×
Ad

ಒಂಟಿ ಮಹಿಳೆಯ ಘನತೆಯ ಬದುಕಿಗೆ ಆಸರೆಯಾದ ಉದ್ಯೋಗ ಖಾತ್ರಿ

ಪ್ರತಿಯೊಬ್ಬರಿಗೂ ಕಷ್ಟ ಕಾರ್ಪಣ್ಯ ಸಹಜ. ಆದರೆ ನಾವು ಯಾವುದಕ್ಕೂ ಧೃತಿಗೆಡದೇ ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಉತ್ತಮವಾಗಿ ಜೀವಿಸಬಹುದು. ನನ್ನ ಬದುಕಿನ ನಿರ್ವಹಣೆಗೆ ಈ ನರೇಗಾ ಯೋಜ ನೆಯು ಹಾಗೂ ಗ್ರಾಪಂನವರು ನನ್ನೊಂದಿಗಿದ್ದು ನೆರವು ನೀಡಿದ್ದಾರೆ ಎನ್ನುತ್ತಾರೆ ದೊಡ್ಡ ಈರಮ್ಮನವರು.

Update: 2025-05-05 13:06 IST

ರಾಯಚೂರು: ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಕೆಲಸ ಆರಿಸಿ ಮಹಾನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಜಾರಿಗೊಳಿಸಲಾದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಒಂಟಿ ಹಿರಿಯ ಮಹಿಳೆಯ ಘನತೆಯ ಬದುಕಿಗೆ ಆಸರೆಯಾಗಿದೆ. ಬಿಜನಗೇರಾ ಗ್ರಾಮದ 60ರ ಇಳಿವಯಸ್ಸಿನ ನಿವಾಸಿ ದೊಡ್ಡ ಈರಮ್ಮರವರ ಬದುಕಿಗೆ ನರೇಗಾ ಸಹಾಯವಾಗಿದೆ.

ಸುಮಾರು 60 ವರ್ಷದ ದೊಡ್ಡ ಈರಮ್ಮಗೆ ಮಕ್ಕಳಿಲ್ಲ. 15 ವರ್ಷಗಳ ಹಿಂದೆ ಇವರ ಪತಿ ಕಾಯಿಲೆಯಿಂದ ಸಾವನ್ನಪ್ಪಿದ್ದು ಇಳಿ ವಯಸ್ಸಿನಲ್ಲಿ ಸಾಕಲು ಯಾರೂ ಇಲ್ಲದಂತಾಗಿದೆ. ಪತಿಯ ಸಾವಿನ ಬಳಿಕ ಒಂಟಿ ಜೀವನ ನಡೆಸುತ್ತಿದ್ದ ಈರಮ್ಮನವರು ತನ್ನ ಬದುಕು ನಡೆಸಲು ಗ್ರಾಮದ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ವಯಸ್ಸು ಆಗಿರುವುದರಿಂದ ಗ್ರಾಮದವರು ಕೂಲಿಕೆಲಸಕ್ಕೆ ಕರೆಯುವುದು ಕೂಡ ಕಡಿಮೆ ಮಾಡಿದ್ದಾರೆ.

ಹಿರಿಯ ಈರಮ್ಮನಿಗೆ ಗ್ರಾಮ ಪಂಚಾಯತ್‌ನಿಂದ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ವಸತಿ ಯೋಜನೆಯಡಿ ಸೂರು ನಿರ್ಮಾಣ ಮಾಡಿಕೊಳ್ಳಲು ಫಲಾನುಭವಿಯಾಗಿ ಆಯ್ಕೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 60 ಮಾನವ ದಿನಗಳು ಮನೆ ನಿರ್ಮಾಣಕ್ಕೆ ನರೇಗದಡಿ ಕೂಲಿ ಹಣ ಪಡೆದು ಒಂದು ಸೂರು ನಿರ್ಮಿಸಿಕೊಂಡಿದ್ದಾರೆ.

ಪ್ರಸಕ್ತ ಅರ್ಥಿಕ ವರ್ಷದ ಆರಂಭದಲ್ಲಿ ‘ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತರಿ ಮತ್ತು ಸ್ತ್ರೀ ಚೇತನ ಅಭಿಯಾನದಡಿ, ಗಂಡು ಮತ್ತು ಹೆಣ್ಣಿಗೆ 370 ರೂ.ಗಳ ಸಮಾನ ಕೂಲಿ ಇದ್ದು, ಗ್ರಾಮೀಣ ಪ್ರದೇಶದ ಪ್ರತೀ ಆರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ ಅಕುಶಲ ಕೆಲಸ ಕೊಡಲಾಗುತ್ತದೆ. ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ 37 ಸಾವಿರ ರೂ. ಕೂಲಿ ಪಡೆದುಕೊಳ್ಳಬಹುದಾಗಿದೆ.

ಬೇಸಿಗೆ ಅವಧಿಯ ಕೆಲಸದ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ ಸೌಲಭ್ಯ ಒದಗಿಸಿ, ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇ.50 ಕೆಲಸ ಮಾಡಿದರು ಪೂರ್ತಿ ಪ್ರಮಾಣದ ಕೂಲಿ ನೀಡ ಲಾಗುತ್ತದೆ. ಈಗಾಗಲೇ 7 ನೇ ತಾರೀಖಿನಂದು ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸದಲ್ಲಿ ಭಾಗಿದಾರಳಾಗಿ ಹಿರಿಯ ನಾಗರಿಕರ ಸೌಲಭ್ಯದಡಿ ಕೆಲಸ ಪರಿಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ಕೆಲಸ ಮಾಡುತ್ತಾ ಎಲ್ಲ ಕೂಲಿಕಾರರಿಗೆ ದೊಡ್ಡ ಈರಮ್ಮ ಸ್ಫೂರ್ತಿಯಾಗಿದ್ದಾರೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯು ಹಿರಿಯರಿಗೂ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಸಾಮಾಜಿಕ ಭದ್ರತೆ ಒದಗಿಸಲು ಸಹಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುತ್ತಿದೆ.

-ಹನುಮಂತ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಪಂ ರಾಯಚೂರು


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ, ರಾಯಚೂರು

contributor

Similar News