×
Ad

ರಾಯಚೂರು ಜಿಲ್ಲೆಯ ಇತಿಹಾಸ, ವೈಶಿಷ್ಟ್ಯತೆ ಹಾಗೂ ಪ್ರವಾಸಿ ತಾಣಗಳು

Update: 2026-01-13 12:48 IST

ದೋ ಅಬ್ ಪ್ರದೇಶವೆಂದು ಕರೆಯಲ್ಪಡುವ ರಾಯಚೂರು ಜಿಲ್ಲೆ ನೈಸರ್ಗಿಕವಾಗಿ ಸಂಪತ್ಭರಿತವಾಗಿದೆ. ಜಿಲ್ಲೆಯ ಇತಿಹಾಸ ಕ್ರಿ.ಪೂ 3000 ವರ್ಷಗಳಷ್ಟು ಹಳೆಯದು. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ತನ್ನದೇ ಆದ ಹಿರಿಮೆ ಹೊಂದಿದೆ.

ಇತಿಹಾಸಕಾರರು, ಹಿರಿಯ ಸಾಹಿತಿಗಳ ಪ್ರಕಾರ ರಾಯಚೂರಿಗೆ ಈ ಹಿಂದೆ ರಾಜನೂರು, ರಾಚೂರು, ಪೆರ್ಮನ ರಾಚೂರು, ರಾಚೂರು ಸೀಮೆ ಎಂಬ ಹೆಸರುಗಳಿದ್ದವು. ಇಲ್ಲಿನ ಇತಿಹಾಸ ಮೌರ್ಯರು, ಶಾತವಾಹನರು, ಕಲ್ಯಾಣ ಚಾಳುಕ್ಯರು, ಕಲ್ಯಾಣದ ಕಲಚೂರಿಗಳು, ವಿಜಯನಗರ ಅರಸರು, ಬಹಮನಿ ಸುಲ್ತಾನರು, ಬಿಜಾಪುರದ ಆದಿಲ್ ಶಾಹಿಗಳು, ಮೊಘಲರು, ಮರಾಠರು, ಹೈದರಾಬಾದ್ ನಿಜಾಮರು ಹಾಗೂ ಇಂಗ್ಲಿಷರು ಜಿಲ್ಲೆಯಲ್ಲಿ ಆಳ್ವಿಕೆ ಮಾಡಿದ್ದರು. ಅಲ್ಲದೆ ಸ್ಥಳೀಯ ಪ್ರಭುಗಳೆಂದು ಕರೆಯಲ್ಪಡುವ ಸಾಲಗುಂದಿಯ ಸಿಂಧರು, ಅಯಗಯಣ ವಾಡಿಯ ಹೈಹಯರು, ಕರಡಕಲ್ಲಿನ ಕದಂಬರು, ಸಾಲಗುಂದಿಯ ಸಿಂಧರು, ಗುಡಗುಂಟಿಯ ನಾಯಕರು, ಗುಂತಗೋಳದ ನಾಯಕರೂ ಆಳಿದ್ದಾರೆ.

ಮಸ್ಕಿಯ ಅಶೋಕ ಶಿಲಾಶಾಸನ: ಮೌರ್ಯರು ಪಾಟಲೀಪುತ್ರವನ್ನು ರಾಜಧಾನಿಯಾಗಿ ಮಾಡಿಕೊಂಡು ದಕ್ಷಿಣ ಭಾರತದವರೆಗೆ ಆಡಳಿತ ಮಾಡಿದ್ದರು. ಕ್ರಿ.ಪೂ. 300ರಲ್ಲಿ ರಾಯಚೂರು ಜಿಲ್ಲೆ ಅಶೋಕನ ಆಳ್ವಿಕೆ ಒಳಪಟ್ಟಿತ್ತು ಎಂಬ ಉಲ್ಲೇಖವಿದೆ. ಇತಿಹಾಸದಲ್ಲಿ ಮಾಸಂಗಿಪುರ ಎಂದು ಕರೆಯಲ್ಪಡುವ ಈಗಿನ ಮಸ್ಕಿ ತಾಲೂಕಿನಲ್ಲಿ ಅಶೋಕನ ಶಿಲಾಶಾಸನ ಪತ್ತೆಯಾಗಿದೆ. ಸಾಮ್ರಾಟ ಅಶೋಕನು ಧರ್ಮ ಪ್ರಸಾರಕ್ಕಾಗಿ ಶಾಸನಗಳನ್ನು ಕಲ್ಲು ಬಂಡೆಗಳ ಮೇಲೆ ಬರೆಸಿದ್ದು, ಕರ್ನಾಟಕದ 10 ಶಾಸನಗಳ ಪೈಕಿ ಕಲ್ಯಾಣ ಕರ್ನಾಟಕದ ಕೊಪ್ಪಳದಲ್ಲಿ 2 ಶಾಸನ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಒಂದು ಪತ್ತೆಯಾಗಿದೆ.

ಕ್ರಿ.ಶ 1915ರಲ್ಲಿ ಇಂಜಿನಿಯರ್ ಆಗಿದ್ದ ಸಿ.ಬಿಡನ್ ಎಂಬವರು ದೇವನಾಂಪ್ರಿಯ ಅಶೋಕನ ಶಾಸನ ಗುರುತಿಸಿದ್ದಾರೆ. ಅಶೋಕನು ಯಾವ ಶಾಸನದಲ್ಲಿಯೂ ತನ್ನ ಹೆಸರು ದಾಖಲಿಸಿಲ್ಲ. ಕೇವಲ ದೇವನಾಂಪ್ರಿಯ, ಪ್ರಿಯದರ್ಶಿ ಎಂಬ ನಾಮದೊಂದಿಗೆ ಬರೆಸಿದ್ದ. ಆದರೆ ಮಸ್ಕಿ ಶಾಸನದಲ್ಲಿ ಮಾತ್ರ ‘ದೇವನಾಂಪ್ರಿಯ ಅಶೋಕ’ ಎಂದು ಉಲ್ಲೇಖಿಸಿದ್ದಾನೆ. ದೇವನಾಂಪ್ರಿಯ ಅಶೋಕ ಏಕಶಿಲೆಯ ಕೆಳಗೆ ಇಡಲಾಗಿದೆ. ಇದನ್ನು ಬ್ರಹ್ಮಲಿಪಿಯಲ್ಲಿ ಕೆತ್ತಲಾಗಿದೆ. ಇಲ್ಲಿ ಶಿಲಾಯುಗದ ಅಸ್ತಿ ಪಂಜರಗಳು, ವೀರಗಲ್ಲುಗಳು, ಸಿಡಿಲು ಗುಂಡುಗಳು ಪತ್ತೆಯಾಗಿವೆ.

ಮಾನ್ಯಖೇಟದ ರಾಷ್ಟ್ರಕೂಟರು ಜಿಲ್ಲೆಯನ್ನು ಆಳಿದ್ದಾರೆ. ಇಮ್ಮಡಿ ಕೃಷ್ಣನ ಅಧಿಕಾರವಧಿಯಲ್ಲಿ ಈತನ ಜಗತ್ತುಂಗ ಎಡದೊರೆ ಆಳಿದ್ದನು. ಮಾನ್ವಿ ತಾಲೂಕಿನ ಬಲ್ಲಟಗಿ, ಮಸ್ಕಿ ತಾಲೂಕಿನ ತಲೆಖಾನ್‌ನಲ್ಲಿ 3ನೇ ಇಂದ್ರನ ಕುರಿತ ಶಾಸನಗಳು ಮಾಹಿತಿ ನೀಡುತ್ತವೆ.

ಕಲ್ಯಾಣದ ಚಾಳುಕ್ಯರೂ ಈ ನಾಡನ್ನು ಆಳ್ವಿಕೆ ಮಾಡಿದ್ದು, ಇರಿವಬೆಡಂಗ ಸತ್ಯಾಶ್ರಯ, ಅರಿಕೇಸರಿ, ಕೇತವಿಕಲ್ಲು ನೆಲವೀಡಿನಲ್ಲಿದಂತೆಯೂ ಅವನ ಕೈ ಕೆಳಗೆ ಅಜವರ್ಮ ಎಂಬವನು ಕೆಳವಾಡಿ 370ರ ಬಾಡವನ್ನು ಆಳುತ್ತಿದ್ದನು. ಮೊಸಂಗಿ, ಮಾಸಂಗಿಪುರ (ಈಗಿನ ಮಸ್ಕಿ)ವನ್ನು ತನ್ನ ರಾಜಧಾನಿಯಾಗಿ 5ನೇ ವಿಕ್ರಮಾದಿತ್ಯನ ಕಿರಿಯ ಸಹೋದರ ಜಯಸಿಂಹ ಮಾಡಿಕೊಂಡಿದ್ದನು ಎಂದು ಇತಿಹಾಸಕಾರರು ಹೇಳುತ್ತಾರೆ. ಕಲ್ಯಾಣ ಚಾಳುಕ್ಯರ ಆಳ್ವಿಕೆ ಮಹತ್ತರ ಘಟ್ಟವಾಗಿದೆ.

ವಿಜಯನಗರದ ಅರಸರು ಜಿಲ್ಲೆಯನ್ನಾಳಿದ್ದು, ಜಿಲ್ಲೆಯ ಫಲವತ್ತಾದ ಮಣ್ಣಿಗಾಗಿ ವಿಜಯನಗ ಅರಸರು, ಬಹಮನಿ ಸುಲ್ತಾನರು ಹಲವಾರು ಯುದ್ಧ ಮಾಡಿದ್ದಾರೆ. ಇಲ್ಲಿ ಸುಮಾರು 13 ಯುದ್ಧಗಳು ನಡೆದಿವೆ. ಜಿಲ್ಲೆಯ ಲಿಂಗಸುಗುರು ತಾಲೂಕಿನ ಮುದಗಲ್ ಕೋಟೆ ಇಂದಿಗೂ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಮುದಗಲ್ 2ನೇ ದೇವರಾಯನ ಅಧೀನದಲ್ಲಿ ಇತ್ತು. ಆ ಸಂದರ್ಭದಲ್ಲಿ ವರದಣ್ಣ ನಾಯಕ ಮುದಗಲ್ ಆಳುತ್ತಿದ್ದ. ಆಗ ರಾವುತರಾವ್ ಈರಣ್ಣ ಎಂಬವನು ಮುದಗಲ್ ಬೆಟ್ಟದ ಕೋಟೆಯಲ್ಲಿನ ಬಂಗಾರದ ಕಳಸ ತೆಗೆದುಕೊಂಡು ಬಂದಾಗ ಸಂತೋಷಗೊಂಡ 2ನೇ ದೇವರಾಯ ಈರಣ್ಣನಿಗೆ ಭೂದಾನ ನೀಡಿದನು.

ಅನಂತರ ಆಳಿದ ವಿಜಯನಗರದ ಅರಸ ಕೃಷ್ಣದೇವರಾಯ, ಇಸ್ಮಾಯಿಲ್ ಆದಿಲ್ ಶಾಹನನ್ನು ಸೋಲಿಸಿ ಕ್ರಿ.ಶ 1520ರಲ್ಲಿ ರಾಯಚೂರು ಕೋಟೆ ವಶಪಡಿಸಿಕೊಂಡನು. ಇದೇ ಸಂದರ್ಭದಲ್ಲಿ ಆತ ಮಾನುವೆ, ಹಾನಗಲ್ಲು, ಆಲಂಪೂರುಣ ರಾಚೂರು, ಮಾಗಡೆ ದುರ್ಗ ಗೆದ್ದಿದ್ದ.

ಬಹಮನಿ ಸುಲ್ತಾನರು: ಕ್ರಿ.ಶ 1342ರಲ್ಲಿ ಹಸನಗಂಗು ಎಂಬವರಿಂದ ಸ್ಥಾಪಿಸಲ್ಪಟ್ಟ ಬಹಮನಿ ರಾಜ್ಯವೂ ಮುಂದೆ ಅಬ್ದುಲ್ ಪತ್ ಫಿರೋಜ್ ಷಾ, ಮಹಮ್ಮದ್ ಷಾ ಆಳಿದನು. ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟ ಮುದಗಲ್ ಅನ್ನು ಕ್ರಿ.ಶ 1513 ರಲ್ಲಿ ಬಹಮನಿ ಸುಲ್ತಾನರು ವಶಕ್ಕೆ ಪಡೆದರು. ರಾಯಚೂರು ಕೋಟೆಯ ಅನೇಕ ಭಾಗಗಳನ್ನು 2ನೇ ಇಬ್ರಾಹಿಂ ಆದಿಲ್ ಷಾ ಕಟ್ಟಿಸಿದ. ಕ್ರಿ.ಶ 1628ರಲ್ಲಿ ಮುಹಮ್ಮದ್ ಇಬ್ರಾಹಿಂ ಆಳ್ವಿಕೆ ಆರಂಭವಾಗಿ ಮೊಮ್ಮಗ ಔರಂಗಜೇಬನು ಅರಸನಾದ. ಕ್ರಿ.ಶ 1686ರಲ್ಲಿ ಮೊಘಲರ ಔರಂಗಜೇಬ ಬಿಜಾಪುರವನ್ನು ತನ್ನ ವಶಕ್ಕೆ ಪಡೆದ.

ರಾಯಚೂರು ಜಿಲ್ಲೆ ಹೈದರಾಬಾದ್ ನಿಜಾಮರ ಆಳ್ವಿಕೆಗೂ ಒಳಪಟ್ಟಿತ್ತು. ಅಸಫ್ ಜಾಹ ನಿಜಾಮ್ ಉಲ್ ಮುಲ್ಕ್ ಎಂಬವನು ತನ್ನನ್ನು ಹೈದರಾಬಾದ್ ನವಾಬ್ ಎಂದು ಘೋಷಿಸಿಕೊಂಡಿದ್ದ. ಈತನ ನಂತರ ಮೀರ್ ನಿಜಾಂ ಅಲಿಖಾನ್ ಅಸಫ್ ಜಾಹ ಕ್ರಿ.ಶ 1762-1803ರವರೆಗೆ, ಅಕಬರ್ ಅಲಿಖಾನ್ ಸಿಕಂದರ್ ಷಾಹ್ ಕ್ರಿ.ಶ 1803-1829, ಮೀರ್ ತಹ್ ನಿಯತ್ ಅಲಿ ಖಾನ್ ಅಸಫುದ್ದದೌಲ ಅಸಫ್ ಜಾಹ ಆಳ್ವಿಕೆ ಮಾಡಿದ್ದ. ನಿಜಾಮ್ ಮೀರ್ ಉಸ್ಮಾನ್ ಅಲಿಖಾನ್ ಕ್ರಿ.ಶ. 1911ರಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಒಂದು ವರ್ಷದವರೆಗೆ ಅಂದರೆ 1948ರವರೆಗೆ ಆಳ್ವಿಕೆ ನಡೆಸಿದ್ದ. ಅನಂತರ ದೇಶದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಪರೇಷನ್ ಪೋಲೊ ಕಾರ್ಯಾಚರಣೆ ನಡೆಸಿ ನಿಜಾಮರ ಆಡಳಿತದಿಂದ ಮುಕ್ತಿ ದೊರೆಕಿಸಿಕೊಟ್ಟರು.

ರಾಯಚೂರು ಹಾಗೂ ಕೊಪ್ಪಳದಲ್ಲಿ ಬರಗಾಲ ಬಂದಾಗ ಹೈದರಾಬಾದ್ ನಿಜಾಮರು ಲಿಯೋನಾರ್ಡ್ ಮನ್ ಎಂಬ ಭೂಗರ್ಭಶಾಸ್ತ್ರಜ್ಞನ ಮೂಲಕ 1200ಕ್ಕೂ ಹೆಚ್ಚು ಬಾವಿ ತೋಡಿಸಿದ್ದರು. ಇದೇ ಕಾರಣಕ್ಕೆ ಲಿಯೋನಾರ್ಡ್ ಮನ್ ಮನ್ನಾಸಾಬ್, ಸಾವಿರ ಬಾವಿಗಳ ಸರದಾರ ಎನಿಸಿಕೊಂಡಿದ್ದ. ಈತನ ಸಮಾಧಿ ಲಿಂಗಸುಗೂರು ತಾಲೂಕಿನಲ್ಲಿದೆ.

ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್: ರಾಯಚೂರನ್ನು ಶಕ್ತಿ ಕೇಂದ್ರ ಎಂತಲೂ ಕರೆಯಲಾಗುತ್ತದೆ. ಏಕೆಂದರೆ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ರಾಯಚೂರು ಥರ್ಮಲ್ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ಆರ್ ಟಿಪಿಎಸ್) ಇದೆ.

ರಾಜ್ಯದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.70ರಷ್ಟು ಪಾಲನ್ನು ರಾಯಚೂರಿನ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ 

ಕೇಂದ್ರ ಹೊಂದಿದೆ. ಒಟ್ಟು 1,720 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರ ಒಟ್ಟು ಎಂಟು ಘಟಕಗಳಲ್ಲಿ ಸರಿಸುಮಾರು 5 ಘಟಕಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ.

ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿದ್ದು, ಫಲವತ್ತಾದ ಕೃಷಿ ಭೂಮಿಯಿದೆ. ಕೃಷ್ಣಾ ಎಡದಂಡೆ ನಾಲೆ (ಟಿಎಲ್ ಬಿಸಿ) ಹಾಗೂ ನಾರಾಯಣಪುರ ನಾಲೆ ಯೋಜನೆ (ಎನ್‌ಆರ್‌ಬಿಸಿ) ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ತುಂಗಭದ್ರಾ ಜಲಾಶಯದಿಂದ 226 ಕಿ.ಮೀ. ಉದ್ದದ ವಿಸ್ತಾರ ಹೊಂದಿದೆ. ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯವಿರುವುದರಿಂದ ಸಿಂಧನೂರು, ಮಾನ್ವಿ, ದೇವದುರ್ಗ ತಾಲೂಕಿನ ಸುತ್ತಮುತ್ತ ರೈತರು ಭತ್ತ, ಜೋಳದ ಜೊತೆಗೆ ಸೂರ್ಯಕಾಂತಿ, ಹತ್ತಿ ಹೆಚ್ಚಾಗಿ ಬೆಳೆಯುತ್ತಾರೆ.

2024ರ ಜುಲೈ 9ರಂದು ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಜಿಲ್ಲಾಧಿಕಾರಿಗಳೇ ಗುರುತಿಸಬೇಕು. ಖಾಸಗಿ ಸಹಭಾಗಿತ್ವ ಮಾತ್ರವಲ್ಲ, ಸರಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು ಎಂದು ಸೂಚಿಸಿದ್ದರು. ಬಜೆಟ್ ಯೋಜನೆ ಸಿದ್ಧಪಡಿಸಬೇಕು. ಜಿಲ್ಲಾಧಿಕಾರಿ ಸಿದ್ಧಪಡಿಸುವ ಮಾಸ್ಟರ್ ಪ್ಲಾನ್‌ಗೆ ಹಣಕಾಸು ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಭರವಸೆ ಕೊಟ್ಟಿದ್ದರು.

ಈ ದಿಸೆಯಲ್ಲಿ ‘ಜಿಲ್ಲೆಯಲ್ಲಿ ಪ್ರಸ್ತುತ 10 ಜತೆಗೆ 28 ಹೊಸ ತಾಣಗಳನ್ನು ಪಟ್ಟಿ ಮಾಡಿ ಕಳುಹಿಸಲಾಗಿತ್ತು. ಇವೆಲ್ಲವನ್ನೂ ಸರಕಾರ ಪ್ರವಾಸಿತಾಣವಾಗಿ ಪರಿಗಣಿಸಿ ಅನುಮೋದನೆ ಕೊಟ್ಟಿದೆ. ಮೊದಲ ಹಂತದಲ್ಲಿ ಮಸ್ಕಿ ಅಶೋಕನ ಶಿಲಾಶಾಸನ ಹಾಗೂ ಗೂಗಲ್ ತಾಣದ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ರೂ. 10 ಕೋಟಿ ಅನುದಾನ ಮಂಜೂರಾಗಿದೆ.

ರಾಯಚೂರು ತಾಲೂಕಿನ ಕುರ್ವಕಲದ ದತ್ತಾತ್ರೇಯ ಮಂದಿರ, ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ಹಾಗೂ ಗಾಣದಾಳು ಪಂಚಮುಖಿ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರ ಸರಕಾರದ ಪ್ರಸಾದ್ ಯೋಜನೆಯಡಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಕೇಂದ್ರ ಸರಕಾರ ಹಾಗೂ ಕೆಕೆಆರ್‌ಡಿಬಿಯಿಂದ ಅನುದಾನ ದೊರೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಝೀರ್ ಅಹ್ಮದ್ ಹೇಳಿದ್ದಾರೆ.

ಜಿಲ್ಲೆಯ ಹೊಸ ಪ್ರವಾಸಿ ತಾಣಗಳು:

ರಾಯಚೂರು ತಾಲೂಕು: ನವರಂಗ ದರ್ವಾಜಾ, ಕಾಟೆ ದರ್ವಾಜಾ, ಮೆಕ್ಕಾ ದರ್ವಾಜಾ, ಪಂಚ ಬೀಬಿ ಪಹಾಡ್, ತೀನ್ ಕಂದಿಲ್, ನಾರದಗಡ್ಡೆ, ಮಲಿಯಾಬಾದ್ ಕೋಟೆ. ಕಲ್ಲಾನೆ, ಪಂಚಮುಖಿ ಆಂಜನೇಯ ದೇಗುಲ, ಮಾವಿನಕೆರೆ, ಕುರ್ವಾಕುಲದ ದತ್ತಾತ್ರೇಯ ದೇಗುಲ, ದೇವಸುಗೂರಿನ ಸುಗೂರೇಶ್ವರ, ಬಿಜ್ಜಾಲಿಯ ಏಕಶಿಲಾ ಬೃಂದಾವನ, ಮಂಚಲಾಪುರ ಕೆರೆ, ಶಕ್ತಿನಗರದ ವಿದ್ಯುತ್ ಉತ್ಪಾದನೆ ಘಟಕ-ಶಕ್ತಿನಗರ, ಕಲ್ಮಲಾ ಕರಿಯಪ್ಪ ತಾತನ ದೇಗುಲ.

ಸಿಂಧನೂರು ತಾಲೂಕು: ಸೋಮಾಪುರದ ಅಂಬಾಮಠ, ಗಾಂಧಿನಗರದ ಶಿವಾಲಯ ದೇಗುಲ, ಉದ್ಬಾಳದ ಜೋಳದರಾಶಿ ಆಂಜನೇಯ ದೇವಸ್ಥಾನ.

ಮಾನ್ವಿ ತಾಲೂಕು: ಕಲ್ಲೂರು ಮಹಾಲಕ್ಷ್ಮೀ, ಮಾನ್ವಿ ಕೋಟೆ, ನೀರ ಮಾನ್ವಿಯ ಯಲ್ಲಮ್ಮದೇವಿ, ಹರವಿಯ ಬಸವೇಶ್ವರ ದೇಗುಲ, ಗೋರ್ಕಲ್‌ದ ವೆಂಕಟೇಶ್ವರ ದೇಗುಲ, ರಾಜಲಬಂಡಾ ಬ್ಯಾರೇಜ್.

ದೇವದುರ್ಗ ತಾಲೂಕು: ಗಬ್ಬೂರಿನ ದೇವಾಲಯಗಳು, ಕೊಪ್ಪುರು ನರಸಿಂಹ ದೇವಸ್ಥಾನ, ಗೂಗಲ್ ಅಲ್ಲಮಪ್ರಭು ದೇವಸ್ಥಾನ ಹಾಗೂ ಬ್ರಿಡ್ಜ್ ಕಮ್ ಬ್ಯಾರೇಜ್, ವೀರಗೋಟದ ಆದಿ ಮೌನಲಿಂಗೇಶ್ವರ ದೇಗುಲ- ತಿಂಥಣಿ ಶ್ರೀಕಾಗಿನಗೆಲ ಮಹಾಸಂಸ್ಥಾನ ಕನಕ ಪೀಠ.

ಲಿಂಗಸುಗೂರು ತಾಲೂಕು: ಹಟ್ಟಿ ಚಿನ್ನದಗಣಿ-ಪಟ್ಟಿ, ಮುದಗಲ್ ಕೋಟೆ, ಗೋಲಪಲ್ಲಿಯ ಬಂಡಲಗುಂಡ ಜಲಪಾತ,, ಗುರುಗುಂಟಾ ಅಮರೇಶ್ವರ ದೇವಸ್ಥಾನ, ಅಂಕಲಿಮಠ, ಪಿಕಳಿಹಾಳ.

ಮಸ್ಕಿ ತಾಲ್ಲೂಕು: ಮಸ್ಕಿ ಮಲ್ಲಿಕಾರ್ಜುನ ದೇಗುಲ, ಅಶೋಕನ ಶಿಲಾಶಾಸನ, ಮಲ್ಲಿಕಾರ್ಜುನ ದೇಗುಲ (ಎನ್‌ಸಿಇಆರ್ ಟಿ ಸಿಂಬಲ್), ಚಿಕ್ಕ ಸವದತ್ತಿ ಯಲ್ಲಮ್ಮ ದೇಗುಲ, ಅಶೋಕನ ಕನ್ನಡ ಶಿಲಾ ಶಾಸನ.

ಐತಿಹಾಸಿಕ ತಾಣಗಳು

ರಾಯಚೂರು ನಗರದ ತೀನ್ ಖಂದಿಲ್, ಕಲ್ಲಾನೆ, ಮಲಿಯಾಬಾದ್ ಕೋಟೆ, ಕಲ್ಲಾನೆಗಳು, ಆಮ್ ತಲಾಬ್, ಗುಬ್ಬೇರಬೆಟ್ಟ, ಪಂಚ್ ಬೀಬಿ ಪಹಾಡ್, ಏಕ್ ಮಿನಾರ್, ಆತ್ಕೂರಿನ ದತ್ತಾತ್ರೇಯ ದೇವಸ್ಥಾನ, ಖಾಜನಗೌಡ ಮಹಲ್, ಮಸ್ಕಿಯ ಅಶೋಕ ಶಿಲಾಶಾಸನ, ಪಂಚಮುಖಿ ಗಾಣಧಾಳ ಆಂಜನೇಯ ದೇವಸ್ಥಾನ ಇತ್ಯಾದಿ. ಇವುಗಳ ಜೊತೆಗೆ ಜಿಲ್ಲೆಯ 28 ಐತಿಹಾಸಿಕ ಹೊಸ ತಾಣ ಗುರುತಿಸಿ ಅಭಿವೃದ್ಧಿಗೆ ಯೋಜನೆ ರೂಪಿಸಿ ಕಾರ್ಯ ರೂಪಕ್ಕೆ ತರಲು ಮುಂದಾಗಿದೆ.

ಜಿಲ್ಲೆಯಲ್ಲಿ ನೂರಾರು ಪುರಾತನ ಸ್ಮಾರಕಗಳಿದ್ದರೂ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವ್ಯಾಪ್ತಿಗೆ ಒಂದೇ ಒಂದು ಸ್ಮಾರಕವನ್ನೂ ಸೇರಿಸಿಲ್ಲ. ಇದೀಗ ಪ್ರವಾಸೋದ್ಯಮ ಇಲಾಖೆಯು ರಾಯಚೂರು ಜಿಲ್ಲೆಯಲ್ಲಿ 28 ಹೊಸ ತಾಣಗಳನ್ನು ಗುರುತಿಸಿದ್ದು ಜನರಲ್ಲಿ ಹರ್ಷ ತಂದಿದೆ.

ರಾಯಚೂರು ಜಿಲ್ಲೆಯ ಐತಿಹಾಸಿಕ ಕೋಟೆಗಳು

ಯಾವುದೇ ಜಿಲ್ಲೆಯ ಇತಿಹಾಸವನ್ನು ಅಧ್ಯಯನ ಮಾಡುವುದಾದರೆ ಅಲ್ಲಿನ ಕೋಟೆಗಳು, ಸ್ಮಾರಕಗಳು, ಐತಿಹಾಸಿಕ ಕುರುಹುಗಳು ಕಾಣಬೇಕು ಎಂಬ ಮಾತಿದೆ. ಅದರಂತೆ ರಾಯಚೂರಿನ ಕೋಟೆಗಳ ಬಗ್ಗೆ ಅವಶ್ಯ ತಿಳಿಯಬೇಕಿದೆ. ರಾಯಚೂರು ಕೋಟೆ ಕೊತ್ತಲಗಳ ನಾಡಾಗಿದೆ. ಇಲ್ಲಿ ರಾಯಚೂರು ಕೋಟೆ, ಮಲಿಯಾಬಾದ್ ಕೋಟೆ, ಮುದಗಲ್ ಕೋಟೆ, ಜಲದುರ್ಗ ಕೋಟೆ ಪ್ರಮುಖವಾಗಿವೆ.

ರಾಯಚೂರು ಕೋಟೆ: ರಾಯಚೂರು ಕೋಟೆ ತನ್ನದೇ ಆದ ಇತಿಹಾಸ ಹೊಂದಿದ್ದು, ಈ ಕೋಟೆಗಾಗಿ ಅನೇಕ ರಾಜಮನೆತನಗಳು ಕಾದಾಡಿವೆ.ರಾಯಚೂರು ಕೋಟೆಯನ್ನುವಾರಂಗಲ್ಲಿನ ಕಾಕತೀಯರಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ಹೊಯ್ಸಳ ದೊರೆ ವಿಷ್ಣುವರ್ಧನ್ ಕ್ರಿ.ಶ. 1108-1142 ತನ್ನ ಉತ್ತರದ ದಿಗ್ವಿಜಯದ ಕಾಲದಲ್ಲಿ ಆಕ್ರಮಿಸಿಕೊಂಡ ಹಲವು ಕೋಟೆಗಳಲ್ಲಿ ರಾಯಚೂರು ಕೋಟೆಯೂ ಒಂದಾಗಿತ್ತು. ಇದಕ್ಕಿಂತ ಪೂರ್ವದಲ್ಲಿ ಬಾದಾಮಿ ಚಾಳುಕ್ಯರ ಕಾಲದಲ್ಲಿಯೂ ಈ ಕೋಟೆ ಇತ್ತೆಂದು ಡಾ.ಪಿ.ಬಿ.ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.

ಕ್ರಿ.ಶ. 1294ರಲ್ಲಿ ರಚಿತವಾದ ಕಾಕತೀಯರ ಶಾಸನದ ಮೂಲಕ ತಿಳಿದುಬರುವುದೇನೆಂದರೆ ರಾಣಿ ರುದ್ರಮ್ಮದೇವಿಯ ಸಾಮಂತನಾದ ಗೋರೆಗನ್ನಯ ರೆಡ್ಡಿಯ ಸೇನಾಪತಿಯಾದ ವಿಠ್ಠಲನಾಥ ಈ ಪ್ರದೇಶ ಆಳುತ್ತಿದ್ದಾಗ ಪ್ರಜೆಗಳ ರಕ್ಷಣಾರ್ಥವಾಗಿ ಶಿಲಾದುರ್ಗ ರಚಿಸಿದನೆಂದು ತಿಳಿದು ಬರುತ್ತದೆ. ಇದೇ ಇಂದಿನ ಒಳ ಕೋಟೆಯಾಗಿದೆ. ಕಾಲಾಂತರದಲ್ಲಿ ಈ ಕೋಟೆ

ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ, ಮುಹಮ್ಮದ್ ಬಿನ್ ತುಘಲಕ್ ಅವರ ವಶಕ್ಕೆ ಒಳಪಟ್ಟಿತ್ತು. ಬಳಿಕ ವಿಜಯನಗರ ಅರಸ ಕೃಷ್ಣದೇವರಾಯ, ಬಿಜಾಪುರದ ಆದಿಲ್ ಶಾಹಿಗಳು, ಬಹಮನಿ ಸುಲ್ತಾನರು, ಹೈದರಾಬಾದಿನ ನಿಜಾಮರು ಆಳ್ವಿಕೆ ಮಾಡಿದ್ದು ಕೋಟೆಯ ಜೀರ್ಣೋದ್ಧಾರ ಮಾಡಿದರು.

ಕೋಟೆಯ ವಿವಿಧ ಒಳ ಕೋಟೆಗಳಲ್ಲಿ ಒಳಕೋಟೆ (ಅಂದ್ರೂನ್‌ಕಿಲಾ), ಹೊರಕೋಟೆ (ಬೇರೂನ್‌ಕಿಲಾ) ಕಾಟೆ ದರ್ವಾಜಾ, ಮಕ್ಕಾ ದರವಾಜಾ, ನವರಂಗ ದರ್ವಾಜಾ ಸೇರಿವೆ.

ರಾಯಚೂರು ಜಿಲ್ಲೆಯ ವೈಶಿಷ್ಟ್ಯ

ರಾಯಚೂರು ಜಿಲ್ಲೆ ಸಂಪತ್ಭರಿತ ನಾಡಾಗಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ರಾಜ್ಯದ ಏಕೈಕ ಚಿನ್ನ ಉತ್ಪಾದಿಸುವ ಗಣಿಯಾಗಿದೆ. ಈ ಹಿಂದೆ ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್) ಇತ್ತು. ಈಗ ಅದು ಮುಚ್ಚಿಹೋಗಿದೆ. ಹಟ್ಟಿ ಚಿನ್ನದ ಗಣಿ ಕಂಪೆನಿ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ವಾರ್ಷಿಕ 10ರಿಂದ 11ಲಕ್ಷ ಟನ್ ಅದಿರು ಉತ್ಪಾದಿಸಲಾಗುತ್ತದೆ. ಈ ವರ್ಷ ಅಂದರೆ 2025-26ನೆ ಸಾಲಿನಲ್ಲಿ 2.8 ಟನ್‌ನಿಂದ 3 ಟನ್ ಚಿನ್ನ ಉತ್ಪಾದಿಸುವ ಹಾಗೂ 3,000 ಕೋಟಿ ರೂ.ಗೂ ಅಧಿಕ ವಾರ್ಷಿಕ ವಹಿವಾಟು ಗುರಿಯಿದೆ. ಪ್ರಸಕ್ತ ವರ್ಷ 1700 ಕೆಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿದೆ.

6 ಮೀಟರ್ ಸುತ್ತಳತೆ ಹಾಗೂ 900 ಮೀಟರ್ ಆಳದ ನ್ಯೂ ಸರ್ಕ್ಯೂಲರ್ ಶಾಫ್ಟ್ ಹಾಗೂ ಪ್ರತಿ ಸಾಲಿನಲ್ಲಿ 6,83,701 ಟನ್ ಅದಿರು ಸಂಸ್ಕರಿಸಿ, 1606.30 ಕೆ.ಜಿ. ಚಿನ್ನ ಉತ್ಪಾದಿಸಲಾಗಿತ್ತು. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.4.81ರಷ್ಟು ಕಡಿಮೆ ಅದಿರು ಉತ್ಪಾದಿಸಲಾಗಿದೆ. ಚಿನ್ನದ ಉತ್ಪಾದನೆಯಲ್ಲಿ ಶೇ.3.43ರಷ್ಟು ಹೆಚ್ಚಾಗಿದೆ. ಗಂಟೆಗೆ 50 ಟನ್ ಅದಿರು ಸಂಸ್ಕರಣೆಯ ಬಾಲ್ ಮಿಲ್‌ನಿಂದಾಗಿ ಅಧಿಕ ಚಿನ್ನ ಉತ್ಪಾದಿಸಲಾಗಿದೆ. 2024-25 ಹೆಚ್ಚಿನ ಉತ್ಪಾದನೆ ಜತೆಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ ರಾಯಚೂರು

contributor

Similar News