×
Ad

ಚರಂಡಿ ನೀರಿನಲ್ಲೇ ರಸ್ತೆ ದಾಟುವ ವಿದ್ಯಾರ್ಥಿಗಳು

Update: 2026-01-13 13:04 IST

ಭೀಮರಾಯ ಕುಡ್ಡಳ್ಳಿ ಕಾಳಗಿ

ಕಾಳಗಿ: ತಾಲೂಕಿನ ಕಂದಗೂಳ ಗ್ರಾಮದಲ್ಲಿ ಶಾಲೆ ಸ್ಥಾಪನೆಯಾಗಿ ದಶಕಗಳೇ ಕಳೆದರೂ ಮಕ್ಕಳ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಇಲ್ಲಿನ ಸರಕಾರಿ ಶಾಲೆಗೆ ನಾಲ್ಕು ನೂರಕ್ಕೂ ಹೆಚ್ಚು ಮಕ್ಕಳು ಚರಂಡಿಯಲ್ಲಿ ನಡೆದುಕೊಂಡೇ ಹೋಗುವ ಪರಿಸ್ಥಿತಿ ಮುಂದುವರಿದಿದೆ. ಶಾಲೆಯೊಳಗೆ ಕಾಲಿಡಬೇಕು ಎಂದರೆ ಚರಂಡಿ ನೀರಿನಲ್ಲಿಯೇ ನಡೆದುಕೊಂಡು ಸಾಗಬೇಕಾದ ದುಸ್ಥಿತಿ ಮಕ್ಕಳಿಗೆ ಬಂದೊದಗಿದೆ. ಇಷ್ಟಾದರೂ ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿರುವ ಕಂದಗೂಳದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದೆ. ಇಲ್ಲಿಗೆ ಪಕ್ಕದ ಅರಣಕಲ್, ಹುಳಗೇರಾ, ಕಂದಗೂಳ ಗ್ರಾಮಗಳಿಂದ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆಂದು ಬರುತ್ತಾರೆ. ಅವರು ಕಲಿಯಲು ಶಾಲೆಗೆ ಆಗಮಿಸುವ ರೀತಿ ಮಾತ್ರ ಚರಂಡಿ ನೀರಿನಲ್ಲಿ ನಡೆದುಕೊಂಡು ಬರುವ ಸ್ಥಿತಿ.

ಸರಕಾರವು ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರಿಗೆ ಸುಸಜ್ಜಿತ ಶಾಲೆ, ಬೋಧಕ ಸಿಬ್ಬಂದಿ, ಪಠ್ಯಪುಸ್ತಕ, ಸಮವಸ್ತ್ರ ಹೀಗೆ ಹಲವು ಸೌಲಭ್ಯ ನೀಡಿ ಪ್ರೋತ್ಸಾಹ ನೀಡುತ್ತಿದೆ. ಆದರೆ, ಮೂಲ ಸೌಲಭ್ಯ ನೀಡಬೇಕಾದ ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಹಾಗೂ ಚುನಾಯಿತ ಜನಪ್ರತಿನಿಧಿಗಳು, ಮುಖಂಡರ ನಿರ್ಲಕ್ಷ್ಯದಿಂದಾಗಿ ಮಕ್ಕಳು ದಿನಾಲೂ ಚರಂಡಿ ನೀರಿನಲ್ಲಿ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ತಮ್ಮ ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆನ್ನುವ ಭೀತಿ ಪಾಲಕ, ಪೋಷಕರಿಗೆ ಉಂಟಾಗಿದೆ.

ಗ್ರಾಮದಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಈ ಸಿಮೆಂಟ್ ರಸ್ತೆಯು ತಗ್ಗು ಪ್ರದೇಶದಲ್ಲಿ ನಿರ್ಮಾಣ ಮಾಡಿರುವುದರಿಂದ ಚರಂಡಿ ನೀರೆಲ್ಲ ರಸ್ತೆಯ ಮೇಲೆ ನಿಂತು ಪಾಚಿಗಟ್ಟಿ ಕೆರೆಯಂತೆ ಭಾಸವಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಮಕ್ಕಳಿಗೆ ಪ್ರತಿನಿತ್ಯ ಸಂಕಷ್ಟ ಎನಿಸುತ್ತದೆ. ಪ್ರತಿದಿನ ಒಬ್ಬರಿಲ್ಲೊಬ್ಬರು ವಿದ್ಯಾರ್ಥಿಗಳು ಕಾಲು ಜಾರಿ ಚರಂಡಿ ನೀರಿನಲ್ಲಿ ಬೀಳುವುದು ಮತ್ತು ಕಾಲುಗಳಿಗೆ ಚರಂಡಿ ನೀರು ತಾಗಿ ಸೋಂಕು ತಗುಲುವುದು ಸಾಮಾನ್ಯವಾಗಿದೆ. ಪಾಲಕರು ಮಕ್ಕಳ ಆರೋಗ್ಯದ ದುಷ್ಪರಿಣಾಮ ಕುರಿತು ಆತಂಕ ಎದುರಿಸುತ್ತಿದ್ದಾರೆ. ಆದಷ್ಟು ಬೇಗನೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಮಕ್ಕಳ ಪಾಲಕರಾದ ಮಲ್ಲಿನಾಥ ಬಾದನ್, ವೀರಣ್ಣ ವಡ್ಡಿ, ಅಶೋಕುಮಾರ ನಾರಂಜಿ, ಪ್ರಭು ರಾಚಂಟ್ಟಿ, ಗುರುನಾಥ ಜಡಗಿ, ಉದಯಕುಮಾರ್ ಸ್ವಾಮಿ, ಮಂಜುನಾಥ ಜಡಗಿ, ಅನಿಲಕುಮಾರ ಕೇಶಟ್ಟಿ ಎಚ್ಚರಿಸಿದ್ದಾರೆ.

ಕೊಳಚೆ ಚರಂಡಿ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದೋ ಅಥವಾ ಬೇಡವೋ ಎನ್ನುವುದು ತಿಳಿಯುತ್ತಿಲ್ಲ. ಇದರ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತಿ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿ ಪ್ರಯೋಜನವಾಗಿಲ್ಲ.

<ಚನ್ನಮ್ಮ ವಜ್ರಗಾಂವ್, ಸ್ಥಳೀಯ ನಿವಾಸಿ

ಚರಂಡಿ, ಶೌಚಾಲಯದ ನೀರು ಅಲ್ಲದೆ ಮಳೆ ಬಂದಾಗ ಹೊಲಗಳಲ್ಲಿನ ನೀರು ಬಂದು ನಿಲ್ಲುತ್ತಿರುವುದರಿಂದ ಪ್ರತಿನಿತ್ಯ ಮಕ್ಕಳಿಗೆ ತೊಂದರೆ ಆಗುತ್ತಿದೆ. ಈ ಸಮಸ್ಯೆಯ ಬಗೆಹರಿಸುವಂತೆ ಒತ್ತಾಯಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ.

<ಉದಯಕುಮಾರ್ ಮಠಪತಿ, ಎಸ್ಡಿಎಂಸಿ ಅಧ್ಯಕ್ಷ

ದಿನಾಲೂ ಶಾಲೆಗೆ ಚರಂಡಿ ನೀರಿನಲ್ಲೇ ನಡೆದುಕೊಂಡು ಹೋಗಬೇಕು. ಎಷ್ಟೋ ಸಲ ಚರಂಡಿ ನೀರಿನಲ್ಲಿ ಬಿದ್ದು ಮೈಯೆಲ್ಲ ಕೊಳೆ ಮಾಡಿಕೊಂಡಿದ್ದೇವೆ. ಹಾಗೇ ಇದರಿಂದಾಗಿ ಹಲವು ಬಾರಿ ಶಾಲೆಗೂ ಹೋಗಿಲ್ಲ.

<ದಾನೇಶ್ವರಿ, ವಿದ್ಯಾರ್ಥಿನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಭೀಮರಾಯ ಕುಡ್ಡಳ್ಳಿ ಕಾಳಗಿ

contributor

Similar News