×
Ad

ಸಿದ್ದಾಪುರ: ಮಿತಿಮೀರಿದ ಕಾಡುಪ್ರಾಣಿಗಳ ಹಾವಳಿ

ಕಾರ್ಮಿಕರಲ್ಲಿ ಹೆಚ್ಚಿದ ಆತಂಕ

Update: 2026-03-09 09:30 IST

ಸಿದ್ದಾಪುರ (ಕೊಡಗು) : ವಿರಾಜಪೇಟೆ ತಾಲೂಕು ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಕಾಡುಕೋಣಗಳ ಹಿಂಡು ಹಾಗೂ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದು ಗ್ರಾಮಸ್ಥರಲ್ಲಿ ಮತ್ತು ಕಾಫಿ ತೋಟ ಕಾರ್ಮಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಕರಡಿಗೋಡು ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ 10ಕ್ಕೂ ಹೆಚ್ಚು ಕಾಡುಕೋಣಗಳ ಹಿಂಡು ಬೀಡು ಬಿಟ್ಟಿದ್ದು. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ತೋಟದ ಒಳಭಾಗದಲ್ಲಿ ಹಿಂಡಾಗಿ ಸಂಚರಿಸುತ್ತಿರುವ ಕಾಡುಕೋಣಗಳು ಕಾರ್ಮಿಕರಿಗೆ ಭೀತಿ ಉಂಟು ಮಾಡಿದೆ. ಸಾಮಾನ್ಯವಾಗಿ ಮನುಷ್ಯರನ್ನು ತಪ್ಪಿಸಿಕೊಂಡು ಹೋಗುವ ಸ್ವಭಾವ ಹೊಂದಿದ ಕಾಡುಕೋಣಗಳು, ಅಲ್ಪ ಉದ್ದೀಪನಕ್ಕೂ ಆಕ್ರಮಣಕಾರಿ ವರ್ತನೆ ತೋರಿಸುವ ಸಾಧ್ಯತೆ ಇರುವುದರಿಂದ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. ಮಹಿಳಾ ಕಾರ್ಮಿಕರ ಸಂಖ್ಯೆಯೂ ಹೆಚ್ಚಿರುವುದರಿಂದ ಭದ್ರತೆ ಕುರಿತ ಚಿಂತನೆ ಹೆಚ್ಚಾಗಿದೆ.

ಇದರ ನಡುವೆ ಕಾಡಾನೆಗಳ ಹಾವಳಿಯೂ ಕಡಿಮೆಯಾಗಿಲ್ಲ. ರಾತ್ರಿ ವೇಳೆ ತೋಟ ಪ್ರದೇಶಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವುದಾಗಿ ರೈತರು ದೂರಿದ್ದಾರೆ. ಮನೆಗಳ ಸಮೀಪದಲ್ಲಿಯೇ ಆನೆಗಳ ಸಂಚಾರ ಕಂಡುಬಂದಿದ್ದು, ಮಕ್ಕಳು ಮತ್ತು ವೃದ್ಧರಲ್ಲಿ ಭಯ ಹೆಚ್ಚಾಗಿದೆ. ಶಾಲೆಗೆ ತೆರಳುವ ಮಕ್ಕಳನ್ನು ಪೋಷಕರು ಒಂಟಿಯಾಗಿ ಕಳುಹಿಸಲು ಹೆದರುತ್ತಿದ್ದಾರೆ. ಕಾಡಾನೆಗಳ ಹಾದಿ ಗ್ರಾಮ ದಾರಿಗಳನ್ನೇ ದಾಟುತ್ತಿರುವುದರಿಂದ ಜನರು ಗುಂಪುಗಳಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರು ಹಾಗೂ ತೋಟದ ಮಾಲಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ, ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲವೆಂಬ ಅಸಮಾಧಾನ ವ್ಯಕ್ತವಾಗಿದೆ. ಕಾಡಾನೆಗಳ ಹಾವಳಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದೀಗ ಕಾಡುಕೋಣಗಳ ಹಿಂಡು ಕೂಡ ಸೇರಿಕೊಂಡಿರುವುದು ನಮ್ಮ ಸಂಕಷ್ಟವನ್ನು ಹೆಚ್ಚಿಸಿದೆ. ರಾತ್ರಿ ಗಸ್ತು ಹೆಚ್ಚಿಸಿ, ತಕ್ಷಣ ಕಾಡಿಗಟ್ಟುವ ಕ್ರಮ ಕೈಗೊಳ್ಳ ಬೇಕು,’ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅರಣ್ಯ ಪ್ರದೇಶಗಳಲ್ಲಿ ನೀರು ಮತ್ತು ಆಹಾರದ ಕೊರತೆ, ಮಾನವ ವಾಸಸ್ಥಾನಗಳ ವಿಸ್ತರಣೆ ಹಾಗೂ ಕಾಡು ಪ್ರದೇಶಗಳ ಕುಗ್ಗುವಿಕೆ ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅರಣ್ಯ-ಮಾನವ ಸಂಘರ್ಷ ಹೆಚ್ಚುತ್ತಿರುವುದು ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ವೈಜ್ಞಾನಿಕ ಕ್ರಮಗಳು, ವಿದ್ಯುತ್ ಬೇಲಿ, ಕಂದಕ ನಿರ್ಮಾಣ ಹಾಗೂ ನಿರಂತರ ಗಸ್ತು ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಗಿದೆ.

ಕರಡಿಗೋಡು ಗ್ರಾಮದಲ್ಲಿ ಕಾಡುಕೋಣಗಳ ಹಿಂಡು ಹಾಗೂ ಕಾಡಾನೆಗಳ ಹಾವಳಿ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು, ಅರಣ್ಯ ಇಲಾಖೆ ತಕ್ಷಣ ಸ್ಪಂದಿಸಿ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News