಹಾಶಯರು ಪದೇ ಪದೇ ಹೇಳುತ್ತಲೇ ಹೋದರು. ಅದೆಷ್ಟು ಬಾರಿ ಹೇಳಿದರೋ ಗೊತ್ತಿಲ್ಲ, ಇಂದಿಗೂ ಅದನ್ನೇ ಬಡ ಬಡಿಸುತ್ತಲೇ ಇದ್ದಾರೆ. ಇಷ್ಟು ಸಾಲದೆಂಬಂತೆ ಪಾಕಿಸ್ತಾನದ ಸೇನಾ ದಂಡ ನಾಯಕನಿಗೆ ಶ್ವೇತ ಭವನದಲ್ಲಿ ಔತಣ ನೀಡಿದರು. ಜೊತೆಗೆ ಅಡ್ಡ ಗೋಡೆ ಮೇಲೆ ದೀಪ ಇಡುವಂತೆ ಇಷ್ಟು ಯುದ್ಧ ವಿಮಾನಗಳು ಪತನವಾಗಿವೆ ಎಂಬ ಹೇಳಿಕೆಯನ್ನೂ ನೀಡಿದರು. ಈ ವಿಚಾರದಲ್ಲಿ ನಮ್ಮ ಪ್ರಧಾನಿ ಅಸಹಾಯಕರಾಗಿ ಮೌನಕ್ಕೆ ಶರಣಾಗಿ ಬಿಟ್ಟರು
ಇದಾದ ಬಳಿಕ ಟ್ರಂಪ್ ರಶ್ಯದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸ ಬೇಕೆಂಬ ಒತ್ತಡ ಹೇರಲಾರಂಭಿಸಿದರು. ತಪ್ಪಿದರೆ ಆಮದು ಸರಕುಗಳ ಮೇಲೆ ಶೇ. 50ರ ಬೆದರಿಕೆಯೂ ಇತ್ತು. ಕಷ್ಟ ಕಾಲದ ಮಿತ್ರ ರಾಷ್ಟ್ರ ರಶ್ಯಕ್ಕೆ ಭಾರತ ದ್ರೋಹ ಬಗೆಯ ಬೇಕೆ? ಟ್ರಂಪ್ ಅವರನ್ನು ತನ್ನ ಮಿತ್ರನೆಂದೂ ಭಾರತದ ಮಿತ್ರನೆಂದೂ ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದಂತಹ ಮೋದಿಯವರು ಟ್ರಂಪ್‌ಜೊತೆ ಮಾತುಕತೆ ನಡೆಸಿದರೋ ಇಲ್ಲವೊ ಗೊತ್ತಿಲ್ಲ. ಅಂತೂ ಒಂದು ದಿನ ಟ್ರಂಪ್ ಭಾರತದ ಮೇಲೆ ಶೇಕಡ ಸುಂಕ ವಿಧಿಸಿಯೇ ಬಿಟ್ಟರು! ಅವರಿಗೆ ತನ್ನ ‘ಆಪ್ತ ಮಿತ್ರ’ನ ಆತ್ಮೀಯತೆಯಾಗಲಿ, ಸ್ನೇಹವಾಗಲಿ ನೆನಪಿಗೆ ಬರಲಿಲ್ಲ. ತರುವಾಯ ಭಾರತ ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದ ಮಾಡುತ್ತಿದ್ದಂತೆ ಅವರಿಗೆ ಮೋದಿಯವರ ನೆನಪಾಯಿತೇನೋ? ಭಾರತದ ಮೇಲಿನ ಸುಂಕ 50ರಿಂದ 18ಕ್ಕೆ ಇಳಿಕೆ ಮಾಡಲಾಗುವುದು ಎಂಬ ಆಕರ್ಷಕ ಘೋಷಣೆಯನ್ನು ಮಾಡಲಾಯಿತು. ಇಲ್ಲಿಯೂ ಗುಪ್ತ ಕಾರ್ಯಸೂಚಿಗಳಿದ್ದವು. ಅವುಗಳು ನಂತರ ಬಯಲಾಯಿತು. ಅಮೆರಿಕ ಕೆಲವು ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ರಪ್ತು ಮಾಡುವುದು ಈ ಪ್ರಸ್ತಾವದಲ್ಲಿ ಒಳಗೊಂಡಿತ್ತು. ಭಾರತದ ರೈತರ ಹಿತಾಸಕ್ತಿಗಳಿಗೆ ಧಕ್ಕೆ ತರುವಂತಹ ಈ ಪ್ರಸ್ತಾವವನ್ನು ರೈತರು ಮತ್ತು ಪ್ರತಿ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಈ ನಡುವೆ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ವಿದೇಶಗಳ ಮೇಲಿನ ಆಮದು ತೆರಿಗೆಯನ್ನು ಶೇ. 10ಕ್ಕೆ ಇಳಿಸಿದೆ. ಕೊನೆಗೆ ಅದು ಶೇ. 15ಕ್ಕೆ ನಿಗದಿಯಾಗಿದೆ ಎಂಬ ಸುದ್ದಿ ಬಂದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಟ್ರಂಪ್ ತನ್ನ ವಿಶಿಷ್ಟ ಹಾವಭಾವಗಳಿಂದ ‘‘ಭಾರತದ ವಸ್ತುಗಳ ಮೇಲೆ ನಾವು ತೆರಿಗೆ ವಿಧಿಸಿದ್ದೇವೆ, ಭಾರತ ಅಮೇರಿಕದ ರಪ್ತುಗಳ ಮೇಲೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ’’ ಎಂದೆಲ್ಲ ಅಮೆರಿಕ ಜನತೆಯನ್ನು ಖುಷಿ ಪಡಿಸುವಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ.
ನಂತರ ಭಾರತ ರಶ್ಯದ ಬದಲು ವೆನೆಝುವೆಲಾದಿಂದ ಕಚ್ಚಾ ತೈಲ ಖರೀದಿಸುವುದೆಂದು ಟ್ರಂಪ್ ಅವರೇ ಸ್ವಯಂ ಘೋಷಿಸಿ ಕೊಂಡರು. ಬಹುಶಃ ಅವರು ಈಗ ಅದಕ್ಕೆ ತಾತ್ಕಾಲಿಕ ವಿನಾಯಿತಿ ನೀಡುವಂತಹ ಧಾರಾಳತನ ತೋರಿರ ಬೇಕು! ಈ ಬಗ್ಗೆ ನಮ್ಮ ಸರಕಾರ ತೋರಬೇಕಾದ ದಿಟ್ಟತನದ ಗೈರು ಹಾಜರಿ ಆಶ್ಚರ್ಯವನ್ನೂ ಬೇಸರವನ್ನೂ ಏಕ ಕಾಲದಲ್ಲಿ ಉಂಟು ಮಾಡುತ್ತದೆ. ಯಾಕೆ ಈ ತರಹದ ನಿರ್ಲಕ್ಷ್ಯ, ಅಸಹಾಯಕತೆ? ಅರ್ಥವಾಗುತ್ತಿಲ್ಲ
ಟ್ರಂಪ್ ಮತ್ತು ಮೋದಿಯವರ ಒಡನಾಟ, ಗೆಳೆತನ ಎಲ್ಲರಿಗೂ ಗೊತ್ತಿರುವಂತಹದ್ದೆ. ಟ್ರಂಪ್ ಅವರ ಮೊದಲ ಅಧಿಕಾರ ಅವಧಿಯಲ್ಲಿ ಮೊಳಕೆಯೊಡೆದ ಒಡನಾಟ ಕ್ರಮೇಣ ಗಾಢವಾಗಿ ಬೆಳೆದು ಬಂದಿರುವುದು ಹಳೆಯ ಕತೆ. ಭಾರತದಲ್ಲಿ ಏರ್ಪಡಿಸಲಾಗಿದ್ದ ‘ನಮಸ್ತೆ ಟ್ರಂಪ್’ ಹಾಗೂ ಅಮೆರಿಕದಲ್ಲಿ ಅನಿವಾಸಿ ಭಾರತೀಯರು ಸಂಘಟಿಸಿದ್ದ ‘ಹೌಡಿ ಮೋದಿ’ ಕಾರ್ಯಕ್ರಮಗಳೆರಡು ಜನರಲ್ಲಿ ಭಾರತೀಯರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟಿ ಹಾಕಿದ್ದು ನಿಜ. ಅಮೆರಿಕದ ಕಾರ್ಯಕ್ರಮದಲ್ಲಿ ಮುಂದಿನ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯನ್ನು ದೃಷ್ಟಿಯಲ್ಲಿಟ್ಟು ‘ಅಬ್‌ಕಿ ಬಾರಿ ಟ್ರಂಪ್ ಸರಕಾರ್’ ಎಂಬ ಮೋದಿಯವರ ಘೋಷಣೆ ವಿವಾದವನ್ನು ಸೃಷ್ಟಿಸಿತ್ತಾದರೂ ಅವರಿಬ್ಬರ ಗಾಢ ಸ್ನೇಹವನ್ನು ಮತ್ತಷ್ಟು ದೃಢ ಪಡಿಸುವಂತಿತ್ತು. ಜೊತೆಗೆ ಅಮೆರಿಕದಂತಹ ಸೂಪರ್‌ಪವರ್ ದೇಶದ ಮುಖ್ಯಸ್ಥನನ್ನು ಮೋದಿ ಒಲಿಸಿ ಕೊಂಡು ಬಿಟ್ಟರಲ್ಲ ಎಂದು ಸಂಭ್ರಮ ಪಟ್ಟವರೇ ಹೆಚ್ಚು.
ಆದರೆ ಎರಡನೇ ಅವಧಿಯಲ್ಲಿ ಅವರು ಜಗತ್ತಿಗೆ ತನ್ನ ಅಸಲಿ ರೂಪದ ದರ್ಶವನ್ನು ಮಾಡಿಯೇ ಬಿಟ್ಟರು. ಟ್ರಂಪ್ ವ್ಯಕ್ತಿತ್ವ, ನಡವಳಿಕೆಗಳು ಒಂದು ಬಲಿಷ್ಠ ದೇಶದ ನಾಯಕನಿಗೆ ಸಲ್ಲುವಂತಹದ್ದಲ್ಲ. ಈಗಾಗಲೇ ಅವರ ವಿಲಕ್ಷಣ ನಡೆ ನುಡಿಗಳು ಜಗತ್ತಿನಾದ್ಯಂತ ರೇಜಿಗೆ ಹುಟ್ಟಿಸಿದೆ. ಅವರ ವ್ಯಕ್ತಿತ್ವದ ಬಗ್ಗೆ ಅಮೆರಿಕ ಜನತೆ ಸಹಿತ ಜಗತ್ತಿನಾದ್ಯಂತ ಜನರು ಭ್ರಮ ನಿರಸನ ಗೊಂಡಿದ್ದಾರೆ. ಹಾಗಾದರೆ ಪ್ರಧಾನಿ ಮೋದಿಯವರು ಟ್ರಂಪ್ ಅವರನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರೇ? ರಾಜತಾಂತ್ರಿಕ ನೆಲೆಯ ಸ್ನೇಹಕ್ಕಿಂತ ಹೆಚ್ಚಿನ ವೈಯಕ್ತಿಕ ಆಪ್ತ ಸಂಬಂಧ ಬೆಳೆಸಿದ ಮೋದಿಯವರು, ಏನೋ ಮಾಡಲು ಹೋಗಿ ಇನ್ನೇನನ್ನೋ ಮೈ ಮೇಲೆ ಎಳೆದು ಕೊಂಡು ಬಿಟ್ಟರೆ?
ಟ್ರಂಪ್ ಅವರ ನಿಯಂತ್ರಣವಿಲ್ಲದ ಸರ್ವಾಧಿಕಾರಿ ಧೋರಣೆಗೆ ವೆನೆಝುವೆಲಾ ಪ್ರಕರಣ ಸಾಕ್ಷಿಯಾಯಿತು. ಐರೋಷ್ಯ ಒಕ್ಕೂಟದ ಎಚ್ಚರಿಕೆಯಿಂದ ಗ್ರೀನ್‌ಲ್ಯಾಂಡ್ ವಶ ಸ್ವಲ್ಪದರಲ್ಲಿ ಉಳಿದು ಕೊಂಡು ಬಿಟ್ಟಿತು. ಇದೀಗ ಟ್ರಂಪ್ ಇಸ್ರೇಲ್ ಜೊತೆಗೆ ಸೇರಿ ಇರಾನ್ ಮೇಲೆ ಯುದ್ಧ ಸಾರಿದ್ದಾರೆ. ಈ ಯುದ್ಧದಿಂದ ಅಪಾರ ಹಾನಿಯೊಂದಿಗೆ ಮುಗ್ಧ ಜೀವಗಳು ಬಲಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಮೇಲ್ನೋಟಕ್ಕೆ ಇರಾನ್ ಅಪಾಯಕಾರಿ ಪರಮಾಣು ಕಾರ್ಯಕ್ರಮ ಕೈಗೊಂಡಿರುವ ಕಾರಣವಿದೆ. ಆದರೆ ಈ ಯುದ್ಧಕ್ಕೆ ಅಮೆರಿಕ ಇರಾನ್ ದೇಶದ ತೈಲ ಸಂಪತ್ತಿನ ಮೇಲೆ ಕಣ್ಣಿರಿಸಿರುವುದೆಂದು ಅಥವಾ ಎಪ್‌ಸ್ಟೀನ್ ಫೈಲ್ಸ್‌ನಿಂದ ಹಾಳಾಗಿರುವ ಮಾನವನ್ನು ಈ ಯುದ್ಧದಿಂದ ತುಂಬಿ ಕೊಳ್ಳುವ ಪ್ರಯತ್ನವೆಂದೂ ಅಭಿಪ್ರಾಯ ಪಡುತ್ತಾರೆ. ಯಾವುದಿದ್ದರೂ ಟ್ರಂಪ್ ಅವರಂತೂ ವಿವೇಚನಾರಹಿತ ಆಕ್ರಮಣಕಾರಿ ಧೋರಣೆಗಳನ್ನು ಅನುಸರಿಸುವವರು ಎಂದು ಈಗಾಗಲೇ ಸಾಬೀತಾಗಿದೆ.
ಆದ್ದರಿಂದ ಭಾರತ ಸರಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇನ್ನು ಮುಂದಾದರೂ ಇಡುವುದು ಅಗತ್ಯವೆಂದು ಮನಗಾಣ ಬೇಕು. ಟ್ರಂಪ್ ಅವರ ಉಡಾಫೆ ಹೇಳಿಕೆಗಳು, ನಡವಳಿಕೆಗಳು ಭಾರತದ ಘನತೆ, ಗೌರವಗಳಿಗೆ ಹಾನಿ ಉಂಟು ಮಾಡಿವೆ. ಹಾಗೆಯೇ ಆರ್ಥಿಕ ನಷ್ಟಗಳಿಗೂ ಕಾರಣವಾಗಿದೆ. ಟ್ರಂಪ್‌ರ ಎಲ್ಲ ಕ್ರಮಗಳನ್ನು ಸಮರ್ಥಿಸುವಂತಹ ನಡೆಗಳು ಅಥವಾ ಪ್ರತಿರೋಧ ತೋರಿಸಬೇಕಾದ ಸಂದರ್ಭದಲ್ಲಿ ಮೌನ ವಹಿಸುವಂತಹ ಸನ್ನಿವೇಶಗಳು ಅಪೇಕ್ಷಣೀಯವಲ್ಲ. ಈ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಭಾರತ ಮುತ್ಸದ್ದಿತನವುಳ್ಳ ಒಂದು ಸುರಕ್ಷಿತ ಅಂತರವಿರುವಂತಹ ಸಂಬಂಧವನ್ನು ಕಾಯ್ದು ಕೊಳ್ಳುವುದೇ ಕ್ಷೇಮ ಎಂದನಿಸುತ್ತದೆ.