ಬಂಗಾರದ ಮನುಷ್ಯ ರೂಪಾಂತರ ಮಾದರಿಯ ಕನ್ನಡ ನಾಟಕ ಕೃತಿ
ಕನ್ನಡ ಭಾಷೆ ಮತ್ತು ಸಾಹಿತ್ಯ ನಿರ್ಮಿತಿಯಲ್ಲಿ ಅಂತರಗಂಗೆಯಂತೆ ರೂಪಾಂತರ ಪರಿಕಲ್ಪನೆಗಳು ಬಳಕೆಗೊಂಡಿವೆ. ರೂಪಾಂತರವೆಂದರೆ ಪರಿವರ್ತನೆ ಎಂದರ್ಥ. ಕಾವ್ಯದಲ್ಲಿ ಇರುವುದನ್ನು ಗದ್ಯಸ್ವರೂಪದಲ್ಲಿ, ಕಥೆ, ಕಾದಂಬರಿಗಳ ಮಾದರಿಗಳಲ್ಲಿ, ನಾಟಕದಲ್ಲಿ, ಹಾಗೆಯೇ ನಾಟಕವಾಗಿರುವುದು ಕಥೆಯಲ್ಲಿ, ಕಾದಂಬರಿಯಲ್ಲಿ, ಕಾವ್ಯದಲ್ಲಿ ಪರಸ್ಪರ ರಚನೆಗಳಿಗೆ ಒಳಗಾಗುವುದು ರೂಪಾಂತರವೆನಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಕಾದಂಬರಿಯೊಂದನ್ನು ನಾಟಕವನ್ನಾಗಿ ರಚಿಸಿದ ಗಣೇಶ ಅಮೀನಗಡರ ಕೃತಿ ಬಂಗಾರದ ಮನುಷ್ಯ.
ಡಾ. ಗಣೇಶ ಅಮೀನಗಡ, ಪತ್ರಿಕಾ ಮಾಧ್ಯಮದಲ್ಲಿ ತೊಡಗಿಸಿಕೊಂಡವರು ಸಾಹಿತ್ಯದ ರಚನಾತ್ಮಕ ಅಭಿರುಚಿಗಳಲ್ಲಿ ರಂಗಪಠ್ಯಗಳು, ನಾಟಕಗಳ ಪ್ರದರ್ಶನ, ಜೊತೆಗೆ ತಮ್ಮದೇ ಆದ ಕವಿತಾ ಪ್ರಕಾಶನದಿಂದ ಪ್ರಕಟಣೆಗಳ ಹೊಣೆಗಾರಿಕೆಯನ್ನು ಸದ್ದುಗದ್ದವಿಲ್ಲದೆ ನಿಭಾಯಿಸುತ್ತಿರುವ ಅಪರೂಪದ ಗೆಳೆಯರು. ನಾಡಿನ ವಿವಿಧ ಲೇಖಕರ ಕೃತಿಗಳನ್ನು ಸಹ ಪ್ರಕಟಿಸಿದ್ದು ಈಗ 50 ಕೃತಿಗಳು ಪ್ರಕಟಗೊಂಡಿವೆ. ಸಾಹಿತ್ಯ ಅಕಾಡಮಿಯ ಸಾಹಿತ್ಯ ಶ್ರೀ ಪುರಸ್ಕಾರವೂ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಮಿತ್ರರಿಗೆ ಸಂದಿವೆ.
ಕನ್ನಡದ ಹಿರಿಯ ಲೇಖಕ ಟಿ.ಕೆ. ರಾಮರಾವ್‌ರ ಕಾದಂಬರಿ ಬಂಗಾರದ ಮನುಷ್ಯ, (1966) ಇದು 1972ರಲ್ಲಿ ಕನ್ನಡ ಸಿನೆಮಾರಂಗದಲ್ಲಿ ಡಾ. ರಾಜಕುಮಾರ್‌ರವರ ನಾಯಕತ್ವದಲ್ಲಿ ತೆರೆಕಂಡ, ಅಭೂತಪೂರ್ವ ಇತಿಹಾಸ ಸೃಷ್ಟಿಸಿದ ಸಿನೆಮಾ, ರಾಜಕುಮಾರ್‌ರನ್ನು ಬಂಗಾರದ ಮನುಷ್ಯನನ್ನಾಗಿಯೇ ಪರಿಭಾವಿಸುವಂತೆ ಮಾಡಿದ ಚಿತ್ರ ಅಂದಿನ ಸಮರ್ಥ ನಿರ್ದೇಶಕರಾಗಿದ್ದ ಎಸ್.ಸಿದ್ಧಲಿಂಗಯ್ಯ, ನಿರ್ಮಾಪಕರಾದ ಆರ್.ಲಕ್ಷ್ಮಣ್, ಗೋಪಾಲ್, ಸಾಹಿತಿಗಳಾದ ಹುಣಸೂರು ಕೃಷ್ಣಮೂರ್ತಿಯವರ ಸಂಭಾಷಣೆ, ‘ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಅದ್ಭುತ ಗೀತೆಗಳ ಸಂಯೋಜಕ ಜಿ.ಕೆ.ವೆಂಕಟೇಶ್ ಇವರ ಕೊಡುಗೆ ಸಿನೆಮಾದ ಮೌಲ್ಯವನ್ನು ನೂರ್ಮಡಿಗೊಳಿಸಿತ್ತು.
ಕಾದಂಬರಿಯಿಂದ ಚಲನ ಚಿತ್ರವಾದದ್ದು ಪುನಃ ರಂಗಪಠ್ಯವಾಗಿ ಗಣೇಶ ಅಮೀನಗಡರ ಮೂಲಕ ಬಂಗಾರದ ಮನುಷ್ಯ ಓದುಗರ ಕೈಸೇರಿದೆ. ನಾಡಿನ ರಂಗಜಂಗಮರೆಂದೇ ಗೌರವ ಪಡೆದ ಸಾಣೆಹಳ್ಳಿ ಮಠದ ಬೃಂದದಿಂದ ಪ್ರದರ್ಶನಗೊಳ್ಳುತ್ತಿದೆ. ವಾಸ್ತವದಲ್ಲಿ ಈ ನಾಟಕವನ್ನು ಬರೆದುಕೊಡಲು ಹೇಳಿದವರೇ ಡಾ. ಸಾಣೆಹಳ್ಳಿ ಪಂಡಿತಾರಾಧ್ಯರು, ಅವರ ಅಪೇಕ್ಷೆಯಂತೆ ಮೂರು ದಿನಗಳಲ್ಲಿ ಕೃತಿ ರಚನೆ ಮಾಡಿದ್ದೇನೆಂದು ಡಾ. ಗಣೇಶ ಅಮೀನಗಡ ಹೇಳಿದ್ದಿದೆ.
ಪ್ರಸ್ತುತ ಗ್ರಾಮೀಣ ಜನಜೀವನಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕರಗಳನ್ನು ಅನುಭವಿಸುತ್ತಿವೆ. ಇನ್ನು ಒಂದು ಕಡೆ ಸರಕಾರದ ಅನಾದರಗಳು ಮತ್ತೊಂದು ಕಡೆ ದಲ್ಲಾಳಿಗಳು, ಉದ್ಯಮಿಗಳ ವಂಚನೆಗಳಿಂದಾಗಿ ವ್ಯವಸಾಯವೂ ತನ್ನ ನೆಲೆ, ಬೆಲೆ ಕಳೆದುಕೊಳ್ಳುತ್ತಿದೆ. ಹಳ್ಳಿಗರು ಪಟ್ಟಣದಲ್ಲಿ ಕೂಲಿಗಳಾಗಿ ದಿನದೂಡಬೇಕಾದ ದಿನಮಾನಗಳಲ್ಲಿ ಈ ನಾಟಕ ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂದು ಒತ್ತಿಹೇಳುವ ಮಾಧ್ಯಮವಾಗಿ ನಿಲ್ಲುತ್ತದೆ. 22 ದೃಶ್ಯಗಳಿಂದ ಕೂಡಿದ ಅಮೀನಗಡರ ಈ ನಾಟಕದಲ್ಲಿ ತನ್ನ ಭಾವನ ಸಾವಿನಿಂದ ಮನೆಯ ಹೊಣೆಗಾರಿಕೆ ನಿಭಾಯಿಸುವ ರಾಜೀವ ನಾಟಕದ ನಾಯಕ. ಪದವೀಧರನಾಗಿದ್ದರೂ ಮತ್ತೊಬ್ಬರ ಕೈಕೆಳಗೆ ದುಡಿಯುವಲ್ಲಿ ನಗರಕ್ಕೆ ತೆರಳಿ, ಅಲ್ಲಿ ಬಾಡಿಗೆ ಎತ್ತಿನಂತೆ ಬಾಳುವ ಬದಲು ಸ್ವಾವಲಂಬಿಯಾಗುವ ಕನಸು ಕಂಡ ಯುವಕ, ಅದರಲ್ಲಿ ಯಶಸ್ಸು ಗಳಿಸುವುದು ಇದೆ. ಈ ಗಳಿಕೆ ತರುಣ ಪೀಳಿಗೆಯ ಕಣ್ಣು ತೆರೆಸಬೇಕಿದೆ. ರಾಚೂಟಪ್ಪ ನಾಯಕನಿಗೆ ಒತ್ತಾಸೆಯಾಗಿ ನಿಲ್ಲುವ ಗ್ರಾಮದ ಹಿರಿಯ, ಸ್ವಭಾವತಃ ಸಾಹಸ ಪ್ರವೃತ್ತಿ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದ್ದ ರಾಜೀವನಿಗೆ ತನ್ನ ಸುಖಗಳನ್ನು ಮರೆತು ಅಕ್ಕನ ಮಕ್ಕಳ ಸುಖಕ್ಕೆ ದುಡಿದರೂ ಅವರು ತಮ್ಮ ತಮ್ಮ ಸ್ವಾರ್ಥದಲ್ಲಿ ಮುಳುಗಿದ್ದರಿಂದ ಆಗುವ ಅವಮಾನಗಳು, ನಾಯಕ ಕೊನೆಗೆ ತಾನು ಪ್ರೀತಿಸಿ ಕೈ ಹಿಡಿದ ಲಕ್ಷ್ಮ್ಮಿಯ ಸಾವು ಮಾಡಿದ ಆಘಾತಗಳಿಂದ ನೊಂದು ಇಡೀ ಕುಟುಂಬದಿಂದ ದೂರವಾಗುವುದರೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ.
ಕೆಲವು ಕಡೆ ಸಿನೆಮಾ ಮಾದರಿಯ ಅನುಸರಣೆ ಕಂಡರೂ, ನಿರೂಪಣೆ ಕ್ರಮದಲ್ಲಿ ಸ್ವತಂತ್ರ ಕೌಶಲವಿದೆ. ಸಂವಾದಗಳು ಗಮನಸೆಳೆಯುತ್ತವೆ. ಆದರೆ ಕೃತಿಯಲ್ಲಿ ಕಾದಂಬರಿಯು ಸಿನೆಮಾ ಕಥನಕ್ಕಿಳಿದು, ರಂಗಪಠ್ಯವಾಗಿರುವ ಬಗ್ಗೆ ಪ್ರಾಸ್ತಾವಿಕ ಮಾಹಿತಿಗಳು ಇರಬೇಕಿತ್ತು. ಜೊತೆಗೆ ಪಾತ್ರ ಪರಿಚಯಗಳನ್ನು ಸಹ ಅಮೀನಗಡ ಒದಗಿಸಿಲ್ಲ. ಹಾಗೆಯೇ ಕಥಾವಸ್ತುವನ್ನು ಸಮಕಾಲೀನಗೊಳಿಸುವಲ್ಲಿ, ಸಂವಾದ ಶೈಲಿಗೆ ಗ್ರಾಮೀಣ ಸ್ಪರ್ಶ ಕೊಡುವುದರಲ್ಲಿ ಲೇಖಕರು ಮುಂದಾಗಿಲ್ಲದಿರುವುದು ಅವಸರದ ಪರಿಣಾಮಗಳೆಂಬಂತೆ ಭಾಸವಾಗುತ್ತವೆ.
ಆದರೂ ಲೇಖಕರ ಪ್ರಯತ್ನಕ್ಕೆ ಅಭಿನಂದಿಸಬೇಕಿದೆ.