×
Ad

ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲು ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡ ಬೀದರ್ ರೈತ

Update: 2026-01-12 13:39 IST

ಬೀದರ್: ಬಿಸಿಲು ನಾಡು ಎಂದೇ ಖ್ಯಾತಿ ಪಡೆದ ಉತ್ತರ ಕರ್ನಾಟಕ ಭಾಗದ ಬೀದರಿನಲ್ಲಿ ಮೊಟ್ಟ ಮೊದಲ ಬಾರಿಗೆ ರೈತರೊಬ್ಬರು ಸ್ಟ್ರಾಬೆರಿ ಬೆಳೆದು ಆದಾಯ ಗಳಿಸುವ ಮೂಲಕ ಯಶಸ್ಸು ಕಂಡಿದ್ದಾರೆ.

ಮೂಲತಃ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಡೋದಾ ಗ್ರಾಮದವರಾದ ರೈತ ವೈಜಿನಾಥ್ ನಿಡೋದಾ ಅವರು, ಜಿಲ್ಲೆಯ ಕಮಠಾಣಾ ಗ್ರಾಮದ ತಮ್ಮ ಹೊಲದಲ್ಲಿ ಸ್ಟ್ರಾಬೆರಿ ಬೆಳೆದು ಯಶಸ್ಸು ಕಂಡ ಪ್ರಗತಿಪರ ರೈತರಾಗಿದ್ದಾರೆ. ಸ್ಟ್ರಾಬೆರಿ ಶೀತ ಪ್ರದೇಶದಲ್ಲಿ ಬೆಳೆಯುವ ಅತೀ ನಾಜೂಕಿನ ಬೆಳೆಯಾಗಿದ್ದರಿಂದ ಬರೀ ಬಿಸಿಲು ಇರುವ ಉತ್ತರ ಕರ್ನಾಟಕ ಭಾಗದಲ್ಲಿ ಸ್ಟ್ರಾಬೆರಿ ಬೆಳೆಯುವ ಯೋಚನೆ ಕೂಡ ಯಾರು ಮಾಡಲಿಕ್ಕಿಲ್ಲ. ಆದರೆ ರೈತ ವೈಜಿನಾಥ್ ಅವರು ಬಾಗಲಕೋಟೆಯಲ್ಲಿ ರೈತರೊಬ್ಬರು ಸ್ಟ್ರಾಬೆರಿ ಬೆಳೆದದ್ದು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದರು. ಬಾಗಲಕೋಟೆಯ ವಾತಾವರಣಕ್ಕಿಂತ ಬೀದರ್ ವಾತಾವರಣ ಚೆನ್ನಾಗಿದೆ. ಹಾಗಾಗಿ ನಮ್ಮಲ್ಲಿಯೂ ಸ್ಟ್ರಾಬೆರಿ ಬೆಳೆಯಬಹುದು ಎಂದು ಯೋಚಿಸಿ, ಪ್ರಾಯೋಗಿಕವಾಗಿ ಮೊದಲಿಗೆ ಅರ್ಧ ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಿದ್ದರು.

2024ರಲ್ಲಿ ಮೊಟ್ಟ ಮೊದಲಿಗೆ ಪ್ರಾಯೋಗಿಕವಾಗಿ ಇವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ 3 ಲಕ್ಷ ರೂ. ಹಣ ಭರಿಸಿ ಸ್ಟ್ರಾಬೆರಿ ಬೆಳೆಯ ಪ್ಲಾಂಟೇಷನ್ ಮಾಡುತ್ತಾರೆ. ಈ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ಸ್ಟ್ರಾಬೆರಿಯಿಂದ ಬಂದ ಹಣ 6 ಲಕ್ಷ ರೂ. ಆಗಿತ್ತು. ಎಂದರೆ 3 ಲಕ್ಷ ರೂ. ಖರ್ಚು ಹೋಗಿ 3 ಲಕ್ಷ ರೂ. ಆದಾಯ ಗಳಿಸುತ್ತಾರೆ. ಹಾಗಾಗಿ ಸ್ಟ್ರಾಬೆರಿ ಬೆಳೆಯಲು ವಾತಾ ವರಣ ಹಾಗೂ ಅದಕ್ಕೆ ತಕ್ಕಂತೆ ಮಣ್ಣಿನ ಫಲವತ್ತತೆ ನಮ್ಮಲ್ಲಿ ಇದೆ ಎಂದು ಗಮನಿಸಿದ ಅವರು 2025 ರಲ್ಲಿ 2 ಎಕರೆ ಜಮೀನಿನಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡುತ್ತಾರೆ. ಇದೀಗ ಆ ಪ್ಲಾಂಟೇಷನ್ ಮಾಡಿದ ಸ್ಟ್ರಾಬೆರಿ ಬೆಳೆಯ ಫಸಲು ಬಂದಿದ್ದು, ದಿನಾಲೂ ಸುಮಾರು 15 ರಿಂದ 16 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.

2024ರಲ್ಲಿ ಅರ್ಧ ಎಕರೆ ಭೂಮಿಯಲ್ಲಿ 10 ಸಾವಿರ ಸ್ಟ್ರಾಬೆರಿ ಸಸಿಗಳು ಪ್ಲಾಂಟೇಷನ್ ಮಾಡಿದ್ದೆ. ಅದರಲ್ಲಿ 3 ಸಾವಿರ ಸಸಿಗಳು ಎಂದರೆ ಶೇ.30ರಷ್ಟು ಸಸಿಗಳು ಸತ್ತು ಹೋಗಿದ್ದವು. ಹಾಗಾಗಿ ಹೋದ ವರ್ಷ ಎಲ್ಲಿ ತಪ್ಪಿದ್ದೆವು ಎಂದು ಅರಿತು ಈ ವರ್ಷ ಸುಧಾರಿಸಿಕೊಂಡೆವು. ಈ ವರ್ಷ ಬರೀ ಶೇ.5ರಷ್ಟು ಮಾತ್ರ ಸಸಿಗಳ ಡೆತ್ ರೇಟ್ ಇದೆ. ಮುಂದಿನ ದಿನ ಗಳಲ್ಲಿ ಈ ಡೆತ್ ರೇಟ್ ಕೂಡ ತಪ್ಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆಯ ಮಾತುಗಳನ್ನಾಡುತ್ತಾರೆ.

ಈ ವರ್ಷ ಎರಡು ಎಕರೆ ಭೂಮಿ ಯಲ್ಲಿ 30 ಸಾವಿರ ಸ್ಟ್ರಾಬೆರಿ ಸಸಿಗಳನ್ನು ಪ್ಲಾಂಟೇಷನ್ ಮಾಡಿದ್ದೇವೆ. ಪ್ರತಿ ಸಸಿಗೆ 13 ರೂ. ನಂತೆ 3.9 ಲಕ್ಷ ರೂ. ಬರೀ ಸಸಿ ತರುವುದಕ್ಕೆ ವೆಚ್ಚವಾಗಿದೆ. ಎಕರೆಗೆ 4 ರಿಂದ 5 ಲಕ್ಷ ರೂ. ವೆಚ್ಚದಲ್ಲಿ ಈ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಿದ್ದೇವೆ. ಶೇ. 90 ರಷ್ಟು ಸಾವಯವ ಪದ್ಧತಿ ಅಳವಡಿಸಿದ್ದರಿಂದ ಖರ್ಚು ಕಡಿಮೆಯಾಗಿದೆ. ಎರಡು ಎಕರೆ ಜಮೀನಿನಲ್ಲಿ ಒಟ್ಟು 10 ಲಕ್ಷ ರೂ. ಖರ್ಚಾದರೂ ಇದಕ್ಕೆ ಒಂದು ಪಟ್ಟು ಹೆಚ್ಚು ಹಣ (20ಲಕ್ಷ ರೂ.) ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ ಅವರು, 10 ಲಕ್ಷ ರೂ. ವೆಚ್ಚ ಕಳೆದರೂ ಕೂಡ 10 ಲಕ್ಷ ರೂ. ಆದಾಯವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಸ್ಟ್ರಾಬೆರಿ ಬೆಳೆಗೆ ನಮ್ಮ ಬೀದರ್ ಜಿಲ್ಲೆಯ ವಾತಾವರಣ, ಮಣ್ಣು, ನೀರು ಉತ್ತಮವಾಗಿದೆ. ಹಾಗಾಗಿ ಜಿಲ್ಲೆಯ ಯಾವುದೇ ರೈತರು ಈ ಬೆಳೆ ಬೆಳೆಯಬಹುದು. ಸ್ಟ್ರಾಬೆರಿ ಬೆಳೆಯಲು 15 ಡಿಗ್ರಿ ಯಿಂದ 30 ಡಿಗ್ರಿ ವರೆಗೆ ತಾಪಮಾನ ಇರಬೇಕು. ಈ ವರ್ಷ ನಮ್ಮ ಜಿಲ್ಲೆಯಲ್ಲಿ ತುಂಬಾ ಮಳೆಯಾಗಿದ್ದರಿಂದ ಈ ಚಳಿಗಾಲದಲ್ಲಿ ಕೆಲ ದಿನ 7 ಡಿಗ್ರಿ ತಾಪಮಾನ ಬಂದಿತ್ತು. ಹಾಗಾಗಿ ನಮ್ಮ ಸ್ಟ್ರಾಬೆರಿ ಇಳುವರಿಯಲ್ಲಿ ಸ್ವಲ್ಪ ಕುಂಠಿತವಾಗಿತ್ತು. ಆದರೆ ಈವಾಗ ಪರವಾಗಿಲ್ಲ, ವಾತಾವರಣ ಚೆನ್ನಾಗಿದೆ. ಹಾಗಾಗಿ ಇಳುವರಿ ಚೆನ್ನಾಗಿ ಬರುತ್ತಿದೆ ಎಂದು ಅವರು ಹೇಳುತ್ತಾರೆ.

ಭಾರತದಲ್ಲಿ ‘ಮದರ್ ಆಫ್ ಸ್ಟ್ರಾಬೆರಿ’ ಎಂದು ಮಹಾರಾಷ್ಟ್ರದ ‘ಮಹಾಬಲೇಶ್ವರ್’ ನಗರಕ್ಕೆ ಕರೆಯುತ್ತಾರೆ. ಸ್ಟ್ರಾಬೆರಿ ಬೆಳೆಗೆ ಅಲ್ಲಿನ ವಾತಾವರಣ ತುಂಬಾ ಚೆನ್ನಾಗಿರುವುದರಿಂದ ಅಲ್ಲಿ ಹೆಚ್ಚಾಗಿ ಸ್ಟ್ರಾಬೆರಿ ಬೆಳೆಯುತ್ತಾರೆ. ನಾವು ಕೂಡ ಮಹಾಬಲೇಶ್ವರ್‌ದಿಂದಲೇ ಸಸಿಗಳು ತಂದಿದ್ದೇವೆ. ಇವಾಗ ಮಹಾಬಲೇಶ್ವರ್ ಕ್ಕಿಂತಲೂ ಚೆನ್ನಾಗಿ ನಮ್ಮಲ್ಲಿ ಫಸಲು ಬರುತ್ತಿದೆ. ಉತ್ತರ ಭಾರತದ ತಂಪು ಪ್ರದೇಶಗಳಲ್ಲಿಯೂ (ಹಿಮಾಚಲ, ಕಾಶ್ಮೀರ) ಸ್ಟ್ರಾಬೆರಿ ಬೆಳೆಯುತ್ತಾರೆ. ಉತ್ತರ ಭಾರತದ ಕಡೆಗೆ ಹೋಗಿ ಅಲ್ಲಿ ಬೆಳೆದ ಸ್ಟ್ರಾಬೆರಿ ಬಗ್ಗೆ ಅಧ್ಯಯನ ಮಾಡಿ, ನಮ್ಮಲ್ಲಿ ಏನು ಬದಲಾವಣೆ ಮಾಡಬೇಕು ಅದು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಸೆ.15 ರಿಂದ ಅ.15 ರಲ್ಲಿ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡುವುದಕ್ಕೆ ಒಳ್ಳೆಯ ಸಮಯವಾಗಿರುತ್ತದೆ. ಯಾಕೆಂದರೆ ಚಳಿಗಾಲ ಪ್ರಾರಂಭವಾಗುವ ಮುಂಚೆ ಸ್ಟ್ರಾಬೆರಿ ಪ್ಲಾಂಟೇಷನ್ ಮಾಡಬೇಕು. ಕಾರಣ, ಚಳಿಗಾಲದಲ್ಲಿಯೇ ಅದು ಹೂ ಮತ್ತು ಹಣ್ಣು ಬಿಡುವುದಕ್ಕೆ ಪ್ರಾರಂಭ ಮಾಡುತ್ತದೆ. ಚಳಿಗಾಲ ಎಷ್ಟು ದಿವಸ ಇರುತ್ತದೆಯೋ ಅಷ್ಟು ದಿವಸ ಅದು ಒಳ್ಳೆಯ ಹಣ್ಣುಗಳು ಬಿಡುತ್ತದೆ. ಮಾರ್ಚ್ ತಿಂಗಳಲ್ಲಿ ಬೇಸಿಗೆ ಪ್ರಾರಂಭವಾಗುವುದರಿಂದ ಇಳುವರಿ ಕಡಿಮೆಯಾಗಿತ್ತದೆ ಎಂದು ಅವರು ವಿವರಿಸುತ್ತಾರೆ.

ವೈಜಿನಾಥ್ ನಿಡೋದಾ ಅವರು ಜಿಲ್ಲಾ ಪಂಚಾಯತ್‌ನಲ್ಲಿ ಸರಕಾರಿ ಹುದ್ದೆಯಲ್ಲಿದ್ದರು. ಇವರಿಗೆ ಮೊದಲಿನಿಂದಲೇ ಕೃಷಿಯಲ್ಲಿ ಆಸಕ್ತಿ ಇತ್ತು. ಎರಡು ವರ್ಷದ ಹಿಂದೆ ಸರಕಾರಿ ಹುದ್ದೆಯಿಂದ ನಿವೃತ್ತಿ ಪಡೆದ ಇವರು ಸಂಪೂರ್ಣವಾಗಿ ಕೃಷಿ ಮಾಡುವುದರಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಇವರ ಮಗನೊಬ್ಬ ಸಿವಿಲ್ ಇಂಜಿನಿಯರ್ ಪದವೀಧರನಾಗಿದ್ದರು ಕೂಡ ಕೃಷಿಯಲ್ಲಿನ ಆಸಕ್ತಿಯಿಂದ ಕೃಷಿ ಕೆಲಸದಲ್ಲಿಯೇ ತೊಡಗಿದ್ದಾರೆ. ಹಾಗೆಯೇ ವೈಜಿನಾಥ್ ನಿಡೋದಾ ಅವರ ಪತ್ನಿ ಹಾಗೂ ಇನ್ನೊಬ್ಬ ಮಗ ಕೂಡ ಇವರ ಕೃಷಿ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ.

ಸಾವಯವ ಕೃಷಿ ಪದ್ಧತಿಯೇ ಬೇಕು: ಈ ಸ್ಟ್ರಾಬೆರಿ ಬೆಳೆಗೆ ಸಾವಯವ ಕೃಷಿ ಪದ್ಧತಿಯೇ ಬೇಕು. ಕೆಮಿಕಲ್ ಹೆಚ್ಚಾಗಿ ಈ ಬೆಳೆಗೆ ನಡೆಯುವುದಿಲ್ಲ. ಆದ್ದರಿಂದ ನಾವು ಇದಕ್ಕೆ ಎಂಟು ದಿವಸಕ್ಕೆ ಒಂದು ಸಲ ಜೀವಾಮೃತವೆ ನೀಡುತ್ತೇವೆ. ದೇಸಿ ಗೋಮೂತ್ರ, ಸೆಗಣಿ, ದೇಸಿ ಬೆಲ್ಲ ಹಾಗೂ ಹೊಲದಲ್ಲಿನ ಒಂದಿಷ್ಟು ಮಣ್ಣು ಸೇರಿಸಿ ಒಂದು ವಾರ ಇಟ್ಟಾಗ ಅದು ಜೀವಾಮೃತವಾಗಿ ತಯಾರಾಗುತ್ತದೆ. ಅದನ್ನೇ ಈ ಬೆಳೆಗೆ ಸಿಂಪಡಣೆ ಮಾಡುತ್ತೇವೆ. ಸ್ಟ್ರಾಬೆರಿ ಬೆಳೆಯುವುದಕ್ಕೆ ಮಣ್ಣಿನ ಪರೀಕ್ಷೆ ತುಂಬಾ ಮಹತ್ವದ್ದಾಗಿರುತ್ತದೆ. ಅದಕ್ಕೆ ಮಣ್ಣಿನ ಗುಣಮಟ್ಟ 6 ರಿಂದ 6.5 ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚು ಕಡಿಮೆಯಾದರೂ ಸ್ಟ್ರಾಬೆರಿ ಬೆಳೆಯುವುದಿಲ್ಲ. ನಮ್ಮ ಹೊಲದಲ್ಲಿ ಮಣ್ಣಿನ ಗುಣಮಟ್ಟ 6.5 ಇದೆ. ಸ್ಟ್ರಾಬೆರಿ ಬೆಳೆಯುವುದಕ್ಕೆ ನಮ್ಮ ಜಿಲ್ಲೆಯ ಮಣ್ಣು ಅತ್ತ್ಯುತ್ತಮವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೊಲದಲ್ಲಿಯೇ ವೆದರ್ ರಿಪೋರ್ಟ್ ಯಂತ್ರ: ಅವರ ಹೊಲದಲ್ಲಿಯೇ ವೆದರ್ ರಿಪೋರ್ಟ್ ಯಂತ್ರ ಅಳವಡಿಸಲಾಗಿದ್ದು, ಆ ವೆದರ್ ರಿಪೋರ್ಟ್ ಯಂತ್ರವು ಸ್ಟ್ರಾಬೆರಿ ಬೆಳೆಗೆ ಎಷ್ಟು ಪ್ರಮಾಣದ ನೀರು ಬೇಕು, ಎಷ್ಟು ತೇವಾಂಶ ಇದೆ, ಮಳೆ ಬರುವ ಮುನ್ಸೂಚನೆ ಎಲ್ಲವೂ ತಿಳಿಸುತ್ತದೆ.

ನನ್ನ ಪ್ರಯೋಗ ನೋಡಿ ಬೇರೆ ರೈತರು ಕೂಡ ಸ್ಟ್ರಾಬೆರಿ ಬೆಳೆಯಬಹುದು. ಆದರೆ ಇದಕ್ಕೆ ವೆಚ್ಚ ಹೆಚ್ಚಾಗಿರುತ್ತದೆ. ಹಾಗಾಗಿ ಬೆಳೆ ಬಾರದೇ ಇದ್ದರೆ ರೈತರಿಗೆ ನಷ್ಟವಾಗಬಾರದು. ಯಾರಿಗಾದರೂ ಇದರ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ನನ್ನ ಮೊಬೈಲ್ ಸಂಖ್ಯೆ 9242982494ಗೆ ಕರೆ ಮಾಡಬಹುದು.

- ವೈಜೀನಾಥ್ ನಿಡೋದಾ, ಸ್ಟ್ರಾಬೆರಿ ಬೆಳೆದ ರೈತ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಶೇನ ಫುಲೆ

contributor

Similar News