×
Ad

ದಲಿತರ ಆತ್ಮ ಗೌರವದ ಸಾಹಿತ್ಯ ಮತ್ತು ಚಳವಳಿಗೆ ಸುವರ್ಣ ಸಂಭ್ರಮ

Update: 2026-01-13 12:04 IST

ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಬೇರೆ ಬೇರೆಯಾಗಿ ನೋಡಲಾಗುವುದಿಲ್ಲ. ಇವೆರಡು ಭೂಮಿ ಮತ್ತು ಬೀಜ ಇದ್ದಂತೆ. ಆದರೆ ಅದರ ಬೆಳೆಯ ಇಳುವರಿ ಒಮ್ಮೆ ಹೆಚ್ಚಾಗಿರಬಹುದು ಇನ್ನೊಮ್ಮೆ ಕಡಿಮೆಯೂ ಆಗಿರಬಹುದು. ಇವು ಒಂದರೊಳಗೊಂದು ಸೇರಿ ಪೂರಕ ಪೋಷಕವಾಗಿ ಸ್ಫೂರ್ತಿ ನೀಡಿಕೊಂಡು ಹಬ್ಬಿವೆ. ಚಳವಳಿ ಹುಟ್ಟಿಗೆ ಕಾರಣವಾದದ್ದಾದರೂ ಏನು? ಚಳವಳಿಗೂ ಮತ್ತು ದಲಿತ ಸಾಹಿತ್ಯಕ್ಕೂ ಇರುವ ಬೆಸುಗೆ ಎಂತಹದ್ದು? ಸಾಂಸ್ಕೃತಿಕವಾಗಿ ಹದಗೊಂಡ ಕಾಲ ಎಂಥದ್ದು? ಎಂಬ ಪ್ರಶ್ನೆಗಳ ಹುಡುಕಾಟದಲ್ಲಿ ಹುಟ್ಟಿನ ಹಿನ್ನೆಲೆಯನ್ನು ಗುರುತಿಸಬಹುದಾಗಿದೆ

ಕನ್ನಡದ ದಲಿತ ಸಾಹಿತ್ಯ ಮತ್ತು ಚಳವಳಿಗೆ ಅರ್ಧ ಶತಮಾನದ ದಾರಿಯನ್ನು ಕ್ರಮಿಸಿದೆ. ಈ ಹೊತ್ತಿನಲ್ಲಿ ನಡೆದು ಬಂದ ಹಾದಿಯ ಗುರುತುಗಳನ್ನು ಅವಲೋಕಿಸಿಕೊಳ್ಳಬೇಕಿದೆ. ಏಕೆಂದರೆ ಹೊಸ ತಲೆಮಾರಿಗೆ ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಯಾವುದೇ ಚಾರಿತ್ರಿಕ ಚಳವಳಿಗಳು ಸಾಂಸ್ಕೃತಿಕ ಆಯಾಮವನ್ನು ಒಡಲೊಳಗಿಟ್ಟುಕೊಂಡೇ ಚಲಿಸಿರುತ್ತವೆ. ಪರಿಶೀಲನೆಗೆ ಸಿಂಹಾವಲೋಕನ ಅಂತಾರಲ್ಲ ಹಾಗೆ ಹಿಂದಣದ ಹೆಜ್ಜೆಗಳನ್ನು ಪರಿಚಯಿಸುವ ತುರ್ತಿದೆ. ಬಹಳ ಮುಖ್ಯವಾಗಿ ಚಳವಳಿಗಳನ್ನು ಮತ್ತು ದಲಿತ ಸಾಹಿತ್ಯವನ್ನು ಚಾರಿತ್ರಿಕವಾಗಿ ಅಷ್ಟೇ ನೋಡುವುದಲ್ಲ. ವರ್ತಮಾನ ಪ್ರಜ್ಞೆಯ ಅರಿವಾಗಿ ಎದುರುಗೊಳ್ಳಬೇಕಿದೆ.

ಹುಟ್ಟಿನ ಹಿನ್ನೆಲೆ

ನಿನ್ನೆಯನ್ನು ಮರೆತರೆ ನಾಳೆಗೆ ಬೆಲೆ ಇಲ್ಲ. ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಬೇರೆ ಬೇರೆಯಾಗಿ ನೋಡಲಾಗುವುದಿಲ್ಲ. ಇವೆರಡು ಭೂಮಿ ಮತ್ತು ಬೀಜ ಇದ್ದಂತೆ. ಆದರೆ ಅದರ ಬೆಳೆಯ ಇಳುವರಿ ಒಮ್ಮೆ ಹೆಚ್ಚಾಗಿರಬಹುದು ಇನ್ನೊಮ್ಮೆ ಕಡಿಮೆಯೂ ಆಗಿರಬಹುದು. ಇವು ಒಂದರೊಳಗೊಂದು ಸೇರಿ ಪೂರಕ ಪೋಷಕವಾಗಿ ಸ್ಫೂರ್ತಿ ನೀಡಿಕೊಂಡು ಹಬ್ಬಿವೆ. ಚಳವಳಿ ಹುಟ್ಟಿಗೆ ಕಾರಣವಾದದ್ದಾದರೂ ಏನು? ಚಳವಳಿಗೂ ಮತ್ತು ದಲಿತ ಸಾಹಿತ್ಯಕ್ಕೂ ಇರುವ ಬೆಸುಗೆ ಎಂತಹದ್ದು? ಸಾಂಸ್ಕೃತಿಕವಾಗಿ ಹದಗೊಂಡ ಕಾಲ ಎಂಥದ್ದು? ಎಂಬ ಪ್ರಶ್ನೆಗಳ ಹುಡುಕಾಟದಲ್ಲಿ ಹುಟ್ಟಿನ ಹಿನ್ನೆಲೆಯನ್ನು ಗುರುತಿಸಬಹುದಾಗಿದೆ. ಯಾವುದೇ ಚಳವಳಿ ಅದು ಸಾಹಿತ್ಯವಾಗಲಿ ಅಥವಾ ಇನ್ನಿತರದ್ದಾಗಲಿ ಆ ಕಾಲದ ತುರ್ತಿಗೆ ಉತ್ತರದಾಯಿತ್ವವಾಗಿರುತ್ತವೆ. ಅಂದಿನ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳಿಗೆ ಪ್ರತಿಕ್ರಿಯಾತ್ಮಕವಾಗಿ ಉತ್ತರಿಸುವ ಒಂದು ಭೂಮಿಕೆ ಸಿದ್ಧಗೊಳ್ಳುತ್ತದೆ. ಈ ಮಾತಿಗೆ ಕರ್ನಾಟಕವು ಹೊರತಲ್ಲ. ಕರ್ನಾಟಕ, ಸಾಮಾಜಿಕ ಚಳವಳಿಯ ತವರೂರು. ಬುದ್ಧನಿಂದ ಹಿಡಿದು ವಚನಕಾರರು, ಕನಕದಾಸರು, ನಾಲ್ವಡಿ ಕೃಷ್ಣರಾಜ ಒಡೆಯರು, ಶಾಹು ಮಹಾರಾಜ್, ಅಂಬೇಡ್ಕರ್ ಮತ್ತು ಕುವೆಂಪು ಇತ್ಯಾದಿಯಾಗಿ ಇವರ ಆಲೋಚನೆಗಳು, ಚಿಂತನೆಗಳು ಮತ್ತು ಆಡಳಿತಾತ್ಮಕವಾದ ಕ್ರಮಗಳು ಅನೇಕ ಬದಲಾವಣೆಗಳಿಗೆ, ಪಲ್ಲಟಗಳಿಗೆ ಅರಿವಿನ ಪ್ರಜ್ಞೆಯಾಗಿ ಪ್ರಭಾವಿಸಿವೆ. ಅಂದರೆ ಕರ್ನಾಟಕದ ನೆಲ ಅನೇಕ ಸಂಗತಿಗಳಿಂದ ಹದವರಿದ ಬೆದೆಯಲ್ಲಿತ್ತು ಎನ್ನುವುದಕ್ಕೆ ಮೇಲಿನ ಚಿಂತನೆಗಳು ದ್ರವ್ಯವಾಗಿವೆ. ಅಲ್ಲದೆ ಅಂದಿನ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳು ಕೂಡ ಕಾರಣವಾಗಿದ್ದವು. ಚಳವಳಿಗೆ ಅಂದಿನ ಪರಿಸರವು ವ್ಯಕ್ತಿಗಳನ್ನು ಹುರಿಗೊಳಿಸಿದೆ ಎಂದು ಹೇಳಬಹುದು.

ದಲಿತ ಚಳವಳಿಗೆ ಬೀಜ ಮಂತ್ರ ಬೂಸಾ ಪ್ರಕರಣ. ಇದು 1973, ಆಗಸ್ಟ್, 25ರಂದು ನಡೆಯಿತು. ನೆಪ ಮಾತ್ರವಾದ ಘಟನೆ ಅಷ್ಟೇ. ಇದಕ್ಕೆ ಬೇರೆಯದೇ ಆದ ಆಯಾಮವಿದೆ. ನಡೆದಿದ್ದೇನು; ಹೊಸ ಅಲೆ ಎಂಬ ವಿಚಾರ ಸಂಕಿರಣದಲ್ಲಿ ಸಂಜೀವನ್ ಎಂಬವರು ಇಂಗ್ಲಿಷ್‌ನಲ್ಲಿ ‘ಅಂಬೇಡ್ಕರ್ ಥಾಟ್ಸ್’ ಕುರಿತು ಮಾತನಾಡುವಾಗ, ಅಲ್ಲಿನವರು ಕನ್ನಡ ಕನ್ನಡ ಎಂದು ಕೂಗಿದರು. ಆ ಸಂದರ್ಭದಲ್ಲಿದ್ದ ಬಿ. ಬಸವಲಿಂಗಪ್ಪನವರು- ‘‘ಕನ್ನಡದಲ್ಲಿ ಏನಿದೆ? ನಿಮ್ಮ ಬದುಕು ಬವಣೆ ಇದೆಯಾ? ಇರುವುದೆಲ್ಲ ಬೂಸಾ’’ ಎಂದು ಆಕಸ್ಮಿಕವಾಗಿ ಹೇಳಿದ ಮಾತು ತೀವ್ರತೆ ಪಡೆದುಕೊಂಡಿತು. ಪಟ್ಟಭದ್ರ ಹಿತಾಸಕ್ತಿ ಉಳ್ಳವರು, ಜಾತಿವಾದಿಗಳಿಗೆ ಅಸ್ಪಶ್ಯನೊಬ್ಬನ ಅಧಿಕಾರದ ಬಗ್ಗೆ ಅಸಹನೆ ಉಂಟಾಯಿತು. ರಾಜೀನಾಮೆ ಕೊಡಬೇಕಾಯಿತು. ದಲಿತರ ಆತ್ಮ ಗೌರವವನ್ನು ಕೆರಳಿಸಿತು. ಸಂಘಟಿತ ಚೈತನ್ಯವನ್ನು ಹುಟ್ಟು ಹಾಕಿತು. ಸಂಘಟನೆಯ ಹುರಿಯು ತೀವ್ರತೆ ಪಡೆಯಿತು.

1974ರಲ್ಲಿ ಮೈಸೂರಿನಲ್ಲಿ ಕರ್ನಾಟಕ ಬರಹಗಾರರ ಒಕ್ಕೂಟದ ಉದ್ಘಾಟಕರಾಗಿ ಕುವೆಂಪು ಅವರು ಮಾತನಾಡಿದ ಮಾತುಗಳು ಮನನೀಯ; ‘‘ಜಾತಿವಾದಿ ಬ್ರಾಹ್ಮಣರನ್ನು ಸುಮ್ಮನೆ ಕೆಣಕಬಾರದು. ಜೋಡು ನಳಿಗೆಯಿಂದ ಹೊಡೆಯಬೇಕು. ಒಂದು ಪುರೋಹಿತಶಾಹಿ ಹುಲಿಗೆ ಬೀಳಬೇಕು. ಇನ್ನೊಂದು ನಿಮ್ಮ ತಲೆಗೆ ಬೀಳಬೇಕು’’ ಎಂದರು. ಏಕೆಂದರೆ ಬ್ರಾಹ್ಮಣ್ಯತ್ವ ದಲಿತರಲ್ಲೂ ಇದೆ. ಅದು ಸಾಯಬೇಕು ಎಂದು ಅಂದು ಹೇಳಿದ ಮಾತು ಎಂದಿಗೂ ಕೂಡ ವಾಸ್ತವ ಎನಿಸುತ್ತದೆ. ಈ ಕಾಲಘಟ್ಟದಲ್ಲೂ ಪುನರಾವಲೋಕನಗೊಳಿಸುತ್ತದೆ.

ಆನಂತರ ದಲಿತ ಕ್ರಿಯಾ ಸಮಿತಿ ಬೆಂಗಳೂರಿನಲ್ಲಿ ರಚನೆಯಾಯಿತು. ಇದೇ ಮೊದಲ ಸಂಘ. ಇದೇ ಕಾಲಕ್ಕೆ ಭದ್ರಾವತಿ ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ಅಸ್ಪಶ್ಯತೆ ಆಚರಣೆ ಆಗುತ್ತಿರುವ ಬಗ್ಗೆ, ಅಲ್ಲಿನ ನೌಕರ ಚೆಲುವಯ್ಯ (ಚಂದ್ರ ಪ್ರಸಾದ ತ್ಯಾಗಿ) ಪಂಚಮ ಪತ್ರಿಕೆಯಲ್ಲಿ ವರದಿ ಮಾಡುವಂತೆ ಮನವಿ ಮಾಡಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆಯೂ ನಡೆದಿತ್ತು. 1976ರಲ್ಲಿ ಭದ್ರಾವತಿಯಲ್ಲಿ ಸಮಾವೇಶಗೊಂಡ ದಲಿತ ಲೇಖಕರ ಕಲಾವಿದರ ಸಂಘವು (ದಲೇಕಯುಸಂ) ತತ್ವ, ಮಾರ್ಗ ಮತ್ತು ಮುಂದಿನ ದಾರಿಯು ಗಂಭೀರ ಚರ್ಚೆಗೆ ಒಳಗಾಯಿತು. ಇದೇ ಸಂಘವು ದಲಿತ ದಲಿತ ಸಂಘರ್ಷ ಸಮಿತಿ ಎಂದು 1978ರಲ್ಲಿ ಸಾಂಸ್ಥಿಕ ರೂಪ ತಳೆದು ಅಸ್ತಿತ್ವಕ್ಕೆ ಬಂತು. ಒಮ್ಮತದಿಂದ ಬಿ. ಕೃಷ್ಣಪ್ಪನವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಇದು ಬೆಳೆದು ಬಂದ ದಾರಿಯ ಚಾರಿತ್ರಿಕ ಪರಂಪರೆ. ಸಾಮಾಜಿಕ ಚರಿತ್ರೆಯನ್ನು ಪಲ್ಲಟಗೊಳಿಸಲು ಯತ್ನಿಸಿತು. ಸ್ಥಾಪಿತ ಮೌಲ್ಯಗಳ ಪಲ್ಲಟಕ್ಕೆ ಶ್ರಮಿಸಿತು. ಸಮಾಜದ ಅಮಾನವೀಯ ಮುಖವಾಡಗಳನ್ನು ಬಯಲುಗೊಳಿಸಿ, ವರ್ಣ ವ್ಯವಸ್ಥೆಯನ್ನು ನಿಷ್ಠುರವಾದ ನಿಷ್ಕರ್ಷಗೆ ಒಡ್ಡಿತು. ಒಟ್ಟಿನಲ್ಲಿ ದಲಿತ ಸಾಹಿತ್ಯ ಮತ್ತು ಚಳವಳಿಗೆ ಅಂದಿನ ಸಾಮಾಜಿಕ, ರಾಜಕೀಯ ಒತ್ತಡಗಳಿಂದ ಹದಗೊಂಡು ಚಿಗುರಿತು. ಸಾಮೂಹಿಕ ಪ್ರಯತ್ನದ ಫಲವಾಗಿ ಉದ್ಭವಗೊಂಡಿತು.

ಮೊದಲ ತಲೆಮಾರಿನ ಅಕ್ಷರಸ್ಥರು ಚಳವಳಿಯ ಸಂಗಾತಿಗಳಾದರು. ಬಿ. ಬಸವಲಿಂಗಪ್ಪನವರ ಹೇಳಿಕೆಯಿಂದ ಉಂಟಾದ ಒಂದು ಸಣ್ಣ ತರಂಗಕ್ಕೆ ಬಿ. ಕೃಷ್ಣಪ್ಪ, ಚಂದ್ರಪ್ರಸಾದ್ ತ್ಯಾಗಿ, ಎಚ್. ಗೋವಿಂದಯ್ಯ, ಕೋಟಗಾನಹಳ್ಳಿ ರಾಮಯ್ಯ, ಶಿವಾಜಿ ಗಣೇಶನ್, ರಾಕೆ, ಇಂದೂಧರ ಹೊನ್ನಾಪುರ, ಮೋಹನ್ ರಾಜ್, ದೇವನೂರ ಮಹಾದೇವ, ಸಿದ್ದಲಿಂಗಯ್ಯ ಮುಂತಾದವರ ದಣಿವರಿಯದ ಪಟ್ಟಿಯೇ ಸಿಗುತ್ತದೆ. ಸಂಘಟನೆ ಅನ್ನುವುದು ನಿರಂತರವಾದ ಪ್ರಕ್ರಿಯೆ. ಈ ಸಂಘಟನೆಗೆ ದುಡಿದ ಬಹುಜನರು ಇದ್ದಾರೆ. ಇಲ್ಲಿ ಮಹಿಳೆಯರ ಪಾತ್ರವು ಮರೆಯುವಂತಿಲ್ಲ. ಹುಚ್ಚ ಹನುಮಕ್ಕ, ಗಂಗರಾಜಮ್ಮ, ಅಂಜಿನಮ್ಮ ಅನುರಾಧ, ಗಂಗಮ್ಮ ಇತ್ಯಾದಿಯವರ ತಾಯ್ತನದ ಕೊಡುಗೆ ಇದೆ. ‘‘ಹೆಂಡ ಬೇಡ ಸ್ಕೂಲ್ ಬೇಕು’’ ಎಂಬ ಹೋರಾಟವನ್ನು ರೂಪಿಸಿದ ಹೆಗ್ಗಳಿಕೆಯಲ್ಲಿ ಇವರ ಪಾಲಿದೆ.

ದಲಿತ ಚಳವಳಿ

ಸಾಮಾಜಿಕ ಅಂಚಿನ ಸಮುದಾಯಗಳ ಬಿಡುಗಡೆಗಾಗಿ ಹಾಗೂ ಜನಸಮುದಾಯಗಳ ಅಸ್ಮಿತೆಯ ಕಾವಾಗಿ ರೂಪಗೊಂಡಿತು. ದಲಿತರ ಈ ಚಳವಳಿಗೆ ಹಸಿವೊಂದೇ ಅಸ್ಮಿತೆಯಾಗಿರಲಿಲ್ಲ. ಸಮತೆಯ ಸಾಂಸ್ಕೃತಿಕ ಅಸ್ಮಿತೆಯನ್ನು ಬಯಸಿತ್ತು. ಸ್ವಾಭಾವಿಕವಾದ ನೀರನ್ನು ಮುಟ್ಟುವ ಸಲುವಾಗಿಯೇ ಹೋರಾಟಗಳು ನಡೆದಿವೆ. ನೀರಿಗೂ ಇಲ್ಲಿ ಜಾತಿ ರಾಜಕಾರಣ. ಜಗತ್ತಿನ ಯಾವ ನಾಗರಿಕತೆಯಲ್ಲಿಯೂ ಇಂತಹ ಬರ್ಬರತೆ ಇದ್ದಿರಲಾರದು. ಅವಮಾನ, ಅಸ್ಪಶ್ಯತೆ, ಬಹಿಷ್ಕಾರ, ದೌರ್ಜನ್ಯ, ಕೊಲೆ, ದಹನ, ಸಾರ್ವಜನಿಕ ಸ್ಥಳಗಳ ನಿರ್ಬಂಧ ಇತ್ಯಾದಿಯಾದ ಬಗೆ ಬಗೆಯ ಕ್ರೌರ್ಯಗಳು ದಲಿತರನ್ನು ನಿದ್ದೆಗೆಡಿಸಿದವು. ಕಂಬಾಲಪಲ್ಲಿ, ಬೆಲ್ಜಿ ಹೀಗೆ ಪಟ್ಟಿ ಮಾಡುತ್ತಾ ಹೋದಂತೆಲ್ಲ ದೌರ್ಜನ್ಯಗಳ ದಾಖಲೀಕರಣಕ್ಕೆ ಸಂಪುಟಗಳೇ ಸಾಲದಾಗುತ್ತವೆ, ಪುಟಗಳು ನರಳುತ್ತವೆ. ಅಕ್ಷರಗಳು ರೋದಿಸುತ್ತವೆ! ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ್ದು ಕೂಡ ಈ ಚಳವಳಿಯ ಭಾಗವೇ ಆಗಿದೆ. ಪ್ರತಿಫಲವಾಗಿ ನೂರಾರು ಶಾಲಾ ಕಾಲೇಜುಗಳು ಮತ್ತು ಹಾಸ್ಟೆಲ್‌ಗಳು ತೆರೆದುಕೊಂಡವು.

ದಲಿತರು ಎಂದರೆ ಅಂದು ಎಸ್‌ಸಿ/ಎಸ್‌ಟಿಗಳು ಮಾತ್ರ ಆಗಿರಲಿಲ್ಲ. ದಲಿತೇತರ ಸಂಕಟಗಳಿಗೂ ಸ್ಪಂದಿಸಿವೆ. ಒಟ್ಟಾರೆ ಸಾಮಾಜಿಕ ಸಂದರ್ಭವನ್ನು ಮಾತ್ರ ಗಮನಿಸಿದ್ದಾರೆ; ಜಾತಿಯನ್ನಲ್ಲ. ಕೋಲಾರದ ಕುಂಬಾರ ಮಹಿಳೆ ಅನುಸೂಯಮ್ಮರ ಅತ್ಯಾಚಾರ ಆದಾಗ ಬಹುದೊಡ್ಡ ಹೋರಾಟವನ್ನು ರೂಪಿಸಿದೆ. ಹುಣಸೆ ಕೋಟೆಯ ಶೇಷಗಿರಿಯಪ್ಪನವರ ಕೊಲೆ ಆದಾಗಲೂ ಹೋರಾಟ ಬೆಳೆಸಿದೆ. ಭೂ ರಹಿತರಾದ ದಲಿತರಿಗೆ ಭೂಮಿಗಾಗಿ ಹೋರಾಟಗಳನ್ನು ಸಂಘಟಿಸಿತು. ಇದು ಬಹುದೊಡ್ಡ ಕ್ರಾಂತಿಕಾರಿ ನಿಲುವುಗಳಲ್ಲಿ ಒಂದು. ರಾಜಕೀಯ ಪ್ರಜ್ಞೆ ಬೆಳೆಸಿತು. ಪಲ್ಲಟಗೊಳಿಸುವ ಶಕ್ತಿ ಹೊಂದಿತ್ತು. ಈಗ ದಲಿತ ಚಳವಳಿಯು ಏನು ಮಾಡುತ್ತಿದೆ ಎಂಬ ನಿರೀಕ್ಷೆಯಲ್ಲಿ ಜನರು ಕಾದು ಕುಳಿತಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ.

ದಲಿತ ಸಾಹಿತ್ಯ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಲಿತ ಸಾಹಿತ್ಯವು ಸಾಂಸ್ಕೃತಿಕ ದೃಷ್ಟಿಕೋನವನ್ನು ಕಟ್ಟಿಕೊಟ್ಟಿದೆ. ಸಾಹಿತ್ಯದ ಸತ್ವ ಸಂಕಟದ ಅಭಿವ್ಯಕ್ತಿ; ಮಾನವ ಘನತೆಯ ಹಂಬಲಿಕೆ. ಯಾವಾಗ ದಲಿತರ ಎದೆಗೆ ಅಕ್ಷರಗಳು ದಕ್ಕಲ್ಪಟ್ಟವೋ ಅಂದಿನಿಂದ ಅವರಲ್ಲಿ ಪ್ರಜ್ಞೆ, ಎಚ್ಚರ, ಸಂಘಟನೆ, ಹೋರಾಟಗಳು ಗೂಡು ಕಟ್ಟಿದವು. ಬಹಿಷ್ಕೃತರಾದ ಮೂಕ ಜನರಿಗೆ ದನಿ ಬಂತು. ದಲಿತ ಸಾಹಿತ್ಯ ಈ ನಾಡಿನ ಮಣ್ಣಲ್ಲಿ ಮಣ್ಣಾದವರ ಜನಸಾಮಾನ್ಯರ ಕಥೆಯನ್ನು ಹೇಳಲು ಹೊರಟವು. ಕಟ್ಟಿದ ಪದಪುಂಜ ಮತ್ತು ನುಡಿಗಟ್ಟುಗಳು ಮುಂಗಾರು ಮಳೆಯಂತೆ ಪ್ರವೇಶಿಸಿದವು. ದಲಿತ ಸಾಹಿತ್ಯಕ್ಕೆ ಚಳವಳಿಗಳೇ ತಾಯಿ ಬೇರು. ಹಾಗಾಗಿ ಇದಕ್ಕೊಂದು ಪ್ರತ್ಯೇಕವಾದ ಐಡೆಂಟಿಟಿ ಇದೆ. ಅಕ್ಷರದ ಮೂಲಕ ಮಾನವೀಯತೆಯ ಶಾಯಿಯಿಂದ ಸಮುದಾಯಗಳನ್ನು ಹೊಲಿಯುವ ಕೆಲಸ ಮಾಡಿತು. ದಲಿತ ಸಾಹಿತ್ಯವೆಂದರೆ, ಕಥೆ, ಕವನ, ಕಾದಂಬರಿ, ಆತ್ಮಕಥೆಗಳು ಮಾತ್ರವಲ್ಲ. ಪ್ರಕಟಿತ, ಅಪ್ರಕಟಿತ, ಗೋಚರ, ಅಗೋಚರ, ಮೂರ್ತ, ಅಮೂರ್ತ ಸಂಗತಿಗಳೂ ಆಗಿವೆ. ‘‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ ಅಗಲಕ್ಕೂ ನಿಂತ ಆಲವೇ’’ ಎಂದದ್ದು ಕವಿ ಸಿದ್ದಲಿಂಗಯ್ಯನವರು. ಈ ಮಾತು ಸಾಹಿತ್ಯದ ಆಶಯ ಮತ್ತು ಚಳವಳಿಯ ಹಿನ್ನೆಲೆಯನ್ನು ಸ್ಪಷ್ಟಪಡಿಸುತ್ತದೆ. ಸಿಡಿದ ನೋವಿನ ಕೂಗು ನಾಡ ನಡುವಿನಿಂದಲೇ ಆಲದಂತೆ ವ್ಯಾಪಿಸಿಕೊಂಡಿದೆ. ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’, ದೇವನೂರ ಮಹಾದೇವ ಅವರ ‘ಒಡಲಾಳ’ ಮತ್ತು ‘ಕುಸುಮಬಾಲೆ’ ಸಂಚಲನವನ್ನು ಉಂಟು ಮಾಡಿದವು. ದಲಿತ ಚಳವಳಿಗೆ ಉತ್ತಮವಾದ ಮಾಧ್ಯಮವಾದದ್ದು ಹಾಡು. ಜನಾರ್ದನ, ಪಿಚ್ಚಳಿ ಶ್ರೀನಿವಾಸರಂತಹ ಹಾಡುಗಾರರನ್ನು ನೆನೆಯಲೇಬೇಕು. ತಮಟೆಯ ಮೂಲಕ ಮೂಕ ಜನರನ್ನು ತಲುಪುವ, ದಾಟಿಸುವ ಹೊಸ ಬಗೆಯ ಹುರುಪು ತಂದಿದೆ. ಹೋರಾಟಗಾರನೊಳಗೆ ಹಾಡುಗಾರನೂ ಇದ್ದ. ಸಾಹಿತಿಯೂ ಇದ್ದ. ಚಳವಳಿಯ ಉತ್ಪಾದನೆಯೇ ಸಾಹಿತ್ಯ. ಕವಿ ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೆ.ಬಿ. ಸಿದ್ದಯ್ಯ, ಚೆನ್ನಣ್ಣ ವಾಲಿಕಾರ್, ದು. ಸರಸ್ವತಿ ಹೀಗೆ ಪರಂಪರೆಯಲ್ಲಿ ದೊಡ್ಡ ವರ್ಗವನ್ನೇ ಗುರುತಿಸಬಹುದು.

ದಲಿತ ಸಂಘಟನೆಯ ವಾಸ್ತವತೆ

ನೀರಿಗೆ ಬಿದ್ದ ಎಲೆಗಳು ಕೊಳೆತು ಹೋಗುತ್ತವೆಯೇ ವಿನಃ ನೀರು ಕೊಳೆಯುವುದಲ್ಲ. ಈ ಹೇಳಿಕೆಯಲ್ಲಿನ ಸೂಕ್ಷ್ಮತೆಯನ್ನು ಗಮನಿಸಬೇಕು. ನೀರು ಎಂದಿಗೂ ಕೊಳೆಯುವುದಿಲ್ಲ ಇದು ಸಾರ್ವತ್ರಿಕ ಸತ್ಯ. ಆದರೆ ಎಲೆ, ಕಸ, ಕಡ್ಡಿ ಇಂತಹವುಗಳಿಂದ ನೀರನ್ನು ಕಲುಷಿತಗೊಳಿಸಲು ಸಾಧ್ಯವಿದೆ. ಈ ಮಲಿನತೆಯನ್ನು ಬೇರ್ಪಡಿಸಿದರೆ ನೀರು ತನ್ನ ಮೂಲ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇನ್ನೊಂದು ಸಾಧ್ಯತೆ, ಹರಿಯುವ ನೀರಿಗೆ ಕಸವನ್ನು ನೂಕ ಬಲ್ಲ ಶಕ್ತಿ ಇದೆ. ಅಂತಹ ಫೋರ್ಸ್ ಬೇಕು. ದಲಿತ ಸಂಘಟನೆಗಳಿಗೆ ಆತ್ಮವಿಮರ್ಶೆಯ ಕಾಲ. ಸಂಭ್ರಮದ ಕಾಲವಂತೂ ಅಲ್ಲ. ಸಾವಿನ ಮನೆಯಂತೆ ಆಗಿದೆ. ಸೂತಕದ ಛಾಯೆ ಕಾಡುತ್ತಿದೆ. ‘‘ಇಂದು ದಲಿತ, ದಲಿತನಾಗಿ ಉಳಿದಿಲ್ಲ. ಮಾದಿಗ, ಹೊಲೆಯ, ಕೊಲಂಬೋ ಆಗಿ ವಿಂಗಡಿಸಿ ಹೋಗಿದ್ದಾನೆ’’ ಎನ್ನುವ ಕೆ. ರಾಮಯ್ಯನವರ ಮಾತು ಈ ಸಂದರ್ಭಕ್ಕೆ ಸುಸಂಗತವೇ. ಚದುರಿ ನಿಂತಿದ್ದಾನೆ. ತಮ್ಮ ತಮ್ಮ ಸಮುದಾಯಗಳಲ್ಲಿ ವಿಘಟನೆಯಾಗಿ ನಿಂತಿದ್ದಾನೆ ಎನ್ನುವುದು ವಾಸ್ತವ. ಆತ್ಮ ಯಾವ ಸಿದ್ಧಾಂತಕ್ಕೆ ಅಂಟಿಕೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ. ಇದರ ಮಧ್ಯೆ ಒಂದು ಸಮಾಧಾನದ ಸಂಗತಿ ಎಂದರೆ ಸಂಘಗಳು ಚದುರಿ ಹೋಗಿವೆ ಅಂತ ಮೇಲ್ನೋಟಕ್ಕೆ ಕಾಣಿಸಿದರೂ ತಾತ್ವಿಕ ವಿಚಾರಕ್ಕೆ ಒಂದಾಗುತ್ತಿವೆ.

ಈ ಛಿದ್ರತೆಯನ್ನು ಸಾವಯವಗೊಳಿಸಲು, 1930ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತಿಗೆ ಕಿವಿಗೊಡಬೇಕಿದೆ. ಆ ಕಾಲದಲ್ಲಿ ಎಲ್ಲರೂ ರಿಕನ್‌ಸ್ಟ್ರಕ್ಷನ್ ಬಗ್ಗೆ ಮಾತನಾಡಿದರೆ, ಬಾಬಾ ಸಾಹೇಬರು ರಿಜನರೇಷನ್ ಬಗ್ಗೆ ಮಾತನಾಡುತ್ತಾರೆ. ಅಂದಿನ ಈ ಚಿಂತನೆಯ ಮಾತು ಇಂದಿಗೆ ಬೇಕೆನಿಸುತ್ತದೆ. ಯಾವುದೇ ಚಳವಳಿಗಳಿಗೆ ನೈತಿಕತೆ ಮತ್ತು ಸ್ಫೂರ್ತಿ ಇಲ್ಲದೆ ಹೋದರೆ ಅವುಗಳಿಗೆ ಭವಿಷ್ಯವಿರುವುದಿಲ್ಲ. ಜೊತೆಗೆ ತಾತ್ವಿಕತೆಯನ್ನು ಎಂದೂ ಬಿಟ್ಟುಕೊಡಬಾರದು. ಬಿ. ಕೃಷ್ಣಪ್ಪನವರು ಹೇಳಿದ ಎಚ್ಚರಿಕೆ ಮಾತಿದು; ‘‘ದಲಿತರ ಗುಡಿಸಲಿನಲ್ಲಿ ಚಳವಳಿಯ ದೀಪ ಹಚ್ಚಿದ್ದೇನೆ. ಒಳಗೆ ಕತ್ತಲು ಹೊರಗೆ ಬಿರುಗಾಳಿ ಆರದಂತೆ ನೋಡಿಕೊಳ್ಳಿ’’. ಗಾಯಗಳು ನೋವು ಕೊಡುತ್ತವೆ, ಎಚ್ಚರವನ್ನು ಕೊಡುತ್ತವೆ. ಆದರೆ ಗಾಯಗಳು ಸಂತೋಷವನ್ನು ಕೊಡಬಾರದು! ದಲಿತ ಸಂಘಟನೆಗಳು ರಾಜಕೀಯ ಪ್ರಜ್ಞೆಯೇನೋ ಬೆಳೆಸಿತು. ರಾಜಕೀಯ ಅಧಿಕಾರವನ್ನು ದಕ್ಕಿಸಿ ಕೊಟ್ಟಿಲ್ಲ. ಇಂದಿಗೂ ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಆಗುವ ಕೂಗು ಸಾಕಾರಗೊಂಡಿಲ್ಲ. ‘ದಲಿತರು ಬರುವರು ದಾರಿ ಬಿಡಿ; ದಲಿತರಿಗೆ ರಾಜ್ಯ ಕೊಡಿ’ ಎಂದ ಸಿದ್ದಲಿಂಗಯ್ಯನವರ ಕೂಗು ಇನ್ನೂ ಅಪೂರ್ಣವಾಗಿಯೇ ಇದೆ.

(ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಕನ್ನಡ ಅಧ್ಯಯನ ಕೇಂದ್ರ ಬೆಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆದ ‘ದಲಿತ ಸಾಹಿತ್ಯ ಮತ್ತು ಚಳವಳಿ-50’ ವಿಷಯವಾಗಿ ಜನವರಿ 2, 3 ಮತ್ತು 4ನೇ ತಾರೀಕಿನವರೆಗೆ ನಡೆದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸ್ಥೂಲ ನೋಟವಿದು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಡಾ. ಎಲ್ಲಪ್ಪ ಜಿ. ಬಾಗಲಕೋಟೆ

contributor

Similar News