‘ಅಲ್ಪಾಯುಷಿ’ ಎಂಬ ಮಾತು: ಭವಿಷ್ಯವಾಣಿಯೇ ಅಥವಾ ಮಾನಸಿಕ ಹಿಂಸೆಯೇ?
ಮೊನ್ನೆಯಷ್ಟೇ ಒಂದು ದುಃಖಕರ ಸುದ್ದಿ ಪ್ರಕಟವಾಗಿತ್ತು. 29 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಬ್ಬರು ತನ್ನ ಭವಿಷ್ಯ ಕೇಳಲು ಜ್ಯೋತಿಷಿಯ ಬಳಿ ಹೋಗಿರುತ್ತಾರೆ, ಆ ಜ್ಯೋತಿಷಿಯು ಯುವತಿಯ ಕುಂಡಲಿ ನೋಡಿ ‘‘ನೀನು ಅಲ್ಪಾಯುಷಿ, ಹೆಚ್ಚು ದಿನ ಬದುಕುವುದಿಲ್ಲ’’ ಎಂದು ಹೇಳಿರುವ ಮಾತನ್ನು ಗಂಬೀರವಾಗಿ ತೆಗೆದುಕೊಂಡ ಯುವತಿಯು ಭಯಭೀತಳಾಗಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಸುದ್ದಿ ಪ್ರಸಾರವಾಗಿತ್ತು. ಪೊಲೀಸರು ಇದನ್ನು unnatural death ಎಂದು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿರುವ ಸುದ್ದಿಯೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ವಿಜ್ಞಾನ ಓದಿರುವ, ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಒಬ್ಬ ವಿದ್ಯಾವಂತೆಯೇ ಇಂತಹ ಮೌಢ್ಯಯುತ ಹೇಳಿಕೆಯಿಂದ ಮಾನಸಿಕವಾಗಿ ಕುಗ್ಗಿಬಿಡಬೇಕಾದರೆ, ವಿಜ್ಞಾನದ ಅರಿವೇ ಇರದ ಮತ್ತು ಜ್ಯೋತಿಷಿಗಳು ಹೇಳುವ ಭವಿಷ್ಯವಾಣಿಯನ್ನು ಸತ್ಯವೆಂದು ನಂಬುವ ಲಕ್ಷಾಂತರ ಮುಗ್ಧ ಜನರ ಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆ ಗಂಭೀರವಾಗಿ ಕಾಡುತ್ತದೆ.
‘‘ನೀನು ಹೆಚ್ಚು ದಿನ ಬದುಕುವುದಿಲ್ಲ’’ ಎನ್ನುವ ಹೇಳಿಕೆ ನಿಜವಾಗಿಯೂ ಜ್ಯೋತಿಷ್ಯವೇ? ಅಥವಾ ಅದು ಮಾನಸಿಕ ಹಿಂಸೆಯೇ? ವೈದ್ಯರು ಕೂಡ ವೈಜ್ಞಾನಿಕ ಆಧಾರವಿಲ್ಲದೆ ಯಾರಿಗೂ ಇನ್ನೊಬ್ಬರ ಜೀವಿತಾವಧಿಯ ಕುರಿತು ಅಂತಿಮ ತೀರ್ಪು ನೀಡುವುದಿಲ್ಲ. ಆದರೆ ಜ್ಯೋತಿಷ್ಯ ಎಂಬ ಹೆಸರಿನಲ್ಲಿ ಕೆಲವರು ಜನರ ಆತಂಕ, ಸಮಸ್ಯೆ, ದೌರ್ಬಲ್ಯ ಮತ್ತು ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಗೋಚರಿಸುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಭಯವನ್ನು ಬಿತ್ತಿ ಅವನ/ಅವಳ ಬದುಕಿನಲ್ಲಿ ನಕಾರಾತ್ಮಕ ಚಿಂತನೆ ಹುಟ್ಟಿಸುವುದು ಕೇವಲ ಅಭಿಪ್ರಾಯವಷ್ಟೇ ಆಗಿರುವುದಿಲ್ಲ, ಅದು ಗಂಭೀರ ಮನೋವೈಜ್ಞಾನಿಕ ಪರಿಣಾಮ ಉಂಟುಮಾಡಬಲ್ಲ ಹೇಳಿಕೆ ಆಗುತ್ತದೆ.
ಇಡೀ ಜ್ಯೋತಿಷ್ಯ ಶಾಸ್ತ್ರವನ್ನು ಒಂದೇ ತಕ್ಕಡಿಯಲ್ಲಿ ತೂಕ ಹಾಕಲು ಸಾಧ್ಯವಿಲ್ಲ ಎಂದು ಭಾವಿಸೋಣ. ಆದರೆ ಇಲ್ಲಿ ಪ್ರಶ್ನೆ ವ್ಯಕ್ತಿಗಳ ಬಗ್ಗೆ ಅಲ್ಲ, ವ್ಯವಸ್ಥೆಯ ಬಗ್ಗೆ. ಇಂದು ನಗರಗಳಲ್ಲಿ, ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರದಲ್ಲಿ, ಗಲ್ಲಿ-ಗಲ್ಲಿಗಳಲ್ಲೂ ಜ್ಯೋತಿಷ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ‘ಆಸ್ತಿ ಕಲಹ ಬಗೆಹರಿಸಲಾಗುತ್ತದೆ’, ‘ಕೌಟುಂಬಿಕ ಸಮಸ್ಯೆಗೆ ಪರಿಹಾರ’, ‘ವಶೀಕರಣ ಮಾಡಲಾಗುತ್ತದೆ’ ಎಂಬ ಫಲಕಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಇಂಥಹ ಬೋರ್ಡ್‌ಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ, ಟಿವಿಗಳ ಮೂಲಕ ಜಾಹೀರಾತು ಬಿತ್ತರಿಸುವಾಗ ಇವುಗಳನ್ನು ವಾಣಿಜ್ಯ ಚಟುವಟಿಕೆಗಳು ಎಂದು ಭಾವಿಸಬಹುದಲ್ಲವೇ?
ಯಾವುದೇ ವಾಣಿಜ್ಯ ಸಂಸ್ಥೆ ಸಾರ್ವಜನಿಕ ಸ್ಥಳದಲ್ಲಿ ಕಾರ್ಯನಿರ್ವಹಿಸಿದರೆ ಅದು Karnataka Shops and Commercial Establishments Act-1961 ಪ್ರಕಾರ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಗ್ರಾಹಕರಿಂದ ಹಣ ಪಡೆದು ಸೇವೆ ಒದಗಿಸುತ್ತಿದ್ದರೆ, ಅದು Goods and Services Tax Act-2017 ಅಡಿಯಲ್ಲಿ ಜಿಎಸ್‌ಟಿ ನೋಂದಣಿ ಪಡೆದು ಗ್ರಾಹಕರಿಗೆ ರಶೀದಿ ನೀಡಬೇಕಾಗುತ್ತದೆ. ಎಷ್ಟು ಜ್ಯೋತಿಷ್ಯ ಕೇಂದ್ರಗಳು ಕಾನೂನುಬದ್ಧವಾಗಿ ನೋಂದಾಯಿತವಾಗಿವೆ? ಎಷ್ಟು ಮಂದಿ ಗ್ರಾಹಕರಿಗೆ ತೆರಿಗೆ ರಶೀದಿ ನೀಡುತ್ತಿದ್ದಾರೆ? ಎಂಬುದನ್ನು ಸಂಬಂಧಪಟ್ಟ ಇಲಾಖೆ ಗಮನಿಸಬೇಕು.
ಹಣ ನೀಡಿ ಸೇವೆ ಪಡೆಯುತ್ತಿದ್ದರೆ, ಜ್ಯೋತಿಷಿಗಳು ಭರವಸೆ ನೀಡಿದಂತೆ ಸೇವೆ ಸಿಗದಿದ್ದರೆ ಅಥವಾ ಹಣಕ್ಕಾಗಿ ಸುಳ್ಳು ಭವಿಷ್ಯ ಹೇಳಿ ಮೋಸ ಮಾಡಿದರೆ ಆಗ Consumer Protection Act-2019 ಅಡಿಯಲ್ಲಿ ದೂರು ನೀಡುವ ಹಕ್ಕು ಗ್ರಾಹಕನಿಗಿರಬೇಕು. ‘‘ನಿಮ್ಮ ಕೋರ್ಟ್ ಪ್ರಕರಣ ನಿಮ್ಮ ಪರವಾಗಿಯೇ ತೀರ್ಪು ಆಗುತ್ತದೆ’’ ಎಂದು ಹೇಳಿ ಸಾವಿರಾರು ರೂಪಾಯಿ ಪಡೆದರೆ ಅದು ಕೇವಲ ನಂಬಿಕೆಯ ವಿಷಯವಲ್ಲ, ಅದು ವಾಣಿಜ್ಯ ಭರವಸೆ. ಭರವಸೆ ತಪ್ಪಾದರೆ ಹೊಣೆಗಾರಿಕೆಯನ್ನು ಕೂಡ ಜ್ಯೋತಿಷಿಗಳು ಹೊರಬೇಕಲ್ಲವೇ?
ಇದಕ್ಕಿಂತಲೂ ಗಂಭೀರ ಅಂಶ ‘ವಶೀಕರಣ ಮಾಡಲಾಗುತ್ತದೆ’ ಎಂಬ ಮೌಢ್ಯವೇ ತುಂಬಿರುವ ಕೆಟ್ಟ ಭರವಸೆಗಳು. ‘ನೀವು ಇಷ್ಟಪಟ್ಟ ಹುಡುಗಿ/ಹುಡುಗ ನಿಮ್ಮ ಹಿಂದೆ ಓಡಿಬರುತ್ತಾರೆ’ ಎಂಬ ಹೇಳಿಕೆ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಗೌರವಕ್ಕೆ ಧಕ್ಕೆಯಾಗುತ್ತದೆ. ಇಂತಹ ಕೃತ್ಯಗಳು Karnataka Prevention and Eradication of Inhuman Evil Practices and Black Magic Act-2017 ಅಡಿಯಲ್ಲಿ ಪ್ರಶ್ನೆಗೆ ಒಳಪಡಬೇಕು. ಇಂತಹ ಕಠಿಣ ಕಾನೂನುಗಳು ಇದ್ದರೂ, ಅದನ್ನು ಜಾರಿ ಮಾಡುವುದರಲ್ಲಿ ಗಂಭೀರತೆ ಕಾಣುತ್ತಿಲ್ಲ. ಹಾಗಾದರೆ ಇವೆಲ್ಕದಕ್ಕೂ ಸಂಬಂಧಪಟ್ಟ ಇಲಾಖೆಗಳು ಏನು ಮಾಡುತ್ತಿವೆ? ಸಾರ್ವಜನಿಕವಾಗಿ ಬೋರ್ಡ್‌ಗಳನ್ನು ಹಾಕಿಕೊಂಡು ಬಹಿರಂಗವಾಗಿ ಜನರಿಗೆ ಮೋಸ ಮಾಡಲಾಗುತ್ತಿರುವ ಇಂಥಹ ವಿಷಯಗಳು ಇಲಾಖೆಗಳ ಕಣ್ಣಿಗೆ ಬೀಳುತ್ತಿಲ್ಲವೇಕೆ? ಅಥವಾ ಇಲಾಖೆಗಳು ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸುತ್ತಿಲ್ಲವೇ ಎನ್ನುವ ಪ್ರಶ್ನೆ ಪ್ರಜ್ಞಾವಂತರಾದ ನಮ್ಮಲ್ಲಾದರೂ ಮೂಡಬೇಕು.
ಇಲ್ಲಿ ಮತ್ತೊಂದು ತೀವ್ರ ವೈಪರೀತ್ಯ ಗೋಚರಿಸುತ್ತದೆ. ಕೇವಲ ಹಸಿವಿಗಾಗಿ ಒಂದು ಬನ್ನು ಕದ್ದ ಕಾರಣಕ್ಕೋ, ಹೊಟ್ಟೆಪಾಡಿಗಾಗಿ ಆಹಾರ ಕದ್ದ ಕಾರಣಕ್ಕೋ ಅಥವಾ ಹೊಟ್ಟೆಪಾಡಿಗಾಗಿ ಒಂದೆರಡು ಮೀನು ಕದ್ದ ಕಾರಣಕ್ಕೋ, ಮಕ್ಕಳನ್ನು, ಕೂಲಿ ಕಾರ್ಮಿಕರನ್ನು, ಮಹಿಳೆಯರನ್ನು ಲೆಕ್ಕಿಸದೆ ಅವರ ಮೇಲೆ ಕೇಸ್ ದಾಖಲಿಸಿ habitual criminal ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಆದರೆ ಕಾಣದ ಗ್ರಹ-ನಕ್ಷತ್ರಗಳನ್ನು ನೋಡಿ ಮತ್ತೊಬ್ಬರ ಹಣೆಬರಹ ಹೇಳುತ್ತೇವೆ ಎಂದು ನಂಬಿಸಿ ಹಗಲು ದರೋಡೆ ಮಾಡುವವರ ಮೇಲೆ ಯಾಕೆ ಅದೇ ತೀವ್ರತರವಾದ ಕಾನೂನು ಅನ್ವಯವಾಗುವುದಿಲ್ಲ?
ಜ್ಯೋತಿಷ್ಯದ ಹೆಸರಿನಲ್ಲಿ ಮೇಲ್ಕಂಡ ಕಾನೂನುಗಳ ಉಲ್ಲಂಘನೆ, ತೆರಿಗೆಯಿಂದ ತಪ್ಪಿಸಿಕೊಳ್ಳುವಿಕೆ, ಗ್ರಾಹಕರಿಗೆ ಮೋಸ, ಮಾನಸಿಕ ಹಿಂಸೆ, ಇವೆಲ್ಲವೂ ಗಂಭೀರ ಅಪರಾಧಗಳಲ್ಲವೇ? Article-14ರ ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಾದರೆ, ಈ ವಿಷಯದಲ್ಲಿ ಮೌನ ಯಾಕೆ?
ಈ ಚರ್ಚೆಗೆ ಮತ್ತೊಂದು ಗಂಭೀರ ಆಯಾಮವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಜ್ಯೋತಿಷ್ಯವನ್ನು ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತೇಜಿಸುವ ಪ್ರಯತ್ನಗಳು ನಡೆಯುತ್ತಿವೆ. ಉದಾಹರಣೆಗೆ, ಕೇಂದ್ರ ಸರಕಾರ ನಡೆಸುವ Indira Gandhi National Open University (IGNOU)ಯಲ್ಲಿ ‘ಜ್ಯೋತಿಷ್ಯ’ ಕುರಿತ ಸ್ನಾತಕೋತ್ತರ ಕೋರ್ಸ್ ಆರಂಭಿಸಿದಾಗ ಅನೇಕ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಇದನ್ನು ತೀವ್ರವಾಗಿ ವಿರೋಧಿಸಿದ್ದರು. ಅವರ ಅಭಿಪ್ರಾಯದಲ್ಲಿ ಜ್ಯೋತಿಷ್ಯಕ್ಕೆ ವೈಜ್ಞಾನಿಕ ಆಧಾರವಿಲ್ಲ ಮತ್ತು ಅದನ್ನು ವಿಶ್ವವಿದ್ಯಾನಿಲಯಗಳಲ್ಲಿ ಬೋಧಿಸುವುದು ಯುವಜನರ ವೈಜ್ಞಾನಿಕ ಮನೋಭಾವಕ್ಕೆ ಹಾನಿ ಉಂಟುಮಾಡಬಹುದು ಎನ್ನುವುದಾಗಿತ್ತು.
ಭಾರತದ ಸಂವಿಧಾನದಲ್ಲೇ ನಾಗರಿಕರ ಮೂಲ ಕರ್ತವ್ಯಗಳಲ್ಲಿ ಒಂದಾಗಿ scientific temperament ಅನ್ನು ಬೆಳೆಸಬೇಕು ಎಂದು ಹೇಳಲಾಗಿದೆ. ಆದರೆ ವೈಜ್ಞಾನಿಕ ಪರಿಶೀಲನೆಗೆ ತಡೆಯಾಗುವ ವಿಷಯಗಳನ್ನು ಶಿಕ್ಷಣ ವ್ಯವಸ್ಥೆಯೊಳಗೆ ತರುವ ಪ್ರಯತ್ನಗಳು ನಡೆಯುವಾಗ, ಅದು ಸಮಾಜದಲ್ಲಿ ಮೌಢ್ಯವನ್ನು ಮತ್ತಷ್ಟು ಬಲಪಡಿಸುವ ಅಪಾಯವಿದೆ ಎಂಬ ಆತಂಕವನ್ನು ಅನೇಕ ವಿಜ್ಞಾನಿಗಳು, ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ.
‘ಅಲ್ಪಾಯುಷಿ’ ಎಂದು ಹೇಳುವುದು ಕೇವಲ ಭವಿಷ್ಯವಾಣಿ ಅಲ್ಲ. ಅದು ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲಗೊಳಿಸುವ ಕ್ರೌರ್ಯ. ಒಬ್ಬ ವ್ಯಕ್ತಿ ಅದನ್ನು ಗಂಭೀರವಾಗಿ ತೆಗೆದುಕೊಂಡು ಆತ್ಮಹತ್ಯೆಗೆ ಮುಂದಾದರೆ, ಅದನ್ನು ಕೇವಲ ಒಬ್ಬ ವ್ಯಕ್ತಿಯ ಮನೋದೌರ್ಬಲ್ಯ ಎಂದು ಹೇಳಿ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಅದು ಜ್ಯೋತಿಷ್ಯದ ಹೆಸರಿನಲ್ಲಿ ನಡೆಯುವ ಮಾನಸಿಕ ಕಿರುಕುಳ, ಸಾವಿಗೆ ಪ್ರಚೋದನೆ ಎಂಬ ದೃಷ್ಟಿಯಿಂದಲೂ ಪರಿಶೀಲನೆ ಅಗತ್ಯ. ಪೊಲೀಸರು ದೂರು ಬಂದಾಗ ಮಾತ್ರವಲ್ಲ, ಸ್ಪಷ್ಟ ಉಲ್ಲಂಘನೆ ಕಂಡಾಗ ಸುವೋ ಮೋಟೋ ಕ್ರಮ ಕೈಗೊಳ್ಳುವ ಧೈರ್ಯ ತೋರಬೇಕು.
ಜ್ಯೋತಿಷ್ಯ ಸೇವೆಯನ್ನು ಸಂಪೂರ್ಣ ನಿಷೇಧಿಸುವುದು ಸದ್ಯಕ್ಕೆ ಪರಿಹಾರವಾಗದೇ ಇರಬಹುದು. ಆದರೆ ಕನಿಷ್ಠ ನಿಯಂತ್ರಣ ಹೇರುವ ಅಗತ್ಯವಿದೆ. ವೈದ್ಯರಿಗೆ ಲೈಸೆನ್ಸ್ ಇರುವಂತೆ, ಜ್ಯೋತಿಷಿಗಳಿಗೂ ನೋಂದಣಿ ಮತ್ತು ಲೈಸೆನ್ಸ್ ಕಡ್ಡಾಯ ಮಾಡಬೇಕು. ಹಣ ಪಡೆದು ರಶೀದಿ ನೀಡದಿದ್ದರೆ ಕ್ರಮಕೈಗೊಳ್ಳಬೇಕು. ತಪ್ಪಾದ ಅಥವಾ ಹಾನಿಕಾರಕ ಭವಿಷ್ಯವಾಣಿ ನೀಡಿದರೆ ಅದಕ್ಕೆ ಅವರ ಹೊಣೆಗಾರಿಕೆ ಇರಬೇಕು. ಅವರಿಗೂ ಗ್ರಾಹಕ ಹಕ್ಕುಗಳ ಕಾನೂನು ಅನ್ವಯಿಸಬೇಕು.
ಇದು ಕೇವಲ ಒಬ್ಬ ಯುವತಿಯ ಸಾವಿನ ವಿಚಾರವಲ್ಲ. ಇದು ನಮ್ಮ ಸಮಾಜದ ದ್ವಂದ್ವ ಮನೋಭಾವದ ಪ್ರತಿಬಿಂಬ. ಸಣ್ಣ ಕಳ್ಳತನಕ್ಕೆ ಕಠಿಣ ಶಿಕ್ಷೆ, ಆದರೆ ನಂಬಿಕೆಯ ಹೆಸರಿನಲ್ಲಿ ನಡೆಯುವ ದೊಡ್ಡ ಮೋಸಗಳಿಗೆ ಮೌನ, ಈ ತಾರತಮ್ಯ ಸರಿಯೇ?
ವಿಜ್ಞಾನದ ಯುಗದಲ್ಲಿ ನಾವು ಮತ್ತೊಬ್ಬರ ನಂಬಿಕೆಯನ್ನು ಗೌರವಿಸಬಹುದು. ಆದರೆ ಅದೇ ಸಮಯದಲ್ಲಿ, ನಂಬಿಕೆಯ ಹೆಸರಿನಲ್ಲಿ ನಡೆಯುವ ಮೋಸ, ಮಾನಸಿಕ ಹಿಂಸೆ ಮತ್ತು ಕಾನೂನು ಉಲ್ಲಂಘನೆಗಳನ್ನು ಸಹಿಸುವುದು ಸಮಾಜದ ಆರೋಗ್ಯಕರ ಮತ್ತು ವೈಜ್ಞಾನಿಕ ಬೆಳವಣಿಗೆಗೆ ಅಪಾಯ.
ನಂಬಿಕೆ ವೈಯಕ್ತಿಕವಾಗಿರಬಹುದು. ಆದರೆ ಅದರ ಹೆಸರಿನಲ್ಲಿ ನಡೆಯುವ ಮೋಸ ಮತ್ತು ಮಾನಸಿಕ ಹಿಂಸೆ ಸಮಾಜದ ಪ್ರಶ್ನೆಯಾಗಬೇಕು.