ಕರಾವಳಿ ಪ್ರವಾಸೋದ್ಯಮ : ಒಳನಾಡಿನ ಜಲಸಾರಿಗೆಯ 6 ಬೃಹತ್ ಯೋಜನೆಗಳ ಪ್ರಸ್ತಾವ
ಪಿಪಿಪಿ ಮಾದರಿಯಲ್ಲಿ 4,029.79 ಕೋಟಿ ರೂ. ಹೂಡಿಕೆ
ಸಾಂದರ್ಭಿಕ ಚಿತ್ರ PC: freepik
ಮಂಗಳೂರು : ಕರಾವಳಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರುತ್ತಿವೆ. ಐಟಿ ಕ್ಷೇತ್ರದ ಜೊತೆಗೆ ಕರಾವಳಿ ಬೀಚ್‌ಗಳನ್ನು ಒಳಗೊಂಡು ಪ್ರವಾಸೋದ್ಯಮಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯ ಸರಕಾರ ಮುಂದಾಗಿದೆ. ಕರ್ನಾಟಕ ಜಲಸಾರಿಗೆ ಮಂಡಳಿ (ಮೆರಿಟೈಮ್ ಬೋರ್ಡ್) ಮೂಲಕ ಒಳನಾಡು ಜಲಸಾರಿಗೆ ಸಂಬಂಧಿಸಿ ಆರು ಪ್ರಮುಖ ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ ಜಾರಿಗೆ ತರಲು ಸರಕಾರ ಉದ್ದೇಶಿಸಿದೆ. ಇದಕ್ಕಾಗಿ ಒಟ್ಟು 4,029.79 ಕೋಟಿ ರೂ. ಹೂಡಿಕೆಯ ಅಂದಾಜುಪಟ್ಟಿ ಸಿದ್ಧಪಡಿಸಲಾಗಿದ್ದು, ಮಂಗಳೂರಿನಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲಿ ಈ ಯೋಜನೆಗಳನ್ನು ಪ್ರಕಟಿಸಲಾಗಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಕೆ.ವಿ.ತ್ರಿಲೋಕ್‌ಚಂದ್ರ ಮಂಗಳೂರಿನಲ್ಲಿ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಪ್ರಸ್ತಾವಿತ ಯೋಜನೆಗಳ ವಿವರವನ್ನು ಹೂಡಿಕೆದಾರರ ಮುಂದಿರಿಸಿದ್ದಾರೆ. ಇದರಲ್ಲಿ ಮಂಗಳೂರು ವಾಟರ್ ಮೆಟ್ರೋ, ಮಂಗಳೂರು ಅಂತರ್‌ರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು, ಹೊನ್ನಾವರ ಹಳೆ ಬಂದರ್‌ನಲ್ಲಿ ಒಳನಾಡು ಪ್ರವಾಸೋದ್ಯಮ ಬಂದರು ಅಭಿವೃದ್ಧಿ, ಮಂಗಳೂರಿನಿಂದ ಮರವಂತೆಗೆ ಕರಾವಳಿ ಪ್ರಯಾಣಿಕ ದೋಣಿ ಸೇವೆಗಳ ಅಭಿವೃದ್ಧಿ ಸೇರಿ ಕರಾವಳಿಯಲ್ಲಿ ಆರು ಪ್ರಮುಖ ಯೋಜನೆ ಗಳನ್ನು ಉಲ್ಲೇಖಿಸಲಾಗಿದೆ.
ಮಂಗಳೂರು ವಾಟರ್ ಮೆಟ್ರೋ ಯೋಜನೆ
ಪ್ರಸ್ತಾವಿತ 180 ಕೋಟಿ ರೂ.ಗಳ ಮಂಗಳೂರು ವಾಟರ್ ಮೆಟ್ರೋ ಯೋಜನೆಯು ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಜಲಮೂಲಗಳನ್ನು ಆಧರಿಸಿ ನಡೆಯಲಿದೆ. ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಮರವೂರು ಸೇತುವೆಯಿಂದ ಜಪ್ಪಿನಮೊಗರು ಸೇತುವೆಯನ್ನು ಗುರುಪುರ ಮತ್ತು ನೇತ್ರಾವತಿ ನದಿಗಳನ್ನು ಹಳೆ ಮಂಗಳೂರು ಬಂದರಿನ ಮೂಲಕ ಸಂಪರ್ಕಿಸುವ ಯೋಜನೆ ಇದಾಗಿದೆ. 10 ಎಕರೆ ಪ್ರದೇಶದಲ್ಲಿ ನಡೆಯಲಿರುವ ಈ ಯೋಜನೆಯು ಮಂಗಳೂರಿನಲ್ಲಿ ನಗರ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಬಸ್ ಹಾಗೂ ಇತರ ಸಾರ್ವಜನಿಕ ಸಂಚಾರದ ಮೋಟರೀಕೃತ ಸಾರಿಗೆಗೆ ಪರ್ಯಾಯವಾಗಿ ಜಲಸಾರಿಗೆಯನ್ನು ಅಭಿವೃದ್ಧಿಗೊಳಿಸುವುದಾಗಿದೆ. ಈ ಮೂಲಕ ಬಹು ಮಾದರಿ ಸಾರಿಗೆ ಜಾಲವನ್ನು ವ್ಯವಸ್ಥೆ ಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ.
ಸೋಮೇಶ್ವರದಲ್ಲಿ ಅಂತರ್‌ರಾಷ್ಟ್ರೀಯ ಕ್ರೂಸ್- ಪ್ರವಾಸೋದ್ಯಮ ಬಂದರು
ಮಹತ್ವದ ಜಲಸಾರಿಗೆ ಯೋಜನೆಗಳಲ್ಲಿ ಮಂಗಳೂರು ಅಂತರ್‌ರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರು ಸ್ಥಾಪನೆ ಒಂದಾಗಿದ್ದು, ಉಳ್ಳಾಲ ಸೋಮೇಶ್ವರದಲ್ಲಿ ಈ ಬಂದರು 3,400 ಕೋಟಿ ರೂ. ಯೋಜನ ಮೊತ್ತದಲ್ಲಿ ಆರಂಭಿಸಲು ರೂಪುರೇಖೆ ಸಿದ್ಧಪಡಿಸಲಾಗಿದೆ. ಆರು ಬರ್ತ್‌ಗಳೊಂದಿಗೆ ಪ್ರಯಾಣಿಕ ಹಡಗು ಮತ್ತು ಪ್ರವಾಸೋದ್ಯಮ ಬಂದರು ನಿರ್ಮಾಣದ ಯೋಜನೆ ಇದಾಗಿದೆ. ಕರ್ನಾಟಕ ಕಡಲ ಸಂಪರ್ಕ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮೂಲಕ ಈ ಪ್ರದೇಶದ ಕಡಲ ತೀರದ ವೈಶಿಷ್ಟ್ಯಗಳನ್ನು ಬಳಸಿಕೊಳ್ಳುವ ಮೂಲಕ ಜಲಾನಯನ ಪ್ರದೇಶವನ್ನು ಕ್ರೂಸ್ ಪ್ರವಾಸೋದ್ಯಮದ ಕೇಂದ್ರವಾಗಿ ಪರಿವರ್ತಿಸುವ ಉದ್ದೇಶ ಈ ಅಂತರ್‌ರಾಷ್ಟ್ರೀಯ ಕ್ರೂಸ್ ಬಂದರು ಯೋಜನೆಯದ್ದಾಗಿದೆ.
ಹೊನ್ನವಾರ ಹಳೆ ಬಂದರಿನಲ್ಲಿ ಒಳನಾಡು ಪ್ರವಾಸೋದ್ಯಮ ಬಂದರು ಅಭಿವೃದ್ಧಿ
48 ಕೋಟಿ ರೂ. ವೆಚ್ಚದ ಈ ಯೋಜನೆ ಶರಾವತಿ ನದಿ ದಡದ ಹೊನ್ನಾವರ ಬಂದರು ಪ್ರದೇಶವನ್ನು ಒಳನಾಡಿನ ಪ್ರವಾಸೋದ್ಯಮ ಬಂದರಾಗಿ ಪರಿವರ್ತಿಸುವುದಾಗಿದೆ. ಜೋಗ ಜಲಪಾತದಲ್ಲಿ ಕೊನೆಗೊಳ್ಳುವ ಶರಾವತಿ ನದಿಯನ್ನು ಒಳಗೊಂಡು ಅರಣ್ಯ ಮತ್ತು ಜಲಾಶಯ ಮಾರ್ಗಗಳನ್ನು ಗೇರುಸೊಪ್ಪ ಸೇತುವೆ ಮೂಲಕ ಸಂಪರ್ಕಿಸುವ ಯೋಜನೆ ಮೂರು ಎಕರೆ ವ್ಯಾಪ್ತಿಯನ್ನು ಹೊಂದಿದೆ.
ಮಂಗಳೂರಿನಿಂದ ಮರವಂತೆಗೆ ಪ್ರಯಾಣಿಕ ದೋಣಿ ಸೌಲಭ್ಯ
ಕರಾವಳಿಯ ಎರಡು ಜಿಲ್ಲೆಗಳನ್ನು ಜಲಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಮಂಗಳೂರು- ಮರವಂತೆ ಪ್ರಯಾಣಿಕ ದೋಣಿ ಸೌಲಭ್ಯ ಯೋಜನೆ 37.79 ಕೋಟಿ ರೂ.ಗಳದ್ದಾಗಿದೆ. 110 ಕಿ.ಮೀ.ಗಳ ಜಲಸಾರಿಗೆ ಮಾರ್ಗವು ಹಳೆ ಮಂಗಳೂರು ಬಂದರು, ಹೆಜಮಾಡಿ, ಮಲ್ಪೆ, ಕೋಟ ಮತ್ತು ಮರವಂತೆ ಸೇರಿ ಐದು ಕಡೆ ನಿಲುಗಡೆಗಳನ್ನು ಹೊಂದಲಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ವಾಹನ ದಟ್ಟಣೆಗೆ ಪರ್ಯಾಯವಾಗಿ ಈ ಮಾರ್ಗವು ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಸಮಗ್ರ ಕರಾವಳಿ ಪ್ರವಾಸೋದ್ಯಮ ಮತ್ತು ಕೋಟ ಪಡುಕೆರೆ ಮರೀನಾ ಅಭಿವೃದ್ಧಿ
350 ಕೋಟಿ ರೂ. ಯೋಜನಾ ವೆಚ್ಚದ ಈ ಯೋಜನೆಯ ಮೂಲಕ ಉಡುಪಿಯ ಕೋಟ ಪಡುಕೆರೆಯನ್ನು ಸಮಗ್ರ ಕರಾವಳಿ ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸುವುದಾಗಿದೆ. ವಿಶ್ವದರ್ಜೆಯ ಜಲಸಾರಿಗೆ, ವಿಶ್ರಾಂತಿ ಮತ್ತು ಆತಿಥ್ಯ ಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ಈ ಪ್ರದೇಶಕ್ಕೆ ದೀರ್ಘಕಾಲೀನ ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ.
ಉತ್ತರ ಕನ್ನಡದ ಕಾಳಿ ನದಿಯಲ್ಲಿ ಮರೀನಾ ಅಭಿವೃದ್ಧಿ
ಕರ್ನಾಟಕದ ಉತ್ತರ ಕರಾವಳಿ ಭಾಗದಲ್ಲಿ ಪ್ರಾದೇಶಿಕ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಜೊತೆಗೆ ಆರಾಮದಾಯಕ ದೋಣಿ ವಿಹಾರ, ಸಮುದ್ರ ಪ್ರವಾಸೋದ್ಯಮ ಮತ್ತು ಪರಿಸರ ಸ್ನೇಹಿ ಜಲ ಆಧರಿತ ಚಟುವಟಿಕೆಗಳನ್ನು ಉತ್ತೇಜಿಸುವ ದೃಷ್ಟಿಕೋನವನ್ನು ಹೊಂದಿರುವ ಈ ಯೋಜನೆ ಕಾರವಾರದ ಕಾಳಿ ನದಿಯಲ್ಲಿ ವಿಶ್ವದರ್ಜೆಯ ಮರೀನಾ ಮತ್ತು ಜಲಮುಖಿ ಮನೋರಂಜನಾ ಕೇಂದ್ರವನ್ನು ಅಭಿವೃದ್ಧಿಪಡಿಸುವುದಾಗಿದೆ. 14 ಕೋಟಿ ರೂ.ಗಳಲ್ಲಿ ಈ ಯೋಜನೆ ಜಾರಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ.
ಕರಾವಳಿಯ ಮೂರು ಜಿಲ್ಲೆಗಳನ್ನು ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಬಹು ಉತ್ಪನ್ನ ಗಮ್ಯ ಸ್ಥಾನವಾಗಿ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿ (ಮೆರಿಟೈಮ್ ಬೋರ್ಡ್)ಯು ಒಳನಾಡು ಪ್ರವಾ ಸೋದ್ಯಮ (313.5 ಕೋಟಿ ರೂ. ಯೋಜನಾ ಮೊತ್ತ), ಕರಾವಳಿ ಪ್ರವಾಸೋದ್ಯಮ ಮತ್ತು ಒಳನಾಡು ಜಲಸಾರಿಗೆ ಸಂಬಂಧಿಸಿದ ಯೋಜನೆಗಳು (4,029.79 ಕೋಟಿ ರೂ. ಯೋಜನಾ ಮೊತ್ತ) ಹಾಗೂ ಇತರ ಪ್ರವಾಸೋದ್ಯಮದ ಉಪಕ್ರಮಗಳು (22.95 ಕೋಟಿ ರೂ. ಯೋಜನಾ ಮೊತ್ತ) ಸೇರಿ ಒಟ್ಟು 4,366.24 ಕೋಟಿ ರೂ. ಯೋಜನಾ ಮೊತ್ತದಲ್ಲಿ ಮೂರು ಹಂತದ ಯೋಜನೆಗಳನ್ನು ರೂಪಿಸಲಾಗಿದೆ.
-ತ್ರಿಲೋಕ್‌ಚಂದ್ರ,
ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ