×
Ad

ಸಿದ್ದರಾಮಯ್ಯನವರ ಬಜೆಟ್ ಕೇವಲ ಅಲ್ಪಸಂಖ್ಯಾತರಿಗಷ್ಟೇ ನೀಡಿದೆಯೇ?

Update: 2026-03-08 11:05 IST

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ಸರಕಾರದ 2026-27ನೇ ಸಾಲಿನ 4.48 ಲಕ್ಷ ಕೋಟಿ ರೂ. ಆಯವ್ಯಯ ಮಂಡಿಸಿದ್ದಾರೆ, ಬಜೆಟ್ ಭಾಷಣ ಮುಗಿಯುವದಕ್ಕಿಂತ ಮುಂಚೆಯೇ ಬಿಜೆಪಿ ಪಟಾಲಂ ಇದು ಅಲ್ಪಸಂಖ್ಯಾತರ ತುಷ್ಟೀಕರಣ, ಸಾಕಷ್ಟು ಅನುದಾನ ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಎಂದು ಬೊಬ್ಬೆ ಹೊಡೆಯಲು ಪ್ರಾರಂಭಿಸಿರುವುದು ಇವರ ಪೂರ್ವಾಗ್ರಹ ಎದ್ದು ಕಾಣುತ್ತದೆ. ಏಕಕಾಲಕ್ಕೆ ಬಿಜೆಪಿಯ ಎಲ್ಲಾ ನಾಯಕರು ಮತ್ತು ಇವರ ಸಾಮಾಜಿಕ ಜಾಲತಾಣದ ಐಟಿ ಸೆಲ್ ಮುಸ್ಲಿಮ್ ಪರ ಬಜೆಟ್ ಎಂದು ತೀರ್ಪು ನೀಡಿದ್ದಾರೆ. ಕರ್ನಾಟಕ ಸರಕಾರದ ಬಜೆಟ್ ಗಾತ್ರದ 4.48 ಲಕ್ಷ ಕೋಟಿ ರೂ.ಗಳಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಎಲ್ಲಾ ಯೋಜನೆಗಳೂ ಸೇರಿದಂತೆ ಮೀಸಲಿಟ್ಟ ಅನುದಾನ 4,763 ಕೋಟಿ ರೂ. ಇದು ಬಜೆಟ್‌ನ ಕೇವಲ ಶೇ. 1ರಷ್ಟು ಮಾತ್ರ, ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್, ಸಿಖ್, ಕ್ರಿಶ್ಚಿಯನ್, ಜೈನ್, ಫಾರ್ಸಿ, ಬೌದ್ಧ ಸಮುದಾಯದ ಜನಸಂಖ್ಯೆ ಶೇ. 18ರಷ್ಟು, ಆದರೆ ನೀಡಿರುವ ಅನುದಾನ ಕೇವಲ ಶೇ 1ರಷ್ಟು. ಇದು ಯಾವ ರೀತಿಯ ತುಷ್ಟೀಕರಣ ಎಂದು ಬಿಜೆಪಿ ನಾಯಕರು ಸ್ಪಷ್ಟೀಕರಣ ನೀಡಬೇಕು. ‘‘ಇದು ಕೇವಲ ಅಲ್ಪಸಂಖ್ಯಾತರಿಗೆ ಮಂಡಿಸಲಾದ ಬಜೆಟ್, ಹಿಂದೂಗಳಿಗೆ ಖಾಲಿ ಚೊಂಬು ನೀಡಲಾಗಿದೆ’’ ಎಂದು ಪುಂಖಾನುಪುಂಖ ಹೇಳಿಕೆಗಳನ್ನು ನೀಡುತ್ತ, ಬಜೆಟ್ ನಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿಯಲ್ಲಿ ಘೋಷಿಸಲಾದ ಯೋಜನೆಗಳನ್ನು ಬರೆದು, ಇಡೀ ಬಜೆಟ್ ಕೇವಲ ಅಲ್ಪಸಂಖ್ಯಾತರಿಗಾಗಿಯೇ ಮಂಡಿಸಲಾಗಿದೆ ಎನ್ನುವ ರೀತಿ ವರ್ತಿಸಲಾಗಿದೆ. ಇದರಿಂದ ಆರು ಧರ್ಮಗಳ ಶೇ. 18ರಷ್ಟು ರಾಜ್ಯದ ನಾಗರಿಕರಿಗೆ ಅವಮಾನ ಮಾಡಲಾಗುತ್ತಿದೆ ಎಂದೇ ಹೇಳಬಹುದು.

ಅಲ್ಪಸಂಖ್ಯಾತರಿಗೆ 1,000 ಕೋಟಿ ರೂ. ವೆಚ್ಚದಲ್ಲಿ ಶಾಲಾ ಉನ್ನತೀಕರಣ ಎನ್ನುವ ಯೋಜನೆ ಇದೆ, ಶಿಕ್ಷಣ ನೀಡುವುದು ರಾಜ್ಯದ ಸರಕಾರದ ಸಂವಿಧಾನಬದ್ಧ ಕರ್ತವ್ಯ, ಇದನ್ನು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಇಲಾಖೆ ಮಾಡದಿದ್ದರೆ ಶಿಕ್ಷಣ ಇಲಾಖೆ ಮಾಡಲೇಬೇಕಾಗುತ್ತದೆ ಎನ್ನುವ ಕನಿಷ್ಠ ತಿಳುವಳಿಕೆ ಬಿಜೆಪಿ ನಾಯಕರಿಗೆ ಇಲ್ಲ, ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ 3.0 ಲಕ್ಷ ಸಹಾಯಧನ, ಇದು ಇತರ ಇಲಾಖೆಗಳಲ್ಲಿ ಜಾರಿಯಲ್ಲಿರುವ ಹಳೆಯ ಯೋಜನೆ, ಈ ಇಲಾಖೆಯಲ್ಲಿಯೂ ಜಾರಿ ಮಾಡಲಾಗುತ್ತಿದೆ. ಕಾಲನಿ ಅಭಿವೃದ್ಧಿ ಯೋಜನೆ ಎಂದು 1,000 ಕೋಟಿ ರೂ. ಅನುದಾನ ಒದಗಿಸಲಾಗಿದೆ, ಅಲ್ಲದೆ ಆ ಇಲಾಖೆಗೆ ಒದಗಿಸಲಾದ ಅನುದಾನದಲ್ಲಿ ಲ್ಯಾಪ್‌ಟ್ಯಾಪ್ ವಿತರಣೆ ಇತ್ಯಾದಿ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಸಿದ್ದರಾಮಯ್ಯನವರ ಸರಕಾರ ಅಲ್ಪಸಂಖ್ಯಾತರಿಗೆ ಮಾತ್ರ, ‘ಅಲ್ಪಸಂಖ್ಯಾತರಿಗೆ ಮೃಷ್ಟಾನ್ನ ಭೋಜನ, ಬಹುಸಂಖ್ಯಾತ ಹಿಂದೂಗಳಿಗೆ ಬಜೆಟ್‌ನಲ್ಲಿ ಶೂನ್ಯ ದರ್ಶನ’ ಎಂದು ಬಿಜೆಪಿಯ ಎಲ್ಲಾ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ, ಅದನ್ನೇ ನಂಬಿ ಅವರ ಕಾರ್ಯಕರ್ತರು ಮುಂದುವರಿಸಿದ್ದಾರೆ. ವಾಸ್ತವವಾಗಿ ಈ ಬಿಜೆಪಿ ನಾಯಕರು ಯಾರನ್ನು ಹಿಂದೂಗಳು ಎಂದು ಕರೆಯುತ್ತಾರೆ ಎನ್ನುವುದೇ ಅನುಮಾನ ಉಂಟು ಮಾಡುತ್ತಿದೆ. ಯಾಕೆಂದರೆ, ಸರಕಾರ ಬಜೆಟ್‌ನಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಉಪಯೋಜನೆಯಡಿಯಲ್ಲಿ ಸುಮಾರು 46,500 ಕೋ.ರೂ ಅನುದಾನ ಒದಗಿಸಿದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಲಾದ ಯೋಜನೆಗಳಿಗಿಂತ ಹತ್ತು ಪಟ್ಟು ಯೋಜನೆ ಘೋಷಿಸಲಾಗಿದೆ, 16 ನಿಗಮ ಮಂಡಳಿಗಳು ಆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಆ ಇಲಾಖೆಯಲ್ಲಿ ರಾಜ್ಯ ಪ್ರಬಲ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗರು ಸಹ ಬರುತ್ತಾರೆ, ಅವರೆಲ್ಲರಿಗೂ ಸರಕಾರ ಹಲವು ಯೋಜನೆಗಳನ್ನು ನೀಡಿದೆ. ಅದೇ ರೀತಿ ಆರ್ಯ ವೈಶ್ಯ ಸಮುದಾಯಕ್ಕೂ ನಿಗಮ ಮಂಡಳಿ ಇದೆ. ಬ್ರಾಹ್ಮಣ ಸಮಾಜಕ್ಕೂ ನಿಗಮ ಮಂಡಳಿ ಇದೆ.

ಈ ಬಜೆಟ್‌ನಲ್ಲಿ ಸಣ್ಣ ಸಣ್ಣ ಸಮುದಾಯಗಳಿಗೂ ನಿಗಮ ಮಂಡಳಿ ಸ್ಥಾಪಿಸುವ ಕುರಿತು ಪ್ರಸ್ತಾವಿಸಲಾಗಿದೆ, ಇವರೆಲ್ಲರೂ ಹಿಂದೂಗಳಲ್ಲವೇ? ಅವರಿಗೆ ನೀಡಲಾದ ಅನುದಾನ ಲೆಕ್ಕಕ್ಕಿಲ್ಲವೇ? ಇದಕ್ಕೆ ಬಿಜೆಪಿ ಉತ್ತರಿಸಬೇಕಲ್ಲವೇ? ಬಿಜೆಪಿ ಪಕ್ಷ ಮತ್ತು ಅದರ ಎಲ್ಲಾ ನಾಯಕರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ನೀಡಲಾದ ಅನುದಾನವನ್ನು ಹಿಂದೂ ಸಮಾಜ ಎಂದು ಭಾವಿಸುವುದಿಲ್ಲವೇ?

ಬಜೆಟ್ ಪ್ರತಿಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಎಂದು ಪ್ರತ್ಯೇಕ ಪ್ಯಾರಾಗಳೇ ಇರುವಾಗ ಅದನ್ನು ಓದುವ ಅಥವಾ ಅವರನ್ನು ಹಿಂದೂಗಳೆಂದು ಪರಿಗಣಿಸಲು ಸಾಧ್ಯವಾಗದ ಮನಸ್ಥಿತಿ ಬಿಜೆಪಿಗಿದೆಯೇ? ಕೇವಲ ಮತಕ್ಕಾಗಿ ಮಾತ್ರ ಅವರನ್ನು ಪರಿಗಣಿಸುತ್ತದೆಯೇ? ತಮ್ಮ ಸರಕಾರ ಇದ್ದಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಚ್ಚಲಾಗಿತ್ತೇ? ಆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಅನುದಾನ ನೀಡುತ್ತಿರಲಿಲ್ಲವೇ? ಯೋಜನೆಗಳನ್ನು ಸ್ಥಗಿತಗೊಳಿದ್ದರೋ? ಇದಕ್ಕೆಲ್ಲ ಉತ್ತರಿಸ ಬಲ್ಲರೇ?

ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್‌ನಲ್ಲಿ ಎಲ್ಲಾ ಸಮುದಾಯಗಳಿಗೂ ಪ್ರಾತಿನಿಧ್ಯವನ್ನು ನೀಡಿದ್ದಾರೆ. ಅದರಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅದೇ ರೀತಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅನುದಾನ ಒದಗಿಸಿದ್ದಾರೆ, ಸಣ್ಣ ಸಣ್ಣ ಸಮಾಜಗಳಿಗೂ ಯೋಜನೆಗಳು ತಲುಪಲಿ ಎಂದು ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ, ಕಾಡುಗೊಲ್ಲ ಸೇರಿದಂತೆ ಹತ್ತಾರು ನಿಗಮ ಮಂಡಳಿಗಳನ್ನು ರಚನೆ ಮಾಡಿದ್ದಾರೆ, ಅವುಗಳಿಗೆ 1,500 ಕೋ.ರೂ ಅನುದಾನ ಮೀಸಲಿಟ್ಟಿದ್ದಾರೆ, ಅವೆಲ್ಲವನ್ನೂ ಬಿಜೆಪಿ ಮುಚ್ಚಿಟ್ಟು ಅಲ್ಪಸಂಖ್ಯಾತರ ಹೆಸರಿನಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಲು ಹೊರಟಿದೆ, ಹಿಂದೂಗಳೆಲ್ಲರೂ ಸಿದ್ದರಾಮಯ್ಯನವರು ತಮಗೆ ಏನೂ ಕೊಟ್ಟೇ ಇಲ್ಲ ಎಂದು ಭಾವಿಸಬೇಕೆಂದು ಬಿಜೆಪಿ ಬಯಸುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಮೂಲಕ 15,081 ಕೋಟಿ ರೂ. ಅನುದಾನವನ್ನು ನಡೆಯುತ್ತಿರುವ 11,00ಕ್ಕೂ ಹೆಚ್ಚು ವಸತಿ ಶಾಲೆಗಳಿಗೆ ಖರ್ಚು ಮಾಡಲಾಗುತ್ತಿದೆ, 2,676 ಕೋಟಿ ರೂ. ಅನುದಾನವನ್ನು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಬಳಸಲಾಗುತ್ತಿದೆ, 289 ಕೋ.ರೂ ಅನುದಾನದಲ್ಲಿ ಶ್ರಮಶಕ್ತಿ ಯೋಜನೆಯಡಿಯಲ್ಲಿ ವಾಹನ ಸೌಲಭ್ಯ ಒದಗಿಸಲಾಗಿದೆ, 822 ಕೋ.ರೂ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಖರ್ಚು ಮಾಡಲಾಗುತ್ತಿದೆ, ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ 9 ಹಾಗೂ 10 ನೇ ವರ್ಷದಲ್ಲಿ ಪ್ರವೇಶ ಪಡೆದ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ವಿದ್ಯಾರ್ಥಿಗಳಿಗೆ 19 ಕೋ ರೂ ಅನುದಾನ ಒದಗಿಸಲಾಗಿದೆ, 40 ಹೊಸ ವಸತಿ ಶಾಲೆಗಳು. 31 ವಸತಿ ಶಾಲೆಗಳನ್ನು ಪಿಯುಸಿ ವರೆಗೆ ವಿಸ್ತರಿಸಲಾಗಿದೆ. 660 ಕೋ.ರೂ ಅನುದಾನದಲ್ಲಿ 30 ವಸತಿ ಶಾಲೆಗಳನ್ನು ನಿರ್ಮಾನ ಮಾಡಲಾಗುತ್ತಿದೆ. ಶೇ. 75ರಷ್ಟು ಸಬ್ಸಿಡಿಯೊಂದಿಗೆ ಫಾಸ್ಟ್ ಫುಡ್ ಟ್ರಕ್ ಟ್ರಾವೆಲರ್ ಯೋಜನೆ, 50 ಹೊಸ ಪೋಸ್ಟ್ ಮೆಟ್ರಕ್ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವದು ಎಂದು ಹೇಳಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಸವಿತಾ ಸಮಾಜಕ್ಕೆ ವೃತ್ತಿ ಕೈಗೊಳ್ಳಲು 10.00 ಲಕ್ಷದವರೆಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಲಾಗಿದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಪಡೆದಿರುವ ಶೈಕ್ಷಣಿಕ ಸಾಲಕ್ಕೆ ಒಂದು ಸಲಕ್ಕೆ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗಿದೆ, ಇತ್ತೀಚಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ಬಡ್ಡಿ ಮನ್ನಾ ಮಾಡಲಾಗಿತ್ತು. ಕೆಟಗರಿ 1ಎ ಅಡಿಯಲ್ಲಿ ಬರುವ 46 ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಆರ್ಥಿಕ ಸೌಲಭ್ಯ ನೀಡಲು ಘೋಷಿಸಲಾಗಿದೆ. ಮಡಿವಾಳ ಸಮಾಜಕ್ಕೆ 75 ಲಕ್ಷ ಅನುದಾನದಲ್ಲಿ ಧೋಬಿ ಘಾಟ್ ಮತ್ತು ಇನ್ನಿತರ ಸೌಲಭ್ಯ ಒದಗಿಸುವ ಯೋಜನೆ ಘೋಷಿಸಲಾಗಿದೆ, ಆಧುನಿಕ ಲಾಂಡ್ರಿ ವೃತ್ತಿ ಕೈಗೆತ್ತಿಕೊಳ್ಳಲು ಶೇ. 4ರ ಬಡ್ಡಿ ದರದಲ್ಲಿ ರೂ. 5.00 ಲಕ್ಷದವರೆಗೆ ಸಾಲ ನೀಡುವ ಯೋಜನೆ ಘೋಷಿಸಲಾಗಿದೆ. ಇದೇ ರೀತಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಯೂ ಯೋಜನೆಗಳನ್ನು ಘೋಷಿಸಲಾಗಿದೆ. ಇವೆಲ್ಲವೂ ಹಿಂದೂಗಳಿಗೆ ಎಂದು ಬಿಜೆಪಿ ನಾಯಕರಿಗೆ ಕಾಣುತ್ತಿಲ್ಲವೇ.

ಸರಕಾರ ಅಲ್ಪಸಂಖ್ಯಾತರಿಗೆ ಯಾವುದೇ ಯೋಜನೆ ಘೋಷಿಸಿದಾಗ ಬಿಜೆಪಿ ಯಾಕೆ ಹೊಟ್ಟೆಕಿಚ್ಚು ಪಡುತ್ತಾರೆ ಎನ್ನುವುದು ಅರ್ಥವಾಗದ ವಿಷಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಝಾಕ್ ಉಸ್ತಾದ

contributor

Similar News