ಕಲಬುರಗಿ ನಗರದಲ್ಲಿ ಗುಂಡಿಗಳದ್ದೇ ದರ್ಬಾರ್!
ಡಿಸಿ ಕಚೇರಿ ಎದುರೇ ತೆರೆದ ಚರಂಡಿ: ಅಸ್ತವ್ಯಸ್ತ ಕಾಮಗಾರಿ
ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರ ಭಾಗ ಎನಿಸಿರುವ ಕಲಬುರಗಿ ನಗರವು ಹಲವು ಸಮಸ್ಯೆಗಳಿಂದ ಬಳಲುತ್ತಿದೆ ಎಂದು ಹೇಳಿದರೆ ತಪ್ಪಿಲ್ಲ. ನಗರದ ಯಾವುದೇ ರಸ್ತೆಗಳಿಗೆ ಹೋದರೂ ಅಲ್ಲಿ ತಗ್ಗು ಗುಂಡಿಗಳು ಕಾಣುವುದಂತು ಖಂಡಿತ. ಇಲ್ಲಿ ನಗರದ ಪ್ರಮುಖ ರಸ್ತೆಗಳ ಮಧ್ಯೆಯೇ ದೊಡ್ಡ ತಗ್ಗುಗುಂಡಿಗಳು ನಿರ್ಮಾಣವಾಗಿವೆ. ರಸ್ತೆ ಪಕ್ಕ ಸಂಚರಿಸುವ ಪಾದಚಾರಿ, ವಾಹನ ಸವಾರರಿಗೆ ಗುಂಡಿಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ.
ನಗರದ ಪ್ರಮುಖ ರಸ್ತೆಗಳಾದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾರ್ಕೆಟ್, ಶ್ರೀ ಶರಣಬಸವೇಶ್ವರ ದೇವಸ್ಥಾನದ ಎದುರುಗಡೆ, ಎನ್.ವಿ ಕಾಲೇಜಿನ ಎದುರುಗಡೆ, ಅನ್ನಪೂರ್ಣ ಕ್ರಾಸ್, ಜಯದೇವ್ ಆಸ್ಪತ್ರೆ ಹಿಂಭಾಗದಲ್ಲಿರುವ ಜಂಟಿ ಕೃಷಿ ನಿರ್ದೇಶಕ ಕಚೇರಿಯ ಎದುರಿಗಿರುವ ರಸ್ತೆ, ಕೇಂದ್ರ ಬಸ್ ನಿಲ್ದಾಣದಿಂದ ಎಂ.ಎಸ್.ಕೆ ಮಿಲ್, ಶಹಬಜಾರ್ ನಿಂದ ಆಳಂದ ಚೆಕ್ ಪೋಸ್ಟ್, ಸಂತ್ರಸ್ ವಾಡಿಯಿಂದ ಬಾರೆ ಹಿಲ್ಸ್(ಎಂ.ಜಿ ರೋಡ್), ಕೆಬಿಎನ್ ದರ್ಗಾ ರಸ್ತೆ. ಹೀಗೆ ನಗರದ ಯಾವೆಲ್ಲ ಕಡೆಗೆ ಹೋಗುತ್ತೀರಿ ಅಲ್ಲಲ್ಲಿ ರಸ್ತೆ ಗುಂಡಿಗಳು ಪ್ರತ್ಯಕ್ಷವಾಗುತ್ತವೆ. ಹಾಗಾಗಿ ಇಲ್ಲಿ ಗುಂಡಿಗಳದ್ದೇ ದರ್ಬಾರ್ ಎನ್ನುವಂತಿದೆ.
ಕೆಲವೊಂದು ಕಡೆ ರಸ್ತೆ ಕೆಟ್ಟು ಹೋದರೆ ಇನ್ನೊಂದು ಕಡೆಗಳಲ್ಲಿ ಮ್ಯಾನ್ ಹೋಲ್ ನಿಂದ ಉಕ್ಕಿರುವ ಚರಂಡಿ ನೀರು ರಸ್ತೆವೆಲ್ಲ ಚದುರುತ್ತದೆ. ಲಾಲ್ ಗೇರಿ ಕ್ರಾಸ್, ಸಾರ್ವಜನಿಕ ಉದ್ಯಾನವನದ ಪಕ್ಕದಲ್ಲಿರುವ ಯಾತ್ರಿಕ ನಿವಾಸ ಎದುರುಗಡೆಗಿನ ಕ್ರಾಸ್ ಸಮೀಪ ಮತ್ತಿತ್ತರ ಕಡೆಗಳಲ್ಲಿ ಚರಂಡಿ ಕಾಮಗಾರಿಯು ಅರ್ಧಕ್ಕೆ ನಿಲ್ಲಿಸಲಾಗಿದೆ, ಇದರಿಂದ ಜೀವಕ್ಕೆ ಅಪಾಯ ಕಾದಿವೆ.
ಡಿ.ಸಿ ಕಚೇರಿ ಎದುರೇ ತೆರೆದ ಚರಂಡಿ:
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸುವ ದ್ವಾರ ಬಾಗಿಲು ಪಕ್ಕದಲ್ಲೇ ಅರ್ಧಕ್ಕೆ ನಿಲ್ಲಿಸಿರುವ ಚರಂಡಿಯು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅದರ ಪಕ್ಕದಲ್ಲೇ ಎಲ್ ಆ್ಯಂಡ್ ಟಿ ಕಂಪೆನಿಯ ಕಾಮಗಾರಿಯಿಂದ ರಸ್ತೆ ಕೂಡ ಅಸ್ತವ್ಯಸ್ತವಾಗಿದೆ, ನಿತ್ಯ ಕಚೇರಿಗೆ ಬರುವ ಸಾವಿರಾರು ಸಾರ್ವಜನಿಕರಿಗೆ ಸಂಕಷ್ಟ ತಪ್ಪಿದ್ದಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಾಮಗಾರಿಗಳ ಅಸ್ತವ್ಯಸ್ತದ ಗೋಳು:
ನಗರದ ತುಂಬೆಲ್ಲ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಪ್ರಮುಖ ರಸ್ತೆಗಳ ಪಕ್ಕವೇ ಭೂಮಿಯನ್ನು ಅಗಿದು ಪೈಪ್ ಲೈನ್ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ನಗರದಾದ್ಯಂತ ಇಂತಹ ಕಾಮಗಾರಿಗಳಿಂದ ಧೂಳು ವಿಪರೀತ ಹೆಚ್ಚಳವಾಗಿದೆ, ಇಲ್ಲಿನ ಜನರು ಮುಖ ಮುಚ್ಚಿಕೊಂಡು ತಿರುಗಾಡುವ ಸ್ಥಿತಿಗೆ ಬಂದು ಬಿಟ್ಟಿದ್ದಾರೆ.
ಕೆಟ್ಟು ಹೋದ ರಿಂಗ್ ರಸ್ತೆ
ನಗರದಲ್ಲಿ ಅಷ್ಟೇ ಅಲ್ಲದೆ ರಿಂಗ್ ರಸ್ತೆ ಕಡೆಗಳಲ್ಲೂ ಗುಂಡಿಗಳಿವೆ, ಭಾರೀ ವಾಹನಗಳ ಸಂಚಾರದಿಂದಾಗಿ ರಸ್ತೆಗಳು ಕೆಟ್ಟುಹೋಗಿವೆ, ಸುಲ್ತಾನಪುರ ಕ್ರಾಸ್, ಹುಮನಾಬಾದ್ ರಿಂಗ್ ರಸ್ತೆ, ರಾಮನಗರ, ಹಾಗರಗಾ ಕ್ರಾಸ್ ಸಮೀಪದ ರಸ್ತೆಗಳು ದ್ವಿಚಕ್ರ ಸವಾರರಿಗೆ ಅನಾಹುತಕ್ಕೆ ದಾರಿಮಾಡಿಕೊಟ್ಟಿವೆ.
ಎಂ.ಬಿ.ನಗರ ಸೇರಿದಂತೆ ಹಲವೆಡೆ ರಸ್ತೆ ಗುಂಡಿಗಳು ನಿರ್ಮಾಣವಾಗಿವೆ, ಹಲವು ಕಡೆಗಳಲ್ಲಿ ರಸ್ತೆಗಳು ಕೆಟ್ಟುಹೋಗಿವೆ, ದುರಸ್ತಿಗೆ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ, ಹೀಗಾಗಿ ವಾಹನ ಸವಾರರಿಗೆ ಸಂಚರಿಸುವುದು ತುಂಬಾ ಕಷ್ಟವಾಗುತ್ತಿದೆ.
-ವಿಕಾಸ ಛಪ್ಪರಬಂದ
ಎಂ.ಬಿ.ನಗರ ನಿವಾಸಿ ಎಂ.ಬಿ.ನಗರ ನಿವಾಸಿ
ನಗರದಲ್ಲಿ ತಲೆ ಎತ್ತಿರುವ ಗುಂಡಿಗಳು ಸೇರಿದಂತೆ ರಸ್ತೆ ಸುಧಾರಣೆಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುತ್ತಿದೆ, ನಗರದಾದ್ಯಂತ ಬೇರೆ ಬೇರೆಕಾಮಗಾರಿಗಳು ನಡೆಯುತ್ತಿವೆ. ಪ್ರತ್ಯೇಕ ಹಣ ಮಾಡಲಾಗುವುದು. ಇದಕ್ಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಿದ್ದೇವೆ.
-ಅವಿನಾಶ್ ಶಿಂಧೆ, ಆಯುಕ್ತರು
ಮಹಾನಗರ ಪಾಲಿಕೆ ಕಲಬುರಗಿ ಮಹಾನಗರ ಪಾಲಿಕೆ ಕಲಬುರಗಿ