×
Ad

ಭಾರತದ ಹಿತ್ತಲಿಗೆ ತಲುಪಿದ ಯುದ್ಧ: ಮುಂದೇನು?

Update: 2026-03-08 10:23 IST

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಕೇವಲ ಪಶ್ಚಿಮ ಏಶ್ಯ ಮತ್ತು ಕೊಲ್ಲಿ ಪ್ರದೇಶಕ್ಕೆ ಸೀಮಿತವಾಗಬೇಕಿತ್ತು. ಆದರೆ, ಈ ಒಂದು ಟಾರ್ಪಿಡೊ ದಾಳಿಯಿಂದಾಗಿ, ಯುದ್ಧ ಈಗ ಹಿಂದೂ ಮಹಾಸಾಗರಕ್ಕೆ, ಭಾರತದ ನೆರೆಹೊರೆಗೆ ಆಗಮಿಸಿದಂತಾಗಿದೆ. ಈಗ ಎಲ್ಲ ಭಾರತೀಯರೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: ಈ ಘಟನೆಯಿಂದ ಭಾರತದ ಮೇಲಿನ ಪರಿಣಾಮವೇನು? ನಮ್ಮ ಸಮುದ್ರಗಳು ನಿಜಕ್ಕೂ ಸುರಕ್ಷಿತವಾಗಿವೆಯೇ?

ಮಾರ್ಚ್ 4ರ ಬುಧವಾರದಂದು, ಶ್ರೀಲಂಕಾ ಬಳಿಯ ಸಮುದ್ರದಲ್ಲಿ ನಡೆದ ಘಟನೆ ಎಲ್ಲ ಭಾರತೀಯರೂ ಚಿಂತಿಸುವಂತೆ ಮಾಡಿದೆ. ಅಮೆರಿಕದ ಒಂದು ಜಲಾಂತರ್ಗಾಮಿ, ಸಮುದ್ರದ ನೀರಿನಾಳದಲ್ಲಿ ಸಾಗಿ, ಗುರಿಗೆ ಅಪ್ಪಳಿಸಿ ಸ್ಫೋಟಿಸುವ ಕ್ಷಿಪಣಿಯಾದ ಟಾರ್ಪಿಡೋ ಒಂದನ್ನು ಪ್ರಯೋಗಿಸಿ, ಐಆರ್‌ಐಎಸ್ ದೇನಾ ಎನ್ನುವ ಇರಾನಿಯನ್ ಯುದ್ಧ ನೌಕೆಯನ್ನು ಮುಳುಗಿಸಿದೆ. ಈ ಘಟನೆಯಲ್ಲಿ ಕನಿಷ್ಠ 80 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ದೂರದಲ್ಲೆಲ್ಲೋ ಮಧ್ಯ ಪೂರ್ವದಲ್ಲಿ ನಡೆದಿರುವುದಲ್ಲ. ಬದಲಿಗೆ, ಇದು ಹಿಂದೂ ಮಹಾಸಾಗರವನ್ನು ನಮ್ಮೊಡನೆ ಹಂಚಿಕೊಳ್ಳುವ, ನೆರೆಯ ದ್ವೀಪ ರಾಷ್ಟ್ರವಾದ ಶ್ರೀಲಂಕಾದ ಬಳಿ ನಡೆದಿದೆ.

ಈ ದಾಳಿ ನಡೆದ ಸಮಯದಲ್ಲಿ, ಐರಿಸ್ ದೇನಾ ಯಾವುದೇ ಅನುಮಾನಾಸ್ಪದ ಕಾರ್ಯದಲ್ಲಿ ತೊಡಗಿರಲಿಲ್ಲ. ಅದು ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ ಮಿಲಾನ್-2026 ಅಂತರ್‌ರಾಷ್ಟ್ರೀಯ ನೌಕಾ ಅಭ್ಯಾಸದಲ್ಲಿ ಪಾಲ್ಗೊಂಡು ಇರಾನ್‌ಗೆ ಮರಳುತ್ತಿತ್ತು. ನೌಕೆ ‘ಪೀಸ್‌ಫುಲ್ ಪ್ಯಾಸೇಜ್’ ಎಂದು ಕರೆಯುವ, ಅಂತರ್‌ರಾಷ್ಟ್ರೀಯ ಸಮುದ್ರದಲ್ಲಿ ಮೌನವಾಗಿ ಸಾಗುತ್ತಾ, ಯಾರಿಗೂ ತೊಂದರೆ ಉಂಟುಮಾಡದೆ, ಯಾವುದೇ ಕದನದಲ್ಲಿ ಪಾಲ್ಗೊಳ್ಳದೆ ಸಾಗುತ್ತಿತ್ತು. ಆದರೆ, ಈ ನೌಕೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು!

ಈ ಬೆಳವಣಿಗೆಯೇ ಘಟನೆಯನ್ನು ಅತ್ಯಂತ ವಿಷಾದಕರ, ದುಃಖಕರವಾಗಿಸಿದೆ.

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಕೇವಲ ಪಶ್ಚಿಮ ಏಶ್ಯ ಮತ್ತು ಕೊಲ್ಲಿ ಪ್ರದೇಶಕ್ಕೆ ಸೀಮಿತವಾಗಬೇಕಿತ್ತು. ಆದರೆ, ಈ ಒಂದು ಟಾರ್ಪಿಡೊ ದಾಳಿಯಿಂದಾಗಿ, ಯುದ್ಧ ಈಗ ಹಿಂದೂ ಮಹಾಸಾಗರಕ್ಕೆ, ಭಾರತದ ನೆರೆಹೊರೆಗೆ ಆಗಮಿಸಿದಂತಾಗಿದೆ. ಈಗ ಎಲ್ಲ ಭಾರತೀಯರೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ: ಈ ಘಟನೆಯಿಂದ ಭಾರತದ ಮೇಲಿನ ಪರಿಣಾಮವೇನು? ನಮ್ಮ ಸಮುದ್ರಗಳು ನಿಜಕ್ಕೂ ಸುರಕ್ಷಿತವಾಗಿವೆಯೇ?

ಸಂಪೂರ್ಣ ಚಿತ್ರಣವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಮೊದಲು ಅಂತರ್‌ರಾಷ್ಟ್ರೀಯ ಸಾಗರ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ, ವಿಚಾರಗಳು ಸಂಕೀರ್ಣವಾಗುವುದೇ ಇಲ್ಲಿ. ಜಗತ್ತಿನ ಸಮುದ್ರಗಳಿಗೆ ಸಂಬಂಧಿಸಿದ ಪ್ರಮುಖ ಕಾನೂನು ಪುಸ್ತಕವನ್ನು ಯುಎನ್‌ಸಿಎಲ್‌ಒಎಸ್ (ಯುನೈಟೆಡ್ ನೇಶನ್ಸ್ ಕನ್ವೆನ್ಷನ್ ಆನ್ ದ ಲಾ ಆಫ್ ದ ಸೀ) ಎಂದು ಕರೆಯಲಾಗುತ್ತದೆ. ಇದನ್ನು ಸಮುದ್ರಗಳಿಗೆ ಸಂಬಂಧಿಸಿದ ಸಂವಿಧಾನ ಎಂದು ಭಾವಿಸಿಕೊಳ್ಳಿ. ಆದರೆ, ಅಮೆರಿಕ ಮಾತ್ರ ಈ ಒಪ್ಪಂದಕ್ಕೆ ಎಂದೂ ಸಹಿ ಹಾಕಿಲ್ಲ. ಈ ವಿಚಾರವೇ ನಮಗೆ ಒಂದು ಮಹತ್ವದ ವಿಚಾರವನ್ನು ತಿಳಿಸುತ್ತದೆ.

ಯುಎನ್‌ಸಿಎಲ್‌ಒಎಸ್ ಮುಖ್ಯವಾಗಿ ಶಾಂತಿಯ ಸಮಯದ ನಿಯಮಗಳನ್ನು ಒಳಗೊಂಡಿದೆ. ಅಂದರೆ, ಸಮುದ್ರದ ಯಾವ ಪ್ರದೇಶದ ಮೇಲೆ ಯಾರ ಸ್ವಾಮ್ಯವಿದೆ, ಮೀನುಗಾರಿಕಾ ಹಕ್ಕುಗಳು, ವ್ಯಾಪಾರ ಮಾರ್ಗಗಳು ಹೀಗೆ ಹಲವಾರು ವಿಚಾರಗಳನ್ನು ಇದು ನಿರ್ಧರಿಸುತ್ತದೆ. ಆದರೆ, ಯುದ್ಧದ ಸಂದರ್ಭದಲ್ಲಿ, ಇದರೊಡನೆ ಒಂದು ಪ್ರತ್ಯೇಕ ನೌಕಾ ಯುದ್ಧದ ನಿಯಮಾವಳಿಗಳೂ ಜಾರಿಗೆ ಬರುತ್ತವೆ. ಈ ಕಾನೂನುಗಳ ಅಡಿಯಲ್ಲಿ, ಐರಿಸ್ ದೆೇನಾ ಒಂದು ಇರಾನಿಯನ್ ಯುದ್ಧ ನೌಕೆಯಾಗಿರುವುದರಿಂದ, ಅದು ಎಲ್ಲಿ ಚಲಿಸುತ್ತಿದ್ದರೂ ಅಥವಾ ಆ ಕ್ಷಣದಲ್ಲಿ ಅದು ಏನೇ ಮಾಡುತ್ತಿದ್ದರೂ, ತಾಂತ್ರಿಕವಾಗಿ ಅದು ದಾಳಿಗೆ ಒಂದು ಸೂಕ್ತವಾದ ಮಿಲಿಟರಿ ಗುರಿ ಎಂದು ಪರಿಗಣಿತವಾಗುತ್ತದೆ. ಹಲವಾರು ಭಾರತೀಯ ನೌಕಾಪಡೆಯ ಅಧಿಕಾರಿಗಳೂ ಸಹ ಈ ಅಪ್ರಿಯ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ವಿಶ್ವಸಂಸ್ಥೆಯ ಚಾರ್ಟರ್‌ನ ಆರ್ಟಿಕಲ್ 2 (4) ಪ್ರಕಾರ, ಯಾವುದೇ ದೇಶವೂ ಬೇರೆ ದೇಶಗಳ ಮೇಲೆ ಮಿಲಿಟರಿ ಬಲವನ್ನು ಪ್ರಯೋಗಿಸುವಂತಿಲ್ಲ. ಇದು ಸ್ಪಷ್ಟವಾದ ಕಾನೂನಾಗಿದೆ. ಆದರೆ, ಇದೇ ಚಾರ್ಟರ್‌ನ 51ನೇ ವಿಧಿ ಒಂದು ವಿನಾಯಿತಿಯನ್ನೂ ನೀಡುತ್ತದೆ. ಒಂದು ದೇಶ ಏನಾದರೂ ಸಶಸ್ತ್ರ ಬೆದರಿಕೆ ಹೊಂದಿದ್ದರೆ, ಅದು ಸ್ವರಕ್ಷಣೆಗಾಗಿ ದಾಳಿ ಮಾಡಬಹುದು. ಇದರೊಡನೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೂ ಮಿಲಿಟರಿ ದಾಳಿಗೆ ವಿಶೇಷ ಅನುಮತಿ ನೀಡುವ ಅವಕಾಶವಿದ್ದು, 1990ರ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಭದ್ರತಾ ಮಂಡಳಿ ಇದನ್ನೇ ಮಾಡಿತ್ತು. ಆದರೆ ಈ ಅನುಮತಿ ಪಡೆಯಲು ಬಹುಮತದ ಅಗತ್ಯವಿದ್ದು, ಅಮೆರಿಕ, ರಶ್ಯ, ಚೀನಾ, ಯುಕೆ ಮತ್ತು ಫ್ರಾನ್ಸ್ ಇದರ ವಿರುದ್ಧ ವಿಟೋ ಚಲಾಯಿಸಬಾರದು. ವಿಟೋ ಅಧಿಕಾರ ಎಂದರೆ, ಈ ಐದು ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ಪೈಕಿ ಯಾವುದೇ ಒಂದು ಸದಸ್ಯನೂ ‘ಇಲ್ಲ’ ಎಂದರೆ, ಆ ಒಟ್ಟಾರೆ ನಿರ್ಧಾರಕ್ಕೆ ತಡೆಯಾಗುತ್ತದೆ.

ಇನ್ನೊಂದು ಗಮನಾರ್ಹ ಅಂಶವೆಂದರೆ, ಅಮೆರಿಕದ ಖಜಾನೆ ಇಲಾಖೆ ಐರಿಸ್ ದೇನಾ ಮೇಲೆ 2023ರಲ್ಲಿ ಅಧಿಕೃತ ನಿರ್ಬಂಧ ಹೇರಿದೆ. ನಿರ್ಬಂಧಗಳು ಮೂಲತಃ ಹಣಕಾಸಿನ ದಂಡಗಳು ಮತ್ತು ನಿಬಂಧನೆಗಳಾಗಿದ್ದು, ನೌಕೆಗಳು ಅಥವಾ ದೇಶಗಳ ಮೇಲೆ ವಿಧಿಸಲಾಗುತ್ತದೆ. ನೌಕೆಯ ಮೇಲೆ ನಿರ್ಬಂಧ ಹೇರಲಾಗಿದೆ ಎಂದರೆ, ಅದು ನೌಕೆಯನ್ನು ಚಲಿಸದಂತೆ ಮಾಡುವುದಿಲ್ಲವಾದರೂ, ಅದರ ಕುರಿತು ವ್ಯಾಪಕ ಅನುಮಾನಗಳನ್ನು ಸೃಷ್ಟಿಸುತ್ತದೆ. ಈ ದಾಳಿ ನಡೆದ ಸಂದರ್ಭದಲ್ಲಿ, ಐರಿಸ್ ದೇನಾ ಕ್ಲೋಸ್ ಇನ್ ಆಯುಧ ವ್ಯವಸ್ಥೆಯನ್ನು ಹೊಂದಿತ್ತು. ಅಂದರೆ, ಸನಿಹ ಬರುವ ಕ್ಷಿಪಣಿಗಳು ಅಥವಾ ಡ್ರೋನ್‌ಗಳನ್ನು ಹೊಡೆದುರುಳಿಸಲು ರ್ಯಾಪಿಡ್ ಫೈರ್ ಗನ್‌ಗಳನ್ನು ನೌಕೆ ಹೊಂದಿತ್ತು. ಇದರೊಡನೆ, ನೌಕೆಯಲ್ಲಿ ವಿಶಾಲ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಗಳಿದ್ದವು. ಇವೆಲ್ಲದರ ಹೊರತಾಗಿಯೂ, ನೌಕೆ ದಾಳಿಯ ವೇಳೆ ಪ್ರತ್ಯುತ್ತರ ಇಲ್ಲದಂತಾಗಿತ್ತು.

ಭಾರತೀಯ ನೌಕಾಪಡೆಯ ಮಾಜಿ ಉಪ ಮುಖ್ಯಸ್ಥರು ಮತ್ತು ಭಾರತದ ಮೊದಲ ರಾಷ್ಟ್ರೀಯ ಸಮುದ್ರ ಭದ್ರತಾ ಸಮನ್ವಯಕಾರ ನಿವೃತ್ತ ವೈಸ್ ಅಡ್ಮಿರಲ್ ಜಿ. ಅಶೋಕ್ ಕುಮಾರ್ ಅವರು ಸಾಗರ ವಲಯದಲ್ಲಿ ಯುದ್ಧ ಎಂದಾದಾಗ ಅದಕ್ಕೆ ಯಾವುದೇ ನಿರ್ದಿಷ್ಟ ಗಡಿಗಳು ಇರುವುದಿಲ್ಲ ಎಂದಿದ್ದಾರೆ. ಒಂದು ಬಾರಿ ಚಕಮಕಿ ಆರಂಭಗೊಂಡರೆ, ಅದಕ್ಕೆ ಸಮುದ್ರದಲ್ಲಿ ಯಾವುದೇ ತಡೆಗೋಡೆ ಇಲ್ಲ. ಯುದ್ಧ ನೌಕೆ ಭಾರತೀಯ ತೀರದಿಂದ ತೆರಳಿದಾಗಲೇ ಯುದ್ಧ ಆರಂಭಗೊಂಡಿತ್ತು ಎಂದು ಅವರು ವಿವರಿಸಿದ್ದಾರೆ. ನೌಕೆಯ ಮೇಲಿನ ದಾಳಿ ಶ್ರೀಲಂಕಾದ ವಿಶೇಷ ಆರ್ಥಿಕ ವಲಯದಲ್ಲಿ, ಅಂದರೆ, ಶ್ರೀಲಂಕಾಗೆ ಸಮುದ್ರ ಸಂಪನ್ಮೂಲಗಳ ಮೇಲೆ ವಿಶೇಷ ಅಧಿಕಾರ ಇರುವ ಪ್ರದೇಶದಲ್ಲಿ ನಡೆದಿರುವುದರಿಂದ, ರಕ್ಷಣಾ ತಂಡಗಳಿಗೆ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಅನುಕೂಲವಾಯಿತು ಎಂದಿದ್ದಾರೆ.

ಆದರೆ, ನಿವೃತ್ತ ರಿಯರ್ ಅಡ್ಮಿರಲ್ ಸುಧೀರ್ ಪಿಳ್ಳೈ ಎನ್.ಎಂ. ಅವರು ಒಂದಷ್ಟು ಕಠಿಣ ಸವಾಲುಗಳನ್ನು ಎತ್ತಿದ್ದಾರೆ. ‘‘ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರದ ಅಂತರ್‌ರಾಷ್ಟ್ರೀಯ ಸಮುದ್ರದಲ್ಲಿ ಒಂದು ವಿದೇಶಿ ಯುದ್ಧ ನೌಕೆಯ ಮೇಲೆ ದಾಳಿ ನಡೆಸುವುದನ್ನು ಸ್ಪಷ್ಟವಾಗಿ ಸ್ವಯಂ ರಕ್ಷಣೆ ಎಂದು ಸಾಬೀತುಪಡಿಸದಿದ್ದರೆ, ಅದು ಅಕ್ರಮ ದಾಳಿ ಎಂದೇ ಕರೆಯಲ್ಪಡುತ್ತದೆ’’ ಎಂದಿದ್ದಾರೆ.

ಇನ್ನೊರ್ವ ಹಿರಿಯ ನೌಕಾಪಡೆ ಅಧಿಕಾರಿ ಈ ದಾಳಿಯನ್ನು ಪ್ರಮುಖ ಯುದ್ಧ ತೀವ್ರತೆಯ ಹೆಜ್ಜೆ ಎಂದಿದ್ದಾರೆ. ಇರಾನ್‌ನ ಯುದ್ಧ ನೌಕೆ ಯಾವುದೇ ಚಕಮಕಿಯ ಪ್ರದೇಶದಲ್ಲಿ ಇರಲಿಲ್ಲ. ಅದು ಬೆಳಗಿನ ವೇಳೆಯಲ್ಲಿ, ಶಾಂತವಾಗಿ ಸಾಗುತ್ತಿತ್ತು. ನೌಕೆಯಲ್ಲಿದ್ದ ಯಾವ ಸಿಬ್ಬಂದಿಯೂ ಸಮುದ್ರದ ಆಳದಿಂದ ಒಂದು ಟಾರ್ಪಿಡೋ ಮೌನವಾಗಿ ಬಂದು ದಾಳಿ ಮಾಡಬಹುದು ಎಂದು ಊಹಿಸಿಯೇ ಇರಲಿಲ್ಲ.

ಇದು ಆಧುನಿಕ ಯುದ್ಧದ ಒಂದು ಭಯಾನಕ ವಾಸ್ತವ. ಸಮುದ್ರದಲ್ಲಿ ಯಾವುದೇ ಸುರಕ್ಷಿತ ಮಾರ್ಗಗಳಿಲ್ಲ, ಯಾವುದೇ ನಿರ್ದಿಷ್ಟ ಗಡಿಗಳಿಲ್ಲ. ಸಮುದ್ರ ಸದಾ ಮುಕ್ತವಾಗಿದ್ದು, ಇಂದು ಸಮುದ್ರಗಳು ಸಂಪೂರ್ಣ ಊಹೆಗೆ ನಿಲುಕದಂತಾಗಿವೆ.

ಭಾರತ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇನ್ನು ಮುಂದಿನ ಸಾಧ್ಯತೆಗಳೇನು ಎನ್ನುವ ಕುರಿತು ಭಾರತ ಬಹಳ ಜಾಗರೂಕವಾಗಿ ಆಲೋಚಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಿರೀಶ್ ಲಿಂಗಣ್ಣ

contributor

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Similar News